12 ಕೋಟಿ ಲಂಚ; ಐಎಎಸ್‌ ಡಾ ಜಿ ಸಿ ಪ್ರಕಾಶ್‌ ವಿರುದ್ಧ ಎಸಿಬಿಗೆ ದೂರು ನೀಡಿದ ಕರ್ನಾಟಕ ರಾಷ್ಟ್ರಸಮಿತಿ

ಬೆಂಗಳೂರು; ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ವಿರುದ್ಧ ಕೇಳಿ ಬಂದಿರುವ ಲಂಚ ಪಡೆದಿರುವ ಆರೋಪ ಪ್ರಕರಣ ಇದೀಗ ಭ್ರಷ್ಟಾಚಾರ ನಿಗ್ರಹ ದಳದ ಮೆಟ್ಟಿಲೇರಿದೆ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ದಾಖಲೆಗಳ ಸಮೇತ ದೂರು ದಾಖಲಿಸಿರುವ ಕರ್ನಾಟಕ ರಾಷ್ಟ್ರಸಮಿತಿಯು ಬಿಡಿಎ ಆಯುಕ್ತರಾಗಿದ್ದ ಐಎಎಸ್‌ ಅಧಿಕಾರಿ ಡಾ ಜಿ ಸಿ ಪ್ರಕಾಶ್‌ ಅವರನ್ನೂ ಎಸಿಬಿ ಮತ್ತು ಜಾರಿ ನಿರ್ದೇಶನಾಲಯದ  ಕಟಕಟೆಯೇರಿಸಿದೆ.

ಗುತ್ತಿಗೆದಾರ ಕಂಪನಿ ರಾಮಲಿಂಗಂ ಕನ್ಸಟ್ರಕ್ಷನ್ಸ್‌ ಪ್ರೈವೈಟ್‌ ಲಿಮಿಟೆಡ್‌ನಿಂದ ಡಾ ಜಿ ಸಿ ಪ್ರಕಾಶ್‌ ಅವರು ಸುಮಾರು 12 ಕೋಟಿ ಲಂಚ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಕರ್ನಾಟಕ ರಾಷ್ಟ್ರಸಮಿತಿಯು ಇದೇ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ಕರ್ನಾಟಕ ಘಟಕದ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರೂ ಗುತ್ತಿಗೆದಾರ ಕಂಪನಿಯಿಂದ ಪ್ರತ್ಯೇಕವಾಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸಲು ಉದ್ದೇಶಿಸಿರುವ ಬೆಂಗಳೂರು ಪೂರ್ವ ತಾಲೂಕು, ಬಿದರಹಳ್ಳಿ ಹೋಬಳಿ, ಕೋನದಾಸಾಪುರ ಗ್ರಾಮದ ಸರ್ವೆ ಸಂಖ್ಯೆ 22 ಮತ್ತು 23 ರಲ್ಲಿ ವಸತಿ ಸಮುಚ್ಚಯದ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು,’ ಎಂದು ಕೆಆರ್‌ಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಎನ್‌ ದೀಪಕ್‌ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ದೂರಿನಲ್ಲೇನಿದೆ?

ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕೋನದಾಸನಪುರದ ಸರ್ವೆ ನಂಬರ್‌ 22, 23ರಲ್ಲಿ ವಸತಿ ಸಮುಚ್ಛಯ ಕಾಮಗಾರಿ ನಡೆಸಲು 586.00 ಕೋಟಿ ರು. ಮೊತ್ತಕ್ಕೆ 2017ರ ಆಗಸ್ಟ್‌ 31ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಡಳಿತಾತ್ಮಕ ಅನುಮೋದನೆ ಪಡೆದಿತ್ತು. ಅನುಮೋದನೆ ಪಡೆದಿದ್ದ ಮೊತ್ತದ ಪೈಕಿ ಅಂತಿಮವಾಗಿ 56700.00 ಲಕ್ಷ ರು.ಗಳನ್ನು ಟೆಂಡರ್ ಮೊತ್ತ ಎಂದು ನಮೂದಿಸಲಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಯೋಜನೆ ಕಾಮಗಾರಿ ಸಂಬಂಧ 2017ರ ಅಕ್ಟೋಬರ್‌ 11ರಂದು ಟೆಂಡರ್‌ ಕರೆಯಲಾಗಿತ್ತು. (ಟೆಂಡರ್‌ ಸಂಖ್ಯೆ; BDA/EE/HPD-1/TEN/T-186/2016-17) ಇದರಲ್ಲಿ ನಾಗಾರ್ಜುನ ಮತ್ತು ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್‌ ಕಂಪನಿ ಪ್ರೈ ಲಿಮಿಟೆಡ್‌ ಭಾಗವಹಿಸಿದ್ದವು. ನಾಗಾರ್ಜುನ ಕಂಪನಿಯು 691,74,00,00 ಲಕ್ಷ ರು.ಗಳಿಗೆ ರಾಮಲಿಂಗಂ ಕಂಪನಿಯು 675,00,00,000 ಲಕ್ಷ ರು.ಗಳನ್ನು ನಮೂದಿಸಿತ್ತು. ರಾಮಲಿಂಗಂ ಕಂಪನಿ ನಮೂದಿಸಿದ್ದ ದರವು 2016-17ನೇ ಸಾಲಿನ ದರಪಟ್ಟಿ ದರಗಳ ಪೈಕಿ ಶೇಕಡವಾರು 19.04ರಷ್ಟಿದ್ದರೆ ನಾಗಾರ್ಜುನ ಕಂಪನಿಯು ನಮೂದಿಸಿದ್ದ ದರದಲ್ಲಿ ಶೇ.22.03ರಷ್ಟು ಹೆಚ್ಚುವರಿಯಾಗಿತ್ತು ಎಂದು ಉಲ್ಲೇಖಿಸಿದೆ.

ದರ ಸಂಧಾನದ ನಂತರ ಬಿಡ್‌ ಮೊತ್ತ 66622.50 ಲಕ್ಷ ರು.ಗೆ 2016-17ನೇ ಸಾಲಿನ ದರಪಟ್ಟಿ ದರಗಳಿಗೆ ಶೇ.17.50 (ಹೆಚ್ಚುವರಿ) ನಮೂದಿಸಿದ್ದ ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್‌ ಕಂಪನಿಯ ಬಿಡ್‌ ಗೆ ಅನುಮೋದನೆ ಕೋರಿತ್ತು. ಕಾಮಗಾರಿಗೆ ಬೇಕಾಗಬಹುದಾದ ಆರ್ಥಿಕ ನೆರವನ್ನು ಅಗತ್ಯವಿದ್ದಲ್ಲಿ ಹಣಕಾಸು ಸಂಸ್ಥೆಗಳಿಂದ ಪಡೆದುಕೊಳ್ಳುವ ಅಧಿಕಾರವನ್ನು ಆಯುಕ್ತರಿಗೆ ಪ್ರತ್ಯಾಯೋಜಿಸಲು ಪ್ರಾಧಿಕಾರದ ಆಡಳಿತ ಮಂಡಳಿ ಅನುಮೋದನೆ ಕೋರಿತ್ತು ಎಂದು ಎಸಿಬಿ ಗಮನಕ್ಕೆ ತಂದಿದೆ.

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆದಾಯವಿಲ್ಲದೆ ಸೊರಗಿದ್ದರಿಂದ ಕೋನದಾಸನಪುರ ಯೋಜನೆಗೆ ಸಮ್ಮತಿ ವ್ಯಕ್ತಪಡಿಸದ ಹಿಂದಿನ ಆಯುಕ್ತರಾಗಿದ್ದ ರಾಕೇಶ್‌ ಸಿಂಗ್‌ ಅವರು 2019ರ ಮಾರ್ಚ್‌ 20ರಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು ಎಂದು ತಿಳಿದು ಬಂದಿದೆ. ಆದರೂ ಒಂದೇ ತಿಂಗಳ ಅಂತರದಲ್ಲಿ ಅಂದರೆ 2019ರ ಏಪ್ರಿಲ್‌ 22 ರಂದು ನಿರ್ಮಾಣ ಕಂಪನಿಗೆ ಪ್ರಾಧಿಕಾರ ಒಪ್ಪಿಗೆ ಪತ್ರ ನೀಡಿತ್ತು (Letter Of Acceptence) ಎಂಬ ವಿವರಗಳನ್ನು ದೂರಿನಲ್ಲಿ ಒದಗಿಸಿದೆ.

ಇದಾದ ನಂತರ 33 ಕೋಟಿ ರು. ಭದ್ರತಾ ಠೇವಣಿ ಮೊತ್ತ ಪಾವತಿಸಲು ಪ್ರಾಧಿಕಾರ ನಿರ್ಮಾಣ ಕಂಪನಿಗೆ ಆದೇಶಿಸಿತ್ತು. ಅಂತಿಮವಾಗಿ ನಿರ್ಮಾಣ ಕಂಪನಿಗೆ ಕಾರ್ಯಾದೇಶ ನೀಡಲಾಗಿತ್ತು ಎಂಬುದು ತಿಳಿದು ಬಂದಿದೆ. ಕಡಿಮೆ ದರ ನಮೂದಿಸಿದ್ದ ಈ ಕಂಪನಿ ಮತ್ತು ಬಿಡಿಎ ಮಧ್ಯೆ 2019ರ ಜೂನ್‌ 24ರಂದು ಒಪ್ಪಂದವಾಗಿದ್ದು, ಕಾರ್ಯಾದೇಶವನ್ನೂ ನೀಡಲಾಗಿದೆ. ಇದರ ಪ್ರಕಾರ 30 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕಿದೆ.

ಮೈತ್ರಿ ಸರ್ಕಾರ ಬದಲಾದ ನಂತರ ಬಿಡಿಎಗೆ ಆಯುಕ್ತರಾಗಿ ನೇಮಕವಾಗಿದ್ದ ಡಾ ಜಿ ಸಿ ಪ್ರಕಾಶ್‌ ಅವರು ಲಂಚಕ್ಕಾಗಿ (ಹಣ) ಬೇಡಿಕೆ ಇರಿಸಿದ್ದರು ಎಂದು ಆರೋಪಿಸಿರುವ ಕರ್ನಾಟಕ ರಾಷ್ಟ್ರಸಮಿತಿಯು, ಆಯುಕ್ತರಾಗಿದ್ದ ಡಾ ಜಿ ಸಿ ಪ್ರಕಾಶ್‌ ಅವರು ಸುಮಾರು 12 ಕೋಟಿ ಹಣ ಪಡೆದಿದ್ದಾರೆ. ಇದಾದ ನಂತರವೂ ವಿಜಯೇಂದ್ರ ಅವರು ಪ್ರತ್ಯೇಕವಾಗಿ ಹಣಕ್ಕಾಗಿ ಬೇಡಿಕೆ ಇರಿಸಿದ್ದಾರೆ ಎಂದೂ ದೂರಿದ್ದಾರೆ.

ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್‌ ಕಂಪನಿಯ ಪ್ರತಿನಿಧಿಯೊಬ್ಬರು ಮತ್ತು ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ ಮರಡಿ ಅವರ ನಡುವೆ ಲಂಚದ ಹಣ ತಲುಪಿಸುವ ಭಾಗವಾಗಿ 2019ರ ಅಕ್ಟೋಬರ್‌ 24ರಿಂದ 2020ರ ಆಗಸ್ಟ್‌ 17ರ ನಡುವೆ ವಾಟ್ಸಾಪ್‌ ಮೂಲಕ ಸಂವಹನ ನಡೆದಿರುವುದು ಇದಕ್ಕೆ ಬಲವಾದ ಆಧಾರ ಒದಗಿಸಿದೆ ಎಂದು ಪ್ರಸ್ತಾಪಿಸಿರುವ ಕರ್ನಾಟಕ ರಾಷ್ಟ್ರಸಮಿತಿಯು ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರು ಸರ್ಕಾರಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿ ಭ್ರಷ್ಟಾಚಾರ ನಡೆಸಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ವಿವರಿಸಿದೆ.

‘ಒಟ್ಟಾರೆ ಹಲವು ಸಂದರ್ಭಗಳಲ್ಲಿ ಹಣ ತಲುಪಿಸುವ ಬಗ್ಗೆ, ಯಾರಿಗೆ ಎಲ್ಲಿ ತಲುಪಿಸಬೇಕು ಎಂದು ಸಂದೇಶ ವಿನಿಮಯ ಮಾಡಲಾಗಿದೆ. ಈ ಕಾಮಗಾರಿಗೆ ಸಂಬಂಧಿಸಿದಂತೆ 13.90 ಕೋಟಿ ಹಣದ ವರ್ಗಾವಣೆ ಬಗ್ಗೆ ಮಾತುಕತೆ ನಡೆದಿರುವುದು ಕಂಡು ಬಂದಿದೆ,’ ಎಂದು ಆರೋಪಿಸಿರುವುದು ದೂರಿನಿಂದ ತಿಳಿದು ಬಂದಿದೆ.

ಜಗದಾಂಬ ಕಾಸ್ಮೋಸೇಲ್ಸ್‌ ಪ್ರೈ ಲಿ.,ಗೆ 1 ಕೋಟಿ, ರಾಜರಾನಾ ಸೇಲ್ಸ್‌ ಪ್ರೈ ಲಿ.,ಗೆ 44 ಲಕ್ಷ, ಶಾಖಾಂಬರಿ ಮರ್ಚಂಟ್ಸ್‌ ಪ್ರೈ ಲಿ. ಗೆ 97.50 ಲಕ್ಷ, ನವೈಕ್‌ ಕ್ರಿಯೇಷನ್ಸ್‌ ಪ್ರೈ ಲಿ. ಗೆ 35 ಲಕ್ಷ, ಗಣನಾಯಕ್‌ ಕಮಾಡಿಟೀಸ್‌ ಟ್ರೇಡ್‌ ಪೈ ಲಿ. ಗೆ 1 ಕೋಟಿ, ಸ್ಟ್ರಾಟಜಿಕ್‌ ವಿನ್ಕಾಂ ಪ್ರೈ ಲಿ ಗೆ 79.86 ಲಕ್ಷ, ರೇಮ್ಯಾಕ್‌ ಡಿಸ್ಟ್ರಿಬ್ಯೂಟರ್ಸ್‌ ಪ್ರೈ ಲಿ ಗೆ 46.21 ಲಕ್ಷ ರು. ಸೇರಿದಂತೆ ಒಟ್ಟು 5. ಕೋಟಿ ಹಣ ವರ್ಗಾವಣೆ ಆಗಿದೆ ಎಂದು ದಾಖಲೆಗಳ ಸಮೇತ ವಿವರವನ್ನು ಒದಗಿಸಿದೆ.

the fil favicon

SUPPORT THE FILE

Latest News

Related Posts