ಅಕ್ರಮ ಲಾಭ; ಎಚ್‌ ಎನ್‌ ಎಸ್‌ ರಾವ್‌ ವಿರುದ್ಧ ವಿಚಾರಣೆಗೆ ಸಿಗದ ಅನುಮತಿ

ಬೆಂಗಳೂರು; ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಎನ್ನಲಾದ ಶಶಿಕಲಾ ಅವರಿಂದ 2 ಕೋಟಿ ರು.ಗಳಷ್ಟು ಅಕ್ರಮ ಸಂಭಾವನೆ ಪಡೆದಿರುವ ಆರೋಪಕ್ಕೆ ಗುರಿಯಾಗಿರುವ ಕರ್ನಾಟಕ ಕಾರಾಗೃಹಗಳ ಮಹಾನಿರೀಕ್ಷಕರಾಗಿದ್ದ ಎಚ್‌ ಎನ್‌ ಸತ್ಯನಾರಾಯಣರಾವ್‌ ಅವರ ವಿರುದ್ಧ ಬೇರೊಂದು ಪ್ರಕರಣದಲ್ಲಿ ವಿಚಾರಣೆಗೆ ಒಂದು ವರ್ಷ ಕಳೆದರೂ ಅನುಮತಿ ದೊರೆತಿಲ್ಲ.

ಖಾಸಗಿ ಸಂಸ್ಥೆ ವೃಕ್ಷಂ ಟ್ಯಾಲೆಂಟ್‌ ಗ್ರೂಫ್‌ ಎಂಬ ಸಂಸ್ಥೆಗೆ 11 ಲಕ್ಷ ರು.ಗಳನ್ನು ಬಿಡುಗಡೆ ಮಾಡಿರುವ ಪ್ರಕರಣ ಮತ್ತು ಮೊಬೈಲ್‌ ಜಾಮರ್‌ಗಳು ಕಾರ್ಯನಿರ್ವಹಿಸದಿದ್ದರೂ ಹಣ ಪಾವತಿ ಮಾಡಿರುವ ಪ್ರಕರಣದಲ್ಲಿ ವಿಚಾರಣೆಗೆ ಗುರಿಪಡಿಸಲು ರಾಜ್ಯ ಬಿಜೆಪಿ ಸರ್ಕಾರ ಪೂರ್ವಾನುಮತಿ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಎಸಿಬಿ ಸರ್ಕಾರಕ್ಕೆ ಬರೆದಿರುವ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಿಶೇಷವೆಂದರೆ ಈ ಪ್ರಕರಣವನ್ನು ಬಯಲಿಗೆಳೆದಿದ್ದ ಐಜಿಪಿ ರೂಪ ಮೌದ್ಗಿಲ್‌ ಅವರು ಗೃಹ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ. ಪ್ರಕರಣದ ತನಿಖಾ ಕಾಲದಲ್ಲಿ ರೂಪ ಅವರು ಎಚ್‌ ಎನ್‌ ಎಸ್‌ ರಾವ್‌ ವಿರುದ್ಧ ಎರಡು ಪ್ರತ್ಯೇಕವಾದ ಆಪಾದನೆಗಳ ಕುರಿತಂತೆ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದರು. ಇದರ ಅನ್ವಯ ಎಚ್‌ ಎನ್‌ ಎಸ್‌ ರಾವ್‌ ವಿರುದ್ಧ ತನಿಖೆ ಕೈಗೊಳ್ಳಲು ತನಿಖಾಧಿಕಾರಿಗಳು ಪೂರ್ವಾನುಮತಿ ಕೋರಿ ಕಳೆದ ಒಂದು ವರ್ಷದ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರೂಪ ಅವರು ಗೃಹ ಇಲಾಖೆಯ ಕಾರ್ಯದರ್ಶಿಯಾಗಿದ್ದರೂ ಈವರೆವಿಗೂ ವಿಚಾರಣೆಗೆ ಪೂರ್ವಾನುಮತಿ ದೊರೆತಿಲ್ಲ ಎಂದು ತಿಳಿದು ಬಂದಿದೆ.

ಎಚ್‌ ಎನ್‌ ಎಸ್‌ ರಾವ್‌ ಅವರ ವಿರುದ್ದ 2 ಕೋಟಿ ಅಕ್ರಮ ಸಂಭಾವನೆ ಪಡೆದ ಪ್ರಕರಣದ ಸಂದರ್ಭದಲ್ಲೇ ಈ ಪ್ರಕರಣಗಳೂ ಬೆಳಕಿಗೆ ಬಂದಿದ್ದವು. 2 ಕೋಟಿ ಅಕ್ರಮ ಸಂಭಾವನೆ ಪಡೆದ ಪ್ರಕರಣವನ್ನು ತನಿಖೆ ಮಾಡಲು ನಿವೃತ್ತ ಐಎಎಸ್‌ ಅಧಿಕಾರಿ ವಿನಯಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿತ್ತು. ಹೀಗಾಗಿ 2 ಪ್ರತ್ಯೇಕ ಪ್ರಕರಣಗಳ ಬಗ್ಗೆಯೂ ಅವರಿಂದಲೇ ವಿಚಾರಣೆ ಮಾಡಿಸುವಂತೆ ಗೃಹ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಿತ್ತು. ಆದರೆ ವಿನಯಕುಮಾರ್‌ ಸಮಿಯ ವಿಚಾರಣೆ ಅವಧಿ ಪೂರ್ಣಗೊಂಡಿದ್ದರಿಂದ ಈ ಆರೋಪಗಳ ಬಗ್ಗೆ ವಿಚಾರಣೆಯೇ ನಡೆದಿಲ್ಲ ಎಂದು ಎಸಿಬಿ ಬರೆದಿರುವ ಪತ್ರದಿಂದ ಗೊತ್ತಾಗಿದೆ.

ಎಸಿಬಿ ಬರೆದ ಪತ್ರದಲ್ಲೇನಿದೆ?

ಎಚ್‌ ಎನ್‌ ಸತ್ಯನಾರಾಯಣರಾವ್ ಅವರು ಕಾರಾಗೃಹ ಡಿಜಿಪಿ ಆಗಿದ್ದ ಸಮಯದಲ್ಲಿ ವೃಕ್ಷಂ ಟ್ಯಾಲೆಂಟ್‌ಗ್ರೂಪ್‌ ಎಂಬ ಸಂಸ್ಥೆಯ ಸಿಇಒ ಸುರೇಶ್‌ ಎಂಬುವರಿಗೆ ಜೈಲು ಅಧಿಕಾರಿಗಳಿಗೆ ತರಬೇತಿ ನೀಡಲು 1 ವರ್ಷದಲ್ಲಿ 11 ಲಕ್ಷ ರು.ಗಳನ್ನು ಬಿಡುಗಡೆ ಮಾಡಿದ್ದರು. ಪ್ರತಿ ಬ್ಯಾಚ್‌ನಲ್ಲಿ ಕೇವಲ 25ರಿಂದ 30 ಜನ ಜೈಲು ಅಧಿಕಾರಿಗಳಿಗೆ ಕೇವಲ 1 ಹಾಗೂ 2 ದಿನದ ಮಟ್ಟಿಗೆ ಈ ತರಬೇತಿ ಕೊಟ್ಟಿದ್ದಾರೆ ಅದರೆ ಇದನ್ನು ಪರಿಶೀಲಿಸದೆಯೇ ವೃಕ್ಷಂ ಟ್ಯಾಲೆಂಟ್‌ ಗ್ರೂಪ್‌ ಅವರಿಗೆ ಅಕ್ರಮ ಲಾಭ ಮಾಡಿಕೊಟ್ಟಿದ್ದಲ್ಲದೆ ಸಾರ್ವಜನಿಕ ಹಣವನ್ನು ಪೋಲು ಮಾಡಿದ್ದಾರೆ. ಇದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಕಲಂ 13(1)(ಸಿ) 13(1)(ಡಿ) ಈಗಿನ 13(1)(ಎ) ಪ್ರಕಾರ ಅಪರಾಧ ಎಂದು ಎಸಿಬಿ ಐಜಿ ಗೃಹ ಇಲಾಖೆಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಅಲ್ಲದೆ ಕೆಲವೊಂದು ಬ್ಯಾಚ್‌ಗಳ ತರಬೇತಿಗೆ ಕೊಟ್ಟಿರುವ ಹಣ 1 ಲಕ್ಷಕ್ಕಿಂತ ಮೀರಿತ್ತು. ಕೆಟಿಪಿಪಿ ಕಾಯ್ದೆ ಪ್ರಕಾರ ಟೆಂಡರ್‌ ಕರೆಯದೆ ವೃಕ್ಷಂ ಟ್ಯಾಲೆಂಟ್‌ ಗ್ರೂಪ್‌ ಸಿಇಓಗೆ ಅಕ್ರಮ ಲಾಭ ಮಾಡಿಕೊಟ್ಟಿರುತ್ತಾರೆ. ಹಾಗೂ ಈ ವ್ಯವಹಾರವು ಕೆಟಿಪಿಪಿ ಕಾಯ್ದೆ ಪ್ರಕಾರ ಸಂಜ್ಞೆಯ ಅಪರಾಧವಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು 2017ರ ಆಗಸ್ಟ್‌ 19ರಂದು ಎಸಿಬಿ ಐಜಿಪಿ ಅವರಿಗೆ ಸಲ್ಲಿಸಿದ್ದ 74 ಪುಟಗಳ ದೂರನ್ನೂ ಸಲ್ಲಿಸಿತ್ತು ಎಂಬುದು ಪತ್ರದಿಂದ ತಿಳಿದು ಬಂದಿದೆ.

ಸತ್ಯನಾರಾಯಣರಾವ್ ಅವರು ಕಾರಾಗೃಹಗಳ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಜೈಲುಗಳಲ್ಲಿ ಅಳವಡಿಸಲಾಗಿದ್ದ ಮೊಬೈಲ್‌ ಫೋನ್‌ ಜಾಮರ್‌ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೂ ಕಂಪನಿಗೆ ವಾರ್ಷಿಕ ನಿರ್ವಹಣಾ ವೆಚ್ಚವನ್ನು ನೀಡಿದ್ದರು. ಇದರಿಂದ ಸದರಿ ಕಂಪನಿಗೆ ಹಣದ ಅಕ್ರಮ ಲಾಭವುಂಟಾಗಿತ್ತು. ಇದರಿಂದ ಸತ್ಯನಾರಾಯಣರಾವ್‌ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಕಲಂ 13(1)(ಸಿ) ಪ್ರಕಾರ ಅಪರಾಧ ಎಸಗಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

the fil favicon

SUPPORT THE FILE

Latest News

Related Posts