ಬೆಂಗಳೂರು; ಮುಂಗಾರು, ಹಿಂಗಾರಿನಲ್ಲಿ ಎದುರಾಗುವ ಬರ ಮತ್ತು ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗಲೆಲ್ಲಾ ಪರಿಹಾರ ಧನ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳೆದ 11 ವರ್ಷಗಳಿಂದಲೂ ತಾರತಮ್ಯ ಎಸಗುತ್ತಿರುವುದು ಕಂಡು ಬಂದಿದೆ.
2008-09ರಿಂದ 2019-20 ಸಾಲಿನವರೆಗೂ (ಅಕ್ಟೋಬರ್ 15 ಅಂತ್ಯಕ್ಕೆ) ಒಟ್ಟು 11 ವರ್ಷಗಳಲ್ಲಿ 55,777.29 ಕೋಟಿ ರು.ಗಳನ್ನು (ಆಯಾ ವರ್ಷದ ತಿಂಗಳವಾರು ಲೆಕ್ಕದಲ್ಲಿ) ರಾಜ್ಯ ಸರ್ಕಾರ ಕೋರಿದ್ದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 11,495.55 ಕೋಟಿ ರು.ಗಳಷ್ಟೇ. ಕೋರಿಕೆ ಸಲ್ಲಿಸಿದ್ದ ಒಟ್ಟು ಮೊತ್ತದ ಪೈಕಿ 44,281.74 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.
2014ರಿಂದ 2020ರವರೆರಗೆ ಒಟ್ಟು 10,611 ಕೋಟಿ ರು.ಬಿಡುಗಡೆ ಮಾಡಿದೆ ಎಂದು ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರ ಧನದ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.
ಯುಪಿಎ ಮತ್ತು ಎನ್‌ಡಿಎ ಅಧಿಕಾರಾವಧಿಯಲ್ಲಿ ಪರಿಹಾರ ಮೊತ್ತ ಬಿಡುಗಡೆ ಸಂದರ್ಭದಲ್ಲಿ ರಾಜ್ಯ ಕೋರಿದ್ದಕ್ಕಿಂತಲೂ ಅತ್ಯಲ್ಪ ಪ್ರಮಾಣದಲ್ಲಿ ಬಿಡುಗಡೆ ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ 6 ವರ್ಷ (2008-2014) ಮತ್ತು ಬಿಜೆಪಿ ನೇತೃತ್ವದ 5 ವರ್ಷ (2014-19)ರಲ್ಲಿ ಬಿಡುಗಡೆ ಮಾಡಬೇಕಿದ್ದ ಒಟ್ಟು ಮೊತ್ತದಲ್ಲೇ ಅರ್ಧದಷ್ಟು ಬಾಕಿ ಉಳಿಸಿಕೊಂಡಿತ್ತು ಎಂಬುದು ಗೊತ್ತಾಗಿದೆ.
2008-09ರಿಂದ 2014ರವರೆಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಸಂಭವಿಸಿದ್ದ ಬರ ಮತ್ತು ಪ್ರವಾಹ ಸಂಬಂಧ ರಾಜ್ಯ ಸರ್ಕಾರ ಒಟ್ಟು 29,656.09 ಕೋಟಿ ರು. ಕೋರಿದ್ದರೆ, ಕೇವಲ 2,499.85 ಕೋಟಿ ರು.ಗಳನ್ನಷ್ಟೇ ಬಿಡುಗಡೆ ಮಾಡಿ 32,155.94 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.
ಅದೇ ರೀತಿ 2014-15ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಅವಧಿಯಲ್ಲಿ ಸಂಭವಿಸಿದ್ದ ಬರ ಮತ್ತು ಪ್ರವಾಹ ಸಂಬಂಧ ರಾಜ್ಯ ಸರ್ಕಾರ ಒಟ್ಟು 24,053.61 ಕೋಟಿ ರು.ಪರಿಹಾರ ಕೋರಿದ್ದರೆ, ಬಿಡುಗಡೆ ಆಗಿದ್ದು ಕೇವಲ 8,743.78 ಕೋಟಿ ರು.ಗಳಷ್ಟೇ. 15,309 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿತ್ತು.
2008-09ರ ಆಗಸ್ಟ್ ತಿಂಗಳಲ್ಲಿ ಎದುರಾಗಿದ್ದ ಪ್ರವಾಹ ಪರಿಹಾರವೆಂದು 516.72 ಕೋಟಿ ರು., ಮುಂಗಾರು ಬರವೆಂದು 2,019.50 ಕೋಟಿ ರು. ಸೇರಿ ಒಟ್ಟು 2,536.22 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಕೋರಿತ್ತು. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 79.19 ಕೋಟಿ ರು.ಗಳಷ್ಟೇ.
‘ರಾಷ್ಟ್ರೀಯ ಪಕ್ಷಗಳು ಸತತವಾಗಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ ಎನ್ನುವುದು ಚಾರಿತ್ರಿಕ ಸತ್ಯ. ರಾಜ್ಯದ ಆಯಾ ರಾಷ್ಟ್ರೀಯ ಪಕ್ಷಗಳ ಮುಖಂಡರುಗಳು ಸಹ ತಮ್ಮದೇ ಪಕ್ಷ ಕೇಂದ್ರದಲ್ಲಿದ್ದರೂ ನ್ಯಾಯಬದ್ಧವಾಗಿ ಕರ್ನಾಟಕಕ್ಕೆ ದಕ್ಕಬೇಕಾಗಿದ್ದ ಪಾಲನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಯಾಕೆಂದರೆ ಅವರಿಗಿರುವ ಗುಲಾಮಿ ಮನಸ್ಥಿತಿಯಿಂದಾಗಿ. ಕರ್ನಾಟಕದಲ್ಲಿ ಸ್ವಚ್ಛ ಮತ್ತು ಪ್ರಾಮಾಣಿಕ ನೆಲೆಯಲ್ಲಿ ಹುಟ್ಟುವ ಪ್ರಾದೇಶಿಕ ಪಕ್ಷಗಳು ಮಾತ್ರ ಕೇಂದ್ರದಿಂದಾಗುವ ಅನ್ಯಾಯವನ್ನು ನಿಲ್ಲಿಸಬಲ್ಲವು,’
ರವಿಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ
ಮತ್ತೊಂದು ಸಂಗತಿ ಎಂದರೆ ಮುಂಗಾರು ಬರದಿಂದಾಗಿರುವ ನಷ್ಟವನ್ನು ಸರಿದೂಗಿಸಲು ರಾಜ್ಯ ಸರ್ಕಾರ ಕೋರಿದ್ದ 2,019.50 ಕೋಟಿ ರು.ಗೆ ಬದಲಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 1.86 ಕೋಟಿ ರು.ಗಳಷ್ಟೆ. ಅದೇ ರೀತಿ 2009-10ರಿಂದ 2012ರಲ್ಲಿಯೂ ಹಣಕಾಸು ಸಚಿವರಾಗಿ ಮುಂದುವರೆದಿದ್ದ ಮನಮೋಹನ್ ಸಿಂಗ್, ಪ್ರಣಬ್ ಮುಖರ್ಜಿ ಮತ್ತು ಪಿ ಚಿದಂಬರಂ ಅವಧಿಯಲ್ಲಿಯೂ ರಾಜ್ಯಕ್ಕೆ ಕನಿಷ್ಟ ಮೊತ್ತ ಬಿಡುಗಡೆ ಆಗಿತ್ತು.
ಈ ಮೂವರ ಅವಧಿಯಲ್ಲಿ ಒಟ್ಟು 26,509.03 ಕೋಟಿ ರು.ನೆರವಿಗೆ ರಾಜ್ಯ ಸರ್ಕಾರ ಕೋರಿತ್ತು. ಆದರೆ ಬಿಡುಗಡೆ ಆಗಿದ್ದು ಕೇವಲ 1,946.94 ಕೋಟಿ ರು.ಗಳಷ್ಟೆ. 2010ರಲ್ಲಿ ಉಂಟಾಗಿದ್ದ ಪ್ರವಾಹದಿಂದ ಬಾಧಿತ ಪ್ರದೇಶಗಳನ್ನು ಪುನಶ್ಚೇತನಗೊಳಿಸಲು ರಾಜ್ಯ ಸರ್ಕಾರ 1,045.36 ಕೋಟಿ ರು.ಗಳನ್ನು ಕೇಳಿದ್ದರೆ, ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಬಿಡಿಗಾಸನ್ನೂ ನೀಡಿರಲಿಲ್ಲ ಎಂಬ ವಿಚಾರ ದಾಖಲೆಯಿಂದ ತಿಳಿದು ಬಂದಿದೆ.
ಪ್ರವಾಹ, ಬರ ಎದುರಾದಾಗಲೆಲ್ಲ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮುಂದೆ ಆಡಳಿತ ಪಕ್ಷವು ಪ್ರತಿಪಕ್ಷಗಳ ನಿಯೋಗವನ್ನು ನಿಲ್ಲಿಸಿ ಕೈಯೊಡ್ಡುತ್ತಲೇ ಇದೆ. ಆದರೆ ಯಾವ ಸರ್ಕಾರವೂ ಪಕ್ಷಾತೀತವಾಗಿ ಇರಲಿ, ಪರಿಸ್ಥಿತಿ ಗಂಭೀರತೆ ಅರಿತು ರಾಜ್ಯ ಸರ್ಕಾರದ ಬೇಡಿಕೆಗೆ ತಕ್ಕಂತೆ ಹಣ ಬಿಡುಗಡೆ ಮಾಡಿಲ್ಲ.
ಕೇಂದ್ರಕ್ಕೆ ಕರ್ನಾಟಕ ಸಾವಿರಾರು ಕೋಟಿ ರು.ಮೊತ್ತದಲ್ಲಿ ತೆರಿಗೆ ನೀಡುತ್ತಿದೆಯಾದರೂ ಪರಿಹಾರಕ್ಕಾಗಿ ಕೇಂದ್ರದ ಮುಂದೆ ಕೈಯೊಡ್ಡಿ ನಿಲ್ಲಬೇಕಾದ ಸ್ಥಿತಿ ಇದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೆ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯನ್ನೂ ನಡೆಸಿದ್ದನ್ನು ಸ್ಮರಿಸಬಹುದು.