ಕೆಎಸ್‌ಆರ್‌ಟಿಸಿಗೆ 220 ಕೋಟಿ ಸಾಲ; 3 ತಿಂಗಳಾದರೂ ನೆರವಿಗೆ ಬಾರದ ಹಣಕಾಸು ಸಂಸ್ಥೆಗಳು

ಬೆಂಗಳೂರು; ಕೊರೋನಾ ಮತ್ತು ನೌಕರರ ಮುಷ್ಕರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಸಾಲಕ್ಕಾಗಿ ಕೈ ಚಾಚಿದರೂ ಯಾವ ಹಣಕಾಸು ಸಂಸ್ಥೆಯೂ ಸಾಲದ ನೆರವು ನೀಡಲು ಮುಂದೆ ಬಂದಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಎರಡನೇ ಬಾರಿ ಮರು ಟೆಂಡರ್‌ ಆಹ್ವಾನಿಸಿದೆ.

ಕೊರೊನಾ, ಲಾಕ್‌ಡೌನ್‌ನಿಂದಾದ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುವ ಮೊದಲೇ ನೌಕರರು ಕಳೆದ 10 ದಿನಗಳಿಂದ ನಡೆಸುತ್ತಿರುವ ಮುಷ್ಕರದಿಂದಾಗಿ 170 ಕೋಟಿಗೂ ಅಧಿಕ ನಷ್ಟವನ್ನು ಅನುಭವಿಸಿ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ನಷ್ಟದಿಂದ ಪಾರಾಗಲು 220 ಕೋಟಿ ರು.ಗಳನ್ನು ಸಾಲ ಎತ್ತಲು ಮುಂದಾಗಿದ್ದ ಕೆಎಸ್‌ಆರ್‌ಟಿಸಿ ಇದೀಗ 2021ರ ಏಪ್ರಿಲ್‌ 17ರಂದು ಮರು ಟೆಂಡರ್‌ ಆಹ್ವಾನಿಸಿದೆ.

‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹಿಂಬಾಕಿ ಪಾವತಿ ಮಾಡುವ ಸಲುವಾಗಿ 220 ಕೋಟಿ ರು.ಗಳನ್ನು ಅವಧಿ ಸಾಲದ ರೂಪದಲ್ಲಿ ಪಡೆಯುಲು ಉದ್ದೇಶಿಸಿದೆ,’ ಎಂದು ಆಸಕ್ತಿ ವ್ಯಕ್ತಪಡಿಸುವ ಮರು ಟೆಂಡರ್‌ನಲ್ಲಿ ವಿವರಿಸಿದೆ.

ಪ್ರಸ್ತಾಪಿತ ಸಾಲದ ಮೊತ್ತವನ್ನು ಒಂದೇ ಕಂತಿನಲ್ಲಿ ಪಡೆಯುವುದು, ಸಾಲದ ಮರು ಪಾವತಿಯ ಅವಧಿಯನ್ನು 7 ವರ್ಷಗಳಿಗೆ ನಿಗದಿಪಡಿಸುವ ಷರತ್ತನ್ನೂ ವಿಧಿಸಿರುವುದು ಟೆಂಡರ್‌ ದಾಖಲೆಯಿಂದ ತಿಳಿದು ಬಂದಿದೆ.

ಡೀಸೆಲ್‌ ಬೆಲೆ ಏರಿಕೆ, ಸಿಬ್ಬಂದಿ ವೇತನ ಹೆಚ್ಚಳ, ಕೊರೋನಾ ಸೋಂಕಿನ ಕಾರಣದಿಂದ ಪ್ರಯಾಣಿಕರ ಕೊರತೆ ಸೇರಿ ಹಲವು ಕಾರಣಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳನ್ನೂ ನಷ್ಟಕ್ಕೆ ತಳ್ಳಿವೆ. ಇದನ್ನು ಸರಿದೂಗಿಸಲು ಅಧಿಕೃತ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬಗ್ಗೆ ಆಸಕ್ತಿ ವ್ಯಕ್ತಪಡಿಸುವ ಟೆಂಡರ್‌ ಆಹ್ವಾನಿಸುತ್ತಲೇ ಇದೆ. ಆದರೆ ಈವರೆವಿಗೂ ಯಾವ ಹಣಕಾಸು ಸಂಸ್ಥೆಯೂ ಸಾಲ ನೀಡಲು ಮುಂದಾಗಿಲ್ಲ.

ಕೆಎಸ್‌ಆರ್‌ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ ಮತ್ತು ಮುಂದೊಡ್ಡಿರುವ ಬೇಡಿಕೆಗಳನ್ನು ಬಗೆಹರಿಸುವಲ್ಲಿ ಸಚಿವ ಲಕ್ಷ್ಮಣ ಸವದಿ  ಅವರು ವಿಫಲರಾಗಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ ಹಣಕಾಸು ಸಂಸ್ಥೆಗಳು ಸಾಲ ನೀಡಲು ಮುಂದೆ ಬಾರದಿರುವುದು ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳುವ ಲಕ್ಷಣಗಳು ಗೋಚರಿಸಲಾರಂಭಿಸಿವೆ.

ಕಳೆದ ಎರಡು ತಿಂಗಳ ಹಿಂದೆ ಆರ್ಥಿಕ ಸಂಕಷ್ಟದಿಂದ ಹೊರಬರಲು ಬಿಎಂಟಿಸಿ ಕೂಡ 230 ಕೋಟಿ ರು. ಸಾಲ ಪಡೆಯಲು ಟೆಂಡರ್‌ ಆಹ್ವಾನಿಸಿತ್ತು. ಅದಕ್ಕಾಗಿ ಬಿಎಂಟಿಸಿ ಒಡೆತನದ ಬಸ್ಸುಗಳು, ಭೂಮಿ ಮತ್ತು ಕಟ್ಟಡಗಳನ್ನು ಅಡಮಾನ ಇಡಲು ಮುಂದಾಗಿದ್ದನ್ನು ಸ್ಮರಿಸಬಹುದು.

ನೌಕರರ ಮುಷ್ಕರದಿಂದ ಜರ್ಜರಿತವಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಾಲಕ್ಕಾಗಿ ಕಳೆದ 2 ತಿಂಗಳುಗಳಿಂದ ಪರದಾಡುತ್ತಿದ್ದರೂ ಸಾಲದ ನೆರವು ಸಿಗದಿರುವುದು ಇನ್ನಷ್ಟು ಸಂಕಷ್ಟವನ್ನು ಎದುರಿಸುವ ಸಾಧ್ಯತೆಗಳಿವೆ.

ನಾಲ್ಕು ರಸ್ತೆ ಸಾರಿಗೆ ನಿಗಮಗಳು ಡಿಸೇಲ್‌ಗಾಗಿ ವಾರ್ಷಿಕ ಸುಮಾರು 4,821.65 ಕೋಟಿ, ನಿಗಮಗಳ ನೌಕರರ ವೇತನ ಬಾಬ್ತಿಗಾಗಿ 4,536.80 ಕೋಟಿ, ಸಾರಿಗೆ ಆದಾಯ ಮತ್ತು ಹಾಜರಾತಿಯ ಆಧಾರದ ಮೇಲೆ ಚಾಲಕ ನಿರ್ವಾಹಕರಿಗೆ ಪ್ರೋತ್ಸಾಹ ಧನ ನೀಡುವುದು ಮತ್ತು ನಗರ, ಸಬ್‌ಅರ್ಬನ್‌ ಸಾರಿಗೆ ಬಸ್‌ಗಳ ಸಾರಿಗೆ ಆದಾಯದ ಶೇ.3ರಷ್ಟು ಮತ್ತು ಇತರೆ ಎಲ್ಲಾ ಸೇವೆಗಳ ಸಾರಿಗೆ ಆದಾಯದ ಶೇ.2ರಷ್ಟನ್ನು ಪ್ರೋತ್ಸಾಹ ಧನ ರೂಪದಲ್ಲಿ ನೀಡುವುದು ಸೇರಿದಂತೆ ಒಟ್ಟು 4 ನಾಲ್ಕು ನಿಗಮಗಳು ವಾರ್ಷಿಕ 169.78 ಕೋಟಿ ರು.ಗಳನ್ನು ಭರಿಸುತ್ತಿದೆ.

ಇದಲ್ಲದೆ ಹೆಚ್ಚುವರಿ ಕರ್ತವ್ಯಕ್ಕೆ ಹೆಚ್ಚುವರಿ ವೇತನ ನೀಡುವ ಕಾಯ್ದೆಯನ್ವಯ 4 ಸಾರಿಗೆ ನಿಗಮಗಳು ಸೇರಿದಂತೆ ವಾರ್ಷಿಕ 254.80 ಕೋಟಿಗಳನ್ನು ಭರಿಸುತ್ತಿದೆ. ಹಾಗೆಯೇ ನಾಲ್ಕೂ ನಿಗಮಗಳ ವಾರ್ಷಿಕ ಸಾರಿಗೆ ಆದಾಯ ಸುಮಾರು 6,205 ಕೋಟಿ ರು.ಗಳಿವೆ.

SUPPORT THE FILE

Latest News

Related Posts