ಸೋದರ ದೊರೆಸ್ವಾಮಿ ವಿರುದ್ಧದ ಅತ್ಯಾಚಾರ ಅರೋಪ; ಕಡೆಗೂ ಬಾಯ್ಬಿಟ್ಟ ಶರಣರು!

ಬೆಂಗಳೂರು: ಚಿತ್ರದುರ್ಗದ ಇತಿಹಾಸ ಪ್ರಸಿದ್ಧ ಮುರುಘರಾಜೇಂದ್ರ ಬೃಹನ್ಮಠದ ಶೂನ್ಯ ಪೀಠಾಧ್ಯಕ್ಷರು, ನಾಡಿನ ಅತ್ಯಂತ ಪ್ರಗತಿಪರ ಲಿಂಗಾಯತ ಸ್ವಾಮೀಜಿಗಳು ಎಂದೇ ಬಿಂಬಿಸಿಕೊಂಡಿರುವ ಡಾ‌. ಶಿವಮೂರ್ತಿ ಮುರುಘಾ ಶರಣರು ತಮ್ಮ ಪೂರ್ವಾಶ್ರಮದ ಒಡಹುಟ್ಟಿದ ಕಿರಿಯ ಸಹೋದರ ಎಂ.ಜಿ.ದೊರೆಸ್ವಾಮಿ (ಮುರುಘಾ ಮಠದ ಮಾಜಿ ಸಿಇಒ ಹಾಗೂ ಮುರುಘರಾಜೇಂದ್ರ ಸಹಕಾರಿ ಬ್ಯಾಂಕ್ ನ ಹಾಲಿ ನಿರ್ದೇಶಕ) ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡೆಗೂ ಬಾಯ್ಬಿಟ್ಟಿದ್ದಾರೆ.

ಸೋಮವಾರ (ಫೆ.15) ಮಧ್ಯಾಹ್ನ ಚಿತ್ರದುರ್ಗದ ತಮ್ಮ ಮಠದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿರುವ ಶರಣರ, 4 ನಿಮಿಷಗಳ ಈ ಏಕಮುಖ ಗೋಷ್ಠಿಗೆ ಸ್ಥಳೀಯ ಪ್ರಮುಖ ಪತ್ರಕರ್ತರೆಲ್ಲರೂ ಸಾಕ್ಷಿಯಾಗಿದ್ದಾರೆ.

ಗೋಷ್ಠಿಯಲ್ಲಿ ಶರಣರು ಅಪ್ಪಿತಪ್ಪಿಯೂ ದೊರೆಸ್ವಾಮಿ ವಿರುದ್ಧದ ಅತ್ಯಾಚಾರ ಆರೋಪದ ಬಗ್ಗೆ ಮುಕ್ತವಾಗಿ ಮಾತನಾಡಿಲ್ಲ. ಬದಲಿಗೆ, “ಮುರುಘಾ ಮಠವನ್ನು ರಕ್ತಸಂಬಂಧದಿಂದ ಮುಕ್ತಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.

“ಮಠದ ಘನತೆ ಮತ್ತು ಗೌರವ ಕಾಪಾಡುವ ಉದ್ದೇಶದಿಂದ ಹತ್ತು ಜನರ ರಾಜೀನಾಮೆ ಪಡೆಯಲಾಗಿದೆ” ಎಂದು ಹೇಳಿದ್ದಾರೆ. ಆದರೆ, ಈ ಹತ್ತು ಜನರು ಮಠದ ಗೌರವ ಘನತೆ ಹಾಳು ಮಾಡುವಂತಹ ಕೆಲಸ ಏನು ಮಾಡಿದ್ದರು ಎಂಬುದನ್ನು ಮಾತ್ರ ವಿವರಿಸುವ ಗೋಜಿಗೆ ಹೋಗಿಲ್ಲ.

“ಮುರುಘಾ ಮಠ ನಾಡಿನ ಒಂದು ಐತಿಹಾಸಿಕ ಮಠವಾಗಿ ಬೆಳೆದು ಬಂದಿದೆ. ಒಂದು ಸಂಸ್ಥೆ ಎಂದ ಮೇಲೆ ಅಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಿರುತ್ತಾರೆ. ಎಲ್ಲರ ಸ್ವಭಾವದಲ್ಲೂ ಭಿನ್ನತೆ ಇದ್ದೇ ಇರುತ್ತದೆ. ಯಾರು ತಮ್ಮ ಇತಿಮಿತಿ ಮೀರಿ ವರ್ತಿಸುತ್ತಾರೊ ಅಂಥವರ ವಿರುದ್ಧ ಶಿಸ್ತುಕ್ರಮ ಕೈಗೊಂಡು ಈಗಾಗಲೇ ರಾಜೀನಾಮೆ ಪಡೆಯಲಾಗಿದೆ” ಎಂದು ಎಲ್ಲವನ್ನೂ ಮುಗುಮ್ಮಾಗಿ, ಕ್ಲುಪ್ತವಾಗಿ ಅರುಹಿದ್ದಾರೆ.

“ಕಳೆದ ನಾಲ್ಕು ತಿಂಗಳ ಹಿಂದೆ ಮಠಕ್ಕೆ ಸಂಬಂಧಿಸಿದಂತೆ ವದಂತಿಯೊಂದು (ದೊರೆಸ್ವಾಮಿ ವಿರುದ್ಧದ ಅತ್ಯಾಚಾರ ಆರೋಪ) ಹಬ್ಬಿತ್ತು. ಸಣ್ಣ ತಪ್ಪೊಂದು ದೊಡ್ಡ ಅಪರಾಧಕ್ಕೆ ಅವಕಾಶ ಆಗಬಾರದು ಎಂದು ಶಿಸ್ತಿನ ಕ್ರಮ ಜರುಗಿಸಲಾಗಿದೆ” ಎಂದು ತಿಳಿಸಿದ್ದಾರೆ. ಆದರೆ, ಇದನ್ನೆಲ್ಲಾ ಸಾರ್ವಜನಿಕ ಅವಗಾಹನೆಗೆ ತರಬೇಕಾಗಿದೆ ಎಂಬ ಬಗ್ಗೆ ಪಾರದರ್ಶಕವಾಗಿ ಏನನ್ನೂ ಬಿಚ್ಚಿಟ್ಟಿಲ್ಲ. ಸುದ್ದಿಗೋಷ್ಠಿಯಲ್ಲಿ ಶರಣರು ವಿವರಣೆಗಳನ್ನು ನೀಡಿದ ನಂತರವೂ ಕೇಳದೇ ಉಳಿದಿರುವ ಕೆಲ ಪ್ರಮುಖ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ.

*ಸಂಬಂಧಿಕರ ನೇಮಕಾತಿ ಮುರುಘಾ ಶರಣರ ಗಮನಕ್ಕೆ ಬರದಂತೆ ನಡೆದಿತ್ತಾ?

* ಶರಣರ ಖಾಸಾ ತಮ್ಮ ದೊರಸ್ವಾಮಿಯನ್ನು ವಿದ್ಯಾಪೀಠದ ಕಾರ್ಯನಿರ್ಹವಣಾಧಿಕಾರಿಯನ್ನಾಗಿ ನೇಮಿಸಿದ್ದು ಮತ್ತು ವಿದ್ಯಾಪೀಠದ ನಿರ್ದೇಶಕನನ್ನಾಗಿ ಮಾಡಿದ್ದು ಶ್ರೀ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೇ ಎನ್ನುವುದು ವಿದ್ಯಾಪೀಠದ ದಾಖಲೆಗಳು ಮತ್ತು ಸಹಕಾರಿ ಇಲಾಖೆಯ ಉಪ ನಿರ್ದೇಶಕರ ಇಲಾಖೆಗೆ, ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ದಾಖಲೆಗಳು ಹೇಳುತ್ತವೆಯಲ್ಲವೇ?

* ಆಗ ಮುರುಘಾ ಶರಣರಿಗೆ ದೊರಸ್ವಾಮಿ ತಮ್ಮ ಖಾಸಾ ತಮ್ಮ ಎನ್ನುವುದು ತಿಳಿದಿರಲಿಲ್ಲವೇ?

* ಅಂತೆಯೇ ಶಿಸ್ತು ಮೀರಿ ನಡೆದುಕೊಂಡ ಸಂಸ್ಥೆಯ ನೌಕರರ ಬಗ್ಗೆ ನಡೆಸಲಾದ ವಿಚಾರಣೆಯ ವಿವರಗಳು ಏನು?

* ಹತ್ತು ಜನ ರಕ್ತ ಸಂಬಂಧಿಕರು ಅವರಾಗಿಯೇ ಬಂದು ರಾಜೀನಾಮೆ ಕೊಡಲು ಸೃಷ್ಟಿಯಾದ ಒತ್ತಡ ಯಾವುದು?

* ಸಂಬಂಧಿಕರನ್ನು ಒಳಗೊಂಡಂತೆ ಅವರ ಹತ್ತಿರ ಕೆಲಸ ಮಾಡುವ ಡಿ-ಗ್ರೂಪ್ ನೌಕರರ ವೇತನ ಕೆಲವೊಂದು ಕಾಲೇಜುಗಳ ಪ್ರಾಂಶುಪಾಲರಿಗಿಂತ ಹೆಚ್ಚಿರುವುದು ಸುಳ್ಳೇ?

* ರಕ್ತಸಂಬಂಧಿಕರ ನೇಮಕಾತಿಯನ್ನು ಈ ಹಿಂದಿನ ಮಠದ ಆಡಳಿತಾಧಿಕಾರಿ ಮಾಡಿದ್ದಾರೆ ಎಂದಾದರೆ ಅಧ್ಯಕ್ಷರಾಗಿ ಶರಣರು ಅವರ ವಿರುದ್ಧ ಕೈಗೊಂಡ ಕ್ರಮಗಳು ಯಾವುವು? ನಡೆಸಿದ್ದ ವಿಚಾರಣೆ ಏನು?

* ಉಪನ್ಯಾಸಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ದೊರಸ್ವಾಮಿ ಜೊತೆಗೆ ಸಹಕರಿಸಿದವರು ಎನ್ನಲಾಗಿರುವ ಮೂವರ ಆರೋಪಿಗಳ ಮೇಲೆ ಶರಣರು ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ?

* ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು ಈ ಬಗ್ಗೆ ತೆಗೆದುಕೊಂಡ ನಿರ್ಧಾರಗಳ ಲಿಖಿತ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಅಗತ್ಯ ಮುರುಘಾ ಶರಣರಿಗೆ ಏಕೆ ಆಗಿಲ್ಲ?

* 10 ಜನ ನೌಕರರ ರಾಜೀನಾಮೆ ಯನ್ನು 2020ರ ಅಕ್ಟೋಬರ್ 31ರಂದೇ ಪತ್ರಿಕೆಗಳಿಗೆ ರಾಜೀನಾಮೆ ಕೊಟ್ಟವರು ಸ್ವಯಂ ಹೇಳಿಕೆ ಬಿಡುಗಡೆ ಮಾಡಿದ್ದರಲ್ಲವೇ? ಈಗ ಏಕೆ ತುರ್ತು ಪತ್ರಿಕಾಗೋಷ್ಠಿಯಲ್ಲಿ ಸಮಜಾಯಿಷಿ?

ಶರಣರ ಹಿನ್ನೆಲೆ:

ಶೂನ್ಯ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಹುಟ್ಟಿದ ಊರು ಚಿತ್ರದುರ್ಗ ಕಸಬಾ ತಾಲ್ಲೂಕಿನ ಗೊಡಬನಾಳು. ಶರಣರ ಪೂರ್ವಾಶ್ರಮದ ಹೆಸರು ಶಿವಮೂರ್ತಿ. ತಂದೆ ಗುರುಮೂರ್ತಯ್ಯ ತಾಯಿ ಮುರಿಗೆಮ್ಮ. ಶ್ರೀ ಮಠದಲ್ಲಿಯೇ ವಿದ್ಯಾಭ್ಯಾಸ.

ಈ ದಂಪತಿಯ ಮಕ್ಕಳು

1. ಶಿವಮೂರ್ತಿ,
2. ಗೌರಮ್ಮ,
3. ಸಂಗಯ್ಯ,
4. ಸುವರ್ಣಮ್ಮ,
5. ದೊರೆಸ್ವಾಮಿ,
6. ಮಲ್ಲಿಕಾರ್ಜುನ.

* ಶಿವಮೂರ್ತಿ ಮುರುಘಾ ಶರಣರು ಸದ್ಯ ಮುರುಘಾಮಠದ ಪೀಠಾಧಿಪತಿ.

* ಗೌರಮ್ಮ ಕೋಂ ಲೇಟ್ ಶಿವಾಜಿ ಗೌಡ, (ಎಸ್.ಕೆ.ಬಸವರಾಜನ್ ಮಠದ ಆಡಳಿತಾಧಿಕಾರಿ ಆಗುವುದಕ್ಕೂ ಮೊದಲು ಶಿವಾಜಿ ಗೌಡ ಶ್ರೀಮಠದ ಸ್ಥಿರಾಸ್ತಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು)
ಕಾವಾಡಿಗರ ಹಟ್ಟಿ,
ಚಿತ್ರದುರ್ಗ
ಮಕ್ಕಳು 1 ಗಂಡು, 2 ಹೆಣ್ಣು.

* ಜಯಶ್ರೀ (ಗೌರಮ್ಮನ ಮಗಳು) ಡೆಂಟಲ್ ಮತ್ತು ಎಂಜಿನಿಯರಿಂಗ್ ಕಾಲೇಜ್ ಮಹಿಳಾ ಹಾಸ್ಟೆಲ್ ಉಸ್ತುವಾರಿ.,  ಜಯಶ್ರೀ ಗಂಡ ಗದ್ದಿಗೆಯ್ಯ ಹಿರೇಮಠ (ಆನಂದ), ಊರು ಮದುರೆ (ಹೊಸದುರ್ಗ ತಾಲ್ಲೂಕು), ವಿದ್ಯಾರ್ಹತೆ ನಾಲ್ಕನೇ ತರಗತಿ, ಬಿ ಎಂ ಸಿ (ಬಸವೇಶ್ವರ ಮೆಡಿಕಲ್ ಕಾಲೇಜು) ಗ್ರಂಥಾಲಯದಲ್ಲಿ ಮೊದಲು ನಾಲ್ಕನೇ ದರ್ಜೆ ನೌಕರ. ರಾಜೀನಾಮೆ ನೀಡುವಾಗ ಎರಡನೇ ದರ್ಜೆ ನೌಕರ., ಇನ್ನು  ಭುವನೇಶ್ವರಿ (ಗೌರಮ್ಮನ ಮಗಳು) ಬಿ ಎಂ ಸಿ ಮಹಿಳಾ ಹಾಸ್ಟೆಲ್ ಮೇಲ್ವಿಚಾರಕಿಯಾಗಿದ್ದರೆ, ಭುವನೇಶ್ವರಿ ಗಂಡ ಶಿವಕುಮಾರ್ ಡ್ರೈವರ್ ಕಮ್ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅದೇ ರೀತಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಗೊಡಬನಾಳು ವಾಸಿಯಾದ  ಸಂಗಯ್ಯ ಬಿಎಂಸಿಯಲ್ಲಿ ಅಕೌಂಟ್‌ ಅಸಿಸ್ಟಂಟ್‌, ಮಗಳು ವಿಜಯಶ್ರೀ ಮತ್ತು ಆಕೆಯ ಪತಿ ಜಯವಿಭವ ಅಕೌಂಟ್‌ ಅಸಿಸ್ಟೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಎಸ್ ಜೆ ಎಂ ಐ ಟಿ ನಿವೃತ್ತ ನೌಕರ ರಾಜೀನಾಮೆ ನೀಡವಾಗ ಬಿ ಎಂ ಸಿ ಮ್ಯಾನೇಜರ್, ಡಾಕ್ಟರ್ ಗಳ ಬಯೊಮೆಟ್ರಿಕ್ ಉಸ್ತುವಾರಿ, ಜಯವಿಭವ (ಸುವರ್ಣಮ್ಮನ ಮಗ) ಎಸ್ ಜೆ ಎಂ ಐ ಟಿ & ಪಾಲಿಟೆಕ್ನಿಕ್‌ನಲ್ಲಿ ಅಕೌಂಟ್‌ ಅಸಿಸ್ಟೆಂಟ್‌, ಎರಡನೇ ಮಗ ಶಿವಪ್ರಸಾದ್ ಡೆಂಟಲ್ ಕಾಲೇಜಿನ ಎರಡನೇ ದರ್ಜೆ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಸ್. ಜೆ. ಎಂ. ವಿದ್ಯಾಪೀಠದ ನಿರ್ದೇಶಕ ಮತ್ತು ಸಿಇಒ (ಕಾರ್ಯ ನಿರ್ವಹಣಾಧಿಕಾರಿ (ಈ ಮೊದಲು ಎಸ್.ಕೆ. ಬಸವರಾಜನ್ ಆಡಳಿತಾಧಿಕಾರಿಯಾಗಿದ್ದ ಜಾಗ) ಹುದ್ದೆಯಲ್ಲಿ ದೊರೆಸ್ವಾಮಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ದೊರೆಸ್ವಾಮಿ-ಮೀರಾ ನಾಡಿಗ್ ದಂಪತಿಯ ಸುಪುತ್ರ ಗೌರವ್, ಬಸವೇಶ್ವರ ಮೆಡಿಕಲ್ ಕಾಲೇಜಿನಲ್ಲಿ 3ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ (ಮ್ಯಾನೇಜ್‌ಮೆಂಟ್‌ ಸೀಟು). ಮಲ್ಲಿಕಾರ್ಜುನ, ಫಾರ್ಮಸಿ ಕಾಲೇಜು ಮತ್ತು ಬಿ ಎಂ ಸಿ ಆಸ್ಪತ್ರೆ ಉಸ್ತುವಾರಿ, ಮಲ್ಲಿಕಾರ್ಜುನ ಅವರ ಮಗ- ಪರಿಣಿತ್ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ (ಮ್ಯಾನೇಜ್‌ಮೆಂಟ್‌ ಸೀಟು)

“ಮೇಲೆ ವಿವರಿಸಿದವರೆಲ್ಲರೂ ಶರಣರ ರಕ್ತಸಂಬಂಧಿಗಳಾಗಿದ್ದು ಎಸ್ ಜೆ ಎಂ ವಿದ್ಯಾಪೀಠದ ನೌಕರರಾಗಿದ್ದವರು. ಈಗ ಇವರೆಲ್ಲರಿಗೂ ಭಾರಿ ಮೊತ್ತ ನೀಡಿಯೇ ರಾಜೀನಾಮೆ ಪಡೆಯಲಾಗಿದೆ” ಎಂಬ ಪುಕಾರಿದೆ. ಆದರೆ, ಶರಣರು ಎಲ್ಲೂ ಇದಕ್ಕೆ ಉತ್ತರಿಸದೇ ಇರುವುದು ವಿಶೇಷ.

ಮೇಲೆ ವಿವರಿಸಿದವರನ್ನು ಹೊರತುಪಡಿಸಿ ಸರ್ಕಾರಿ ಅನುದಾನಿತ ಸಂಬಳ ಪಡೆಯುತ್ತಿರುವ ರಕ್ತಸಂಬಂಧಿಗಳೂ ಹಲವರಿದ್ದಾರೆ. ಅವರಲ್ಲಿ ಪ್ರಮುಖರೆಂದರೆ, ಶರಣರ ತಾಯಿ ಮುರಿಗೆಮ್ಮನ ಅಣ್ಣ ಜಯದೇವಯ್ಯನವರ ಮಗ ಎಂ.ಜೆ. ರುದ್ರಮೂರ್ತಿ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎರಡನೇ ದರ್ಜೆ ನೌಕರ.

ದೊರೆಸ್ವಾಮಿ ಹೆಂಡತಿ ಮೀರಾ ನಾಡಿಗ್, ಗಾರೆಹಟ್ಟಿಯಲ್ಲಿರುವ ಬೃಹನ್ಮಠ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಮುರಿಗೆಮ್ಮನ ತಂಗಿ ಮಗ ಮಲ್ಲಿಕಾರ್ಜುನ ಸ್ವಾಮಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದೊಮ್ಮೆ ಮುರುಘಾ ಶರಣರು ಮಠಗಳು ಸ್ವಾಮೀಜಿಗಳ ಫ್ಯಾಮಿಲಿ ಬಿಸಿನೆಸ್‌ ಅಲ್ಲ ಎಂದು ಲೇಖನ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

SUPPORT THE FILE

Latest News

Related Posts