ಅತಿಥಿ ಉಪನ್ಯಾಸಕರ ಸಂಭಾವನೆಯಲ್ಲಿ ಗೋಲ್ಮಾಲ್‌; ಪ್ರಾಂಶುಪಾಲರಿಂದಲೇ ಅನರ್ಹರಿಗೆ ಪಾವತಿ

ಬೆಂಗಳೂರು; ಅತಿಥಿ ಉಪನ್ಯಾಸಕರ ಸಂಭಾವನೆಗೆ ಸರ್ಕಾರ ಬಿಡುಗಡೆ ಮಾಡಿದ್ದ ಒಟ್ಟು 5,85,000 ರು.ಗಳನ್ನು ಅನರ್ಹ ವ್ಯಕ್ತಿಗಳಿಗೆ ಪಾವತಿಸಿ ದುರುಪಯೋಗಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಪಟೂರು ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಲ್ಲಮಪ್ರಭು ಸೇರಿದಂತೆ ಇನ್ನಿತರರ ವಿರುದ್ಧ ವಿಚಾರಣೆಗೆ ಶಿಕ್ಷಣ ಇಲಾಖೆ ಪೂರ್ವಾನುಮತಿ ನೀಡಿದೆ.

2018-19 ಮತ್ತು 2019-20ನೇ ಸಾಲಿನಲ್ಲಿ ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಮಂಜೂರು ಮಾಡಿರುವ ಅನುದಾನವನ್ನು ಅತಿಥಿ ಉಪನ್ಯಾಸಕರಲ್ಲದ ಅನರ್ಹ ವ್ಯಕ್ತಿಗಳಿಗೆ ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಬಿಲ್‌ ಮಾಡಿ ಡ್ರಾ ಮಾಡಿರುವ ಆರೋಪಕ್ಕೆ ಪ್ರಾಂಶುಪಾಲ ಅಲ್ಲಮಪ್ರಭು, ಕಾಲೇಜಿನ ಪ್ರಥಮದರ್ಜೆ ಸಹಾಯಕ ಸುನೀಲ್‌ ಕೂರ್ಗಿ ಅವರ ವಿರುದ್ಧ ಎಸಿಬಿ ವಿಚಾರಣೆಗೆ ಅನುಮತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಆರೋಪಿತ ಪ್ರಾಂಶುಪಾಲ ಮತ್ತು ಪ್ರಥಮದರ್ಜೆ ಸಹಾಯಕರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಮತ್ತು 2016ರ ಮಾರ್ಚ್ 14ರ ಸರ್ಕಾರದ ಆದೇಶದಂತೆ ಎಸಿಬಿ ವಿಚಾರಣೆಗೆ ಅನುಮತಿ ನೀಡಲಾಗಿದೆ. ಆದೇಶದ ಪ್ರತಿ ಮತ್ತು ಹಣ ಪಾವತಿ ಮಾಡಿರುವ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅರ್ಹರಿಗಿಲ್ಲ ಸಂಭಾವನೆ

2018-19 ಮತ್ತು 2019-20 ನೇ ಸಾಲಿನಲ್ಲಿ ತಿಪಟೂರು ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 27 ಉಪನ್ಯಾಸಕರು ನೇಮಕಗೊಂಡಿದ್ದರು. ಅತಿಥಿ ಉಪನ್ಯಾಸಕರ ಗೌರವ ಸಂಭಾವನೆಗೆಂದು ಸರ್ಕಾರ ಒಟ್ಟು 5,85,000 ರು.ಗಳನ್ನು ಬಿಡುಗಡೆ ಮಾಡಿತ್ತು. ಇವರಲ್ಲಿ ಕಾವ್ಯ(ವ್ಯವಹಾರ ಅಧ್ಯಯನ), ತೇಜಸ್ವಿನಿ (ಲೆಕ್ಕಶಾಸ್ತ್ರ) ಸಂತೋಷ್‌ (ಗಣಕ ವಿಜ್ಞಾನ) ನೇಮಕವಾಗಿದ್ದರು. ಖಾಲಿ ಇದ್ದ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಇವರನ್ನು ನೇಮಕಮಾಡಿಕೊಳ್ಳಲಾಗಿತ್ತು.

ಕಾಲೇಜಿನ ಪ್ರಾಂಶುಪಾಲ ಅಲ್ಲಮಪ್ರಭು ಮತ್ತು ಪ್ರಥಮದರ್ಜೆ ಸಹಾಯಕ ಸುನೀಲ್‌ ಕೂರ್ಗಿ ಅವರು ಅರ್ಹ ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ ನೀಡಿರಲಿಲ್ಲ. ಅತಿಥಿ ಉಪನ್ಯಾಸಕರಲ್ಲದ ಪ್ರಿಯಾಂಕ ಜಿ ಎಸ್‌, ಶರತ್‌, ರಶ್ಮಿ ಹಾಗೂ ಇಲಾಖೆಯಿಂದ ನೇಮಕವಾಗದ ಭಾರತಿ, ಭೈರೇಶ ಇವರಿಗೆ ಸಂಭಾವನೆಯನ್ನು ಪಾವತಿಸಿದ್ದರು ಎಂಬುದು ಪರಿಶೀಲನಾ ವರದಿಯಿಂದ ತಿಳಿದು ಬಂದಿದೆ.

ಭೈರೇಶ್‌ ಮತ್ತು ಭಾರತಿ ಎಂಬುವರು ಇಲಾಖೆ ವತಿಯಿಂದ ಮಂಜೂರು ಮಾಡಿರುವ ಅನುದಾನವನ್ನು ಪಡೆಯಲು ಅರ್ಹರೇ ಮತ್ತು ಇಲಾಖೆ ನಿಯಮಗಳಲ್ಲಿ ಅವಕಾಶವಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲು ಮುಂದಾಗಿರುವ ಎಸಿಬಿ, ಕಾಲೇಜಿನ ನಗದು ವಹಿ ರಿಜಿಸ್ಟರ್‌ ಮತ್ತು ಡಿ ಸಿ ಬಿಲ್‌ಗಳ ರಿಜಿಸ್ಟರ್‌ಗಳನ್ನು ಪರಿಶೀಲನೆ ನಡೆಸಲು ಸಿದ್ಧತೆ ನಡೆಸಿರುವುದು ಗೊತ್ತಾಗಿದೆ.

2018 ಮತ್ತು 2019ನೇ ಸಾಲಿನಲ್ಲಿ ಪ್ರಿಯಾಂಕ ಜಿ ಎಸ್‌ ಮತ್ತು ಚೇತನ್‌ ಬಿ ಎನ್‌ ಅವರಿಗೆ ತಲಾ 54,000 ರು.,ಗಳು ಪಾವತಿಯಾಗಿದೆ. ಹಾಗೆಯೇ ಶರತ್‌ ಪಿ ಇ ಅವರಿಗೆ 27,000 ರು. , ಪ್ರಿಯಾಂಕ ಜಿ ಎಸ್‌ ಅವರಿಗೆ 27,000 ರು., ಭೈರೇಶ್‌ ಅವರಿಗೆ 27,000 ರು., ಭಾರತಿ ಸಿ ಸಿ ಅವರಿಗೆ 18,000 ರು. ಪಾವತಿಯಾಗಿದೆ. ಹಾಗೆಯೇ 2019ರ ಮಾರ್ಚ್‌ 28ರಂದು ಬಿಡುಗಡೆಯಾಗಿದ್ದ 3,01,500 ರು. ಪೈಕಿ ಭೈರೇಶ್‌ ಎಂಬುವರಿಗೆ 60,000 ರು., ಶರತ್‌ ಪಿ ಇ ಅವರಿಗೆ 60,000 ರು., ಭಾರತಿ ಎಂಬುವರಿಗೆ 21,500 ರು., ಚೇತನ್‌ ಅವರಿಗೆ 40,000 ರು., ಪ್ರಿಯಾಂಕ ಅವರಿಗೆ 60,000 ರು., ರಶ್ಮಿ ಟಿ ಎಂ ಎಂಬುವರಿಗೆ 60,000 ರು., 2019ರ ಡಿಸೆಂಬರ್ 7ರಂದು ಬಿಡುಗಡೆಯಾಗಿದ್ದ 40,500 ರು.ಗಳನ್ನು ಚೇತನ್‌ ಎಂಬುವರಿಗೆ ಪಾವತಿಸಿರುವುದು ಪ್ರಾರಂಭಿಕ ಪರಿಶೀಲನೆಯಿಂದ ಗೊತ್ತಾಗಿದೆ ಎಂದು ಎಸಿಬಿ ಪತ್ರದಲ್ಲಿ ವಿವರಿಸಿದೆ.

the fil favicon

SUPPORT THE FILE

Latest News

Related Posts