ಬಯೋಮೆಡಿಕಲ್‌ ನಿರ್ವಹಣೆ; 21 ಕೋಟಿ ಹೆಚ್ಚಳದ ಹಿಂದೆ ಅಧಿಕಾರಿಗಳ ಚಾಣಾಕ್ಷ ನಡೆ

ಬೆಂಗಳೂರು; ಬಯೋಮೆಡಿಕಲ್‌ ಉಪಕರಣ ನಿರ್ವಹಣೆ ಸಂಬಂಧ ಆರೋಗ್ಯ ಇಲಾಖೆ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಲಂಚಕೋರ ಅಧಿಕಾರಿಗಳಿಂದ ಸರ್ಕಾರಕ್ಕೆ ಆಗಿರುವ ನಷ್ಟದ ವಿವರಗಳು ಬಹಿರಂಗವಾಗುತ್ತಿರುವ ಬೆನ್ನಲ್ಲೇ ಹಲವು ಅಧಿಕಾರಿಗಳ ಚಾಣಾಕ್ಷತೆಯಿಂದ ಕೂಡಿದ್ದ ಲೋಪಗಳು ಬಯಲಾಗಿವೆ.

ಟೆಂಡರ್‌ ಪರಿಶೀಲನಾ ಸಮಿತಿಯ ಸದಸ್ಯರು ಸಭೆ ನಡವಳಿಗಳ ಕೊನೆಯ 5 ಮತ್ತು 6ನೇ ಪುಟಗಳಿಗಷ್ಟೇ ಸಹಿ ಮಾಡಿದ್ದಾರೆಯೇ ವಿನಃ, ಉಳಿದ ನಿರ್ಣಯಗಳಿಗೆ ಯಾರೂ ಸಹಿ ಮಾಡದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಒಂದೊಮ್ಮೆ ಅಕ್ರಮಗಳು ಬಹಿರಂಗಗೊಂಡಿದ್ದೇ ಆದಲ್ಲಿ ಅಥವಾ ಸಮಿತಿಯ ನಿರ್ಧಾರವನ್ನು ಯಾರಾದರೂ ಪ್ರಶ್ನಿಸಿದ್ದೇ ಆದಲ್ಲಿ ಎಲ್ಲಾ ಸದಸ್ಯರೂ ಏಕಕಾಲಕ್ಕೆ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಉಳಿದ ನಿರ್ಣಯಗಳಿಗೆ ಸಹಿ ಮಾಡದೇ ನುಣಚಿಕೊಂಡಿದ್ದಾರೆ!

ಬಯೋ ಮೆಡಿಕಲ್‌ ಉಪಕರಣಗಳ ನಿರ್ವಹಣೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಡೆದ ಪ್ರಕ್ರಿಯೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮುಖ್ಯ ಹಣಕಾಸು ಅಧಿಕಾರಿ, ಕೆಡಿಎಲ್‌ಡಬ್ಲ್ಯೂಎಸ್‌ನ ಹಣಕಾಸು ಅಧಿಕಾರಿ, ಆರೋಗ್ಯ ಇಲಾಖೆಯ ಆರ್ಥಿಕ ಸಲಹೆಗಾರರು ಗೈರಾಗಿದ್ದರು. ಸಭೆಗೆ ಹಾಜರಾಗದಿದ್ದರೂ ಅವರನ್ನು ಆಹ್ವಾನಿಸಬೇಕಿತ್ತಲ್ಲದೆ, ಅವರು ಸಭೆಗೆ ಹಾಜರಾದ ನಂತರವೇ ಟೆಂಡರ್‌ದಾರರನ್ನು ಆಯ್ಕೆ ಸಂಬಂಧ ಸಭೆ ನಿರ್ಣಯ ಕೈಗೊಳ್ಳಬೇಕಿತ್ತು. ಆದರೆ ದರ ಸಂಧಾನ ಮತ್ತು ಟೆಂಡರ್‌ ಅಂಗೀಕಾರ ಸಮಿತಿ ಸಭೆಗಳಲ್ಲಿ ಈ ಅಧಿಕಾರಿಗಳು ಪಾಲ್ಗೊಂಡಿರಲಿಲ್ಲ. ಹಾಗೆಯೇ ಸಭಾ ನಡವಳಿಗೆ ಸಹಿಯನ್ನೂ ಮಾಡಿಲ್ಲ ಎಂದು ಗೊತ್ತಾಗಿದೆ. ಅಧಿಕಾರಿಗಳ ಈ ನಡೆ ಹಲವು ಸಂಶಯಗಳಿಗೆ ಕಾರಣವಾಗಿದೆ.

ಅಧಿಕಾರಿಗಳ ಚಾಣಾಕ್ಷ ನಡೆಯೇ ಬಯೋ ಮೆಡಿಕಲ್‌ ಉಪಕರಣಗಳ ನಿರ್ವಹಣೆ ಕರಾರು ವ್ಯವಸ್ಥೆಯಲ್ಲಿ ಅವ್ಯವಹಾರ, ಹಣಕಾಸು ದುರುಪಯೋಗ ಮತ್ತು ಯೋಗ್ಯವಲ್ಲದ ಸಂಸ್ಥೆಗೆ ಟೆಂಡರ್‌ ನೀಡಲು ಕಾರಣವಾಗಿದೆ.

ಕರಾರಿನ ಕರಾಮತ್ತೇನು?

ಬಯೋ ಮೆಡಿಕಲ್‌ ಉಪಕರಣ ನಿರ್ವಹಣೆ ಕರಾರಿನಲ್ಲಿ ಅಧಿಕಾರಿಗಳ ಕರಾಮತ್ತೂ ಮುನ್ನೆಲೆಗೆ ಬಂದಿದೆ. ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ ಕಂಪನಿಗೆ 3ವರ್ಷಗಳ ಅವಧಿಗೆ ಒಟ್ಟು 27.56 ಕೋಟಿ ರುಮೊತ್ತದ ಕರಾರಿಗೆ ಸಹಿ ಮಾಡಲು ಕೆಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕರು 2019ರ ಫೆ.25ರಂದು ನೋಟಿಫಿಕೇಷನ್‌ ಅವಾರ್ಡ್‌ ಮಾಡಿದ್ದರು. ಇದಾದ 10 ದಿನದ ಒಳಗೆ ಶೇ.5ರಷ್ಟು ಕರಾರು ಮೊತ್ತದ ಬ್ಯಾಂಕ್‌ ಖಾತರಿಯೊಂದಿಗೆ ಬಂದು ಕರಾರು ಸಹಿ ಮಾಡಲು ಆದೇಶಿಸಿದ್ದರು.

ಕರಾರಿಗೆ ಸಹಿ ಹಾಕಿದ್ದು ಚೆನ್ನೈನಲ್ಲಿ

ಅಚ್ಚರಿಯ ಸಂಗತಿ ಎಂದರೆ ನೊಟಿಫಿಕೇಷನ್‌ ಅವಾರ್ಡ್‌ ಹೊರಡಿಸಿದ ಮರು ದಿನವೇ ಕೆಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕರು ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ ಲಿಮಿಟೆಡ್‌ನ ಕನ್‌ಸಾರ್ಸಿಯಮ್ಸ್‌ ಪಾರ್ಟನರ್ಸ್‌ ಜತೆ 27.56 ಕೋಟಿ ಕರಾರಿನ ಬದಲಿಗೆ 74.98 ಕೋಟಿಯ ಕರಾರಿಗೆ 3 ವರ್ಷದ ಅವಧಿಗೆ ಸಹಿ ಮಾಡಿದ್ದಾರೆ. ಮತ್ತೊಂದು ಕರಾರಿಗೆ ಸಹಿ ಮಾಡಲು ನಿಯೋಜಿತ ಕಂಪನಿಯು ಸರ್ಕಾರಿ ಕಚೇರಿಗೆ ಬರಬೇಕು. ಆದರಿಲ್ಲಿ ಹೆಚ್ಚುವರಿ ನಿರ್ದೇಶಕರು ಕಂಪನಿಯ ಆಡಳಿತ ಕಚೇರಿ ಇರುವ ಚೆನ್ನೈಗೆ ತೆರಳಿ ಕರಾರಿಗೆ ಸಹಿ ಮಾಡಿದ್ದರು ಎಂಬುದು ಗೊತ್ತಾಗಿದೆ.

ಬಯೋ ಮೆಡಿಕಲ್‌ ಉಪಕರಣಗಳ ನಿರ್ವಹಣೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 53.96 ಕೋಟಿ 3 ವರ್ಷಗಳ ಅವಧಿಗೆ ಅನುದಾನ ನೀಡಿತ್ತು. ಅದರಂತೆ ರಾಜ್ಯ ಸಚಿವ ಸಂಪುಟವು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಒದಗಿಸಿರುವ ಅನುದಾನದಂತೆ 3 ವರ್ಷಗಳ ಅವಧಿಗೆ ಉಪಕರಣಗಳ ನಿರ್ವಹಣೆಗೆ ಟೆಂಡರ್‌ ಕರೆಯಲು ಅನುಮತಿ ನೀಡಿತ್ತು.

21.02 ಕೋಟಿ ಹೆಚ್ಚಳವಾಗಿದ್ದೇಕೆ?

ಸಚಿವ ಸಂಪುಟ ಅನುಮೋದನೆ ನೀಡಿದ್ದ ಮೊತ್ತಕ್ಕೂ ಮತ್ತು ಕರಾರು ಮಾಡಿಕೊಳ್ಳುವ ಸಂದರ್ಭದಲ್ಲಿ ನಮೂದಿಸಿದ್ದ ಮೊತ್ತದ ನಡುವೆ 21.02 ಕೋಟಿ ಹೆಚ್ಚಳವಾಗಿತ್ತು. ಶೇ.40ರಷ್ಟು ವ್ಯತ್ಯಾಸವಿರುವುದು ಕಂಡು ಬಂದಿದೆ. ಸಚಿವ ಸಂಪುಟ ಅನುಮೋದನೆ ನೀಡಿದ್ದ ಮೊತ್ತಕ್ಕಿಂತಲೂ ಶೇ.10ಕ್ಕಿಂತ ಹೆಚ್ಚಿದ್ದರೆ ಪುನಃ ಸಚಿವ ಸಂಪುಟದ ಅನುಮೋದನೆ ಪಡೆಯಬೇಕು. ಆದರೆ ಈ ಪ್ರಕ್ರಿಯೆಯನ್ನು ಆಯುಕ್ತ ಪಂಕಜಕುಮಾರ್‌ ಪಾಂಡೆ ಮತ್ತು ಕೆಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕ ಸಿ ನಾಗರಾಜ್‌ ನಡೆಸಿರಲಿಲ್ಲ. ಸಚಿವ ಸಂಪುಟ ಕೈಗೊಂಡಿದ್ದ ಹಿಂದಿನ ನಿರ್ಣಯವನ್ನೂ ಧಿಕ್ಕರಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ವಿಶೇಷ ಮತ್ತು ಅಚ್ಚರಿಯ ಸಂಗತಿ ಎಂದರೆ 3 ವರ್ಷದ ಅವಧಿಯ ನಿರ್ವಹಣೆಗೆ ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸಸ್‌ ಮತ್ತು ಸಹಭಾಗಿ ಬಿಡ್‌ದಾರರು ಇ-ಪ್ರೊಕ್ಯೂರ್‌ಮೆಂಟ್‌ನ ಜಾಲತಾಣದಲ್ಲಿ 27.72 ಕೋಟಿ ರು.ಗಳನ್ನು ನಮೂದಿಸಿದ್ದರು. ಇದರಂತೆಯೇ ಆಯುಕ್ತರ ಅಧ್ಯಕ್ಷತೆಯಲ್ಲಿರುವ ಟೆಂಡರ್‌ ಅಂಗೀಕಾರ ಪ್ರಾಧಿಕಾರವೂ ಇದೇ ದರವನ್ನು ಒಪ್ಪಿಕೊಂಡು ಅನುಮೋದಿಸಿತ್ತಲ್ಲದೆ ಇದೇ ಕಂಪನಿಯನ್ನು ಆಯ್ಕೆ ಮಾಡಿತ್ತು. ಇದರ ಆಧಾರದ ಮೇಲೆ ಕೆಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕ ನಾಗರಾಜ್‌ ಅವರು 2019ರ ಫೆ. 25ರಂದು ಟಿವಿಎಸ್‌ ಲಾಜಿಸ್ಟಿಕ್ಸ್‌ ಕಂಪನಿಗೆ 27.56 ಕೋಟಿ ಮೊತ್ತದ ನೋಟಿಫಿಕೇಷನ್‌ ಅವಾರ್ಡ್‌ ನೀಡಿದ್ದರು ಎಂದು ತಿಳಿದು ಬಂದಿದೆ.

ಬಿಡ್‌ದಾರರು 3 ವರ್ಷಗಳ ಅವಧಿಗೆ ಉಪಕರಣಗಳ ನಿರ್ವಹಣೆಗೆ ದರವನ್ನು ಸೂಚಿಸಬೇಕು. ಪ್ರತಿ ವರ್ಷದ ಆಸ್ತಿ ಮೌಲ್ಯದ ಆಧಾರದ ಮೇಲೆ ಪ್ರತಿಯೊಂದು ವರ್ಷಕ್ಕೆ ಲೆಕ್ಕ ಹಾಕಿ, 3 ವರ್ಷದ ಮೌಲ್ಯವನ್ನು ಕೂಡಿಸಿ 3 ವರ್ಷಕ್ಕೂ ಬಯೋ ಮೆಡಿಕಲ್‌ ಉಪಕರಣದ ನಿರ್ವಹಣೆಯ ಒಟ್ಟು ಮೌಲ್ಯವನ್ನು ಇ-ಸಂಗ್ರಹಣಾ ವೇದಿಕೆಯಲ್ಲಿ ನಮೂದಿಸಬೇಕಿತ್ತು. ಆದರೆ ಕಂಪನಿಯು 3 ವರ್ಷಗಳ ಅವಧಿಗೆ ಉಪಕರಣಗಳ ನಿರ್ವಹಣೆಗೆ 22.06 ಕೋಟಿ ಮತ್ತು 3 ವರ್ಷಗಳ ಅವಧಿಯ ಮೇಲ್ವಿಚಾರಣೆಗೆ 5.5 ಕೋಟಿ ಸೇರಿ ಒಟ್ಟು 27.72 ಕೋಟಿ ದರ ನಮೂದಿಸಿತ್ತು. ಬಿಡ್‌ದಾರರು 3 ವರ್ಷಗಳ ಉಪಕರಣ ನಿರ್ವಹಣೆಗೆ ಸರಿಯಾದ ದರವನ್ನೇ ನಮೂದಿಸಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಆದರೆ 2019ರ ಫೆ.26ರಂದು ಸಿ ನಾಗರಾಜ್‌ ಅವರೇ ಮೇಲಾಧಿಕಾರಿಗಳು ಮತ್ತು ಸರ್ಕಾರದ ಅನುಮತಿ ಇಲ್ಲದೆಯೇ 74.98 ಕೋಟಿ ರು.ಗೆ ಕರಾರು ಸಹಿ ಮಾಡಿ ಕಾರ್ಯಾದೇಶ ನೀಡಿದ್ದರು. ಇಡೀ ಒಟ್ಟಾರೆ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ 47.70 ಕೋಟಿ ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇ-ಪ್ರೊಕ್ಯೂರ್‌ಮೆಂಟ್‌ನಲ್ಲಿ ನಮೂದಿಸಿದ್ದ ದರವನ್ನೇ ಪರಿಗಣಿಸುವುದು ಕಡ್ಡಾಯ ಮಾತ್ರವಲ್ಲದೆ ಬೇರೆ ಯಾವುದೇ ಮೂಲದಿಂದ ಸಲ್ಲಿಸುವ ಆರ್ಥಿಕ ಬಿಡ್‌ನ್ನು ಪರಿಗಣಿಸಬಾರದು ಎಂದು ಆರ್ಥಿಕ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಈ ಆದೇಶವನ್ನು ಉಲ್ಲಂಘಿಸಿ 27.56 ಕೋಟಿ ಬದಲಿಗೆ 74.98 ಕೋಟಿ ರು.ಗೆ ಕರಾರು ಮಾಡಿಕೊಟ್ಟಿರುವುದು 47.70 ಕೋಟಿ ಮೊತ್ತದ ಅಕ್ರಮ ನಡೆದಿದೆ ಎಂಬುದನ್ನು ಪುಷ್ಠೀಕರಿಸುತ್ತದೆ.

the fil favicon

SUPPORT THE FILE

Latest News

Related Posts