ತರಕಾರಿ ಬೆಳೆಗಾರರಿಗೆ ಇನ್ನೂ ತಲುಪಿಲ್ಲ ಪರಿಹಾರ; 64.87 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು; ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ ಪ್ರಚಾರ ಗಿಟ್ಟಿಸಿ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಖರ್ಚು ಮಾಡದ ಬಿಜೆಪಿ ಸರ್ಕಾರ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿಯೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ಧನವನ್ನು ಆಗಸ್ಟ್‌ ಕಳೆದರೂ ವಿತರಿಸಿಲ್ಲ.

ರೈತರ ಖಾತೆಗಳಿಗೆ ಲಾಕ್‌ಡೌನ್‌ ವಿಶೇಷ ಪ್ಯಾಕೇಜ್‌ ಪರಿಹಾರ ಹಣ ಜಮಾ ಆಗಲಿದೆ ಎಂದು ಸಚಿವ ನಾರಾಯಣಗೌಡ ಅವರು ಘೋಷಿಸಿ 3 ತಿಂಗಳಾದರೂ ಬೆಳೆಗಾರರ ಖಾತೆಗೆ ಪೂರ್ಣ ಪ್ರಮಾಣದಲ್ಲಿ ಹಣ ಜಮಾ ಆಗಿಲ್ಲ.

2020-21ನೇ ಸಾಲಿನ ಜುಲೈ ಅಂತ್ಯದವರೆಗೆ ತೋಟಗಾರಿಕೆ ಇಲಾಖೆ 2020ರ ಆಗಸ್ಟ್‌ 20ರಂದು ನಡೆಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಬಂಡವಾಳವೂ ಹೊರಬಿದ್ದಿದೆ.

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪರಿಹಾರ ಧನ ವಿತರಿಸಲು ಬಿಡುಗಡೆಯಾಗಿರುವ 107 ಕೋಟಿ ರು. ಪೈಕಿ ಈವರೆವಿಗೂ ಕೇವಲ 47.13 ಕೋಟಿ ಮಾತ್ರ ವೆಚ್ಚ ಮಾಡಿರುವ ಇಲಾಖೆ ಇನ್ನೂ 64.87 ಕೋಟಿ ಬಾಕಿ ಉಳಿಸಿಕೊಂಡಿರುವುದು ಪರಿಶೀಲನಾ ಸಭೆಯ ನಡವಳಿಯಿಂದ ತಿಳಿದು ಬಂದಿದೆ.

ಹಾಗೆಯೇ ಕೋವಿಡ್‌-19 ಸಂಕಷ್ಟದ ಹಿನ್ನೆಲೆಯಲ್ಲಿ ಹೂ ಬೆಳೆಗಾರರಿಗೆ ಪರಿಹಾರ ನೀಡಲು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಮೊದಲ ಕಂತಿನಲ್ಲಿ ಬಿಡುಗಡೆಯಾಗಿದ್ದ 31.83 ಕೋಟಿ ರು. ಪೈಕಿ 15.73 ಕೋಟಿ ರು.ಮಾತ್ರ ಖರ್ಚಾಗಿದೆ. ಇನ್ನು 16.1 ಕೋಟಿ ಬಾಕಿ ಉಳಿಸಿಕೊಂಡಿರುವ ಇಲಾಖೆ, ಶೇ.49ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.

ಅದೇ ರೀತಿ ಕೇಂದ್ರ ಪುರಸ್ಕೃತ ಯೋಜನೆಯ ಅನುದಾನದ ಪೈಕಿ ಬಿಡುಗಡೆಯಾಗಿದ್ದ 12.33 ಕೋಟಿ ರು. ಪೈಕಿ ಈವರೆವಿಗೂ 8.5 ಕೋಟಿ ಮಾತ್ರ ವೆಚ್ಚವಾಗಿದೆ.

‘ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಹೆಕ್ಟೇರ್‌ಗೆ 15,000 ರು.ಗಳ ಪರಿಹಾರವನ್ನು ಒದಗಿಸಲಾಗಿರುತ್ತದೆ. ಈ ಕಾರ್ಯಕ್ರಮದಡಿ ಅಂದಾಜು 137 ಕೋಟಿ ರು. ಅನುದಾನ ಬಿಡುಗಡೆಗೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುತ್ತಿದ್ದು, ಅನುದಾನ ಬಿಡುಗಡೆಯಾದ ನಂತರ ಫಲಾನುಭವಿಗಳ ಖಾತೆಗೆ ನೇರವಾಗಿ ನಗದು (DBT) ಮುಖಾಂತರ ಪರಿಹಾರಧನ ವಿತರಣೆ ಇನ್ನೂ ಆಮೆ ವೇಗದಲ್ಲಿದೆ.

ರಾಜ್ಯದಲ್ಲಿ ಒಟ್ಟು 12,735 ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆಯಲಾಗಿದೆ. ಇದಕ್ಕೆ ಪರಿಹಾರವಾಗಿ ಪ್ರತಿ ಹೆಕ್ಟೇರ್ ಗೆ ತಲಾ 25,000 ರೂ. ನೀಡಲು 31.83 ಕೋಟಿ ರು.ಗಳನ್ನು ತೆಗೆದಿಟ್ಟಿದ್ದ ಸರ್ಕಾರ, ಈವರೆವಿಗೂ 1457.35 ಲಕ್ಷ ರು. ಮಾತ್ರ ವಿತರಿಸಿದೆ.

ನಷ್ಟಕ್ಕೊಳಗಾದ ಹೂವಿನ ಬೆಳೆಗಾರರಿಗೆ ಹೆಕ್ಟೇರ್‌ಗೆ 25,000 ರು.ನಂತೆ ಒಟ್ಟು 12,735 ಹೆಕ್ಟೇರ್‌ ಪ್ರದೇಶಕ್ಕೆ 3183.75 ಲಕ್ಷ ರು.ಗಳನ್ನು ಒದಗಿಸಲಾಗಿತ್ತು. ಈ ಅನುದಾನದಲ್ಲಿ ಒಟ್ಟು 3082.65 ಲಕ್ಷ ರು.ಗಳನ್ನು ಜಿಲ್ಲಾವಾರು ಬಿಡುಗಡೆಗೊಳಿಸಿತ್ತು. 1457.35 ಲಕ್ಷ ರು.ಗಳನ್ನು ಪರಿಹಾರ ಧನ ರೂಪದಲ್ಲಿ 20,268 ರೈತರಿಗೆ ವಿತರಿಸಿತ್ತು.

ರಾಜ್ಯದಲ್ಲಿ ಒಟ್ಟಾರೆ 50,083 ಹೆಕ್ಟೇರ್ ನಲ್ಲಿ ತರಕಾರಿ, 41,054 ಹೆಕ್ಟೇರ್ ನಲ್ಲಿ ಹಣ್ಣು ಬಳೆಯಲಾಗಿದೆ. ಕೋವಿಡ್‌-19ರ ಹಿನ್ನೆಲೆಯಲ್ಲಿ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ರೈತರಿಗೆ ಸಾಕಷ್ಟು ಬೆಳೆ ನಷ್ಟ ಆಗಿತ್ತು. ಹೂವಿನ ಬೆಳೆಗಾರರಂತು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದರು. ಹೀಗಾಗಿ ಸರ್ಕಾರ ಮೊದಲು ಹೂವು ಬೆಳೆಗಾರರಿಗೆ ಪರಿಹಾರ ಘೋಷಣೆ ಮಾಡಿತ್ತು.

ಲಾಕ್‌ಡೌನ್‌ನಿಂದಾಗಿ ಹಣ್ಣು, ತರಕಾರಿ ಬೆಳೆದ ರೈತರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದರು. ಹೊರ ರಾಜ್ಯ ಹಾಗೂ ಹೊರ ದೇಶಕ್ಕೆ ರಫ್ತು ಸ್ಥಗಿತವಾಗಿತ್ತಲ್ಲದೆ, ಸಂಸ್ಕರಣಾ ಘಟಕ, ವೈನ್, ಡಿಸ್ಟಿಲರಿಸ್ ಘಟಕಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದವು. ಉತ್ಪಾದನೆ ಹೆಚ್ಚಾಗಿ ಮಾರಾಟ ಕಡಿಮೆಯಾಗಿದ್ದರ ಪರಿಣಾಮ ಸಂಕಷ್ಟದಿಂದ ಬೆಳೆಗಾರರು ಸಂಕಷ್ಟದಿಂದ ಮೇಲೆದ್ದಿಲ್ಲ.

ಸ್ಥಳೀಯ ಮಾರುಕಟ್ಟೆಯೂ ಇಲ್ಲ, ಅತ್ತ ಬೇರೆ ರಾಜ್ಯ, ದೇಶಗಳಿಗೆ ರಫ್ತು ಮಾಡದ ಕಾರಣ ಹಳೇ ಮೈಸೂರು, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹಣ್ಣು ತರಕಾರಿ ಹೂವು ಬೇಡಿಕೆ ಇಲ್ಲದೆ ಲಕ್ಷಾಂತರ ರೂ. ವೆಚ್ಚ ಮಾಡಿ ಬೆಳೆದ ರೈತರು‌ ಸಾಲದ ಸುಳಿಯಿಂದ ಹೊರಬಂದಿಲ್ಲ.

ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ, ಕರ್ಬೂಜ , ಬಾಳೆಹಣ್ಣು, ದ್ರಾಕ್ಷಿ, ದಾಳಿಂಬೆ, ಪಪ್ಪಾಯ, ಸೀಬೆ, ಸಪೋಟ ಬೆಳೆದವರು ಕಟಾವು ಮಾಡಿ ಬೇಡಿಕೆ ಇಲ್ಲದೆ‌ ಲಕ್ಷಾಂತರ ಟನ್ ಹೊಲ ತೋಟಗಳಲ್ಲೇ ಬಿಟ್ಟು ಕೊಳೆಯುವಂತಾಗಿತ್ತು.

ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೊ, ಆಲೂಗಡ್ಡೆ, ಬೀಟ್ ರೋಟ್, ಹೂಕೋಸು, ಎಲೆ ಕೋಸು, ದಪ್ಪ ಮೆಣಸಿನಕಾಯಿ, ನವಿಲು ಕೋಸು, ಗೆಣಸು, ಬೂದುಗುಂಬಳಕಾಯಿ, ಕ್ಯಾರೆಟ್, ಬೀನ್ಸ್, ಸೊಪ್ಪು, ಈರುಳ್ಳಿ ಮಾರಾಟವಾಗದ ಕಾರಣ ಲಾಕ್‌ಡೌನ್‌ ಅವಧಿಯಲ್ಲಿ ರೈತರು ಕಂಗಾಲಾಗಿದ್ದರು.
ಅದರಲ್ಲೂ ಸಾವಿರಾರು‌ ಹೆಕ್ಟೇರ್ ಪ್ರದೇಶದಲ್ಲಿ ಹೂವು ಬೆಳೆದವರಂತೂ ಶೂನ್ಯ ಮಾರುಕಟ್ಟೆಯಿಂದ ಆತ್ಮಹತ್ಯೆ ‌ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಶ್ರೇಷ್ಠ ಗುಣಮಟ್ಟದ ಹೂವು ಬೆಳೆದು ವಿದೇಶಗಳಿಗೆ ರಫ್ತು ಮಾಡುತ್ತಿದ್ದ ‌ರಾಜ್ಯದ ಹೆಸರು‌ ಜಗತ್ತಿನಲ್ಲಿ ಎತ್ತಿ ಹಿಡಿದಿದ್ದ ರೈತರು ಬೀದಿಗೆ ಬೀಳುವಂತಾಗಿತ್ತು.

the fil favicon

SUPPORT THE FILE

Latest News

Related Posts