ಬೆಂಗಳೂರು; ರಾಜ್ಯಕ್ಕೆ ಒದಗಬೇಕಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಸೇರಿದಂತೆ ಒಟ್ಟಾರೆಯಾಗಿ ಕೇಂದ್ರೀಯ ಅನುದಾನದ ಮೊತ್ತವು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. 2019-20 ಮತ್ತು 2020-21ರಲ್ಲಿ ಶೇಕಡವಾರು 17.55ಕ್ಕೆ ಇಳಿಕೆಯಾಗಿದೆ. ಆದರೆ ರಾಜ್ಯವನ್ನು ಪ್ರತಿನಿಧಿಸಿರುವ ಸಂಸದರು ಮತ್ತು ರಾಜ್ಯ ಬಿಜೆಪಿ ಸರ್ಕಾರವೂ ಈ ಬಗ್ಗೆ ಉಸಿರೆತ್ತದೇ ಮೌನವಾಗಿದೆ.
ಕೇಂದ್ರೀಯ ಅನುದಾನದ ಹಂಚಿಕೆ ಮತ್ತು ಇಳಿಕೆ ಕುರಿತು 2020-21ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಚರ್ಚಿಸಲಾಗಿದೆ.
2019-20ರಲ್ಲಿ (ಪ.ಅಂ)ರಲ್ಲಿ 37,088.83 ಕೋಟಿ ಇದ್ದದ್ದು 2020-21ರಲ್ಲಿ 31,570.46 ಕೋಟಿ (ಶೇ. 14.87ರಷ್ಟು) ರು.ಗೆ ಇಳಿಕೆಯಾಗಿದೆ. ಅದೇ ರೀತಿ 2019-20ರಲ್ಲಿ (ಪ.ಅಂ)ಸಾಲನ್ನು 2020-21ನೇ ಸಾಲಿಗೆ ಹೋಲಿಸಿದಾಗ ರಾಜಸ್ವ ಜಮೆಯಲ್ಲಿ ಅನುದಾನ ಶೇ.20.92ರಿಂದ ಶೇ.17.55ಕ್ಕೆ ಇಳಿಕೆಯಾಗಿರುವುದು ಕರ್ನಾಟಕ ಆರ್ಥಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ 2018-19ರಲ್ಲಿ 10,393.44 ಕೋಟಿ (ಶೇ.6.30), 2019-20ರಲ್ಲಿ 11,740.67 ಕೋಟಿ (ಶೇ.6.62) 2020-21ರಲ್ಲಿ 9,897.46 ಕೋಟಿ (ಶೇ.5.50)ರು. ರಾಜ್ಯಕ್ಕೆ ಲಭ್ಯವಾಗಿದೆ. ಅದೇ ರೀತಿ ಹಣಕಾಸು ಆಯೋಗದ ಅನುದಾನಕ್ಕೆ ಸಂಬಂಧಿಸಿದಂತೆ 2018-19ರಲ್ಲಿ 3,373.89 ಕೋಟಿ (ಶೇ.2.05), 2019-20ರಲ್ಲಿ 5,109.81 ಕೋಟಿ (ಶೇ.2.88), 2020-21ರಲ್ಲಿ 5,557.00 ಕೋಟಿ (ಶೇ.3.09) ಕೋಟಿ, ಶಾಸಕಾಂಗವಿರುವ ರಾಜ್ಯಗಳಿಗೆ ಇತರೆ ವರ್ಗಾವಣೆ/ಧನ ಸಹಾಯ ಲೆಕ್ಕದಲ್ಲಿ 2018-19ರಲ್ಲಿ 11,713.92 ಕೋಟಿ (ಶೇ.7.10), 2019-20ರಲ್ಲಿ 20,238.35 ಕೋಟಿ (ಶೇ.11.42), 2020-21ರಲ್ಲಿ 16,116.00 ಕೋಟಿ (ಶೇ.8.96), ಒಟ್ಟು ಕೇಂದ್ರೀಯ ಜಮೆಗಳಿಗೆ ಸಂಬಂಧಿಸಿದಂತೆ 2018-19ರಲ್ಲಿ 25,481.25 ಕೋಟಿ (ಶೇ.15.45), 2019-20ರಲ್ಲಿ 37,088.83 ಕೋಟಿ (ಶೇ.20.92), 2020-21ರಲ್ಲಿ 31,570.46 ಕೋಟಿ (ಶೇ.17.55) ಸೇರಿದಂತೆ ರಾಜಸ್ವ ಜಮೆಗಳು 2018-19ರಲ್ಲಿ 164978.66 ಕೋಟಿ, 2019-20ರಲ್ಲಿ 177255.48 ಕೋಟಿ, 2020-21ರಲ್ಲಿ 179919.76 ಕೋಟಿ ರು. ಇರುವುದು ಕರ್ನಾಟಕ ಆರ್ಥಿಕ ಸಮೀಕ್ಷೆಯಿಂದ ಗೊತ್ತಾಗಿದೆ.
ಕೇಂದ್ರೀಯ ಅನುದಾನವು ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನಗಳು, ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು, ರಾಜ್ಯ ವಿಕೋಪ ತುರ್ತು ನಿಧಿ, ಇತರೆ ವರ್ಗಾವಣೆಗಳು, ಶಾಸಕಾಂಗವಿರುವ ರಾಜ್ಯಗಳಿಗೆ ಅನುದಾನ, ರಾಷ್ಟ್ರೀಯ ವಿಕೋಪ ತುರ್ತು ನಿಧಿಗೆ ಧನ ಸಹಾಯ ಹಾಗೂ ಸರಕು ಸೇವಾ ತೆರಿಗೆ ಅಳವಡಿಕೆಯಿಂದ ಉಂಟಾದ ನಷ್ಟ ಪರಿಹಾರವು ಒಳಗೊಂಡಿರುತ್ತದೆ.
ವಿಶೇಷ ಎಂದರೆ ವಸತಿ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಬೈರತಿ ಬಸವರಾಜು ಗೋವಿಂದ ಕಾರಜೋಳ, ಡಾ ಕೆ ಸುಧಾಕರ್, ಬಿ ಶ್ರೀರಾಮುಲು ಇಲಾಖೆಗಳಿಗೆ ಕೇಂದ್ರ ಪುರಸ್ಕೃತದ ಕೆಲ ಯೋಜನೆಗಳಿಗೆ ಬಿಡಿಗಾಸನ್ನೂ ನೀಡದಿದ್ದರೂ ಈ ಸಚಿವರ್ಯಾರು ತುಟಿ ಬಿಚ್ಚಿಲ್ಲ. ಸ್ವಚ್ಛ ಭಾರತ, ಪೂರಕ ಪೌಷ್ಠಿಕ ಆಹಾರ, ರಾಷ್ಟ್ರೀಯ ಉಚ್ಚತರ ಶಿಕ್ಷಣ ಅಭಿಯಾನ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಯೋಜನೆ ಸೇರಿದಂತೆ 17ಕ್ಕೂ ಹೆಚ್ಚಿನ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಒಟ್ಟು ಅನುದಾನದಲ್ಲಿ ಶೇ. 50ಕ್ಕಿಂತಲೂ ಕಡಿಮೆ ಬಿಡುಗಡೆ ಮಾಡಿದೆ. ಕೇಂದ್ರ ಪುರಸ್ಕೃತ ಯೋಜನೆ, ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರವು ಒಟ್ಟು ಅನುದಾನದಲ್ಲಿ ಇನ್ನೂ 2,419.01 ಕೋಟಿ ರು. ಬಾಕಿ ಉಳಿಸಿಕೊಂಡಿದೆ.
ಶೇ. 50ಕ್ಕಿಂತಲೂ ಕಡಿಮೆ ಅನುದಾನ ಬಿಡುಗಡೆಯಾಗಿರುವುದು ಮತ್ತು ಸಕಾಲದಲ್ಲಿ ಅನುದಾನ ಬಿಡುಗಡೆ ಆಗದ ಕಾರಣ ಕೇಂದ್ರ ಪುರಸ್ಕೃತ ಯೋಜನೆಗಳು ರಾಜ್ಯದಲ್ಲಿ ತೆವಳುತ್ತಿವೆ. 100 ಕೋಟಿ ರು.ಗಿಂತ ಹೆಚ್ಚಿನ ಅನುದಾನವಿರುವ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ 2020-21ನೇ ಸಾಲಿಗೆ ಒಟ್ಟು 2,948.94 ಕೋಟಿ ರು. ಅನುದಾನವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಿತ್ತು. ಆದರೆ ಈ ಪೈಕಿ 2020ರ ಡಿಸೆಂಬರ್ ಅಂತ್ಯಕ್ಕೆ ಕೇವಲ 529.93 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ. ಇನ್ನೂ 2,419.01 ಕೋಟಿ ರು.ಗಳನ್ನು ಬಿಡುಗಡೆ ಮಾಡಿಲ್ಲ ಎಂಬುದು ದಾಖಲೆಯಿಂದ ಗೊತ್ತಾಗಿದೆ.
ಅದೇ ರೀತಿ 10 ಕೋಟಿ ರು.ಗಳಿಗಿಂತ ಹೆಚ್ಚಿನ ಅನುದಾನವಿರುವ ಕಾರ್ಯಕ್ರಮಗಳಲ್ಲೂ ಶೇ.50ಕ್ಕಿಂತ ಕಡಿಮೆ ಬಿಡುಗಡೆಯಾಗಿದೆ. ತುಂಗಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ 242.29 ಕೋಟಿ ರು.ಗಳನ್ನು ಕೇಂದ್ರ ಸರ್ಕಾರವು ಅನುದಾನ ಒದಗಿಸಬೇಕಿತ್ತು. ಆದರೆ ಡಿಸೆಂಬರ್ 2020ರ ಅಂತ್ಯಕ್ಕೆ ಕೇವಲ 23.72 ಕೋಟಿ ರು. ಮಾತ್ರ ಬಿಡುಗಡೆ ಮಾಡಿ ಇನ್ನೂ 218.57 ಕೋಟಿ ರು. ಬಾಕಿ ಉಳಿಸಿಕೊಂಡಿದೆ.
ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಸ್ವಚ್ಛ ಭಾರತ (ನಗರ) ಯೋಜನೆಗೆ ಒಟ್ಟು 120 ಕೋಟಿ ರು.ಅನುದಾನ ಘೋಷಿಸಿದ್ದ ಕೇಂದ್ರ ಸರ್ಕಾರವು ಡಿಸೆಂಬರ್ 2020ರ ಅಂತ್ಯದವರೆಗೂ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಅದೇ ರೀತಿ ವಸತಿ ಇಲಾಖೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಪ್ರಧಾನ ಮಂತ್ರಿ ಆವಾಜ್ ಯೋಜನೆ (ಗ್ರಾಮೀಣ)ಗೆ 300 ಕೋಟಿ ರು. ಅನುದಾನ ಘೋಷಣೆಯಾಗಿದೆಯಾದರೂ ಡಿಸೆಂಬರ್ 2020ರ ಅಂತ್ಯಕ್ಕೆ ಬಿಡಿಗಾಸನ್ನೂ ನೀಡಿಲ್ಲ.
ಪೂರಕ ಪೌಷ್ಠಿಕ ಆಹಾರ ಯೋಜನೆಗೆ ಕೇಂದ್ರ ಸರ್ಕಾರವು ಘೋಷಿಸಿದ್ದ 599.44 ಕೋಟಿ ರು. ಅನುದಾನದ ಪೈಕಿ ಡಿಸೆಂಬರ್ 2020ರ ಅಂತ್ಯಕ್ಕೆ 156.60 ಕೋಟಿ ರು.ಮಾತ್ರ ಬಿಡುಗಡೆ ಮಾಡಿದೆ. ಪ್ರಧಾನಮಂತ್ರಿ ಆವಾಜ್ ಯೋಜನೆ (ನಗರ)ಗೆ 515.00 ಕೋಟಿ ರು ಪೈಕಿ ಕೇವಲ 9.19 ಕೋಟಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್)ಗೆ 402.05 ಕೋಟಿ ರು. ಪೈಕಿ 117.29 ಕೋಟಿ, ಅಮೃತ್ ಮಿಷನ್ ಯೋಜನೆಗೆ 290.57 ಕೋಟಿ ರು. ಪೈಕಿ ಕೇವಲ 0.51 ಕೋಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ 237.50 ಕೋಟಿ ರು.ನಲ್ಲಿ 79.13 ಕೋಟಿ, ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಗೆ 218.97 ಕೋಟಿ ರು.ನಲ್ಲಿ 109.48 ಕೋಟಿ ರು., ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ 145.50 ಕೋಟಿ ರು. ಪೈಕಿ 11.22 ಕೋಟಿ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಯೋಜನೆಗೆ 119.91 ಕೋಟಿ ರು.ನಲ್ಲಿ 46.51 ಕೋಟಿ ರು.ಮಾತ್ರ ಬಿಡುಗಡೆ ಮಾಡಿದೆ.
ಅದೇ ರೀತಿ 10 ಕೋಟಿಗಿಂತ ಹೆಚ್ಚಿನ ಅನುದಾನವಿರುವ ಕಾರ್ಯಕ್ರಮಗಳಾದ ತುಂಗಾ ಮೇಲ್ದಂಡೆ ಯೋಜನೆಗೆ 66.89 ಕೋಟಿ ರು.ಪೈಕಿ ಬಿಡುಗಡೆ ಮಾಡಿದ್ದು ಕೇವಲ 4.45 ಕೋಟಿ ಮಾತ್ರ. ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆಗೆ 55.08 ಕೋಟಿ ರು.ನಲ್ಲಿ 14.63 ಕೋಟಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರವು ರಾಷ್ಟ್ರೀಯ ಉಚ್ಚತರ ಶಿಕ್ಷಣ ಅಭಿಯಾನಕ್ಕೆ ಘೋಷಿಸಿದ್ದ 50.40 ಕೋಟಿ ರು.ನಲ್ಲಿ, ರಾಷ್ಟ್ರೀಯ ಆಯುಷ್ ಅಭಿಯಾನಕ್ಕೆ 19.63 ಕೋಟಿ, ಮೀನುಗಾರಿಕೆ ಬಂದರುಗಳ ನಿರ್ಮಾಣಕ್ಕೆ 18.75 ಕೋಟಿ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ 18.15 ಕೋಟಿ ರು.ನಲ್ಲಿ ಬಿಡಿಗಾಸನ್ನೂ ನೀಡಿಲ್ಲ.