ಆರೋಗ್ಯಭಾಗ್ಯ ; 30 ಕೋಟಿಯಲ್ಲಿ ನಯಾ ಪೈಸೆಯನ್ನೂ ಬಿಡುಗಡೆ ಮಾಡದ ಇಲಾಖೆ

ಬೆಂಗಳೂರು; ಆರೋಗ್ಯಭಾಗ್ಯ ಯೋಜನೆಯಡಿಯಲ್ಲಿ ಪೊಲೀಸ್‌ ಸಿಬ್ಬಂದಿಗೆ ಚಿಕಿತ್ಸೆ ನೀಡಿರುವ ಖಾಸಗಿ ಆಸ್ಪತ್ರೆಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಲು ಆರ್ಥಿಕ ಇಲಾಖೆ 30.00 ಕೋಟಿ ಬಿಡುಗಡೆ ಮಾಡಿದ್ದರೂ ಪೊಲೀಸ್‌ ಇಲಾಖೆ ಈವರೆವಿಗೂ ಒಂದೇ ಒಂದು ಆಸ್ಪತ್ರೆಗೆ ನಯಾ ಪೈಸೆಯನ್ನೂ ಬಿಡುಗಡೆ ಮಾಡದಿರುವುದು ಇದೀಗ ಬಹಿರಂಗವಾಗಿದೆ.

ಮಾರ್ಚ್‌ 2020ರವರೆಗಿನ ಬಿಲ್‌ಗಳ ಪಾವತಿಗೆ ಅಂದಾಜು 42.03 ಕೋಟಿ ರು.ನ ಪೈಕಿ 30.00 ಕೋಟಿ ರು.ಗಳನ್ನು(ಆಯವ್ಯಯ ಲೆಕ್ಕ ಶೀರ್ಷಿಕೆ 2055-00-113-0-06-021) ಪೊಲೀಸ್‌ ಮಹಾನಿರ್ದೇಶಕ ಮತ್ತು ಆರಕ್ಷಕ ಮಹಾನಿರೀಕ್ಷಕರಿಗೆ ಬಿಡುಗಡೆ ಮಾಡಲು 2020ರ ಜೂನ್‌ 4ರಂದು ಬಿಡುಗಡೆ ಮಾಡಿ ಆದೇಶಿಸಿತ್ತು. ಆದೇಶ ಹೊರಬಿದ್ದು 2 ತಿಂಗಳಾದರೂ ಈವರೆವಿಗೂ ಖಾಸಗಿ ಆಸ್ಪತ್ರೆಗಳಿಗೆ ಹಣ ಬಿಡುಗಡೆಯಾಗಿಲ್ಲ.

ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಹಣವನ್ನು ಬಿಡುಗಡೆ ಮಾಡುವ ಸಂಬಂಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿ ಹಲವು ತಿಂಗಳುಗಳು ಕಳೆದರೂ ಬಾಕಿ ಮೊತ್ತ ಬಿಡುಗಡೆ ಮಾಡಲು ಇಲಾಖೆ ಮೀನಮೇಷ ಎಣಿಸುತ್ತಿದೆ.

ರಾಜ್ಯ ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಂಡಿದೆ. ಈ ಯೋಜನೆಗೆ ಭವಿಷ್ಯದಲ್ಲಿ ಯಾವುದೇ ಹೆಚ್ಚಿನ ಅನುದಾನ ಒದಗಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿರುವ ಹೊತ್ತಿನಲ್ಲೇ ಆಸ್ಪತ್ರೆಗಳಿಗೆ ಬಾಕಿ ಮೊತ್ತವನ್ನು ಬಿಡುಗಡೆ ಮಾಡದ ಕಾರಣ ಹಲವು ಆಸ್ಪತ್ರೆಗಳು ಪೊಲೀಸ್‌ ಸಿಬ್ಬಂದಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ.

ಲಾಕ್‌ಡೌನ್‌ನಿಂದಾಗಿ ಬಹುತೇಕ ಖಾಸಗಿ ಆಸ್ಪತ್ರೆಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿವೆ. ಹೀಗಾಗಿ ಆರೋಗ್ಯ ಭಾಗ್ಯ ಯೋಜನೆ ಸೇರಿದಂತೆ ಇನ್ನಿತರೆ ಸರ್ಕಾರಿ ಆರೋಗ್ಯ ಯೋಜನೆಗಳಡಿಯಲ್ಲಿ ಬಿಡುಗಡೆ ಮಾಡುವ ಅನುದಾನವನ್ನೇ ನೆಚ್ಚಿಕೊಂಡಿವೆ. ಒಂದೊಂದು ಆಸ್ಪತ್ರೆಗೆ ನಾಲ್ಕರಿಂದ ಐದಾರು ಕೋಟಿ ಮೊತ್ತದಷ್ಟು ಮರು ಪಾವತಿ ಆಗಬೇಕಿದೆ ಎಂದು ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಬಾಕಿ ಮೊತ್ತ ಬಿಡುಗಡೆ ಮಾಡಲು ಮೀನ ಮೇಷ ಮಾಡುತ್ತಿರುವ ಪೊಲೀಸ್‌ ಇಲಾಖೆಯ ನಡೆಯಿಂದಾಗಿ ಖಾಸಗಿ ಆಸ್ಪತ್ರೆ ಸಿಬ್ಬಂದಿಯನ್ನು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಸಿದಂತಾಗಿದೆ.

ಪೊಲೀಸ್‌ ಮಹಾನಿರ್ದೇಶಕರು ಆರೋಗ್ಯಭಾಗ್ಯ ಯೋಜನೆಗಾಗಿ 85,74,49,289 ರು.ಗಳ ಹೆಚ್ಚುವರಿ ಅನುದಾನಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಆಧರಿಸಿ ವೈದ್ಯಕೀಯ ವೆಚ್ಚದ ಮರು ಪಾವತಿ ಅಡಿಯಲ್ಲಿ ಹಲವು ಷರತ್ತುಗಳನ್ನು ವಿಧಿಸಿದ್ದ ಆರ್ಥಿಕ ಇಲಾಖೆ 30.00 ಕೋಟಿ ಬಿಡುಗಡೆ ಮಾಡಲು ಅನುಮೋದನೆ ನೀಡಿತ್ತು.

‘ಹಿಂದಿನ ದಿನಾಂಕಗಳ ಹಾಗೂ ಆದ್ಯತೆಯ ವೈದ್ಯಕೀಯ ಬಿಲ್‌ಗಳನ್ನು ಮೊದಲು ಮರು ಪಾವತಿಸುವುದು, ಒಂದು ವೇಳೆ ಭವಿಷ್ಯದಲ್ಲಿ ಹೆಚ್ಚಿನ ಅನುದಾನ ಒದಗಿಸಿದಲ್ಲಿ ಅದು ಕೇವಲ ಮರು ಹೊಂದಾಣಿಕೆ ಮಾಡುವ ಷರತ್ತಿಗೊಳಪಟ್ಟು ಒದಗಿಸಲಾಗುವುದು. ಈ ಅನುದಾನವನ್ನು ಹೊರತುಪಡಿಸಿ ಭವಿಷ್ಯದಲ್ಲಿ ಯಾವುದೇ ಹೆಚ್ಚಿನ ಅನುದಾನ ಒದಗಿಸಲಾಗುವುದಿಲ್ಲ,’ ಎಂಬ ಷರತ್ತುಗಳನ್ನು ವಿಧಿಸಿತ್ತು.

ಸರ್ಕಾರವು ಆರೋಗ್ಯ ಭಾಗ್ಯ ಯೋಜನೆಗಾಗಿ ಪ್ರತ್ಯೇಕ ಅನುದಾನ ನೀಡಲು ಆರಂಭಿಸಿದ ನಂತರ 2015-16ನೇ ಸಾಲಿನಿಂದ 2018-19ರವರೆಗೆ ಆಸ್ಪತ್ರೆಗಳಿಗೆ ಒಟ್ಟು 211,98,49,667 ರು.ಗಳನ್ನು ಈಗಾಗಲೇ ಪಾವತಿಸಿದೆ. ಈ ಮೂರು ವರ್ಷಗಳಲ್ಲಿ 168,27,00,378 ರು.ಗಳನ್ನು ಮರು ಪಾವತಿಸಲು ಸರ್ಕಾರ ಅನುದಾನ ನೀಡಿದೆ. ಅಲ್ಲದೆ ಕರ್ನಾಟಕ ಪೊಲೀಸ್‌ ಹೆಲ್ತ್‌ ವೆಲ್‌ಫೇರ್‌ ಟ್ರಸ್ಟ್‌ನಿಂದಲೂ 43,71,49,289 ರು.ಪಾವತಿಯಾಗಿದೆ.

ಖಾಸಗಿ ಆಸ್ಪತ್ರೆಗಳಿಗೆ 2015-16ರಲ್ಲಿ 51,87,64,324 ರು., 2016-17ರಲ್ಲಿ 45,47,81,639 ರು., 2017-18ರಲ್ಲಿ 50,07,88,789 ರು., 2018-19ರಲ್ಲಿ 64,55,14,915 ಕೋಟಿ ರು. ಸೇರಿದಂತೆ ಒಟ್ಟು 211.98 ಕೋಟಿ ರು. ಪಾವತಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಆರೋಗ್ಯಭಾಗ್ಯ ಯೋಜನೆಯಡಿಯಲ್ಲಿ ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಚಿಕಿತ್ಸೆ ನೀಡಿರುವ ಖಾಸಗಿ ಅಸ್ಪತ್ರೆಗಳಿಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಪಾವತಿಸಲು ಹಲವು ಷರತ್ತುಗಳನ್ನೂ ವಿಧಿಸಿದೆ. ಈ ಪೈಕಿ ಆರೋಗ್ಯಭಾಗ್ಯ ಯೋಜನೆಗೆ ಭವಿಷ್ಯದಲ್ಲಿ ಯಾವುದೇ ಹೆಚ್ಚಿನ ಅನುದಾನ ಒದಗಿಸಲಾಗುವುದಿಲ್ಲ ಎಂಬ ಷರತ್ತೂ ಇದೆ.

‘ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸೆ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ವೆಚ್ಚವೂ ಹೆಚ್ಚುತ್ತಾ ಬಂದಿರುತ್ತದೆ. ಇತ್ತೀಚೆಗೆ ಕ್ಯಾನ್ಸರ್‌, ಲಿವರ್‌ ಸಂಬಂಧಿತ ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕಾಗಿ ಚಿಕಿತ್ಸೆ ಪಡೆಯುವರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಲಿವರ್‌ ಟ್ರಾನ್ಸ್‌ಪ್ಲಾಂಟೇಷನ್‌, ಬಿ ಎಂ ಟಿ ಪ್ರಕರಣಗಳೂ ಬರಲಾರಂಭಿಸಿವೆ. ಇದರಿಂದಾಗಿ ವೈದ್ಯಕೀಯ ಚಿಕಿತ್ಸಾ ವೆಚ್ಚದಲ್ಲಿಯೂ ಹೆಚ್ಚಳವಾಗಿದೆ,’ ಎಂದು ಪೊಲೀಸ್‌ ಮಹಾನಿರ್ದೇಶಕರು 2020ರ ಫೆ.15 ಮತ್ತು ಮಾರ್ಚ್‌ 11ರಂದು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.

ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ಸಿಬ್ಬಂದಿಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಆರೋಗ್ಯ ಭಾಗ್ಯ ಯೋಜನೆಗೆ 20,000 ನಿವೃತ್ತ ಪೊಲೀಸರನ್ನು ಸೇರ್ಪಡೆಗೊಳಿಸಲಾಗಿತ್ತು.
ಪೊಲೀಸ್‌ ಇಲಾಖೆಯಲ್ಲಿ ಜಾರಿಯಲ್ಲಿರುವ ‘ಆರೋಗ್ಯ ಭಾಗ್ಯ’ ಯೋಜನೆಯನ್ನು ಎಲ್ಲ ಇಲಾಖೆಯ ನೌಕರರಿಗೂ ವಿಸ್ತರಿಸುವ ಮಹತ್ವದ ನಿರ್ಧಾರವನ್ನು ಸಿಎಂ ಬಿ.ಎಸ್‌.ಯಡಿಯೂರಪ್ಪ ಕೆಲ ತಿಂಗಳ ಹಿಂದೆ ಪ್ರಕಟಿಸಿದ್ದರು.

ಈ ಯೋಜನೆಯಡಿಯಲ್ಲಿ ಆಸ್ಪತ್ರೆಗಳಿಗೆ ಹಣ ಬಿಡುಗಡೆ ಆಗಿಲ್ಲ ಎಂದು ‘ದಿ ಫೈಲ್‌’ 2020ರ ಏಪ್ರಿಲ್‌ 24ರಂದು ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts