ಬೆಂಗಳೂರು; ಉಪ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ 5 ಕೋಟಿ ಹಣ ಸಂಗ್ರಹ ಮಾಡಲು ತಮ್ಮ ಕೈ ಕೆಳಗಿನ ಅಧಿಕಾರಿಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ ಸತೀಶ್‌ಕುಮಾರ್ ಎಸ್ ಹೊಸಮನಿ ಅವರು ತಾಕೀತು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಗುರುತರ ಆರೋಪಕ್ಕೆ ರಾಜ್ಯ ಬಿಜೆಪಿ ಸರ್ಕಾರದ ಸಚಿವರು ಗುರಿಯಾಗಿರುವ ಬೆನ್ನಲ್ಲೇ ಉಪ ಮುಖ್ಯಮಂತ್ರಿಗಳಿಗೆ 5 ಕೋಟಿ ಹಣ ಸಂಗ್ರಹ ಮಾಡಲು ಗ್ರಂಥಾಲಯ ಇಲಾಖೆ ನಿರ್ದೇಶಕರು ತಾಕೀತು ಮಾಡಿರುವ ಪ್ರಕರಣ ಮುನ್ನೆಲೆಗೆ ಬಂದಿದೆ.
ಡಾ ಸತೀಶ್‌ಕುಮಾರ್ ಎಸ್ ಹೊಸಮನಿ ಅವರ ವಿರುದ್ಧ ಶಿವಾನಂದ ದೊಡ್ಡಮನಿ ಎಂಬುವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ದೂರನ್ನಾಧರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಶಿಕ್ಷಣ ಇಲಾಖೆಯ ಅಭಿಪ್ರಾಯವನ್ನು ಕೋರಿದೆ. ಈ ಸಂಬಂಧ ಟಿಪ್ಪಣಿ ಹಾಳೆಯೊಂದು ‘ದಿ ಫೈಲ್’ಗೆ ಲಭ್ಯವಾಗಿದೆ.
‘ದೂರಿನ ಪತ್ರವು ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3) ಸ್ವೀಕೃತವಾಗಿದೆ. ಈ ದೂರಿನ ಕುರಿತು ಇಲಾಖೆಯು ಶಿಕ್ಷಣ ಇಲಾಖೆಯ ಅಭಿಪ್ರಾಯವನ್ನು ಕೋರಿದೆ. ದೂರಿನ ಪತ್ರದಲ್ಲಿನ ಅಂಶಗಳ ಬಗ್ಗೆ ಸತ್ಯಾಸತ್ಯತೆ ತಿಳಿಯದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಅಭಿಪ್ರಾಯ ನೀಡುವುದು ಕಷ್ಟಸಾಧ್ಯವಾಗುತ್ತದೆ,’ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ನಗರಾಭಿವೃದ್ಧಿ ಇಲಾಖೆಯು 50 ಕೋಟಿ ರು.ಅನುದಾನ ಬಿಡುಗಡೆ ಮಾಡಿದ್ದು, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ಉಪ ಮುಖ್ಯಮಂತ್ರಿಗಳಿಗೆ 5 ಕೋಟಿ ಹಣ ಸಂಗ್ರಹ ಮಾಡಬೇಕು ಎಂದು ಕೈ ಕೆಳಗಿನ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಶಿವಾನಂದ ದೊಡ್ಡಮನಿ ಎಂಬುವರು ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ಉಪ ಮುಖ್ಯಮಂತ್ರಿಗಳ ಹೆಸರುಗಳನ್ನು ಟಿಪ್ಪಣಿ ಹಾಳೆಯಲ್ಲಿ ನಮೂದಿಸಿಲ್ಲ.
ಅಲ್ಲದೇ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್‌ಕುಮಾರ್ ಎಸ್ ಹೊಸಮನಿ ಅವರು ಪ್ರತಿ ವರ್ಷ 5ರಿಂದ 6 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇಲಾಖೆಯ ಹಿಂದಿನ ನಿರ್ದೇಶಕ ರಾಜೇಂದ್ರಕುಮಾರ್ ಅವರನ್ನು 7-8 ಸಮಿತಿಗಳಿಗೆ ನಾಮನಿರ್ದೇಶನ ಮಾಡಿಸಿ ಅನೇಕ ಬೋಗಸ್ ಯೋಜನೆಗಳನ್ನು ತಯಾರಿಸುತ್ತಿದ್ದಾರೆ ಎಂದೂ ದೊಡ್ಡಮನಿ ದೂರಿದ್ದಾರೆ.
ಯಡಿಯೂರಪ್ಪನವರ ಸರ್ಕಾರ ಭ್ರಷ್ಟಾಚಾರದಲ್ಲಿ ಈ ಹಿಂದಿನ ಎಲ್ಲಾ ಸರ್ಕಾರಗಳನ್ನು ಮೀರಿಸುತ್ತಿದೆ. ಭ್ರಷ್ಟ ಮಂತ್ರಿಗಳು ಈ ಹಿಂದೆ ಮೌಖಿಕವಾಗಿ ಆದೇಶ ಮಾಡಿ ಶೇಕಡವಾರು ಲೆಕ್ಕದಲ್ಲಿ ಲಂಚ ಪಡೆಯುತ್ತಿದ್ದರೆ ಈಗಿನವರ ಕಾಲದಲ್ಲಿ ಲಿಖಿತ ಆದೇಶ ಮತ್ತು ಟಿಪ್ಪಣಿ ಮೂಲಕ ಬರುತ್ತಿದೆ. ಜೈಲಿಗೆ ಹೋಗಲು ಬೇಕಾದ ಎಲ್ಲಾ ದಾಖಲೆಗಳನ್ನು ಈ ಭ್ರಷ್ಟರೇ ಸೃಷ್ಟಿಸಿಕೊಡುತ್ತಿದ್ದಾರೆ. ಈಗಾಗಲೇ ಮಾಜಿ ಸಚಿವ ನಾಗೇಶ್, ಸಚಿವ ಬಿ ಸಿ ಪಾಟೀಲ್, ಅಶೋಕ್ ಮುಂತಾದವರ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರು ಮಂತ್ರಿಗಳ ಅಕ್ರಮ ಬೇಡಿಕೆಗಳ ಬಗ್ಗೆ ಲಿಖಿತವಾಗಿ ದೂರು ಸಲ್ಲಿಸುತ್ತಿರುವುದು ಇಲ್ಲಿಯ ನಿರ್ಲಜ್ಜ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತಿದೆ. ಸಚಿವರ ಹಪಾಹಪಿತನ ನೋಡಿದರೆ ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎನ್ನುವ ರೀತಿಯಲ್ಲಿ ಮುಕ್ಕುತ್ತಿದ್ದಾರೆ.
ರವಿ ಕೃಷ್ಣಾರೆಡ್ಡಿ, ಅಧ್ಯಕ್ಷರು. ಕರ್ನಾಟಕ ರಾಷ್ಟ್ರಸಮಿತಿ
ಹಾಗೆಯೇ ಶೂದ್ರ ಶ್ರೀನಿವಾಸ್ ಎಂಬುವರನ್ನು ಕಳೆದ 20 ವರ್ಷದಿಂದಲೂ ಬೆಂಗಳೂರಿನ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿಸಲಾಗಿದೆ. ಪುಸ್ತಕ ಆಯ್ಕೆ ಸಮಿತಿಯಲ್ಲೂ ಇವರನ್ನೇ ಸದಸ್ಯರನ್ನಾಗಿಸಿಕೊಂಡು ಇಲಾಖೆಯ ಹಣವನ್ನು ಲೂಟಿ ಮಾಡುತ್ತಿದ್ದಾರೆ. ದೆಹಲಿಯಲ್ಲಿರುವ ಲೆಟರ್ ಹೆಡ್ ಪುಸ್ತಕ ವ್ಯಾಪಾರಿ ಮತ್ತು ದೆಹಲಿ ಪ್ರಕಾಶಕರೊಂದಿಗೆ ಒಪ್ಪಂದ ಮಾಡಿಕೊಂಡು ಪುಸ್ತಕಗಳನ್ನು ಆಯ್ಕೆ ಮಾಡಲು ಹೊಸಮನಿ ಅವರು ಆದೇಶಿಸಿದ್ದಾರೆ ಎಂದು ದೊಡ್ಡಮನಿ ಅವರು ಆರೋಪಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಅಬಕಾರಿ ಇಲಾಖೆಯ ಜಂಟಿ ಆಯುಕ್ತರ ವರ್ಗಾವಣೆಗೆ 1 ಕೋಟಿ ಲಂಚ ಕೇಳಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದ ಎಚ್ ನಾಗೇಶ್ ಅವರು ಸಚಿವ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅಧಿಕಾರಿ, ಸಿಬ್ಬಂದಿಗಳಿಂದ ಸಚಿವ ಬಿ ಸಿ ಪಾಟೀಲ್ ಅವರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕೃಷಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ಲಿಖಿತವಾಗಿ ಮುಖ್ಯಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು.
ಅದೇ ರೀತಿ ಶೃಂಗೇರಿಯ ಸಬ್ ರಿಜಿಸ್ಟ್ರಾರ್ ಬಳಿ ಹಣಕ್ಕೆ ಕಂದಾಯ ಸಚಿವ ಆರ್ ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಎಂಬುವರು ಬೇಡಿಕೆ ಇರಿಸಿದ್ದರು ಎಂಬ ಆರೋಪವು ಕೇಳಿ ಬಂದಿತ್ತಲ್ಲದೆ ಈ ಸಂಬಂಧ ಗಂಗಾಧರ್ ಅವರ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿರುವುದನ್ನು ಸ್ಮರಿಸಬಹುದು.