ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕಾತಿಗೆ ಚಾಲನೆ; ಈ ಬಾರಿಯೂ ಲಾಬಿಗೇ ಮಣೆ?

ಬೆಂಗಳೂರು; ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆ ನೇಮಕ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆದಿಲ್ಲ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದ ಮೂರ್ನಾಲ್ಕು ತಿಂಗಳುಗಳ ನಂತರ ಅಧ್ಯಕ್ಷರ ನಾಮನಿರ್ದೇಶನ ಪ್ರಕ್ರಿಯೆಗೆ ಕಡೆಗೂ ಚಾಲನೆ ದೊರೆತಿದೆ. ಈ ಕುರಿತು ನಾಳೆ ಬೆಳಗ್ಗೆ 12-30ಕ್ಕೆ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಕುರಿತು ಸಭೆ ನಡೆಸಲಿದ್ದಾರೆ.

ಅಧ್ಯಕ್ಷರ ಹುದ್ದೆಗೆ ಒಟ್ಟು 103 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 20 ಅರ್ಜಿಗಳನ್ನು ಇಲಾಖೆ ಅನರ್ಹಗೊಳಿಸಿದೆ. ಬೋಧನಾ ಕ್ಷೇತ್ರ ಮತ್ತು ವಿವಿಧ ಗಣಿ ಕಂಪನಿಗಳಿಗೆ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿರುವವರು, ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಪರಿಸರ ಮತ್ತು ವೈಜ್ಞಾನಿಕ ಅಧಿಕಾರಿಗಳೂ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರೊಂದಿಗೆ ಗುರುತಿಸಿಕೊಂಡಿರುವ ಗಣಿ ಕಂಪನಿ ಸಮಾಲೋಚಕ ಮತ್ತು ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರ ಸಂಬಂಧಿಯೊಬ್ಬರು ಮಂಡಳಿ ಅಧ್ಯಕ್ಷ ಹುದ್ದೆಗೆ ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ. ಕಡೇ ಗಳಿಗೆಯಲ್ಲಿ ರಾಜಕೀಯ ಲಾಬಿಗೆ ಮಣಿಯುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಹೇಳಲಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಗೆ ಪರಿಸರ ವಿಜ್ಞಾನ ಪದವಿ ಮತ್ತು ಪರಿಸರ, ಮಾಲಿನ್ಯ ನಿಯಂತ್ರಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ತಜ್ಞರನ್ನು ಈ ಹಿಂದಿನ ಕಾಂಗ್ರೆಸ್‌, ಮೈತ್ರಿಕೂಟ, ಮತ್ತು ಈಗಿನ ಬಿಜೆಪಿ ಸರ್ಕಾರವೂ ನೇಮಿಸಿರಲಿಲ್ಲ.

ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಂಡಿದ್ದರು ಎನ್ನಲಾಗಿದ್ದ ಸಿವಿಲ್‌ ಇಂಜಿನಿಯರ್‌ ಆಗಿದ್ದ ಲಕ್ಷ್ಮಣ್‌ ಅವರನ್ನು ಹಿಂದಿನ ಕಾಂಗ್ರೆಸ್‌ ಸರ್ಕಾರ ಅಧ್ಯಕ್ಷರನ್ನಾಗಿ ನೇಮಿಸಿದ್ದರೆ, ಮೈತ್ರಿಕೂಟ ಸರ್ಕಾರದಲ್ಲಿ ಡಾ ಕೆ ಸುಧಾಕರ್‌ ಅವರನ್ನು ನೇಮಿಸಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜ್ಯೋತಿಷ್ಯ ಪದವಿ ಪಡೆದಿದ್ದರು ಎನ್ನಲಾಗಿದ್ದ ಡಾ ಸುಧೀಂದ್ರರಾವ್‌ ಅವರನ್ನು ಯಡಿಯೂರಪ್ಪ ಅವರು ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿದ್ದರು.

ಡಾ ಸುಧೀಂದ್ರರಾವ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದ ಬಿಜೆಪಿ ಸರ್ಕಾರ, ಕಡೆಗೆ ಈ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆದಿಲ್ಲ ಎಂದು ಹೈಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡಿತ್ತು. ಅಲ್ಲದೆ ಸುಧೀಂದ್ರರಾವ್‌ ಅವರಿಂದ ರಾಜೀನಾಮೆ ಪಡೆದಿದ್ದ ಸರ್ಕಾರ, ಅಧ್ಯಕ್ಷ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದ್ದನ್ನು ಸ್ಮರಿಸಬಹುದು.

ರಾಜೇಂದ್ರಸಿಂಗ್ ಭಂಡಾರಿ ಮತ್ತು ಉತ್ತರಾಖಂಡ ರಾಜ್ಯ ಸರ್ಕಾರದ ಮಧ್ಯೆ ನಡೆಯುತ್ತಿರುವ  ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ  ನ್ಯಾಯಮೂರ್ತಿ ಸ್ವತಂತ್ರಕುಮಾರ್ ಅಧ್ಯಕ್ಷತೆಯ ರಾಷ್ಟ್ರೀಯ ಹಸಿರು ಪೀಠ  ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲಿ ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಕಾಯ್ದೆ 1974ರ ಸೆಕ್ಷನ್‌ (2)4 ಎ ಅನ್ವಯ ಅರ್ಹತೆಯನ್ನು ಹೊಂದಿರದ ವ್ಯಕ್ತಿಗಳನ್ನು ನೇಮಿಸುತ್ತಿರುವುದಕ್ಕೆ ಆಕ್ಷೇಪ ಎತ್ತಿತ್ತು.

ಅಲ್ಲದೆ ಈ ಸಂಬಂಧ ಹೊರಡಿಸಿದ್ದ ಆದೇಶದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಜಲ(ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್‌4(2)(ಎ) ಅನ್ವಯ ಹೊಂದಿರಬೇಕಾದ ವಿದ್ಯಾರ್ಹತೆ, ವಿಶೇಷ ಜ್ಞಾನ ಹಾಗೂ ಪ್ರಾಯೋಗಿಕ ಅನುಭವಗಳ ವಿವರಣೆ ನೀಡಬೇಕಲ್ಲದೆ ಈ ಆದೇಶ ಹೊರಡಿಸಿದ 3 ತಿಂಗಳೊಳಗಾಗಿ ಜಲ ಮತ್ತು ವಾಯು ಕಾಯ್ದೆಗಳಡಿಯಲ್ಲಿ ನಿಯಮಾವಳಿಗಳನ್ನು ರೂಪಿಸಲು ಆದೇಶಿಸಿತ್ತು.

ಎನ್ ಜಿ ಟಿ ಆದೇಶದಲ್ಲೇನಿದೆ?

ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಪರಿಜ್ಞಾನ, ಪ್ರಾಯೋಗಿಕ ಅನುಭವ ಮತ್ತು ಪರಿಸರ ಸಂಬಂಧಿ ಸಂಸ್ಥೆಗಳ ಆಡಳಿತದಲ್ಲಿ ಅನುಭವ ಹೊಂದಿರುವ ವ್ಯಕ್ತಿಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಅಧ್ಯಕ್ಷರ  ಹುದ್ದೆಗಳಿಗೆ ರಾಜ್ಯ ಸರ್ಕಾರ ನೇಮಿಸಬೇಕು ಎಂದು ಜಲ (ಮಾಲಿನ್ಯ  ನಿವಾರಣೆ ಮತ್ತು  ನಿಯಂತ್ರಣ) ತಡೆ ಕಾಯ್ದೆ 1974ರ ಸೆಕ್ಷನ್ 4ರಲ್ಲಿ ಸ್ಪಷ್ಟವಾಗಿದೆ. ಅದೇ ರೀತಿ, ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ) 1981ರ ಸೆಕ್ಷನ್ 5 ಕೂಡ ಇದನ್ನೆ ಪುನರುಚ್ಚರಿಸಿದೆ.

ಇನ್ನು, ಸುಪ್ರೀಂ ಕೋರ್ಟ್ನಲ್ಲಿನ ರಿಟ್ ಪಿಟಿಷನ್ ಸಿವಿಲ್ ನಂ 657/1995ರ ಆದೇಶದ ಪ್ರಕಾರ, ಮಾಲಿನ್ಯ ನಿಯಂತ್ರಣ ಮಂಡಳಿಗೆ ತಾಂತ್ರಿಕೇತರ ವ್ಯಕ್ತಿಯನ್ನ ನೇಮಿಸಬಾರದು ಎಂದು ಅರಣ್ಯ ಮತ್ತು ಪರಿಸರ ಮಂತ್ರಾಲಯಕ್ಕೆ ನೀಡಿರುವ ಸ್ಪಷ್ಟ  ನಿರ್ದೇಶನವೂ ಇದೆ. ಆದರೆ ಈ ನಿರ್ದೇಶನವನ್ನು ಈಗಿನ ಬಿಜೆಪಿ ಸರ್ಕಾರವೂ ಗಾಳಿಗೆ ತೂರಿತ್ತು.

ಮಂಡಳಿಯಲ್ಲಿ ಕಳೆದ 30 ವರ್ಷಗಳಿಂದಲೂ ವಿವಿಧ ಹಂತಗಳಲ್ಲಿ ತಜ್ಞರು, ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವುದೂ ಸೇರಿದಂತೆ ವೈಜ್ಞಾನಿಕ ಸಂಶೋಧನೆಗಳನ್ನೂ ನಡೆಸಿರುವ ಅನುಭವ ಹೊಂದಿರುವ ಅಧಿಕಾರಿಗಳೂ ಮಂಡಳಿಯಲ್ಲಿಯೇ ಇರುವಾಗ ಅನರ್ಹರನ್ನು, ರಾಜಕೀಯ ಲಾಬಿ ನಡೆಸುವವರನ್ನು ನೇಮಿಸಬಾರದು ಎನ್ನುತ್ತಾರೆ ತಜ್ಞರೊಬ್ಬರು.

the fil favicon

SUPPORT THE FILE

Latest News

Related Posts