ಬೇಟಿ ಬಚಾವೋ ಬೇಟಿ ಪಡಾವೋ ಅನುಷ್ಠಾನದಲ್ಲಿ ಹಿಂದೆ ಬಿದ್ದ ಕರ್ನಾಟಕ

ಬೆಂಗಳೂರು; ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುವ ವಿವಿಧ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ ಪರಿಶೀಲನಾ ಸಮಿತಿ (ದಿಶಾ) ಸಭೆಗಳೇ ನಡೆದಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯದ 26 ಇಲಾಖೆಗಳ ಪೈಕಿ ಬಹುತೇಕ ಇಲಾಖೆಗಳು ಇನ್ನೂ ತೆವಳುತ್ತಲೇ ಇವೆ.

ಅಲ್ಲದೆ ದಿಶಾ ಸಮಿತಿ ಗುರುತಿಸಿದ್ದ 48 ಯೋಜನೆಗಳ ಪೈಕಿ ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿರುವ ಕೇಂದ್ರ ಪುರಸ್ಕೃತ/ಕೇಂದ್ರ ವಲಯಗಳ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಒಟ್ಟು 14,960.11 ಕೋಟಿ ರು. ನಲ್ಲಿ 2020ರ ನವೆಂಬರ್‌ ಅಂತ್ಯಕ್ಕೆ 12,948 ಕೋಟಿ ರು. ವೆಚ್ಚವಾಗಿದೆ. ಒಟ್ಟು ಅನುದಾನದಲ್ಲಿ ಶೇಕಡ 45.92ರಷ್ಟು ಮಾತ್ರ ವೆಚ್ಚವಾಗಿದೆ. 26 ಇಲಾಖೆಗಳಿಗೆ ವಿವಿಧ ಕಾರ್ಯಕ್ರಮಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಮತ್ತು ಖರ್ಚಾಗಿರುವ ವಿವರಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಿಶೇಷವೆಂದರೆ ಪ್ರಧಾನಿ ಮೋದಿ ಮಹತ್ವಾಕಾಂಕ್ಷೆಯ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಬಿಡುಗಡೆಯಾಗಿರುವ ಒಟ್ಟು 1.25 ಕೋಟಿ ರು. ಅನುದಾನದಲ್ಲಿ 0.30 ಕೋಟಿ ರು. ಮಾತ್ರ ಖರ್ಚಾಗಿದೆ. ಉಜ್ವಲ ಯೋಜನೆಗೆ ಬಿಡುಗಡೆ ಆಗಿದ್ದ 1.97ಕೋಟಿ ರು. ಮತ್ತು ಪರಂಪರಾಗತ ಕೃಷಿ ವಿಕಾಸ ಯೋಜನೆಗೆ ಬಿಡುಗಡೆಯಾಗಿದ್ದ 2.65 ಕೋಟಿಯಲ್ಲಿ ನಯಾ ಪೈಸೆಯೂ ಖರ್ಚಾಗಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಪ್ರಥಮ ದಿಶಾ ಸಮಿತಿಯು ಇದೇ ತಿಂಗಳು 11ರಂದು ಸಭೆ ನಡೆಯುತ್ತಿರುವ ಹೊತ್ತಿನಲ್ಲೇ ಬೇಟಿ ಬಚಾವೋ ಮತ್ತು ಬೇಟಿ ಪಡಾವೋ ಸೇರಿದಂತೆ ಕೇಂದ್ರ ಪುರಸ್ಕೃತ ಹಲವು ಯೋಜನೆಗಳು ಅನುಷ್ಠಾನದಲ್ಲಿ ಹಿಂದೆ ಬಿದ್ದಿರುವುದು ಎಂಬುದು ಮುನ್ನೆಲೆಗೆ ಬಂದಿದೆ.

2020-21ನೇ ಸಾಲಿನಲ್ಲಿ ಬಾಗಲಕೋಟೆ, ದಾವಣಗೆರೆ, ಧಾರವಾಡ, ಗುಲ್ಬರ್ಗಾ, ಹಾವೇರಿ, ಕೊಡಗು, ಕೊಪ್ಪಳ, ಮಂಡ್ಯ, ಮೈಸೂರು, ತುಮಕೂರು, ಬಳ್ಳಾರಿ, ಚಿತ್ರದುರ್ಗ, ದಕ್ಷಿಣ ಕನ್ನಡ, ಗದಗ್‌, ಹಾಸನ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಸಭೆ ನಡೆದಿದೆ. ಉಳಿದ ದ13 ಜಿಲ್ಲೆಗಳಲ್ಲಿ ಈವರೆವಿಗೂ ಒಂದು ಸಭೆಯನ್ನೂ ಸಹ ನಡೆಸಿಲ್ಲ. 2019-20ನೇ ಸಾಲಿನಲ್ಲಿ ಬೆಂಗಳೂರು ನಗರ, ಬಳ್ಳಾರಿ, ಉಡುಪಿ ಜಿಲ್ಲೆಗಳಲ್ಲಿ ಸಭೆಗಳು ನಡೆದಿರಲಿಲ್ಲ ಎಂಬುದು ಸಭಾ ಸೂಚನಾ ಪತ್ರದಿಂದ ತಿಳಿದು ಬಂದಿದೆ.

ದಿಶಾ ಸಮಿತಿಯಲ್ಲಿ ಘೋಷಿಸಿರುವ ಕೇಂದ್ರ ಪುರಸ್ಕೃತ 48 ಯೋಜನೆಗಳ ಪೈಕಿ ರಾಜ್ಯದಲ್ಲಿ 26 ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಆರೋಗ್ಯ, ಕೃಷಿ, ಕಂದಾಯ, ಕೌಶಲ್ಯಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ತೋಟಗಾರಿಕೆ, ನಗರಾಭಿವೃದ್ಧಿ, ಪ್ರಾಥಮಿಕ, ಪ್ರೌಢಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಸತಿ ಇಲಾಖೆ ಮೂಲಕ ಒಟ್ಟು 26 ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ 8.00 ಕೋಟಿ ರು.ನಲ್ಲಿ 2020ರ ನವೆಂಬರ್‌ ಅಂತ್ಯಕ್ಕೆ 0.30 ಕೋಟಿ ರು ಮಾತ್ರ ಖರ್ಚಾಗಿದೆ. ಇದು ಒಟ್ಟು ಬಿಡುಗಡೆಗೆ ಶೇ.3.81ರಷ್ಟು ಖರ್ಚಾಗಿದ್ದರೆ ಒಟ್ಟು ಅನುದಾನಕ್ಕೆ ಶೇ.3.73ರಷ್ಟು ವೆಚ್ಚವಾದಂತಾಗಿದೆ.

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ ಒಟ್ಟು 909.56 ಕೋಟಿ ರು. ಪೈಕಿ ನವೆಂಬರ್‌ ಅಂತ್ಯಕ್ಕೆ 37.04 ಕೋಟಿ ಮಾತ್ರ ಖರ್ಚಾಗಿದೆ. ಇದು ಒಟ್ಟು ಬಿಡುಗಡೆಗೆ ಶೇ.4.07ರಷ್ಟಾಗಿದ್ದರೆ ಒಟ್ಟು ಅನುದಾನಕ್ಕೆ ಶೇಕಡವಾರು 4.19ರಷ್ಟಾಗಿದೆ ಎಂದು ಕೌಶಲ್ಯಾಭಿವೃದ್ಧಿ ಇಲಾಖೆ ನೀಡಿರುವ ಅಂಕಿ ಅಂಶದಿಂದ ತಿಳಿದು ಬಂದಿದೆ.

ಅದೇ ರೀತಿ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮಕ್ಕೆ ಬಿಡುಗಡೆಯಾಗಿದ್ದ 682.93 ಕೋಟಿಯಲ್ಲಿ 211.55 ಕೋಟಿ ಮಾತ್ರ ಖರ್ಚಾಗಿದೆ. ನವೆಂಬರ್‌ನಲ್ಲಿ 56.90 ಕೋಟಿ ವೆಚ್ಚವಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ಸಾಮಾಜಿಕ ಸಹಾಯ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ಕೃಷಿ ವಿಕಾಸ, ಸಮಗ್ರ ಜಲಾಯನ ನಿರ್ವಹಣಾ, ಮಣ್ಣಿನ ಫಲವತ್ತತೆ, ಗ್ರಾಮೀಣ ಮತ್ತು ನಗರ ಜೀವನೋಪಾಯ, ಗ್ರಾಮೀಣ ಕುಡಿಯುವ ನೀರು, ಸ್ವಚ್ಛ ಭಾರತ, ತೋಟಗಾರಿಕೆ, ಸ್ಮಾರ್ಟ್‌ ಮಿಷನ್‌, ಅಮೃತ್‌ ಮಿಷನ್‌, ಸಮಗ್ರ ಶಿಕ್ಷಣ, ಸಮಗ್ರ ಶಿಶು ಅಭಿವೃದ್ಧಿ, ಪ್ರಧಾನಮಂತ್ರಿ ಗ್ರಾಮೀಣ ಮತ್ತು ನಗರ ಅವಾಜ್‌ ಯೋಜನೆ ಸೇರಿದಂತೆ ಒಟ್ಟು 26 ಯೋಜನೆಗಳು ಅನುಷ್ಠಾನಗೊಂಡಿವೆ.

the fil favicon

SUPPORT THE FILE

Latest News

Related Posts