ವಾಜೀದ್‌ ಖಾನ್‌,ರಮ್ಯಾ ವಿವಾಹ;ವೈಯಕ್ತಿಕ ಸಂಬಂಧ ಸ್ವಾತಂತ್ರ್ಯವನ್ನು ಅತಿಕ್ರಮಿಸುವಂತಿಲ್ಲ

ಬೆಂಗಳೂರು; ಯಾವುದೇ ಪ್ರಾಪ್ತ ವಯಸ್ಕ ವ್ಯಕ್ತಿಯು ಅವನ / ಅವಳ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು, ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಹಕ್ಕಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್.ಸುಜಾತ ಮತ್ತು ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮಗದುಮ್ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಲವ್‌ ಜಿಹಾದ್‌ಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ನಾಯಕರ ಮಧ್ಯೆ ವಾಕ್ಸಮರ ಮುಂದುವರೆಯುತ್ತಿರುವ ಮಧ್ಯೆಯೇ ಕರ್ನಾಟಕ ಹೈಕೋರ್ಟ್‌ ಪಟ್ಟಿರುವ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ. ಇಬ್ಬರು ವ್ಯಕ್ತಿಗಳ ವೈಯಕ್ತಿಕ ಸಂಬಂಧಗಳಿಗೆ ಸಂಬಂಧಿಸಿದ ಸ್ವಾತಂತ್ರ್ಯವನ್ನು ಯಾರೂ ಅತಿಕ್ರಮಿಸುವಂತಿಲ್ಲ ಎಂದು ಹೇಳಿದೆ.

ಹೈಕೋರ್ಟ್‌ ಅಭಿಪ್ರಾಯವಿದು

ತನ್ನ ಪ್ರೇಮಿ ರಮ್ಯಾಳನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ಕೋರಿ ವಾಜೀದ್ ಖಾನ್‌ ಎಂಬುವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಲೇವಾರಿ ಮಾಡುವಾಗ ನ್ಯಾಯಪೀಠವು “ಯಾವುದೇ ಪ್ರಾಪ್ತ ವಯಸ್ಕ ವ್ಯಕ್ತಿಯು ಅವನ/ಅವಳ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಹಕ್ಕಾಗಿದೆ ಮತ್ತು ಇಬ್ಬರು ವ್ಯಕ್ತಿಗಳ ವೈಯಕ್ತಿಕ ಸಂಬಂಧಗಳಿಗೆ ಸಂಬಂಧಿಸಿದ ಸ್ವಾತಂತ್ರ್ಯವನ್ನು ಯಾರೊಬ್ಬರೂ ಅತಿಕ್ರಮಿಸುವಂತಿಲ್ಲ” ಎಂದು ಅಭಿಪ್ರಾಯಪಟ್ಟಿತು.

ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ರಮ್ಯಾ ಅವರು, ತಾನು ಪ್ರಸ್ತುತ ವಿದ್ಯಾರಣ್ಯಪುರದ ಮಹಿಳಾ ದಕ್ಷ ಸಮಿತಿಯಲ್ಲಿ ತಂಗಿದ್ದೇನೆ ಎಂದು ತಿಳಿಸಿದರು. ಅಲ್ಲದೇ ಆಕೆಯ ಪೋಷಕರು, ಅರ್ಜಿದಾರರೊಂದಿಗಿನ ಅವಳ ಮದುವೆಗೆ ಸಂಬಂಧಿಸಿದಂತೆ ಆಕೆಯ ವೈಯಕ್ತಿಕ ಸ್ವಾತಂತ್ರ್ಯ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಆಕೆ ಜನೋದಯ ಸಾಂತ್ವಾನಾ ಕೇಂದ್ರಕ್ಕೆ ದೂರಿನ ನೀಡಿರುವುದಾಗಿ ತಿಳಿಸಿದರು. ತನ್ನ ಸಹೋದ್ಯೋಗಿಯಾಗಿರುವ ಅರ್ಜಿದಾರರನ್ನು ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರಲ್ಲದೆ, ಅರ್ಜಿದಾರರ ತಾಯಿಯು ತನ್ನ ಮಗ, ತನ್ನೊಂದಿಗೆ ಮದುವೆಯಾಗಲು ಯಾವುದೇ ಆಕ್ಷೇಪಣೆಗಳನ್ನು ಹೊಂದಿಲ್ಲ. ಆದರೆ, ತನ್ನ ಪೋಷಕರು ಈ ಮದುವೆಗೆ ಒಪ್ಪಿಗೆ ನೀಡುತ್ತಿಲ್ಲ ಎಂದು ಸಹಾ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ನ್ಯಾಯಪೀಠವು “ಹೇಬಿಯಸ್ ಕಾರ್ಪಸ್ ವ್ಯಕ್ತಿಯನ್ನು ಹಾಜರುಪಡಿಸಲು ಸೀಮಿತವಾಗಿದೆ ಮತ್ತು ಅವಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ಅವಳ ಹೇಳಿಕೆಯನ್ನು ಸಹಾ ಮೇಲ್ಕಂಡಂತೆ ದಾಖಲಿಸಲಾಗಿದೆ, ಹಾಗಾಗಿ ರಿಟ್ ಅರ್ಜಿಯನ್ನು ವಿಲೇವಾರಿ ಮಾಡುತ್ತೇವೆ” ಎಂದು ನ್ಯಾಯಪೀಠವು ತಿಳಿಸಿತು.

ಅಲ್ಲದೇ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರಮ್ಯಾ, ತನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತಿಳಿಸಿದ ನ್ಯಾಯಪೀಠವು ನ್ಯಾಯಾಲಯವು ಮಹಿಳಾ ದಕ್ಷತಾ ಸಮಿತಿಗೆ ತಕ್ಷಣವೇ ಬಿಡುಗಡೆ ಮಾಡುವಂತೆ ನಿರ್ದೇಶಿಸಿತು.

ವಾಕ್ಸಮರಕ್ಕೆ ಕಾರಣವಾದ ಲವ್‌ ಜಿಹಾದ್‌

ಉತ್ತರ ಪ್ರದೇಶದಲ್ಲಿ ಜಾರಿಯಿರುವ ಲವ್ ಜಿಹಾದ್ ತಡೆ ಕಾನೂನು ಅಸಂವಿಧಾನಿಕ.ನಿಗದಿತ ವಯೋಮಾನಕ್ಕೆ ಮೇಲ್ಪಟ್ಟ ಪ್ರತಿಯೊಬ್ಬರಿಗೂ ತಮಗೆ ಇಷ್ಟವಾಗುವ ವ್ಯಕ್ತಿಯನ್ನು ಮದುವೆಯಾಗುವ ಸ್ವಾತಂತ್ರ್ಯ ಇದೆ. ಯಾವುದೇ ಒಂದು ಜಾತಿ ಇಂತಹುದೇ ಜಾತಿ – ಧರ್ಮದ ಹುಡುಗ ಅಥವಾ ಹುಡುಗಿಯನ್ನು ವಿವಾಹವಾಗಬೇಕೆಂಬ ಕಾನೂನು ನಮ್ಮ ಸಂವಿಧಾನದಲ್ಲಿ ಇಲ್ಲ. ಇದು ವಿವೇಕ- ವಿವೇಚನೆಯಿಲ್ಲದೆ ರಚನೆಯಾದ ಕಾನೂನು. ಹಿಂದೂ ಮುಸ್ಲಿಂನನ್ನು, ಮುಸ್ಲಿಂ ಹಿಂದೂವನ್ನು ಮದುವೆಯಾಗುವಂತಿಲ್ಲ ಎಂಬ ನಿಯಮ ರೂಪಿಸುವುದು ತಪ್ಪು ಎಂದು ಸಿದ್ದರಾಮಯ್ಯ ಅವರು ಹೇಳಿದ್ದನ್ನು ಸ್ಮರಿಸಬಹುದು.

ಹಿಂದೆ ಮೊಘಲರ ಆಳ್ವಿಕೆ ಕಾಲದಲ್ಲಿ ಸಾಕಷ್ಟು ಅಂತರ್ಧರ್ಮೀಯ ವಿವಾಹವಾಗಿವೆ. ಹಿಂದೂ ಮುಸ್ಲಿಂ ದಂಪತಿ ಗಳಿಗೆ ಜನಿಸಿರುವ ಸಾಕಷ್ಟು ಮಂದಿ ಇದ್ದರು. ಇಂಥಹ ಕಾನೂನು ಜಾರಿಗೊಳಿಸಲು ಸಂವಿಧಾನ ಅವಕಾಶ ನೀಡಲ್ಲ, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಕಾಯ್ದೆ ವಜಾಗೊಳ್ಳಲಿದೆ. ಇಂತಹಾ ಕಾಯ್ದೆಗಳಿಗೆ ಅವಕಾಶವಿಲ್ಲ ಎಂದು ಅಲಹಾಬಾದ್ ಹಾಗೂ ಕರ್ನಾಟಕದ ಉಚ್ಚ ನ್ಯಾಯಾಲಯಗಳು ಹೇಳಿವೆ ಎಂದು ತಿರುಗೇಟು ನೀಡಿದ್ದಾರೆ.

ಹಾಗಾಗಿ ಕಾಯ್ದೆ ಜಾರಿ ಅಸಾಧ್ಯ. ಆದರೂ ಇಂತದ್ದೊಂದು ಕೆಲಸಕ್ಕೆ ಸರ್ಕಾರ ಕೈಹಾಕಿದೆ ಅಂದರೆ ಅದು ದುರುದ್ದೇಶದಿಂದ ಕೂಡಿದ ಕೆಲಸವಲ್ಲದೆ ಬೇರೇನು? ಸಮಾಜದ ಶಾಂತಿ ಕದಡಬೇಕು ಎಂಬ ಬಿಜೆಪಿಯವರ ಉದ್ದೇಶ ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

Your generous support will help us remain independent and work without fear.

Latest News

Related Posts