ಮುನ್ನೆಲೆಗೆ ಬಂದ ಗೋ ಹತ್ಯೆ ನಿಷೇಧ ಮಸೂದೆ; ನಳೀನ್‌ ಕಟೀಲ್‌ ಸಲಹೆಗೆ ಮನ್ನಣೆ

ಬೆಂಗಳೂರು; ಮಧ್ಯಪ್ರದೇಶ ರಾಜ್ಯ ಸರ್ಕಾರವು ಗೋವು ಸಚಿವಾಲಯವನ್ನು ರಚಿಸಿದ ಬೆನ್ನಲ್ಲೇ ರಾಜ್ಯ ಬಿಜೆಪಿ ಸರ್ಕಾರವು ಗೋ ಹತ್ಯೆ ನಿಷೇಧ ಜಾರಿಗೊಳಿಸಲು ಸಮಿತಿ ರಚಿಸಿದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ಸರ್ಕಾರ, ಡಿಸೆಂಬರ್‌ನಲ್ಲಿ ನಡೆಯುವ ಅಧಿವೇಶನದಲ್ಲಿಯೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಮಸೂದೆ ಮಂಡಿಸಲು ಅಣಿಯಾಗುತ್ತಿದೆ.

ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಸಿ ಟಿ ರವಿ ಅವರ ಹೇಳಿಕೆ ಹೊರಬಿದ್ದ ಅತ್ಯಲ್ಪ ದಿನಗಳಲ್ಲೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವ ಸಂಬಂಧ ಮಸೂದೆ ಮಂಡಿಸಲಾಗುವುದು ಟ್ವೀಟ್‌ ಮಾಡಿದ್ದಾರೆ. ಸಿ ಟಿ ರವಿ ಮಾಡಿರುವ ಟ್ವೀಟ್‌ನ್ನೇ ರಾಜ್ಯ ಬಿಜೆಪಿ ಘಟಕವೂ ಮುಂದುವರೆಸಿದೆ.

‘ಗೋ ಹತ್ಯೆ ನಿಷೇಧಿಸಲು ಮಾನ್ಯ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬದ್ಧವಾಗಿದೆ. ರಾಜ್ಯಾಧ್ಯಕ್ಷ ನಳೀನ್‌ ಕಟೀಲ್‌ ಅವರು ಈಗಾಗಲೇ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇದರ ಬಗ್ಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಕೂಡ ಸಚಿವ ಪ್ರಭು ಚವ್ಹಾಣ್‌ ಅವರೊಂದಿಗೆ ಚರ್ಚಿಸಿದ್ದಾರೆ,’ ಎಂದು ರಾಜ್ಯ ಬಿಜೆಪಿ ಘಟಕವು ಟ್ವೀಟ್‌ ಮಾಡಿದೆ.

 

8 ವರ್ಷಗಳ ಹಿಂದೆಯೇ ಆಗಿನ ಬಿಜೆಪಿ ಸರ್ಕಾರವು ಗೋ ಹತ್ಯೆ ಮತ್ತು ರಕ್ಷಣಾ ಮಸೂದೆ 2012ನ್ನು ಜಾರಿಗೆ ತರಲು ಮುಂದಾಗಿತ್ತು. ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ಕೆಲವು ದಿನಗಳಲ್ಲಿ ಗುಜರಾತ್‌ ಮತ್ತು ಉತ್ತರ ಪ್ರದೇಶದಲ್ಲಿ ಜಾರಿಯಲ್ಲಿರುವ ಗೋ ಹತ್ಯೆ ಮತ್ತು ರಕ್ಷಣಾ ಮಸೂದೆ ಅನುಷ್ಠಾನ ಕುರಿತು ರಾಜ್ಯದಿಂದ ಅಧಿಕಾರಿಗಳ ತಂಡವನ್ನು ಕಳಿಸಿತ್ತು. ಅದನ್ನೇ ಮಾದರಿಯಾಗಿಟ್ಟುಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರವು ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸಿದೆ.

‘ಈ ಮಸೂದೆ ಒಂದು ಬಾರಿ ಕಾನೂನಾಗಿ ಜಾರಿಗೆ ಬಂದ ನಂತರ ಗೋವುಗಳನ್ನು ಕೊಲ್ಲಲು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಬೇರೆ ರಾಜ್ಯಗಳಿಗೆ ಹಸುಗಳನ್ನು ಸಾಗಾಟ ಮಾಡುವುದನ್ನು ಕೂಡ ತಡೆಯಲಾಗುತ್ತದೆ. ಕಾಮಧೇನುವಾದ ಗೋವುಗಳನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ರಾಜ್ಯದ ಅಲ್ಲಲ್ಲಿ ಗೋಶಾಲೆಗಳನ್ನು ಬಲವರ್ಧಿಸಲು ನಾವು ಆರಂಭಿಸಿದ್ದೇವೆ. ಸ್ಥಳೀಯ ತಳಿಗಳ ಹಸುಗಳನ್ನು ರಕ್ಷಿಸಲು ಗೋ ಸೇವಾ ಆಯೋಗವನ್ನು ಸ್ಥಾಪಿಸುವುದಾಗಿ ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಘೋಷಿಸಿತ್ತು,’ ಎಂದು ಪ್ರಭು ಚವ್ಹಾಣ್‌ ಹೇಳಿದ್ದನ್ನು ಸ್ಮರಿಸಬಹುದು.

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮತ್ತು ಗೋ ಸಂರಕ್ಷಣಾ ಕಾಯ್ದೆ-1964 ಜಾರಿಯಲ್ಲಿದೆ. ಅದರ ಪ್ರಕಾರ ಅಕ್ರಮವಾಗಿ ಗೋ ಹತ್ಯೆ ಮಾಡಿದರೆ 6 ತಿಂಗಳು ಜೈಲು ಹಾಗೂ 1 ಸಾವಿರ ರೂ. ದಂಡವಿದೆ. 12 ವರ್ಷದೊಳಗಿನ ಗೋವುಗಳ ಹತ್ಯೆ ನಿಷೇಧಿಸಲ್ಪಟ್ಟಿದೆ. ಪ್ರಾಯವಾದ, ನಿರುಪಯೋಗಿ ಜಾನುವಾರುಗಳನ್ನು ಕಸಾಯಿಖಾನೆಗೆ ತರಬಹುದು. ಆದರೆ ಅನುಮತಿ ಅಗತ್ಯವಿದೆ.

ಪ್ರಸ್ತುತ ಕಾಯಿದೆ ಬಿಗಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡಿರುವ ಬಿಜೆಪಿ ಸರ್ಕಾರವು ಈ ಕಾಯಿದೆಗೆ ತಿದ್ದುಪಡಿ ತರಲಿದೆ. ಹತ್ಯೆ ಹಾಗೂ ಕಳ್ಳಸಾಗಣೆ ಮಾಡುವವರಿಗೆ 7 ವರ್ಷ ಸಜೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲು ಉದ್ದೇಶಿಸಿದೆ. ಇದರಲ್ಲಿ ಗೋವಿನ ಜತೆಗೆ ಎತ್ತು, ಎಮ್ಮೆ, ಎಮ್ಮೆ ಕರುಗಳನ್ನೂ ಸೇರಿಸಲಾಗಿತ್ತು. ಆದರೆ ಈ ತಿದ್ದುಪಡಿ ಪ್ರಸ್ತಾವನೆ ರಾಜ್ಯಪಾಲರಿಂದ ರಾಷ್ಟ್ರಪತಿಗಳಿಗೆ ಹೋಗಿ ಅಲ್ಲಿ ಬಾಕಿ ಉಳಿದಿತ್ತು. ಪ್ರಸ್ತಾಪಿತ ಹೊಸ ಕಾಯಿದೆಯಲ್ಲಿ ಅಪರಾಧ ಜಾಮೀನು ರಹಿತ, ಶಿಕ್ಷೆ ಹೆಚ್ಚಳ ಮುಂತಾದ ಇನ್ನಷ್ಟು ಬಿಗಿಯಾದ ಕ್ರಮಗಳಿವೆ ಎಂದು ತಿಳಿದು ಬಂದಿದೆ.

ಬಿಜೆಪಿ ಸರ್ಕಾರವು 2009ರ ಫೆಬ್ರವರಿಯಲ್ಲಿ 1964ರ ಮೂಲ ಕಾಯಿದೆಗೆ ಕೆಲವು ತಿದ್ದುಪಡಿಗಳನ್ನು ತರಲು ಯತ್ನಿಸಿತ್ತು. ಖಾಸಗಿ ವ್ಯಕ್ತಿಗಳನ್ನು ಸಹ ಗೋ ಹತ್ಯಾ ನಿಷೇಧ ಕಾಯಿದೆಯನ್ನು ಜಾರಿಗೆ ತರಲು ಅಧಿಕೃತವಾಗಿ ನೇಮಿಸುವುದು ಮತ್ತು ಈ ಕಾಯಿದೆಯನ್ವಯ ಜಿಲ್ಲಾ ನ್ಯಾಯಾಲಯವು ಈ ವಿಷಯದಲ್ಲಿ ಅಂತಿಮ ಮೇಲ್ಮನವಿಯಾಗಿತ್ತು. ಇದು ಅತ್ಯಂತ ಅನಾಹುತಕಾರಿಯಯಾದ ತಿದ್ದುಪಡಿ ಎನ್ನಲಾಗಿದೆ.

2010ರ ಮಾರ್ಚ್ 4ರಂದು ಈ ತಿದ್ದುಪಡಿ ಮಸೂದೆಯನ್ನು ಹಿಂಪಡೆದಿದ್ದ ಬಿಜೆಪಿ ಸರ್ಕಾರವು ಕರ್ನಾಟಕ ಜಾನುವಾರು ಹತ್ಯಾ ನಿಷೇಧ ಮತ್ತು ಸಂರಕ್ಷಣಾ ಕಾಯಿದೆ-2010ನ್ನು ಉಭಯ ಸದನಗಳಲ್ಲಿ ಮಂಡಿಸಿತ್ತು. ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಮೇಲ್ಮನೆಯಲ್ಲಿ ಬಿಜೆಪಿಗೆ ಸಂಖ್ಯಾಬಲ ಇರದ ಕಾರಣ ಮಸೂದೆಯನ್ನು ಚರ್ಚೆಗೆ ತಂದಿರಲಿಲ್ಲ. ಆದರೆ ಸಂಖ್ಯಾಬಲ ದೊರೆಯುತ್ತಿದ್ದಂತೆ ಅಲ್ಲಿಯೂ ಮಂಜೂರಾತಿ ಪಡೆದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts