ಅಂಬೇಡ್ಕರ್‌ ಸಹಾಯ ಹಸ್ತ ಯೋಜನೆ ಹಣ ಖರ್ಚು ಮಾಡದೇ ನಿರ್ಬಂಧ; ಬೆಳಗಲಿಲ್ಲ ‘ಆಶಾದೀಪ’

ಬೆಂಗಳೂರು; ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕಾರ್ಮಿಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಒದಗಿಸುವ ‘ಆಶಾದೀಪ’ ಯೋಜನೆ ಸೇರಿದಂತೆ ಕಾರ್ಮಿಕ ಶ್ರೇಯೋಭಿವೃದ್ಧಿಗಾಗಿ ರೂಪಿತವಾಗಿದ್ದ ಯೋಜನೆಗಳು ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲೇ ಪರಿಣಾಮಕಾರಿಯಾಗಿ ಅನುಷ್ಠಾನವಾಗಿರಲಿಲ್ಲ ಎಂಬ ಸಂಗತಿಯನ್ನು ಸಿಎಜಿ ವರದಿ ಹೊರಗೆಡವಿದೆ.

ಅಷ್ಟೇ ಅಲ್ಲದೆ ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿಯಲ್ಲಿ ಹಂಚಿಕೆಯಾಗಿದ್ದ 24.44 ಕೋಟಿ ರು.ಗಳನ್ನು ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿಟ್ಟಿದ್ದ ಅಧಿಕಾರಿಗಳು ಯೋಜನೆಯ ಹಣವನ್ನು ನಿರ್ಬಂಧಿಸಿದ್ದರು ಎಂಬ ಮಾಹಿತಿಯನ್ನೂ ಸಿಎಜಿ ಬಯಲು ಮಾಡಿದೆ.

ಮಾರ್ಚ್‌ 2019ಕ್ಕೆ ಅಂತ್ಯದ ಹಣಕಾಸಿನ ವ್ಯವಹಾರಗಳ ಲೆಕ್ಕ ಪರಿಶೋಧನೆ ಕುರಿತು ವಿಧಾನಸಭೆಯಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಹಲವು ಯೋಜನೆಗಳು ಹೇಗೆ ಮುಗ್ಗುರಿಸಿದ್ದವು ಮತ್ತು ಯೋಜನೆಗೆ ಬಿಡುಗಡೆಯಾಗಿದ್ದ ಕೋಟ್ಯಂತರ ರುಪಾಯಿಗಳು ಖರ್ಚಾಗದೇ ಹೇಗೆ ನಿರ್ಬಂಧಿಸಲಾಗಿತ್ತು ಎಂಬುದನ್ನೂ ಬಹಿರಂಗಗೊಳಿಸಿದೆ.

ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆ (ಆಶಾದೀಪ) ಸೊಸೈಟಿಯ ಮೂಲಕ 2017-18 ಮತ್ತು 2018-19ರ ಅವಧಿಯಲ್ಲಿ ಸೊಸೈಟಿಗೆ 43.25 ಕೋಟಿಗಳನ್ನು ಬಿಡುಗಡೆ ಮಾಡಿತ್ತು. ಕೇವಲ 0.10 ಕೋಟಿ ಮಾತ್ರ ಖರ್ಚಾಗಿತ್ತು ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.
ಖಾಸಗಿ ಉದ್ಯಮಗಳಲ್ಲಿ ಎಸ್ಸಿ, ಎಸ್ಟಿಗೆ ಸೇರಿದ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ 2017-18ರ ರಾಜ್ಯ ಆಯವ್ಯಯದಲ್ಲಿ ಆಶಾದೀಪ ಯೋಜನೆಯನ್ನು ಘೋಷಿಸಲಾಗಿತ್ತು. ಈ ಯೋಜನೆಯಡಿಯಲ್ಲಿ ಹೊಸದಾಗಿ ಉದ್ಯೋಗ ಪಡೆದ ಎಸ್‌ ಸಿ ಮತ್ತು ಎಸ್‌ ಟಿ ಉದ್ಯೋಗಿಗಳ ಇಎಸ್‌ಐ (ಶೇ.4.75) ಮತ್ತು ಭವಿಷ್ಯ ನಿಧಿ(ಶೇ.12) ಪಾಲನ್ನು ಸರ್ಕಾರ ಭರಿಸಬೇಕಿತ್ತು.

‘ಅಹಿಂದ ಸಮುದಾಯದ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು, ಅದಕ್ಕಾಗಿ ಪ್ರಚಾರ ತೆಗೆದುಕೊಂಡರೇ ಹೊರತು ಯೋಜನೆಗಳಿಗಾಗಿ ಮೀಸಲಿಟ್ಟಿದ್ದ ಮತ್ತು ಹಂಚಿಕೆಯಾಗಿದ್ದ ಕೋಟ್ಯಂತರ ಹಣವನ್ನು ಖರ್ಚೇ ಮಾಡುವ ಮನಸ್ಥಿತಿ ಇರಲಿಲ್ಲ. ಸಿದ್ದರಾಮಯ್ಯ ಮತ್ತು ಅವರ ಸಹಚರರು ಎಷ್ಟು ಹಿಪೋಕ್ರೇಟ್ಸ್‌ ಗಳಾಗಿದ್ದರು ಎಂಬುದು ಸಿಎಜಿ ವರದಿಯಿಂದ ಅರ್ಥವಾಗುತ್ತೆ.

ಸಿ ಎಸ್‌ ದ್ವಾರಕನಾಥ್‌, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು.

ಅದೇ ರೀತಿ ಉದ್ಯೋಗಿಗಳ ವರ್ಗವಾರು ದತ್ತಾಂಶ ಲಭ್ಯವಿಲ್ಲವೆಂದು ಪ್ರಧಾನಮಂತ್ರಿ ರೋಜ್‌ಗಾರ್‌ ಪ್ರೋತ್ಸಾಹನ್‌ ಯೋಜನೆ ಮತ್ತು ಖಾಸಗಿ ಉದ್ಯಮಗಳಲ್ಲಿ ಈ ಯೋಜನೆ ಅನುಷ್ಠಾನಗೊಂಡಿರಲಿಲ್ಲ. 2017-18ರಲ್ಲಿ ಬಿಡುಗಡೆಯಾಗದ್ದ 40 ಕೋಟಿ ರು.ಲಭ್ಯವಿದ್ದರೂ 2018-19ರಲ್ಲಿ 4.33 ಕೋಟಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ 3.25 ಕೋಟಿ ರು.ಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಜತೆಗೆ 1.87 ಕೋಟಿ ಬಡ್ಡಿ ಜತೆಗೆ ಸಂಪೂರ್ಣ ಮೊತ್ತವನ್ನು ಸೊಸೈಟಿಯ ಉಳಿತಾಯ ಖಾತೆಯಲ್ಲಿಡಲಾಗಿತ್ತು ಎಂಬುದನ್ನು ಸಿಎಜಿ ವರದಿ ಹೊರಗೆಡವಿದೆ.

‘ಯೋಜನೆಯನ್ನು ಜನಪ್ರಿಯಗೊಳಿಸಲು ಎಷ್ಟೇ ಪ್ರಯತ್ನಿಸಿದರೂ ಅನುಷ್ಠಾನಗೊಳಿಸಲಾಗಲಿಲ್ಲ,’ ಎಂದು ಸಿಎಜಿ ಅಧಿಕಾರಿಗಳಿಗೆ ಸರ್ಕಾರ ಉತ್ತರಿಸಿತ್ತು. ಎಸ್‌ ಸಿ ಮತ್ತು ಎಸ್‌ ಟಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗದಾತರಿಗೆ ಪ್ರತಿ ಅಭ್ಯರ್ಥಿಗೆ ಪ್ರತಿ ತಿಂಗಳಿಗೆ 3,000 ರು.ನಂತೆ ಶಿಷ್ಯ ವೇತನ ಮತ್ತು ಸಂಬಳ ಮರು ಪಾವತಿ ಮಾಡುವುದನ್ನು ಒಳಗೊಂಡ ಪರಿಷ್ಕೃತ ಯೋಜನೆಗೆ ಪ್ರಸ್ತಾವನೆಯನ್ನು ಸೊಸೈಟಿಯು ಸಲ್ಲಿಸಲು ಕ್ರಮ ಕೈಗೊಂಡಿದೆ ಎಂದು ತಿಳಿಸಿತ್ತು.
ಸ್ಮಾರ್ಟ್‌ ಕಾರ್ಡ್‌ಗಳನ್ನು ಒದಗಿಸುವ ಮೂಲಕ ಅಪಘಾತ ಪರಿಹಾರ ಯೋಜನೆಯಡಿ ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡುವ ಉದ್ದೇಶದಿಂದ 2017-18ರಲ್ಲಿ ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆ ಅನುಷ್ಠಾನಗೊಂಡಿತ್ತು. 2017-18 ಮತ್ತು 2018-19ರಲ್ಲಿ 37.78 ಕೋಟಿ ಒಟ್ಟು ಆಯವ್ಯಯ ಹಂಚಿಕೆಗೆ ಪ್ರತಿಯಾಗಿ 30.83 ಕೋಟಿ ರು.ಗಳನ್ನು ಬಿಡುಗಡೆ ಮಾಡಿತ್ತು. ಅಲ್ಲದೆ ಸ್ಮಾರ್ಟ್‌ ಕಾರ್ಡ್‌ಗಳನ್ನು ಮುದ್ರಿಸಲು ಹಾಗೂ ಕಾರ್ಮಿಕ ಸೇವಾ ಕೇಂದ್ರಗಳನ್ನು ತೆರೆಯಲು 6.39 ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿತ್ತು. ಉಳಿದ 24.44 ಕೋಟಿಗಳನ್ನು ಮಂಡಳಿಯ ಬ್ಯಾಂಕ್‌ ಉಳಿತಾಯ ಖಾತೆಯಲ್ಲಿ ಇಟ್ಟಿದ್ದರಿಂದಾಗಿ ಸರ್ಕಾರದ ಹಣವನ್ನು ನಿರ್ಬಂಧಿಸಿದಂತಾಗಿತ್ತು,’ ಎಂದು ಸಿಎಜಿ ವರದಿ ವಿವರಿಸಿದೆ.

ಸರ್ವರಿಗೂ ಕೌಶಲ್ಯಕ್ಕಾಗಿ ಹೆಸರಿನಲ್ಲಿ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಯೋಜನೆ ಮಾದರಿಯಲ್ಲಿ 2015-16ರಲ್ಲಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಕೇಂದ್ರಕ್ಕೆ ಬಿಡುಗಡೆ ಮಾಡಿದ್ದ 10 ಕೋಟಿ ರು.ಗಳನ್ನು ಖರ್ಚೇ ಮಾಡಿಲ್ಲ. ಈ ಹಣವನ್ನು 2 ವರ್ಷಗಳ ಕಾಲ ಉಳಿತಾಯ ಖಾತೆಯಲ್ಲಿಡಲಾಗಿತ್ತು.

ಮೈಸೂರಿನಲ್ಲಿಯೂ ಕಾರ್ಮಿಕ ಭವನ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಿದ್ದ 10 ಕೋಟಿಯನ್ನೂ ಬಳಕೆ ಮಾಡಿಕೊಂಡಿರಲಿಲ್ಲ. ಟೆಂಡರ್‌ನ್ನು ಅಂತಿಮಗೊಳಿಸದ ಕಾರಣ ಕಾರ್ಮಿಕ ಭವನದ ನಿರ್ಮಾಣ ಕಾಮಗಾರಿ ಆಗಸ್ಟ್‌ 22,2019ರವರೆಗೂ ಆರಂಭವಾಗಿರಲಿಲ್ಲ. ಹೀಗಾಗಿ 10 ಕೋಟಿ ರು. ಬಳಕೆಯಾಗದೇ ಉಳಿದಿತ್ತು ಎಂಬ ಮಾಹಿತಿ ಸಿಎಜಿ ವರದಿಯಿಂದ ತಿಳಿದು ಬಂದಿದೆ.

ಅದೇ ರೀತಿ 2015-16ರಿಂದ 2018-19ರ ಅವಧಿಯಲ್ಲಿ ಸಂಚಿತ ನಿಧಿಗೆ ವೆಚ್ಚವೆಂದು ತೋರಿಸಿದ್ದ 87.50 ಕೋಟಿಗಳನ್ನು ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯ ನಿಯಂತ್ರಣದಲ್ಲಿರುವ ಅನುಷ್ಠಾನ ಏಜೆನ್ಸಿಗಳ ಉಳಿತಾಯ ಬ್ಯಾಂಕ್‌ ಖಾತೆಗಳಲ್ಲಿಡಲಾಗಿತ್ತು.

SUPPORT THE FILE

Latest News

Related Posts