ಬೆಂಗಳೂರು; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಬಾಕಿ ಹಣ ನೀಡಲು ಕಮಿಷನ್ ವ್ಯವಹಾರ ಭರ್ಜರಿಯಾಗಿ ನಡೆದಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ.
ಗುತ್ತಿಗೆದಾರರೊಂದಿಗೆ ಹಣ ವಸೂಲಿಗಿಳಿದಿರುವ ಹಲವು ಪ್ರಕರಣಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಸಚಿವ ಈಶ್ವರಪ್ಪ ಅವರ ಪುತ್ರ ಮತ್ತು ವಿಶೇಷ ಕರ್ತವ್ಯಾಧಿಕಾರಿ ಗುರಿಯಾಗಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಲೆಕ್ಕ ಶೀರ್ಷಿಕೆ 3054 (ಲಮ್‌ಸಮ್) ಮತ್ತು 3054(ನಿರ್ವಹಣೆ)ಯಡಿಯಲ್ಲಿ 79 ಕೋಟಿ ರು. ಮಂಜೂರಾಗಿದೆ. ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಇದೇ ಲೆಕ್ಕಶೀರ್ಷಿಕೆಯಡಿಯಲ್ಲಿ ಬಾಕಿ ಹಣ ಪಾವತಿಸಬೇಕು. ಇದಕ್ಕೆ ಸಂಬಂಧಿಸಿದ ಕಡತಗಳನ್ನು ಸಚಿವರ ಆಪ್ತಕೂಟ ಪರಿಶೀಲಿಸುತ್ತಿದೆ ಎಂದು ಹೇಳಲಾಗುತ್ತಿದೆ. ಕಮಿಷನ್ ವ್ಯವಹಾರ ಕುದುರಿದ ನಂತರವಷ್ಟೇ ನೇರವಾಗಿ ಆರ್ಥಿಕ ಇಲಾಖೆಗೆ ಕಡತಗಳು ತಲುಪುತ್ತವೆ ಎಂಬ ಆರೋಪಗಳು ಗುತ್ತಿಗೆದಾರರ ವಲಯದಿಂದಲೇ ಕೇಳಿ ಬಂದಿವೆ.
‘ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಲು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಜೂರಾತಿ ನೀಡಿದರೂ ಹಣ ಬಿಡುಗಡೆಗೆ ಸಚಿವರ ಪುತ್ರ ಮತ್ತು ಅವರ ಆಪ್ತಕೂಟ ಹಸಿರು ನಿಶಾನೆ ತೋರಬೇಕು. ಇಲ್ಲದಿದ್ದರೆ ನಯಾ ಪೈಸೆಯೂ ಬಿಡುಗಡೆಯಾಗುವುದಿಲ್ಲ,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಗುತ್ತಿಗೆದಾರರೊಬ್ಬರು.
2018-19 ಮತ್ತು 2019-20ನೇ ಸಾಲಿನಲ್ಲಿ ಕೈಗೆತ್ತಿಕೊಂಡಿದ್ದ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರೀಗ ಸಚಿವ ಈಶ್ವರಪ್ಪ ಅವರ ಆಪ್ತಕೂಟ ಒಂದೊಂದು ಕಾಮಗಾರಿ ಬಿಲ್‌ಗೆ ಶೇ.5ರಿಂದ 10ರಷ್ಟು ಕಮಿಷನ್‌ಗಾಗಿ ಬೇಡಿಕೆ ಇರಿಸುತ್ತಿದ್ದಾರೆ ಎಂಬ ಆರೋಪಗಳಿವೆ.
ಇನ್ನು, ಲೆಕ್ಕ ಶೀರ್ಷಿಕೆ 3054ರಲ್ಲಿ ಇನ್ನೂ 265 ಕೋಟಿ ರು. ಬಾಕಿ ಇದೆ. ಈ ಹಣದ ಮೇಲೂ ಸಚಿವರ ಆಪ್ತಕೂಟದ ಕಣ್ಣು ಬಿದ್ದಿದೆ ಎಂದು ಹೇಳಲಾಗಿದೆಯಲ್ಲದೆ ಕಮಿಷನ್ ವ್ಯವಹಾರ ಕುದುರಿದ ನಂತರವಷ್ಟೇ ಬಾಕಿ ಇರುವ 265 ಕೋಟಿ ರು. ಬಿಡುಗಡೆ ಆಗಲಿದೆ. ಅಲ್ಲಿಯವರೆಗೂ ಆರ್ಥಿಕ ಇಲಾಖೆಗೆ ಕಡತ ರವಾನೆಯಾಗುವುದಿಲ್ಲ ಎಂದು ಕೆಲ ಮೂಲಗಳು ತಿಳಿಸಿವೆ.