ಆಸ್ತಿ ಮೌಲ್ಯಮಾಪನದಲ್ಲಿ ಕಡಿಮೆ ಲೆಕ್ಕಾಚಾರ; ಮೈತ್ರಿ ಸರ್ಕಾರದಲ್ಲಿ 93.87 ಕೋಟಿ ನಷ್ಟ

ಬೆಂಗಳೂರು; ಆಸ್ತಿಗಳನ್ನು ಕಡಿಮೆ ಪ್ರಮಾಣದಲ್ಲಿ ಮೌಲ್ಯಮಾಪನ ಮಾಡಿ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ ಕಡಿಮೆ ಪ್ರಮಾಣದಲ್ಲಿ ವಿಧಿಸಿರುವುದು ಹಾಗೂ ಇತರೆ ನಿಯಮಬಾಹಿರತೆಗಳಿಂದಾಗಿ ರಾಜ್ಯ ಬೊಕ್ಕಸಕ್ಕೆ ಒಂದೇ ವರ್ಷದಲ್ಲಿ 93.87 ಕೋಟಿ ನಷ್ಟವುಂಟಾಗಿದೆ.

ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸಂಬಂಧಿಸಿದಂತೆ ಮಾರ್ಚ್‌ 2019 ಅಂತ್ಯಕ್ಕೆ ಸಿಎಜಿ ನೀಡಿರುವ ವರದಿಯು ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕಕ್ಕೆ ಸಂಬಂಧಿಸಿದಂತೆ ವಿಶ್ಲೇಷಿಸಿದೆಯಲ್ಲದೆ ಹಲವು ಲೋಪದೋಷಗಳನ್ನು ಹೊರಗೆಡವಿದೆ.

ಬೆಂಗಳೂರಿನ ಕೃಷ್ಣರಾಜಪುರಂ, ಶಿವಾಜಿನಗರ, ಬಿದರೆ, ಬಿದರಹಳ್ಳಿ, ಬೊಮ್ಮನಹಳ್ಳಿ, ಬಿಟಿಎಂ ಬಡಾವಣೆ, ಚನ್ನಗಿರಿ, ಚಿತ್ರದುರ್ಗ, ದಾವಣಗೆರೆ, ಗಂಗಾನಗರ, ಹುಣಸೂರು, ಕಾರ್ಕಳ, ಕಾರವಾರ, ಮಲ್ಲೇಶ್ವರ, ಮಂಗಳೂರು, ಮೂಡಬಿದರೆ, ಪಿರಿಯಾಪಟ್ಟಣ, ಸಿಂಧನೂರು ಮತ್ತು ಶಿವಮೊಗ್ಗ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿರುವುದು ಸಿಎಜಿ ಪರಿಶೋಧನೆಯಿಂದ ತಿಳಿದು ಬಂದಿದೆ.

10.86 ಲಕ್ಷ ದಸ್ತಾವೇಜುಗಳನ್ನು ನೋಂದಣೀ ಮಾಡಿದ್ದ 51 ಕಚೇರಿಗಳ ಲೆಕ್ಕಪರಿಶೋಧನೆ ನಡೆಸಿದ್ದ ಸಿಎಜಿ ಅಧಿಕಾರಿಗಳು, ಈ ಪೈಕಿ 1.62 ಲಕ್ಷ ದಸ್ತಾವೇಜುಗಳನ್ನು (ಶೇ.14.92) ಪರೀಕ್ಷಾ ಪರಿಶೀಲನೆ ನಡೆಸಿದ್ದರು. ಇದರಲ್ಲಿ 41 ಕಚೇರಿಗಳಲ್ಲಿ 93.87 ಕೋಟಿ ಒಳಗೊಂಡಂತೆ ಆಸ್ತಿಗಳನ್ನು ಕಡಿಮೆ ಪ್ರಮಾಣದಲ್ಲಿ ಮೌಲ್ಯಮಾಪನ ಮಾಡಲಾಗಿತ್ತು ಎಂದು ಸಿಎಜಿ ಲೆಕ್ಕ ಪರಿಶೋಧನೆ ಫಲಿತಾಂಶದಿಂದ ಗೊತ್ತಾಗಿದೆ.

ಆಸ್ತಿಗಳನ್ನು ಕಡಿಮೆ ಪ್ರಮಾಣದಲ್ಲಿ ಮೌಲ್ಯಮಾಪನ ಮಾಡಿದ್ದ ಕಾರಣ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕದಲ್ಲಿ 64.90 ಕೋಟಿಯಷ್ಟು ಕಡಿಮೆ ಪ್ರಮಾಣದಲ್ಲಿ ವಿಧಿಸಲಾಗಿತ್ತು. ಅಲ್ಲದೆ ಪ್ರತಿಫಲನವನ್ನು ಸ್ಪಷ್ಟಪಡಿಸದ ಕಾರಣ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕದಲ್ಲಿ 4.79 ಕೋಟಿ ಕಡಿಮೆ ಪ್ರಮಾಣದಲ್ಲಿ ವಿಧಿಸಿರುವುದು, ಅಭಿವೃದ್ಧಿ ಒಡಂಬಡಿಕೆಗಳ ಮೇಲೆ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕವನ್ನು 9.46 ಕೋಟಿ ಕಡಿಮೆ ಪ್ರಮಾಣದಲ್ಲಿ ಹಾಗೂ ಇತರೆ ನಿಯಮಬಾಹಿರತೆಗಳಿಂದಾಗಿ 14.72 ಕೋಟಿ ನಷ್ಟವಾಗಿದೆ.

2016ರ ಏಪ್ರಿಲ್‌ ಹಾಗೂ 2018ರ ಜೂನ್‌ ಅವಧಿಯವರೆಗೆ 77 ಉಪ-ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಮಾರ್ಗಸೂಚಿ ಮೌಲ್ಯಗಳನ್ನು ತಪ್ಪಾಗಿ ಅಳವಡಿಸಿಕೊಂಡಿದ್ದವು. ದಸ್ತಾವೇಜಿನ ಸ್ವರೂಪದ ತಪ್ಪು ವರ್ಗೀಕರಣ, ವಿಶೇಷ ನಿರ್ದೇಶನಗಳಿಗೆ ಬದ್ಧತೆ ಪ್ರದರ್ಶಿಸದ ಕಾರಣ 16.18 ಕೋಟಿ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಲಾಗಿತ್ತು.

19 ಉಪ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ 4,79,576 ದಸ್ತಾವೇಜುಗಳ ಪೈಕಿ 89,382 ದಸ್ತಾವೇಜುಗಳನ್ನು ಪರೀಕ್ಷಾ ಪರಿಶೀಲನೆ ಮಾಡಿರುವ ಸಿಎಜಿ, 73 ಮಾರಾಟ ಪತ್ರಗಳಲ್ಲಿ ನ್ಯೂನತೆ ಮತ್ತು ಹಲವು ಲೋಪದೋಷಗಳನ್ನು ಪತ್ತೆ ಹಚ್ಚಿದೆ.

ಅದೇ ರೀತಿ ಬಿದರೆ, ಬಿಟಿಎಂ ಬಡಾವಣೆ, ಚನ್ನಗಿರಿ, ಚಿತ್ರದುರ್ಗ, ದಾವಣಗೆರೆ, ಕಾರ್ಕಳ, ಮಲ್ಲೇಶ್ವರ, ಮಂಗಳೂರು, ಮೂಡಬಿದಿರೆ, ಪಿರಿಯಾಪಟ್ಟಣ ಮತ್ತು ಶಿವಮೊಗ್ಗ ಉಪ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆಗಳನ್ನು ಹೊಂದಿದ್ದಂತಹ ಜಾಗದಲ್ಲಿ ಸಾಮಾನ್ಯ ದರವನ್ನು ಹೆಚ್ಚಿಸಿರಲಿಲ್ಲ. ಸಾಮಾನ್ಯ ದರದಲ್ಲೇ ಮೌಲ್ಯಮಾಪನ ಮಾಡಿದ್ದರಿಂದಾಗಿ 1.76 ಕೋಟಿ ಮೊತ್ತದಷ್ಟು ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಲು ದಾರಿಮಾಡಿಕೊಟ್ಟಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿದ್ದಂತಹ ಮತ್ತು ಎರಡೂ ಕಡೆಗಳಲ್ಲಿ ರಸ್ತೆಗಳನ್ನು ಹೊಂದಿದ್ದಂತಹ ಹಾಗೂ ವಾಣಿಜ್ಯ ಉದ್ದೇಶದ ಆಸ್ತಿಗಳನ್ನು ಒಳಗೊಂಡಿದ್ದಂತಹ ಆಸ್ತಿಗಳನ್ನು ವರ್ಗಾವಣೆ ಮಾಡಲಾಗಿದ್ದ 14 ದಸ್ತಾವೇಜುಗಳನ್ನು ಪರಿಶೋಧಿಸಿತ್ತು.

SUPPORT THE FILE

Latest News

Related Posts