ಬೆಂಗಳೂರು; ವರ್ಗಾವಣೆಗಾಗಿ 1 ಕೋಟಿ ಲಂಚಕ್ಕೆ ಅಬಕಾರಿ ಸಚಿವ ಎಚ್ ನಾಗೇಶ್ ಅವರು ಬೇಡಿಕೆ ಇಟ್ಟಿದ್ದರು ಎಂಬ ಸಂಗತಿ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರಿಗೆ ಗೊತ್ತಿದ್ದರೂ ಮೌನವಾಗಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.
ಪ್ರಕರಣ ಕುರಿತು ತನಿಖೆ ನಡೆಸಲಾಗುವುದು ಎಂದು ಸಚಿವ ನಾಗೇಶ್ ಹೇಳಿಕೆ ನೀಡಿದ ಬೆನ್ನಲ್ಲೇ ಅಧಿಕಾರಿ ಪುತ್ರಿ ಪ್ರಧಾನಿಗೆ ಸಲ್ಲಿಸಿರುವ ಮನವಿಯಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್‌ನಾರಾಯಣ್ ಅವರ ಹೆಸರು ಪ್ರಸ್ತಾಪಿಸಿರುವುದು ಮುನ್ನೆಲೆಗೆ ಬಂದಿದೆ.
ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಲು ಸಚಿವ ನಾಗೇಶ್ ಅವರು 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದನ್ನು ಅಧಿಕಾರಿ ಮತ್ತು ಅಧಿಕಾರಿ ಪುತ್ರಿ ನೇರವಾಗಿ ಉಪ ಮುಖ್ಯಮಂತ್ರಿ ಅಶ್ವಥ್‌ನಾರಾಯಣ್ ಅವರೊಂದಿಗೆ ಅಳಲು ತೋಡಿಕೊಂಡಿದ್ದರು. ಈ ಕುರಿತು ಪ್ರಧಾನಿಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ಕುರಿತು ಸಚಿವ ನಾಗೇಶ್ ಅವರು ಸ್ಪಷ್ಟೀಕರಣ ನೀಡಿದ್ದಾರಾದರೂ ಉಪ ಮುಖ್ಯಮಂತ್ರಿ ಮಾತ್ರ ಈವರೆವಿಗೂ ಮೌನ ಮುರಿದಿಲ್ಲ. ಅಧಿಕಾರಿ ಮತ್ತು ಅಧಿಕಾರಿ ಪುತ್ರಿ ತಮ್ಮ ಬಳಿ ಬಂದಿದ್ದರೇ ಅಥವಾ ಇಲ್ಲವೇ ಎಂಬ ಬಗ್ಗೆ ಈವರೆವಿಗೂ ಯಾವ ಪ್ರತಿಕ್ರಿಯೆಯನ್ನೂ ನೀಡದಿರುವುದು ಎದ್ದಿರುವ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದಂತಾಗಿದೆ.
‘ವರ್ಗಾವಣೆ ಸಂಬಂಧಿಸಿದಂತೆ ತಮ್ಮ ತಂದೆ ಮೌಖಿಕವಾಗಿ ಹಲವು ಬಾರಿ ಮನವಿಗಳನ್ನು ಮಾಡಿದ್ದರು. ತಮ್ಮ ಮನವಿಗೆ ಸ್ಪಂದಿಸದ ಕಾರಣ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರಿಗೂ ಈ ಸಂಗತಿಯನ್ನು ಹೇಳಿದ್ದೆವು. ಆದರೆ ಅವರನ್ನೂ ಸಚಿವ ನಾಗೇಶ್ ದಿಕ್ಕು ತಪ್ಪಿಸಿದ್ದರು,’ ಎಂದು ಪ್ರಧಾನಿಗೆ ಸಲ್ಲಿಸಿರುವ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಬೆಂಗಳೂರಿನ ಸಂಸದರೊಬ್ಬರೊಂದಿಗೂ ಈ ಸಂಗತಿಯನ್ನು ಹಂಚಿಕೊಂಡಿದ್ದಾರಾದರೂ ಆ ಸಂಸದ ಯಾರು ಎಂದು ಹೆಸರಿಸಿಲ್ಲ.
ಪ್ರಕರಣ ಹಿನ್ನೆಲೆ
ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟಾಚಾರದಿಂದ ಕೂಡಿದೆ. ವಿಶೇಷವಾಗಿ ಅಬಕಾರಿ ಇಲಾಖೆಯ ಸಚಿವ ಎಚ್ ನಾಗೇಶ್ ಅವರು ಅತ್ಯಂತ ಭ್ರಷ್ಟರು. ನನ್ನ ತಂದೆ ಇಲಾಖೆಯಲ್ಲಿ 30 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಭಾರತ ಸರ್ಕಾರದ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಸದ್ಯ ಅಬಕಾರಿ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಹೈಪರ್ ಟೆನ್ಷನ್, ಸಕ್ಕರೆ , ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಮ್ಮ ತಂದೆಗೆ ಇಬ್ಬರು ಪುತ್ರಿಯರಿದ್ದು, ಒಬ್ಬರು ಇಂಜಿನಿಯರಿಂಗ್ ಮತ್ತೊಬ್ಬರು ಪಿಯುಸಿ ವ್ಯಾಸಂಗ ಮಾಡುತ್ತಿದ್ದೇವೆ. 5 ಜಂಟಿ ಆಯುಕ್ತರ ಹುದ್ದೆ ಖಾಲಿ ಇವೆ. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಲ್ಲ. ನಮ್ಮ ತಂದೆ ಸದ್ಯ ಹೊಸಪೇಟೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅನಾರೋಗ್ಯ ಮತ್ತು ನಿವೃತ್ತಿ ಅಂಚಿನಲ್ಲಿರುವ ಕಾರಣ ಖಾಲಿ ಇದ್ದ ಹುದ್ದೆಗೆ ವರ್ಗಾವಣೆ ಮಾಡಲು ಕೋರಿದ್ದೆವು. ಆದರೆ ಸಚಿವ ಎಚ್ ನಾಗೇಶ್ ಅವರು 1 ಕೋಟಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ, ‘ ಎಂದು ಆರೋಪಿಸಿದ್ದರು.
ಇದು ಕೇವಲ ಸಚಿವ ನಾಗೇಶ್ ಅವರಿಗೆ ಸಂಬಂಧಿಸಿದ ವಿಚಾರವಲ್ಲ. ಉಪ ಮುಖ್ಯಮಂತ್ರಿ ಅಶ್ವಥ್‌ನಾರಾಯಣ್ ಅವರಿಗೆ ಈ ಭ್ರಷ್ಟಾಚಾರದ ಕುರಿತು ಮಾಹಿತಿ ಇದೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ. ಹಾಗಾಗಿ ಅವರು ಸಹ ಈ ಕುರಿತು ಸ್ಪಷ್ಟೀಕರಣ ನೀಡಬೇಕು ಮತ್ತು ಈ ವಿಚಾರವಾಗಿ ಖುದ್ದು ರಾಜ್ಯಪಾಲರು ಮುಖ್ಯಮಂತ್ರಿಗಳಿಂದ ವಿವರಣೆ ಪಡೆಯಬೇಕು. ಯಡಿಯೂರಪ್ಪ ಅವರ ಹಿಂದಿನ ಮುಖ್ಯಮಂತ್ರಿ ಅವಧಿಯಲ್ಲಿ ಕರ್ನಾಟಕ ರಾಜ್ಯವು ಇಡೀ ದೇಶದಲ್ಲಿಯೇ ಅತಿ ಭ್ರಷ್ಟ ರಾಜ್ಯವೆಂಬ ಕುಖ್ಯಾತಿ ಪಡೆದಿತ್ತು. ಮತ್ತೆ ಆ ಕುಖ್ಯಾತಿಯನ್ನು ಮರು ಸ್ಥಾಪಿಸಲು ಯಡಿಯೂರಪ್ಪ ಮತ್ತು ಅವರ ಸಹದ್ಯೋಗಿಗಳು ನಿರಂತರವಾಗಿ ಶ್ರಮಿಸುತ್ತಿರುವುದು ಪರಮ ನಾಚಿಕೆಗೇಡಿನ ವಿಷಯ.
ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಷ್ಟ್ರಸಮಿತಿ
‘ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದೇವಲ್ಲದೆ ಅವರ ಬೇಡಿಕೆಯನ್ನು ಈಡೇರಿಸಲು ಸಮರ್ಥರಾಗಿಲ್ಲ. ಬೇಡಿಕೆ ಈಡೇರಿಸದ ಹೊರತು ವರ್ಗಾವಣೆ ಮಾಡುವುದಿಲ್ಲ. ಲಂಚ ನೀಡದ ಕಾರಣ ರಜೆ ಮೇಲೆ ತೆರಳಲು ಸಚಿವ ನಾಗೇಶ್ ಅವರು ಬಲವಂತ ಮಾಡುತ್ತಿದ್ದಾರೆ. ಇದಕ್ಕೊಪ್ಪದ ಕಾರಣ ಹಿಂಸೆ ನೀಡಲಾಗುತ್ತಿದೆ. ಕಳೆದ 1 ತಿಂಗಳಲ್ಲಿ ಹಣ ಪಡೆದು 600ಕ್ಕೂ ಹೆಚ್ಚು ವರ್ಗಾವಣೆಗಳನ್ನು ಮಾಡಲಾಗಿದೆ. ಸಚಿವರ ಮಧ್ಯವರ್ತಿ ಎಂದು ಹೇಳಲಾಗಿರುವ ಎಲ್ ಎ ಮಂಜುನಾಥ್ ಮತ್ತು ಹರ್ಷ ಅವರು ವರ್ಗಾವಣೆ ಬಯಸುವ ಅಧಿಕಾರಿ, ಸಿಬ್ಬಂದಿಯೊಂದಿಗೆ ಸಂಧಾನ ನಡೆಸುತ್ತಾರೆ. ಅಧಿಕಾರಿ ಸಿಬ್ಬಂದಿಯಿಂದ ಪಡೆದ ಹಣವನ್ನು ನೇರವಾಗಿ ಸಚಿವರಿಗೆ ತಲುಪಿಸುತ್ತಾರೆ, ‘ಎಂದು ಇಲಾಖೆಯೊಳಗೆ ನಡೆಯುತ್ತಿದೆ ಎನ್ನಲಾಗಿರುವ ಲಂಚಗುಳಿತನವನ್ನು ದೂರಿನಲ್ಲಿ ವಿವರಿಸಿದ್ದರು.