ಜಿಂದಾಲ್‌ಗೆ 3.05 ಕೋಟಿ ಅನರ್ಹ ಲಾಭ;81 ಹೆಕ್ಟೇರ್‌ ಅರಣ್ಯೇತರ ಭೂಮಿ ಹಿಂಪಡೆಯದ ಸರ್ಕಾರ

ಬೆಂಗಳೂರು; ಗಣಿ ಗುತ್ತಿಗೆ ಪ್ರದೇಶಗಳ ಮಂಜೂರಾತಿಯಲ್ಲಿ ಸಿಂಹಪಾಲು ಪಡೆದಿರುವ ಜಿಂದಾಲ್‌ ಕಂಪನಿಯು 81.29 ಹೆಕ್ಟೇರ್‌ ಅರಣ್ಯೇತರ ಭೂಮಿಯನ್ನು ಮರಳಿಸಿಲ್ಲ. ಕೋಟ್ಯಂತರ ಮೊತ್ತದ ಬಾಕಿ ಉಳಿಸಿಕೊಂಡಿರುವ ಅರಣ್ಯೀಕರಣ ಶುಲ್ಕವನ್ನೂ ರಾಜ್ಯ ಸರ್ಕಾರ ವಸೂಲಿ ಮಾಡಿಲ್ಲ. ಗಣಿಗಾರಿಕೆಗಾಗಿ ಬಳಸಲಾಗುತ್ತಿರುವ ಅರಣ್ಯ ಪ್ರದೇಶಕ್ಕೆ ಪರಿಹಾರಕ ಅರಣ್ಯೀಕರಣ ಶುಲ್ಕಗಳನ್ನು ಪಾವತಿಸಿಕೊಳ್ಳಲು ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಯೂ ಕ್ರಮ ಕೈಗೊಳ್ಳಲಿಲ್ಲ ಎಂಬ ಅಂಶವನ್ನು ಸಿಎಜಿ ವರದಿ ಹೊರಗೆಡವಿದೆ.

ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸಂಬಂಧಿಸಿದಂತೆ ಮಾರ್ಚ್‌ 2019 ಅಂತ್ಯಕ್ಕೆ ಸಿಎಜಿ ನೀಡಿರುವ ವರದಿಯು ಗಣಿ, ಭೂ ವಿಜ್ಞಾನ ಇಲಾಖೆ ಮತ್ತು ಅರಣ್ಯ ಇಲಾಖೆಯ ಕರ್ತವ್ಯ ಲೋಪವನ್ನು ತೆರೆದಿಟ್ಟಿದೆ. 81 ಹೆಕ್ಟೇರ್‌ ಅರಣ್ಯ ಭೂಮಿಯನ್ನು ವಾಪಸ್‌ ಪಡೆಯುವ ನಿಟ್ಟಿನಲ್ಲಿ ಅರಣ್ಯ ಸಚಿವ ಆನಂದ್‌ ಸಿಂಗ್‌ ಈವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ಮಾರ್ಗಾಂತರ ಮಾಡಿದ್ದ ಪ್ರಕ್ರಿಯೆಗಳಲ್ಲೇ ಲೋಪದೋಷಗಳು ಕಂಡು ಬಂದಿತ್ತಲ್ಲದೆ, ಇದು ಗೇಣಿದಾರ ಕಂಪನಿ ಜಿಂದಾಲ್‌ ಸ್ಟೀಲ್‌ ಲಿಮಿಟೆಡ್‌ಗೆ 3.05 ಕೋಟಿ ಅನರ್ಹ ಲಾಭ ಮಾಡಿಕೊಡಲಾಗಿದೆ ಎಂದು ಸಿಎಜಿ ವರದಿ ವಿವರಿಸಿದೆ.

ಜೆಎಸ್‌ಡಬ್ಲ್ಯೂ ಸ್ಟೀಲ್‌ ಲಿಮಿಟೆಡ್‌ 100.54 ಹೆಕ್ಟೇರ್‌ ವಿಸ್ತೀರ್ಣದ ಅರಣ್ಯ ಪ್ರದೇಶವನ್ನು ಇ-ಹರಾಜಿನಲ್ಲಿ ಗುತ್ತಿಗೆ ಪಡೆದಿತ್ತು. ಗಣಿಗಾರಿಕೆ ಸೇರಿದಂತೆ ಅರಣ್ಯೇತರ ಉದ್ದೇಶಕ್ಕಾಗಿ ಹೊಸದಾಗಿ 100.54 ಹೆಕ್ಟೇರ್‌ ಪ್ರದೇಶ ಮಾರ್ಗಾಂತರವಾಗಿತ್ತು. ಇದು ನವೀಕರಣಕ್ಕಾಗಿ ಅಲ್ಲ. ಈ ಹಿಂದಿನ ಗುತ್ತಿಗೆದಾರರು ಈಗಾಗಲೇ ಬೆಳೆಸಿರುವಂತಹ ಪರಿಹಾರಾತ್ಮಕ ಅರಣ್ಯ ಪ್ರದೇಶದ ವಿಸ್ತೀರ್ಣವನ್ನು ಹೊರತುಪಡಿಸಿ ಮಾರ್ಗಾಂತರಣ ಮಾಡಲಾಗಿದ್ದ ಅರಣ್ಯ ಭೂಮಿಗೆ ಸಮನಾಗಿ ಅರಣ್ಯೇತರ ಭೂಮಿಯಲ್ಲಿ ಪರಿಹಾರಾತ್ಮಕ ಅರಣ್ಯೀಕರಣವನ್ನು ಮಾಡಬೇಕು ಎಂದು ಅನುಮೋದನೆ ನೀಡುವ ಹಂತದಲ್ಲಿ ಅರಣ್ಯ ಇಲಾಖೆಯು ಕಂಪನಿಗೆ ಸೂಚಿಸಿತ್ತು ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

ಪರಿಸರ ಮತ್ತು ಅರಣ್ಯ ಸಚಿವಾಲಯವು ಜೆಎಸ್‌ಡಬ್ಲ್ಯೂ ಸ್ಟೀಲ್‌ ಲಿಮಿಟೆಡ್‌ಗೆ ಗುತ್ತಿಗೆ ಮಂಜೂರು ಮಾಡಿರುವುದನ್ನು ಹೊಸ ಗುತ್ತಿಗೆ ಎಂದು ಲೆಕ್ಕ ಪರಿಶೋಧನೆ ಪರಿಗಣಿಸಿತ್ತು. ಹೀಗಾಗಿ ಗುತ್ತಿಗೆದಾರ ಕಂಪನಿಯಾದ ಜೆಎಸ್‌ಡಬ್ಲ್ಯೂ ಸ್ಟೀಲ್‌ ಲಿಮಿಟೆಡ್‌ ಅರಣ್ಯ ಸಂರಕ್ಷಣಾ ಅಧಿನಿಯಮಗಳ ಪ್ರಕಾರ ಗಣಿಗಾರಿಕೆ ಉದ್ದೇಶಕ್ಕಾಗಿ ಮಾರ್ಗಾಂತರ ಮಾಡಲಾಗಿದ್ದ 100.54 ಹೆಕ್ಟೇರ್‌ಗೆ ಪರಿಹಾರಕ ಅರಣ್ಯೀಕರಣ ಶುಲ್ಕಗಳನ್ನು ಪಾವತಿಸಲು ಬಾಧ್ಯವಾಗಿತ್ತು ಎಂಬುದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

ಅಲ್ಲದೆ ‘ಈ ಹಿಂದಿನ ಗೇಣಿದಾರರಿಗೆ ಅರಣ್ಯ ಸಂರಕ್ಷಣಾ ಅಧಿನಿಯಮದ ಅನುವುಗಳು ಅನ್ವಯಿಸದ ಕಾರಣ ಪರಿಹಾರಾತ್ಮಕ ಅರಣ್ಯವನ್ನು ಬೆಳೆಸಿರಲಿಲ್ಲ. ಹೀಗಾಗಿ ಹೊಸದಾಗಿ ಗುತ್ತಿಗೆ ಪಡೆದಿರುವ ಗೇಣಿದಾರರು ಪರಿಸರ ಮತ್ತು ಅರಣ್ಯ ಮಂತ್ರಾಲಯದ ಹಂತ-1ರ ಅನುಮೋದನೆ ಅನುಸಾರ ಸಂಪೂರ್ಣ ಗುತ್ತಿಗೆ ಭೂಮಿಗೆ (100.54 ಹೆಕ್ಟೇರ್‌) ಪರಿಹಾರಾತ್ಮಕ ಅರಣ್ಯೀಕರಣ ಶುಲ್ಕಗಳನ್ನು ಪಾವತಿಸಲು ಬಾಧ್ಯರಾಗಿರುತ್ತಾರೆ,’ ಎಂದು ಸಿಎಜಿ ವರದಿ ಹೇಳಿದೆ.

 

ಆದರೆ ಅರಣ್ಯ ಇಲಾಖೆಯು 100.54 ಹೆಕ್ಟೇರ್‌ ಬದಲಿಗೆ ಕೇವಲ 19.25 ಹೆಕ್ಟೇರ್‌ಗಳಷ್ಟು ಅರಣ್ಯ ಭೂಮಿಗೆ ಸಮನಾದ ಅರಣ್ಯೇತರ ಭೂಮಿಯ ಮಾರ್ಗಾಂತರ ಮಾಡಿದ್ದು ಅರಣ್ಯ ಸಂರಕ್ಷಣಾ ಅಧಿನಿಯಮ ಹಾಗೂ ಪರಿಸರ, ಅರಣ್ಯ ಸಚಿವಾಲಯದ ಅನುಮೋದನೆಗಳನ್ನು ಜಿಂದಾಲ್‌ ಸ್ಟೀಲ್‌ ಕಂಪನಿನಿಯು ಉಲ್ಲಂಘಿಸಿತ್ತು. ಅಲ್ಲದೆ ಮಣ್ಣು ಮತ್ತು ತೇವ ಸಂರಕ್ಷಣಾ ಕಾಮಗಾರಿಗಳ ಮೇಲಿನ ಪರಿಹಾರಾತ್ಮಕ ಅರಣ್ಯೀಕರಣ ಶುಲ್ಕವನ್ನೂ ಸಹ ಕಡಿಮೆ ಪ್ರಮಾಣದಲ್ಲಿ ವಿಧಿಸಿತ್ತು.

ಹೆಕ್ಟೇರ್‌ ಒಂದಕ್ಕೆ 8.03 ಲಕ್ಷದಂತೆ 100.54 ಹೆಕ್ಟೇರ್‌ ಅರಣ್ಯ ಪ್ರದೇಶಕ್ಕೆ ಒಟ್ಟು 8.07ಕೋಟಿ, ಪರಿಹಾರಾತ್ಮಕ ಅರಣ್ಯೀಕರಣ ಶುಲ್ಕ 0.58 ಕೋಟಿ (19.25 ಹೆಕ್ಟೇರ್‌, ಹೆಕ್ಟೇರ್‌ ಒಂದಕ್ಕೆ 3.0 ಲಕ್ಷ), ಪರಿಹಾರಾತ್ಮಕ ಅರಣ್ಯೀಕರಣ ಶುಲ್ಕದ ಶೇ.25ರಷ್ಟು ಎಸ್‌ಐಎಂಸಿ ಕಾಮಗಾರಿಗೆ 0.14 ಕೋಟಿ ಮೊತ್ತದಷ್ಟು ಸುರಕ್ಷತಾ ವಲಯ ಅರಣ್ಯೀಕರಣ, 0.63 ಕೋಟಿ ಮೊತ್ತದಷ್ಟು ವನ್ಯಜೀವಿಗಳ ಸಂರಕ್ಷಣಾ ಯೋಜನೆ ಹಾಗೂ ಎಸ್ಎಂಸಿ ಯೋಜನೆಗಾಗಿ 0.08 ಕೋಟಿ ಸೇರಿ ಒಟ್ಟು 9.67 ಕೋಟಿ ಮೊತ್ತವನ್ನು ಜಿಂದಾಲ್‌ ಕಂಪನಿ ಪಾವತಿಸಿತ್ತು.

ಹಾಗೆಯೇ ಜಿಎಸ್‌ಡಬ್ಲ್ಯೂ ಸ್ಟೀಲ್‌ನ ಮತ್ತೊಂದು ಪ್ರಕರಣದಲ್ಲಿ (ಎಂ ಎಲ್‌ 2365) ಸಂಪೂರ್ಣ ಮಾರ್ಗಾಂತರಣವಾಗಿದ್ದ 133.58 ಹೆಕ್ಟೇರ್‌ ಪ್ರದೇಶಕ್ಕೆ 4.00 ಕೋಟಿ ಪರಿಹಾರಾತ್ಮಕ ಅರಣ್ಯೀಕರಣ ಶುಲ್ಕ ಪಡೆದಿತ್ತು.

 

ಅಲ್ಲದೆ ವಿಭಜಿಸಲ್ಪಟ್ಟಿದ್ದ 66.80 ಹೆಕ್ಟೇರ್‌ ಪ್ರದೇಶವೂ ಇದರಲ್ಲಿ ಒಳಗೊಂಡಿತ್ತಾದರೂ ಮಾರ್ಗಾಂತರವಾಗಿದ್ದ ಸಂಪೂರ್ಣ ಪ್ರದೇಶಕ್ಕೆ ಸಮನಾದ ಅರಣ್ಯೇತರ ಭೂಮಿಯನ್ನು ಪಡೆದುಕೊಂಡಿತ್ತು ಎಂದು ಸಿಎಜಿ ವರದಿ ತಿಳಿಸಿದೆ.

SUPPORT THE FILE

Latest News

Related Posts