ವಿಶೇಷ ಲೆಕ್ಕಪರಿಶೋಧನೆ ಜಟಾಪಟಿ; ಸಿಎಜಿಗೆ ಬರೆದಿದ್ದ ಪತ್ರ ಹಿಂಪಡೆಯಲು ಪಿಎಸಿ ನಿರ್ದೇಶನ

ಬೆಂಗಳೂರು; ಕೋವಿಡ್‌-19ರ ನಿರ್ವಹಣೆಗಾಗಿ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ವಿಶೇಷ ಲೆಕ್ಕಪರಿಶೋಧನೆ ನಡೆಸುವ ಅಗತ್ಯವಿಲ್ಲ ಎಂದು ಸಿಎಜಿಗೆ ಬರೆದಿರುವ ಪತ್ರವನ್ನು ಹಿಂಪಡೆಯಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ಆರೋಗ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಮುಚ್ಚಿದ ಲಕೋಟೆಯಲ್ಲಿ ಪತ್ರ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಪತ್ರ ಬರೆಯದೇ ನೇರವಾಗಿ ಸಿಎಜಿಗೆ ಪತ್ರ ಬರೆದಿದ್ದ ಜಾವೇದ್‌ ಅಖ್ತರ್‌ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆಯಲ್ಲದೆ ವಿಶೇಷ ಲೆಕ್ಕಪರಿಶೋಧನೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದೂ ಪತ್ರದಲ್ಲಿ ತಾಕೀತು ಮಾಡಿದ್ದಾರೆ ಎಂದು ಗೊತ್ತಾಗಿದೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಉತ್ತರಿಸಬೇಕಿದ್ದ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರು ನೇರವಾಗಿ ಪ್ರಧಾನ ಮಹಾಲೇಖಪಾಲರಿಗೆ 2020ರ ಆಗಸ್ಟ್‌ 27ರಂದು ಪತ್ರ ಬರೆದು ಸಮಿತಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಅವರು 2020ರ ಆಗಸ್ಟ್‌ 12ರಂದು ಬರೆದಿದ್ದ ಪತ್ರವನ್ನು ಉಲ್ಲೇಖಿಸಿ ನೇರವಾಗಿ ಸಿಎಜಿಗೆ ಉತ್ತರ ಬರೆದಿರುವ ಜಾವೇದ್‌ ಅಖ್ತರ್‌ ಅವರು ಸಂಘರ್ಷದ ಕಿಡಿ ಹೊತ್ತಿಸಿದ್ದರು. ಈ ಕುರಿತು ‘ದಿ ಫೈಲ್‌’ 2020ರ ಸೆಪ್ಟಂಬರ್‌ 8ರಂದು ವಿಶೇಷ ವರದಿ ಪ್ರಕಟಿಸಿತ್ತು.

ವಿಶೇಷ ಲೆಕ್ಕಪರಿಶೋಧನೆಗೆ ನಕಾರ; ಪಿಎಸಿಯೊಂದಿಗೆ ಸಂಘರ್ಷಕ್ಕಿಳಿದ ಆರೋಗ್ಯ ಇಲಾಖೆ

ವೈದ್ಯಕೀಯ ಸಲಕರಣೆಗಳನ್ನು ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಖರೀದಿಸಿದೆ ಎಂಬ ಸಾಲುಸಾಲು ಆರೋಪಗಳ ಕುರಿತು ವಿಶೇಷ ಲೆಕ್ಕಪರಿಶೋಧನೆ ನಡೆಸಲು ಭಾರತದ ಪ್ರಧಾನ ಮಹಾಲೇಖಪಾಲರು (ಸಿಎಜಿ) ತಗಾದೆ ಎತ್ತಿರುವ ಬೆನ್ನಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೂ ಇದೀಗ ವಿಶೇಷ ಲೆಕ್ಕಪರಿಶೋಧನೆಗೆ ನಕಾರ ವ್ಯಕ್ತಪಡಿಸಿದ್ದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿತ್ತು.

ವಿಶೇಷ ಲೆಕ್ಕಪರಿಶೋಧನೆ ನಡೆಸುವ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿದ್ದ ಸೂಚನೆಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಾಲಿಸದ ಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ ಈ ಸಂಬಂಧ ಪತ್ರ ಬರೆದಿತ್ತು.

ಸಿಎಜಿಗೆ ಬರೆದಿರುವ ಪತ್ರದಲ್ಲೇನಿತ್ತು?

‘ಕೋವಿಡ್‌-19ರ ನಿರ್ವಹಣೆಗಾಗಿ ವಿವಿಧ ಸಂಸ್ಥೆಗಳ ಮೂಲಕ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಯು ಪಾರದರ್ಶಕವಾಗಿದೆ. ಹೀಗಾಗಿ ವಿಶೇಷ ಲೆಕ್ಕಪರಿಶೋಧನೆ ನಡೆಸಲು ಇಲಾಖೆ ಬಳಿ ಯಾವ ಸಮರ್ಥನೆಗಳೂ ಇಲ್ಲ ಮತ್ತು ಅದರ ಅಗತ್ಯವೂ ಇಲ್ಲ. ಇಲಾಖೆ ನೇರವಾಗಿ ಪ್ರಧಾನ ಮಹಾಲೇಖಪಾಲರಿಗೆ ದಾಖಲಾತಿ ಮತ್ತು ಮಾಹಿತಿಗಳನ್ನು ಒದಗಿಸಲಾಗುವುದು. ಹೀಗಾಗಿ ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಯಾವ ಸಮರ್ಥನೆ ಮತ್ತು ಕಾರಣಗಳೂ ಇಲ್ಲ,’ ಎಂದು ಜಾವೇದ್‌ ಅಖ್ತರ್‌ ಅವರು ಪತ್ರದಲ್ಲಿ ತಿಳಿಸಿದ್ದರು.

ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಗಳನ್ನೂ ವಾರ್ಷಿಕ ಕಾರ್ಯನಿರ್ವಹಣೆ ಲೆಕ್ಕ ಪರಿಶೋಧನೆಯೊಳಗೆ ತರಲು ನಿರ್ಧರಿಸಿರುವ ಸಿಎಜಿಯು ವಿಶೇಷ ಲೆಕ್ಕ ಪರಿಶೋಧನೆ ನಡೆಸುವುದಿಲ್ಲ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ರವಾನಿಸಿದ್ದ ಪರೋಕ್ಷ ಸಂದೇಶ ತೀವ್ರ ಆಕ್ಷೇಪಕ್ಕೊಳಗಾಗಿತ್ತು.

ವಿಶೇ‍ಷ ಲೆಕ್ಕ ಪರಿಶೋಧನೆ ನಡೆಸುವ ಸಂಬಂಧ ನಡೆದಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಭಾಗವಹಿಸಿದ್ದರು. ಅದೇ ಸಂದರ್ಭದಲ್ಲೇ ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಸಿಎಜಿಗೆ ಸೂಚಿಸಿ ಪತ್ರ ಬರೆಯಲು ಸಮಿತಿ ಸೂಚಿಸಿತ್ತು. ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪತ್ರವನ್ನು ಬರೆಯಲಿಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯೇ ನೇರವಾಗಿ ಸಿಎಜಿಗೆ 2020ರ ಆಗಸ್ಟ್‌ 5ರಂದು ಪತ್ರ ಬರೆದಿದ್ದನ್ನು ಸ್ಮರಿಸಬಹುದು.

ಈ ಪತ್ರಕ್ಕೆ 2020ರ ಆಗಸ್ಟ್‌ 18ರಂದು ಉತ್ತರಿಸಿದ್ದ ಪ್ರಧಾನ ಲೇಖಪಾಲರಾದ ಇ ಪಿ ನಿವೇದಿತ ಅವರು ‘ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಖರೀದಿ ಕುರಿತು 2020-21ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನೆ ನಡೆಸಲಿದೆ. 2019-20ನೇ ಸಾಲಿಗೆ ಸಂಬಂಧಿಸಿದಂತೆ ನಡೆಸುವ ವಾರ್ಷಿಕ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆಯೊಳಗೆ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಗಳ ಲೆಕ್ಕ ಪರಿಶೋಧನೆ ನಡೆಸಲಾಗುವುದು. ಅಲ್ಲದೆ ಒಂದು ತಿಂಗಳ ಕಾಲಮಿತಿಯೊಳಗೆ ಲೆಕ್ಕ ಪರಿಶೋಧನೆ ನಡೆಸುವುದು ಸಾಧ್ಯವಿಲ್ಲ,’ ಎಂದೂ ಹೇಳಿದ್ದರು.

ವೈದ್ಯಕೀಯ ಪರಿಕರಗಳ ಖರೀದಿ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿದ್ದ ಒಟ್ಟು 30 ಪ್ರಶ್ನಾವಳಿಗಳಿಗೂ ಉತ್ತರಿಸಿಲ್ಲ ಎಂದು ತಿಳಿದು ಬಂದಿದೆ.

ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಯಾವುದೇ ರೀತಿಯಲ್ಲೂ ಅಕ್ರಮಗಳಾಗಿಲ್ಲ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ಸಮರ್ಥಿಸಿಕೊಂಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts