ಬಿಜೆಪಿ ಸರ್ಕಾರದ ಅವಧಿಯಲ್ಲೇ 908 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲು

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2019-20 ಸಾಲಿನಲ್ಲಿ ಒಟ್ಟು 908 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದು ಬಂದಿದೆ. 2018-19ರಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ತುಸು ಇಳಿಕೆ ಕಂಡಿತ್ತಾದರೂ 2019-20ನೇ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡಿರುವುದು ಆತಂಕ ಮೂಡಿಸಿದೆ.

ಸಾಲ ಮತ್ತಿತರ ಕಾರಣಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು’ ಎಂದು ಮಡಿಕೇರಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಬಿಜೆಪಿ ಸರ್ಕಾರದ ಅವಧಿಯಲ್ಲೇ 908 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

ಆತ್ಮಹತ್ಯೆ ಮಾಡಿಕೊಂಡ 908 ರೈತರ ಪೈಕಿ 122 ಪ್ರಕರಣಗಳನ್ನು ವೈಯಕ್ತಿಕ ಕಾರಣಗಳಿಗಾಗಿನ ಆತ್ಮಹತ್ಯೆ ಎಂದು ತಿರಸ್ಕರಿಸಲಾಗಿದೆ. ಸುಮಾರು 660 ಆತ್ಮಹತ್ಯೆ ಪ್ರಕರಣಗಳನ್ನು ಅರ್ಹ ಪ್ರಕರಣ ಎಂದು ಇದುವರೆಗೆ ದೃಢೀಕರಿಸಲಾಗಿದೆ. ಇನ್ನೂ 127 ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಕೃಷಿ ಇಲಾಖೆ ಪರಿಶೀಲನೆ ನಡೆಸುತ್ತಿದೆ.42 ರೈತರ ಆತ್ಮಹತ್ಯೆ ಪ್ರಕರಣಗಳನ್ನು ಎಫ್ಎಸ್ಎಲ್ ಪರೀಕ್ಷೆಗಾಗಿ ಕಳಿಸಿದೆ ಎಂದು ತಿಳಿದು ಬಂದಿದೆ.

2016-17ರಲ್ಲಿ ರಾಜ್ಯದಲ್ಲಿ 925 ರೈತರು ಆತ್ಮಹತ್ಯೆಗೆ ಶರಣಾಗಿದ್ದರೆ ಇನ್ನು 2017-18ರಲ್ಲಿ ರೈತರ ಆತ್ಮಹತ್ಯೆ ಪ್ರಮಾಣ 1, 050ಗೆ ಏರಿಕೆಯಾಗಿತ್ತು. 2018-19ರಲ್ಲಿ ರೈತರ ಆತ್ಮಹತ್ಯೆ ಪ್ರಕರಣ 700ಕ್ಕೆ ಇಳಿದಿತ್ತು. ಇದಾಗಿ ಒಂದೇ ವರ್ಷದ ಅಂತರದಲ್ಲಿ 2019-20ರಲ್ಲಿ ಮತ್ತೆ ರೈತರ ಆತ್ಮಹತ್ಯೆ ಪ್ರಕರಣ ಸಂಖ್ಯೆ ಹೆಚ್ಚಳವಾಗಿದೆ. ಆತ್ಮಹತ್ಯೆ ಎಂದು ಈಗಾಗಲೇ ದೃಢೀಕರಿಸುವ ಮತ್ತು ತೀರ್ಮಾನಿಸಲು ಬಾಕಿ ಇರುವ ಪ್ರಕರಣಗಳು ಸೇರಿ ಒಟ್ಟು 787 ಆತ್ಮಹತ್ಯೆ ಪ್ರಕರಣಗಳಿವೆ ಎಂದು ಗೊತ್ತಾಗಿದೆ.

ಬೆಳಗಾವಿಯಲ್ಲಿ 94, ವಿಜಯಪುರ- 43, ಬಾಗಲಕೋಟೆ- 28, ಹಾವೇರಿ- 76, ಧಾರವಾಡ- 60, ಗದಗ- 25 ರೈತರು ಸೇರಿದಂತೆ ಮುಂಬೈ-ಕರ್ನಾಟಕ ಭಾಗದಲ್ಲಿ ಒಟ್ಟು 326 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಹಾಗೆಯೇ ಬೀದರ್‌ನಲ್ಲಿ 46, ಕಲಬುರ್ಗಿಯಲ್ಲಿ 58, ರಾಯಚೂರಿನಲ್ಲಿ 22, ಬಳ್ಳಾರಿಯಲ್ಲಿ 35, ಕೊಪ್ಪಳದಲ್ಲಿ 23, ಯಾದಗಿರಿಯಲ್ಲಿ 20 ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು 204 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಂಡ್ಯದಲ್ಲಿ 63, ಮೈಸೂರು- 60, ಹಾಸನ-33, ಚಾಮರಾಜನಗರ-1, ರಾಮನಗರ-5, ಕೊಡಗು ಜಿಲ್ಲೆಯಲ್ಲಿ 9 ರೈತರು ಸೇರಿದಂತೆ ಕಾವೇರಿ ನದಿ ಪಾತ್ರದಲ್ಲಿ ಒಟ್ಟು 171 ರೈತರು ನೇಣಿಗೆ ಕೊರಳೊಡ್ಡಿದ್ದಾರೆ.

ಶಿವಮೊಗ್ಗದಲ್ಲಿ 42, ಚಿಕ್ಕಮಗಳೂರು-41, ಚಿತ್ರದುರ್ಗ-40, ದಾವಣಗೆರೆ-36, ತುಮಕೂರು ಜಿಲ್ಲೆಯಲ್ಲಿ 31 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಅತಿವೃಷ್ಠಿ, ಅನಾವೃಷ್ಟಿ ಸೇರಿದಂತೆ ಇನ್ನಿತರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಲೇ ಇದೆ. ಬೆಳೆ ವಿಮೆ, ಪ್ರಧಾನ್‌ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜಾರಿಯಾಗಿದ್ದರೂ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ರಾಜ್ಯದಲ್ಲಿಯೂ ಕಡಿವಾಣ ಬಿದ್ದಿಲ್ಲ.

ಸಾಲ ಮತ್ತಿತರ ಕಾರಣಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು. ಕೃಷಿ ಮಾಡಿಯೂ ಉತ್ತಮ ಬದುಕು ಕಟ್ಟಿಕೊಂಡವರು ಇದ್ದಾರೆ. ಆದರೆ, ಹೇಡಿಗಳು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹೆಂಡತಿ ಹಾಗೂ ಮಕ್ಕಳನ್ನು ನೋಡಿಕೊಳ್ಳದ ರೈತ ಹೇಡಿ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts