ಎಂಪಿಎಂ ಅರಣ್ಯ; ಸಿದ್ದರಾಮಯ್ಯ ಮಾಡಿದ ಲೋಪ, ಬಿಜೆಪಿ ಸರ್ಕಾರಕ್ಕೆ ವರವಾಯಿತೇ?

ಬೆಂಗಳೂರು; ಮೈಸೂರು ಪೇಪರ್‌ ಮಿಲ್‌ಗೆ ಸೇರಿದ ಅರಣ್ಯ ಪ್ರದೇಶವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೇ ಕಾರ್ಖಾನೆ ನಿರ್ವಹಣೆಯನ್ನು ಗುತ್ತಿಗೆ ನೀಡುವ ಪ್ರಸ್ತಾವನೆಗೆ ತಾತ್ವಿಕವಾಗಿ ಅಂಗೀಕರಿಸಿದ್ದರು. ಕಾರ್ಖಾನೆಯನ್ನು ಸರ್ಕಾರದ ಸ್ವಾಮ್ಯದಲ್ಲಿ ಉಳಿಸಿಕೊಳ್ಳದೇ ಗುತ್ತಿಗೆ ನೀಡುವ ಪ್ರಸ್ತಾವನೆಯನ್ನು ಅಂಗೀಕರಿಸಿದ್ದರಿಂದಲೇ ಎಂಪಿಎಂ ಅರಣ್ಯ ಪ್ರದೇಶವನ್ನೂ ಖಾಸಗಿ ಸಂಸ್ಥೆಗಳಿಗೆ ನೀಡುವ ಪ್ರಸ್ತಾವನೆಗೆ ಚಾಲನೆ ದೊರೆತಿದೆ.

ಗುತ್ತಿಗೆ ನೀಡುವ ಪ್ರಸ್ತಾವನೆಯನ್ನು ಅಂಗೀಕರಿಸದೇ ಇದ್ದಿದ್ದರೇ ಅರಣ್ಯ ಪ್ರದೇಶ ಖಾಸಗಿ ಸಂಸ್ಥೆಗಳಿಗೆ ನೀಡುವ ಪ್ರಸ್ತಾವನೆಗೆ ಚಾಲನೆ ದೊರೆಯುತ್ತಿರಲಿಲ್ಲ. ಗುತ್ತಿಗೆ ಪ್ರಸ್ತಾವನೆ ಅಂತಿಮಗೊಳ್ಳುವವರೆಗೂ ಅಥವಾ 2 ವರ್ಷಗಳ ಕಾಲ ಪ್ರತಿ ವರ್ಷ ಸಂಸ್ಥೆಗೆ 100 ಕೋಟಿ ರು. ನಿರ್ವಹಣಾ ವೆಚ್ಚ ಭರಿಸುವ ಪ್ರಸ್ತಾವನೆಯನ್ನು ಒಪ್ಪಿದ್ದ ಸಿದ್ದರಾಮಯ್ಯ ಅವರು, ಆ ನಂತರ ಮರೆತುಬಿಟ್ಟರು.

ಲೀಸ್ ಅವಧಿ ಮುಗಿದ ಕೂಡಲೇ ಈ ಪ್ರದೇಶ ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು ಎನ್ನುವ ಷರತ್ತು ವಿಧಿಸಲಾಗಿತ್ತು. ಪ್ರಸಕ್ತ ವರ್ಷ ಆಗಸ್ಟ್ ತಿಂಗಳಿನಲ್ಲಿ ಲೀಸ್ ಅವಧಿ ಮುಗಿದಿದೆ. ಎಂಪಿಎಂ ಕಾರ್ಖಾನೆ ಸ್ಥಗಿತವಾಗಿ ವರ್ಷಗಳೇ ಕಳೆದಿವೆ.. ಹಾಗಾಗಿ ನಿಯಮಾನುಸಾರ ನೆಡುತೋಪುಗಳನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು ಎಂದು ಒತ್ತಾಯಿಸಿರುವ ಸಿದ್ದರಾಮಯ್ಯ ಅವರು, ಕಾರ್ಖಾನೆ ನಿರ್ವಹಣೆಯನ್ನು ಗುತ್ತಿಗೆ ನೀಡುವ ಪ್ರಸ್ತಾವನೆಯನ್ನು ಅಂಗೀಕರಿಸದೇ ಇದ್ದರೆ ಅರಣ್ಯ ಪ್ರದೇಶವನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ ಎನ್ನುತ್ತಾರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ನಿರ್ವಹಣಾ ವೆಚ್ಚ ಭರಿಸದ ಕಾರಣ ಮೈಸೂರು ಕಾಗದ ಕಾರ್ಖಾನೆ ಖಾಸಗೀಕರಣ ಮಾಡುವ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಜಾಗತಿಕ ಟೆಂಡರ್‌ ಕೂಡ ಕರೆಯಲಾಗಿದೆ. ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿಕೊಂಡಿದ್ದರೆ ಅರಣ್ಯ ಪ್ರದೇಶವೂ ಕಾರ್ಖಾನೆ ವಶದಲ್ಲೇ ಇರುತ್ತಿತ್ತು. ಅರಣ್ಯ ಪ್ರದೇಶವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಪ್ರಸ್ತಾವನೆಗೆ ಚಾಲನೆ ದೊರೆಯುತ್ತಿರಲಿಲ್ಲ ಎಂಬ ಹೊಸ ವಾದವೂ ಇದೀಗ ಮುನ್ನೆಲೆಗೆ ಬಂದಿದೆ.

ಮೈಸೂರು ಕಾಗದ ಕಾರ್ಖಾನೆ ಎಲ್ಲಿಯವರೆಗೆ ಕಾಗದ ತಯಾರಿಕೆ ಘಟಕವಾಗಿ ಮತ್ತು ರಾಜ್ಯ ಸರ್ಕಾರದ ಉದ್ಯಮವಾಗಿ ಇರುತ್ತದೆಯೋ ಅಲ್ಲಿವರೆಗೂ ಗುತ್ತಿಗೆ ಕರಾರು ಪತ್ರ ಚಾಲ್ತಿಯಲ್ಲಿರುತ್ತದೆ. ಬಂಡವಾಳ ಹಿಂತೆಗೆಯುವಿಕೆ ಅಥವಾ ಸರ್ಕಾರದ ನಿಯಂತ್ರಣದಿಂದ ಕಾರ್ಖಾನೆ ಕೈ ತಪ್ಪಿ ಹೋದರೆ ಕಾಗದ ತಯಾರಿಕೆ ಘಟಕ (ಸಂಸ್ಥೆ) ಗುತ್ತಿಗೆ ನೀಡಿರುವ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಂರಕ್ಷಣೆ ಕಾಯ್ದೆ 1980ರ ಕಲಂ 2ರಂತೆ ಉಪಯೋಗಿಸಲು ಅವಕಾಶವಿಲ್ಲ. ಹೀಗಾಗಿ ಎಂಪಿಎಂ ಕಾರ್ಯಾಚರಣೆಯನ್ನು ಹೊರಗುತ್ತಿಗೆಯವರಿಗೆ ನೀಡುವುದು ಸರಿಯಲ್ಲ. ಸರ್ಕಾರದ ಬಂಡವಾಳ ಹಿಂತೆಗೆಯದೆ ಸಂಪೂರ್ಣ ಸರ್ಕಾರದ ಸ್ವಾಮ್ಯದಲ್ಲೇ ಮುಂದುವರೆಸಬೇಕು ಎಂದು ಅರಣ್ಯ ಇಲಾಖೆ 4 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಸ್ಪಷ್ಟ ಅಭಿಪ್ರಾಯ ನೀಡಿತ್ತು.

ಅರಣ್ಯ ಇಲಾಖೆ ನೀಡಿದ್ದ ಅಭಿಪ್ರಾಯವನ್ನು ಪರಿಗಣಿಸಬೇಕಿದ್ದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಖಾನೆ ಖಾಸಗೀಕರಣ ಪ್ರಸ್ತಾಪವನ್ನು ತೆರೆಮರೆಯಲ್ಲಿ ಒಪ್ಪಿದ್ದರು. ಹೀಗಾಗಿಯೇ ಕಾರ್ಖಾನೆ ನಿರ್ವಹಣೆಗಾಗಿ 100 ಕೋಟಿ ರು.ಗಳನ್ನು ಒದಗಿಸಿರಲಿಲ್ಲ ಎಂಬ ವಾದವೂ ಕೇಳಿ ಬಂದಿದೆ.

1993ರ ಸೆ.3ರಲ್ಲಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಎಂಪಿಎಂನ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರ ಮಧ್ಯೆ ಕರಾರು ಒಪ್ಪಂದವಾಗಿತ್ತು. ಈ ಒಪ್ಪಂದದ ಅವಧಿ 2020ರವರೆಗೆ ಚಾಲ್ತಿಯಲ್ಲಿತ್ತು. ಕರಾರಿನ 11ನೇ ಷರತ್ತಿನ ಪ್ರಕಾರ ಮೈಸೂರು ಕಾಗದ ಕಾರ್ಖಾನೆ ಗುತ್ತಿಗೆ ಅರಣ್ಯ ಪ್ರದೇಶದಲ್ಲಿ ಬೆಳೆದ ಪಲ್ಫ್‌ವುಡ್‌ನ್ನು ಸ್ವಂತ ಉಪಯೋಗಕ್ಕೆ 40ನೇ ವರ್ಷ (2020ನೇ ವರ್ಷದವರೆಗೆ)ದವರೆಗೂ ಉಪಯೋಗಿಸಿಕೊಳ್ಳಲು ಅವಕಾಶವಿದೆ.

ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 30,000 ಹೆಕ್ಟೇರ್‌ನಷ್ಟು ಅರಣ್ಯ ಭೂಮಿ ಗುತ್ತಿಗೆ ಆಧಾರದ ಮೇರೆಗೆ ಎಂಪಿಎಂಗೆ ಮಂಜೂರಾಗಿದೆ. ವಿದೇಶಿ ಸಂಸ್ಥೆಗಳ ಹಣಕಾಸಿನ ನೆರವಿನಿಂದ ಬಂಜರು ಭೂಮಿಯನ್ನು ಎಂಪಿಎಂ ಅಭಿವೃದ್ಧಿಗೊಳಿಸಿತ್ತು. ಅದನ್ನು ತೋಟಗಾರಿಕೆಗಾಗಿ ಫಲವತ್ತಾದ ಭೂಮಿಯನ್ನಾಗಿಸಿದೆ. ಇದರ ಜತೆಗೆ 23,960 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಪಲ್ಪ್‌ ವುಡ್‌ ಬೆಳೆಯುವ ಉದ್ದೇಶದಿಂದ ಕಂಪನಿ ತನ್ನ ವಶದಲ್ಲಿರಿಸಿಕೊಂಡಿದೆ.
ಅರಣ್ಯ ತೋಟಗಾರಿಕೆ ವಾರ್ಷಿಕ ಇಳುವರಿ ಸುಮಾರು 2.25 ಲಕ್ಷ ಟನ್‌ಗಳಷ್ಟಿದೆ. ಇದು ಕಾಗದ ಕಾರ್ಖಾನೆಯ ಶೇ.80ರಷ್ಟು ಮರ ಬಳಕೆಗೆ ಸಮನಾಗಿದೆ ಎಂದು ಅರಣ್ಯ ಇಲಾಖೆಯೇ ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂದು ತಿಳಿದು ಬಂದಿದೆ.

ಅಲ್ಲದೆ ಇನ್ನುಳಿದ ಪಲ್ಪ್‌ ಮರಗಳಿಗಾಗಿ ಅರಣ್ಯ ಇಲಾಖೆ, ಖಾಸಗಿ ಮೂಲಗಳಿಂದ ಪೂರೈಸಿಕೊಳ್ಳುತ್ತಿದೆ. ಹಾಗೆಯೇ ಸುಮಾರು 24,000 ಹೆಕ್ಟೇರ್‌ ಅರಣ್ಯ ಭೂಮಿಯಲ್ಲಿ ಕಂಪನಿ ತನ್ನ ಸ್ವಂತ ಬಂಡವಾಳದಲ್ಲಿ ಅಕೇಶಿಯಾ, ನೀಲಗಿರಿ ಮರಗಳನ್ನು ಬೆಳೆಸಿ ಸಂರಕ್ಷಿಸಿದೆ. ಇದರಿಂದ ಪ್ರತಿ ವರ್ಷ 2 ಲಕ್ಷ ಟನ್‌ನಷ್ಟು ಮರದ ತಿರುಳು ಪಡೆಯುತ್ತಿದೆ. ಪ್ರತಿ ಟನ್‌ ಮರದ ತಿರುಳಿಗೆ 2,000 ರು. ತಗುಲುತ್ತಿದೆ. ಇದು ಕೈಗಾರಿಕೋದ್ಯಮಿಗಳಿಗೆ ಅನುಕೂಲಕರವಾಗಿದೆ. ಮಾರುಕಟ್ಟೆಯಲ್ಲಿ ಇದೇ ಮರದ ತಿರುಳಿಗೆ ಪ್ರತಿ ಟನ್‌ಗೆ 6,000 ರ. ಇದೆ. ಹೀಗಾಗಿ ಎಂಪಿಎಂನ್ನು ಹೊರಗುತ್ತಿಗೆ ನೀಡದೇ ಸರ್ಕಾರದ ಸ್ವಾಮ್ಯದಲ್ಲೇ ಉಳಿಯಬೇಕು ಎಂದು ಅರಣ್ಯ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂದು ಗೊತ್ತಾಗಿದೆ.

ಇನ್ನು ಡೆಲಾಯ್ಟ್‌ ಟಚ್‌ ತೋಮಾತ್ಸ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ ನೀಡಿರುವ ವರದಿಯಲ್ಲಿ ಕಾಗದ ಕಾರ್ಖಾನೆಯನ್ನು ಪ್ರತ್ಯೇಕವಾಗಿ ಗುತ್ತಿಗೆ ನೀಡಲು ಪ್ರಸ್ತಾಪಿಸಿತ್ತು. ಆರ್ಥಿಕ ಟೆಂಡರ್‌ ಪೂರ್ಣಗೊಳಿಸುವ ಮುನ್ನ ಕಾಗದ ಮತ್ತು ಸಕ್ಕರೆ ಮಮಿಲ್‌ಗಳನ್ನು ಪ್ರತ್ಯೇಕವಾಗಿ ಗುತ್ತಿಗೆ ನೀಡುವ ಕುರಿತು ಅಧ್ಯಯನ ನಡೆಸಬೇಕು ಎಂದು ವರದಿಯಲ್ಲಿ ಹೇಳಿತ್ತು. ಸಂಸ್ಥೆಯ ಪುನರುಜ್ಜೀವನಕ್ಕಾಗಿ ಗುತ್ತಿಗೆದಾರರನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ವಿಳಂಬವಾದಲ್ಲಿ 80 ಕೋಟಿಗಳಿಂದ 100 ಕೋಟಿಗಳವರೆಗೂ ಪ್ರತಿ ವರ್ಷ ಕ್ರೋಢಿಕೃತ ನಷ್ಟ ಏರುವುದರ ಜತೆಗೆ ಕಾರ್ಖಾನೆ ನಡೆಸಿಕೊಂಡು ಹೋಗುವುದು ಅಸಾಧ್ಯ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹಿಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಅಭಿಪ್ರಾಯ ನೀಡಿದ್ದರು ಎಂದು ತಿಳಿದು ಬಂದಿದೆ.

ಕಾರ್ಯಾಚರಣೆ ಮುಂದುವರೆಸಲು ಮತ್ತು ಉಪಕರಣಗಳ ದುರಸ್ತಿಗಾಗಿ ಬಂಡವಾಳ ಹೂಡಿಕೆ ಬೇಕಿದ್ದು, ಇದಕ್ಕಾಗಿ 100ರಿಂದ 150 ಕೋಟಿ ಅವಶ್ಯಕತೆ ಇದೆ. ಈ ಹೂಡಿಕೆಯಿಂದ ಕಂಪನಿ ಕಾರ್ಯಸಾಧ್ಯತೆ ಹೆಚ್ಚಳವಾಗಲಿದ್ದು, ಸರ್ಕಾರದ ಮೇಲೆ ವರ್ಷಕ್ಕೆ 100 ಕೋಟಿಗಳಷ್ಟು ಅನುದಾನ ಭಾರ ಕಡಿಮೆಯಾಗಲಿದೆ ಎಂದೂ ಅಭಿಪ್ರಾಯ ನೀಡಿದ್ದರು.

SUPPORT THE FILE

Latest News

Related Posts