Bank Information

PARADARSHAK MEDIA FOUNDATION, Account Number: 40107584055, SBI,Mahalalakshmipuram branch IFSC Code : SBIN0017347 Bengaluru

ಡಿನೋಟಿಫಿಕೇಷನ್‌; ಬಿಎಸ್‌ವೈ, ನಿರಾಣಿ, ಬಳಿಗಾರ್‌ಗೆ ಎಸಿಬಿಯಿಂದ ಕ್ಲೀನ್‌ ಚಿಟ್‌

ಬೆಂಗಳೂರು; ಆನೇಕಲ್‌ ತಾಲೂಕಿನ ಕಿತ್ತಿಗಾನಹಳ್ಳಿಯಲ್ಲಿನ 9 ಎಕರೆ 20 ಗುಂಟೆ ಜಮೀನನ್ನು ಕಾನೂನುಬಾಹಿರವಾಗಿ ಡಿ ನೋಟಿಫಿಕೇಷನ್‌ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಮುರುಗೇಶ್‌ ನಿರಾಣಿ ಮತ್ತು ನಿವೃತ್ತ ಐಎಎಸ್‌ ಅಧಿಕಾರಿ ವಿ ಪಿ ಬಳಿಗಾರ್‌ ಅವರನ್ನು ತನಿಖೆ ನಡೆಸದೆಯೇ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ದೋಷಮುಕ್ತಗೊಳಿಸಿದೆ.

ಅತ್ತಿಬೆಲೆ ಹೋಬಳಿಯ ಕಿತ್ತಿಗಾನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಕೋಟ್ಯಂತರ ರು. ಬೆಲೆ ಬಾಳುವ ಒಟ್ಟು 9 ಎಕರೆ 20 ಗುಂಟೆ ಜಮೀನನ್ನು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಭೂ ಸ್ವಾಧೀನದಿಂದ ಅಕ್ರಮವಾಗಿ ಕೈ ಬಿಡಲಾಗಿತ್ತು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಎಂಬುವರು 2019ರ ಸೆ. 30ರಂದು ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಆದರೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಪ್ರಾಥಮಿಕ ಪರಿಶೀಲನೆ ಹಂತದಲ್ಲೇ ದೂರನ್ನು ಮುಕ್ತಾಯಗೊಳಿಸಿದ್ದಾರೆ.

ಬೆಳ್ಳಂದೂರು ಹಾಗೂ ದೇವರಬೀಸನಹಳ್ಳಿಯಲ್ಲಿನ ಜಮೀನನ್ನು ಡಿ ನೋಟಿಫಿಕೇಷನ್‌ ಮಾಡಿದ್ದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿರುವ ಬೆನ್ನಲ್ಲೇ ಕಿತ್ತಿಗಾನಹಳ್ಳಿಯಲ್ಲಿನ 9 ಎಕರೆ 2 ಗುಂಟೆ ಜಮೀನಿನ ಡಿ ನೋಟಿಫಿಕೇಷನ್‌ ಪ್ರಕರಣದಲ್ಲಿ ಯಾವುದೇ ಕ್ರಮವಿಲ್ಲದೇ ದೂರರ್ಜಿಯನ್ನು ಮುಕ್ತಾಯಗೊಳಿಸಿರುವುದು ಮುನ್ನೆಲೆಗೆ ಬಂದಿದೆ.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಮುರುಗೇಶ್‌ ನಿರಾಣಿ ಮತ್ತು ಐಎಎಸ್‌ ಅಧಿಕಾರಿ ವಿ ಪಿ ಬಳಿಗಾರ್‌ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಕ್ರಿಮಿನಲ್‌ ದುರ್ನಡತೆ ಸೆಕ್ಷನ್‌ 13(1)(ಡಿ) ಅಪರಾಧಿಕ ಒಳ ಸಂಚು 120(ಬಿ), ಐಪಿಸಿ 201, 202, 379 ,411, 420, 427, 447, 468, 471 ಮತ್ತು 409 ಸೆಕ್ಷನ್‌ಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಭೂ ಸ್ವಾಧೀನದಿಂದ ಕೈಬಿಟ್ಟಿರುವ ಜಾಗದಲ್ಲಿ ಖಾಸಗಿ ಬಡಾವಣೆ ಮತ್ತು ಅಪಾರ್ಟ್‌ಮೆಂಟ್‌ ನಿರ್ಮಾಣದ ಉದ್ದೇಶವಿತ್ತು. ಭೂ ಸ್ವಾಧೀನ ಪರಿಹಾರ ಹಣ ಪಡೆಯುವ ಬದಲಿಗೆ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಜಾಗ ನೀಡಿದರೆ ಲಾಭ ಗಳಿಸಬಹುದು ಎಂಬ ಆರ್ಥಿಕ ಲೆಕ್ಕಾಚಾರವಿದೆ. ಭೂ ಮಾಲೀಕರ ಮನವಿಯನ್ನು ಪರಿಗಣಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಮುರುಗೇಶ್‌ ನಿರಾಣಿ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮವೆಸಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಎಂಬುವರು ದೂರಿದ್ದರು.

ದೂರನ್ನು ಪರಿಶೀಲಿಸಿದ್ದ ಎಸಿಬಿ ಪೊಲೀಸರು ‘ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಈ ಜಮೀನನ್ನು ಡಿ ನೋಟಿಫೈ ಮಾಡಿರುವುದು ಕಂಡು ಬರುವುದಿಲ್ಲ. ದೂರರ್ಜಿಯಲ್ಲಿನ ಆರೋಪಗಳು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿಲ್ಲ,’ ಎಂಬ ಕಾರಣವನ್ನು ಮುಂದೊಡ್ಡಿ ಅರ್ಜಿಯನ್ನು ಮುಕ್ತಾಯಗೊಳಿಸಿದ್ದಾರೆ. ಈ ಕುರಿತು ದೂರುದಾರ ದಿನೇಶ್‌ ಕಲ್ಲಹಳ್ಳಿ ಅವರಿಗೆ 2020ರ ನವೆಂಬರ್‌ 24ರಂದು ಹಿಂಬರಹವನ್ನು ನೀಡಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಹಿಂಬರಹದಲ್ಲೇನಿದೆ?

ಆನೇಕಲ್‌ ತಾಲೂಕಿನ ಅತ್ತಿಬೆಲೆ ಹೋಬಳಿ ಕಿತ್ತಿಗಾನಹಳ್ಳಿ ಗ್ರಾಮದ ಸರ್ವೆ ನಂಬರ್‌ 132, 133/2, 130/4, 133/1, 135/5ರಲ್ಲಿನ 9 ಎಕರೆ 20 ಗುಂಟೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಎಐಡಿಬಿ)ಯು ಬೊಮ್ಮಸಂದ್ರ 4ನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಂಡಿತ್ತು.

ಎಸಿಬಿಯು ಮುಖ್ಯಮಂತ್ರಿಯ ಅಧೀನದಲ್ಲಿ ಬರುತ್ತಿರುವ ಕಾರಣ ಎಸಿಬಿ ಪೊಲೀಸರು ಮುಖ್ಯಮಂತ್ರಿಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಹೀಗಾಗಿ ಪ್ರಕರಣದ ಕುರಿತು ಸಮಗ್ರವಾಗಿ ತನಿಖೆ ನಡೆದಿಲ್ಲ. ದೂರು ಸಲ್ಲಿಸಿ ಒಂದು ವರ್ಷದ ಬಳಿಕ ಏಕಾಏಕಿ ಪ್ರಕರಣವನ್ನೇ ಮುಕ್ತಾಯಗೊಳಿಸಿದ್ದಾರೆ. ಇದು ಸರಿಯಲ್ಲ. ಈ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸುತ್ತೇನೆ.

ದಿನೇಶ್‌ ಕಲ್ಲಹಳ್ಳಿ, ಸಾಮಾಜಿಕ ಕಾರ್ಯಕರ್ತ

ಕಿತ್ತಿಗಾನಹಳ್ಳಿಯ 9 ಎಕರೆ 20 ಗುಂಟೆ ಜಮೀನನ್ನು ಕೆಎಐಡಿಬಿಯು 1993ರ ಸೆ.19ರಂದು ಪ್ರಾಥಮಿಕ ಅಧಿಸೂಚನೆ ಮತ್ತು 1994 ಜುಲೈ 15ರಂದು ಅಂತಿಮ ಅಧಿಸೂಚನೆ, 1996ರ ಜುಲೈ 22ರಂದು ಕಲಂ 24(4) ಅಧಿಸೂಚನೆ ಹೊರಡಿಸಿತ್ತು. ಆದರೆ 14 ವರ್ಷಗಳ ಕಾಲ ಈ ಜಮೀನನ್ನು ಕೆಐಎಡಿಬಿಯು ತನ್ನ ವಶಕ್ಕೆ ಪಡೆದಿರಲಿಲ್ಲ. ಅಲ್ಲದೆ ಜಮೀನು ಅಭಿವೃದ್ಧಿಪಡಿಸಿ ಯಾವುದೇ ಸಂಸ್ಥೆಗಳಿಗೆ ಹಂಚಿಕೆ ಮಾಡುವ ಯಾವುದೇ ಪ್ರಕ್ರಿಯೆಯನ್ನೂ ನಿರ್ವಹಿಸಿರಲಿಲ್ಲ. ಹಾಗೆಯೇ 1998ರ ಡಿಸೆಂಬರ್‌ 15ರಂದು ನಡೆದಿದ್ದ 217ನೇ ಸಭೆಯಲ್ಲಿ ಜಮೀನನ್ನು ಭೂ ಮಾಲೀಕರ ಪರವಾಗಿ ರೀ ಕನ್ವೆ ಮಾಡಲು ನಿರ್ಣಯಿಸಲಾಗಿತ್ತು ಎಂಬುದು ಎಸಿಬಿ ನೀಡಿರುವ ಹಿಂಬರಹದಿಂದ ತಿಳಿದು ಬಂದಿದೆ.

ಭೂ ಮಾಲೀಕ ಪಿಳ್ಳಾರೆಡ್ಡಿ, ತಿಮ್ಮಾರೆಡ್ಡಿ ಮತ್ತು ಶಿವಕುಮಾರ್‌ ಎಂಬುವರು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಕೈಗಾರಿಕೆ ಸಚಿವರಾಗಿದ್ದ ಮುರುಗೇಶ್‌ ನಿರಾಣಿ ಅವರಿಗೆ ಮನವಿ ಮಾಡಿದ್ದರು. ಈ ಮನವಿಯನ್ನಾಧರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಂದೂ ಕಾರ್ಯದರ್ಶಿಯಾಗಿದ್ದ (ಪ್ರಸ್ತುತ ರಾಜಕೀಯ ಕಾರ್ಯದರ್ಶಿ) ಐಎಎಸ್‌ ಅಧಿಕಾರಿ ಎಂ ಲಕ್ಷ್ಮಿನಾರಾಯಣ ಅವರು ಮನವಿಗಳನ್ನಾಧರಿಸಿ ಕ್ರಮ ಕೈಗೊಳ್ಳಬೇಕೆಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2009ರ ಜೂನ್‌ 6ರಂದು ನಿರ್ದೇಶಿಸಿದ್ದರು.

ಈ ಜಮೀನನ್ನು ವ್ಯವಸಾಯೇತರ ಉದ್ದೇಶದ ಉಪಯೋಗಕ್ಕೆ ಅಂದಿನ ಜಿಲ್ಲಾಧಿಕಾರಿಯು ಭೂಪರಿವರ್ತನೆ ಆದೇಶ ಹೊರಡಿಸಿದ್ದರು. ಭೂ ಸ್ವಾಧೀನದಿಂದ ಕೈ ಬಿಡುವ ಸಂದರ್ಭದಲ್ಲಿ ಈ ಜಾಗದಲ್ಲಿ 120 ಮನೆಗಳು ನಿರ್ಮಾಣವಾಗಿದ್ದವು. 14 ವರ್ಷಗಳ ಹಿಂದೆಯೇ ಜಮೀನು ಸ್ವಾಧೀನಪಡಿಸಿಕೊಂಡಿದ್ದರೂ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಅಭಿವೃದ್ಧಿಪಡಿಸಿರಲಿಲ್ಲ ಎಂಬ ಮಾಹಿತಿ ಎಸಿಬಿ ನೀಡಿರುವ ಹಿಂಬರಹದಿಂದ ಗೊತ್ತಾಗಿದೆ.

Share:

Leave a Reply

Your email address will not be published.