ಬೆಂಗಳೂರು; ಕೋವಿಡ್-19 ನಿರ್ವಹಣೆಗಾಗಿ ವೈದ್ಯಕೀಯ ಪರಿಕರಗಳಿಗೆ ಮಾಡಿರುವ ವೆಚ್ಚದ ಪೂರ್ಣ ವಿವರಗಳನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ನೀಡದ ಅಧಿಕಾರಿಶಾಹಿ ಇದೀಗ ಭೂ ಸುಧಾರಣೆ ಸಂಬಂಧಿತ ಮಾಹಿತಿಯೂ ಸೇರಿದಂತೆ ಜಿಎಸ್‌ಟಿ, ಪ್ರವಾಹ ಸಂದರ್ಭದಲ್ಲಿ ಬಿಡುಗಡೆಯಾದ ಹಣಕಾಸಿನ ವಿವರ ಮತ್ತು ಸಾಮಾನ್ಯ ಮಾಹಿತಿಯನ್ನೂ ಒದಗಿಸದೇ ಭಂಡ ನಿರ್ಲಕ್ಷ್ಯ ವಹಿಸಿದೆ. ಅಧಿಕಾರಿಶಾಹಿಯ ಈ ನಿರ್ಲಕ್ಷ್ಯ ಹಕ್ಕುಚ್ಯುತಿಗೆ ದಾರಿಮಾಡಿಕೊಡುವ ಹೆಚ್ಚಿನ ಸಾಧ್ಯತೆಗಳಿವೆ.
ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಹೆಚ್ಚುವರಿ ಮತ್ತು ಪ್ರಧಾನ ಕಾರ್ಯದರ್ಶಿಗಳು ಹಕ್ಕು ಚ್ಯುತಿಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಿರಿಯ ಐಎಎಸ್ ಅಧಿಕಾರಿಗಳ ವಿರುದ್ಧ ಹಕ್ಕು ಚ್ಯುತಿ ಮಂಡಿಸುವ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ಇಲಾಖೆಗಳಿಂದ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವಿವಿಧ ಮಾಹಿತಿ ಕೇಳಿ ಬರೆದಿರುವ 40ಕ್ಕೂ ಹೆಚ್ಚು ಪತ್ರಗಳಿಗೆ ಒಂದೇ ಒಂದು ಇಲಾಖೆ ಈವರೆವಿಗೂ ಮಾಹಿತಿ ನೀಡಿಲ್ಲ ಎಂದು ಗೊತ್ತಾಗಿದೆ. ಅಧಿಕಾರಿಶಾಹಿಯ ಈ ವರ್ತನೆಯೇ ಹಕ್ಕುಚ್ಯುತಿ ಮಂಡನೆಗೆ ಸುಲಭವಾಗಿ ದಾರಿಮಾಡಿಕೊಡಲಿದೆ ಎನ್ನಲಾಗಿದೆ.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 8 ಮಾಹಿತಿಗಳನ್ನು ಕೇಳಿ 2020ರ ಜೂನ್ 15ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದರು. ಕಳೆದ 25 ವರ್ಷಗಳಿಂದ ರಾಜ್ಯದಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಜಿಲ್ಲಾವಾರು ಸೆಕ್ಷನ್ 79 ಎ ಮತ್ತು 79 ಬಿ ಅಡಿ ದಾಖಲಿಸಿದ ಪ್ರಕರಣಗಳ ವಿವರ, ಈ ಪೈಕಿ ಇತ್ಯರ್ಥಗೊಂಡ ಪ್ರಕರಣಗಳು, ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಪ್ರಕರಣಗಳು, ಮುಟ್ಟುಗೋಲು ಹಾಕಿಕೊಂಡ ಜಮೀನಿನ ವಿಸ್ತೀರ್ಣವಾರು ಮಾಹಿತಿ, ಉಪ ವಿಭಾಗಾಧಿಕಾರಿಗಳು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ನಂತರ ನ್ಯಾಯಾಲಯಗಳು ಉಪ ವಿಭಾಗಾಧಿಕಾರಿಗಳ ಆದೇಶಗಳನ್ನು ಎತ್ತಿ ಹಿಡಿದಿರುವ ಪ್ರಕರಣಗಳು, ವ್ಯತಿರಿಕ್ತವಾಗಿ ಆಡಿದ ಆದೇಶಗಳ ವಿವರಗಳನ್ನು ಕೇಳಿ ಬರೆದಿದ್ದ ಪತ್ರಕ್ಕೆ ಕಂದಾಯ ಇಲಾಖೆಯಿಂದ ಈವರೆವಿಗೂ ಒಂದೇ ಒಂದು ಮಾಹಿತಿ ಒದಗಿಸಿಲ್ಲ ಎಂದು ತಿಳಿದು ಬಂದಿದೆ.
ಅಲ್ಲದೆ ರಾಜಕೀಯ ಸಂಬಂಧಿತ, ಕಾರ್ಪೋರೇಟ್ ಸಂಬಂಧಿತ ವ್ಯಕ್ತಿಗಳ ಜಮೀನಿನ ಖರೀದಿಗಳ ಮೇಲೆ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಸೆಕ್ಷನ್ 79 ಎ ಮತ್ತು 79 ಬಿ, ಸಿ ಮತ್ತು ಸೆಕ್ಷನ್ 80 ಹಾಗೂ ಸೆಕ್ಷನ್ 63ರ ಅಡಿ ದಾಖಲಿಸಿದ ಪ್ರಕರಣಗಳ ವಿವರಗಳನ್ನೂ ನೀಡಿಲ್ಲ.
ಪ್ರವಾಹ ಮತ್ತು ಉಂಟಾಗಿರುವ ಹಾನಿ ಕುರಿತು ಯಾವ ಮಾಹಿತಿಯನ್ನೂ ಒದಗಿಸಿಲ್ಲ., 2020ರ ಆಗಸ್ಟ್ ತಿಂಗಳಲ್ಲಿ ಪ್ರವಾಹ ಪೀಡಿತ ತಾಲೂಕು, ಗ್ರಾಮಗಳು, ಒಟ್ಟು ಹಾನಿಗೀಡಾದ ಮನೆಗಳು, ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ, ರಸ್ತೆ, ಸೇತುವೆ, ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್‌ಗಳ ಹಾನಿ, ಸರ್ಕಾರಿ ಕಟ್ಟಡಗಳಿಗೆ ಆಗಿರುವ ಹಾನಿ, ಕೆರೆ, ನಾಲೆಗಳ ಹಾನಿ ಮತ್ತು ಪುನರ್ ನಿರ್ಮಿಸಲು ತಗಲುವ ವೆಚ್ಚ, ಜಾನುವಾರುಗಳ ಮರಣ, ನೀಡಿದ ಪರಿಹಾರ ಸೇರಿದಂತೆ ಪ್ರವಾಹದಿಂದ ಸಂಭವಿಸಿರುವ ಒಟ್ಟು ನಷ್ಟದ ವಿವರಗಳನ್ನು ಒದಗಿಸಿಲ್ಲ ಎಂದು ಗೊತ್ತಾಗಿದೆ.
ಪ್ರವಾಹದಿಂದ ಸಂಭವಿಸಿರುವ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರವನ್ನು ಕೋರಿದ ಹಣ, ಈ ಪೈಕಿ ಬಿಡುಗಡೆಯಾಗಿರುವುದು, ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನದ ಸಾಮಾನ್ಯ ಮಾಹಿತಿಯನ್ನೂ ಅಧಿಕಾರಿಗಳು ಒದಗಿಸಿಲ್ಲ. 2019ರ ಆಗಸ್ಟ್ 1ರಿಂದ ಈವರೆವಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನದ ಮಾಹಿತಿಯನ್ನೂ ನೀಡಲು ಮೀನಮೇಷ ಎಣಿಸುತ್ತಿದೆ.
ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬಿಡುಗಡೆಯಾದ ಅನುದಾನ, ಪ್ರೋತ್ಸಾಹ ಧನ, ಸಹಾಯಧನ, ಬಿಡುಗಡೆ ಮಾಡಿದ ಅನುದಾನದಲ್ಲಿ ಮಾಡಿರುವ ಖರ್ಚಿನ ವಿವರ, ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದ ಪ್ರೋತ್ಸಾಹ ಧನದ ವಿವರ, ಬಿಡುಗಡೆಯಾದ ಮೊತ್ತದ ಪೈಕಿ ಮಾಡಿರುವ ವೆಚ್ಚದ ವಿವರಗಳನ್ನೂ ಒದಗಿಸಿಲ್ಲ. ಅದೇ ರೀತಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬಿಡುಗಡೆಯಾಗದೇ ಬಾಕಿ ಇರುವ ಅನುದಾನ, ಪ್ರೋತ್ಸಾಹ ಧನ, ಸಹಾಯಧನದ ವಿವರಗಳನ್ನು ಒದಗಿಸದ ಅಧಿಕಾರಿಗಳ ಭಂಡ ನಿರ್ಲಕ್ಷ್ಯತನ ಬಹಿರಂಗವಾಗಿದೆ.
ಇನ್ನು ಜಿ ಎಸ್ ಟಿ ಗೆ ಸಂಬಂಧಿಸಿದ ಮಾಹಿತಿಯನ್ನೂ ನೀಡಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಬೇಕಾದ ಜಿಎಸ್‌ಟಿ ಪಾಲು, ಜಿಎಸ್‌ಟಿ ಪರಿಹಾರ, ಒಟ್ಟಾರೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಲು ಬಾಕಿ ಇರುವ ಉಳಿಕೆ ಮೊತ್ತದ ವಿವರವನ್ನೂ ಆರ್ಥಿಕ ಇಲಾಖೆ ಒದಗಿಸಿಲ್ಲ ಎಂಬುದು ಗೊತ್ತಾಗಿದೆ.