ಬೆಂಗಳೂರು; ಎಂಇಎಸ್ ಮುಖಂಡ ಕಿರಣ್ ಠಾಕೂರ್ ಒಡೆತನದಲ್ಲಿರುವ ಬೆಳಗಾವಿಯ ಲೋಕಮಾನ್ಯ ಮಲ್ಟಿಪರ್ಪಸ್ ಕೋ ಆಪರೇಟೀವ್ ಸೊಸೈಟಿ ಅಕ್ರಮಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿರುವ ಹೊತ್ತಿನಲ್ಲೇ ಠೇವಣಿದಾರನ್ನು ಆಕರ್ಷಿಸುವುದನ್ನು ಮುಂದುವರೆಸಿದೆ.
ಅಂದಾಜು 2 ಸಾವಿರ ಕೋಟಿ ರು. ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಈ ಸೊಸೈಟಿಯು ಠೇವಣಿದಾರರನ್ನು ಆಕರ್ಷಿಸುವುದನ್ನು ಮುಂದುವರೆಸಿದ್ದರೂ ಸಹಕಾರ ಇಲಾಖೆ ಯಾವುದೇ ಕ್ರಮ ವಹಿಸಿಲ್ಲ. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾಂತೀಯ ನಿರ್ದೇಶಕರು ರಾಜ್ಯ ಸರ್ಕಾರಕ್ಕೆ ಅರೆ ಸರ್ಕಾರಿ ಪತ್ರವನ್ನು (DO.FIDD(BG)NO 112/02.03.051/2020-21 ದಿನಾಂಕ 22.12.2020) ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಪತ್ರವನ್ನಾಧರಿಸಿ ಸಹ ಆರ್ಥಿಕ ಇಲಾಖೆಯ (ವಿತ್ತೀಯ ಸುಧಾರಣೆ) ಸರ್ಕಾರದ ಕಾರ್ಯದರ್ಶಿ ಮಂಜು ಪ್ರಸನ್ನನ್ ಪಿಳ್ಳೈ ಅವರು ಸಹಕಾರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2021ರ ಜನವರಿ 12ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಲೋಕಮಾನ್ಯ ಮಲ್ಟಿ ಪರ್ಪಸ್ ಕೋ ಆಪರೇಟೀವ್ ಸೊಸೈಟಿಯ ಬಗ್ಗೆ ಸಿಐಡಿಯಲ್ಲಿ ತನಿಖೆ ನಡೆಯುತ್ತಿದ್ದರೂ ಕೋ ಆಪರೇಟೀವ್ ಸೊಸೈಟಿಯು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಠೇವಣಿದಾರನ್ನು ಆಕರ್ಷಿಸುತ್ತಿದೆ. ಮಲ್ಟಿ ಕೋ ಆಪರೇಟೀವ್ ಸೊಸೈಟಿಗಳ ಮೇಲ್ವಿಚಾರಣೆಯಲ್ಲಿ ಲೋಪದೋಷಗಳನ್ನು ಸರಿಪಡಿಸಲು ಕೇಂದ್ರದ ಸಹಕಾರಿ ಸಂಘಗಳ ರಿಜಿಸ್ಟ್ರಾರ್‌ರೊಂದಿಗೆ ವಿಷಯವನ್ನು ಪ್ರಸ್ತಾಪಿಸಬೇಕು,’ ಎಂದು ಮಂಜು ಪ್ರಸನ್ನನ್ ಪಿಳ್ಳೈ ಅವರು ಅನಧಿಕೃತ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿರುವ ಈ ಸೊಸೈಟಿಯು ಎಂಇಎಸ್ ಮುಖಂಡ ಕಿರಣ್ ಠಾಕೂರ್ ಒಡೆತನಕ್ಕೆ ಸೇರಿದೆ. ಈ ಸೊಸೈಟಿಯಲ್ಲಿ ಠೇವಣಿದಾರರು ಇಟ್ಟಿದ್ದ 2 ಸಾವಿರ ಕೋಟಿಗೂ ಅಧಿಕ ಮೊತ್ತ ದುರುಪಯೋಗವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಶಾಸಕ ಅಭಯ ಪಾಟೀಲ್ ಸೇರಿ 60 ಶಾಸಕರಿಂದ ಇ.ಡಿ, ಕೇಂದ್ರ ಹಣಕಾಸು ಇಲಾಖೆ, ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದರು. ಪ್ರಕರಣ ಸಂಪೂರ್ಣ ತನಿಖೆಗೆ ಸಹಕಾರ ಇಲಾಖೆಗೆ ಸೂಚಿಸಿತ್ತು. ಇಲಾಖೆ ರಿಜಿಸ್ಟ್ರಾರ್ ಶಿವಪ್ರಕಾಶ್ ನೇತೃತ್ವದಲ್ಲಿ ಅಧಿಕಾರಿಗಳು ಟಿಳಕವಾಡಿ ಬ್ರ್ಯಾಂಚ್ಗೆ ಭೇಟಿ ನೀಡಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದರು.
ಗೋವಾ, ಮಹಾರಾಷ್ಟ್ರ, ಕರ್ನಾಟಕದ ಹಲವು ರಾಜಕಾರಣಿಗಳು ಈ ಸೊಸೈಟಿಯಲ್ಲಿ ಹಣ ಹೂಡಿಕೆ ಮಾಡಿದ್ದರು ತಿಳಿದುಬಂದಿದೆ.