ಕೋವಿಡ್‌-19 ; ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 20 ಪಟ್ಟು ಹೆಚ್ಚಳ

ಬೆಂಗಳೂರು; ಕಳೆದ ಮಾರ್ಚ್‌ನಿಂದ ಮೇ ಅಂತ್ಯಕ್ಕೆ ನಿಧಾನಗತಿ ಬೆಳವಣಿಗೆಯಲ್ಲಿದ್ದ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಜೂನ್‌ ಮತ್ತು ಜುಲೈ ತಿಂಗಳಲ್ಲಿ 20 ಪಟ್ಟು ಹೆಚ್ಚಾಗಿದೆ ಎಂದು ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆ ಸೇರಿದಂತೆ ವಿವಿಧ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ತಜ್ಞರ ಅಧ್ಯಯನ ವರದಿ ಹೊರಗೆಡವಿದೆ.

ಜೂನ್‌ 1 ಅಂತ್ಯಕ್ಕೆ 3,221 ಪ್ರಕರಣಗಳು ದಾಖಲಾಗಿದ್ದರೆ ಜುಲೈ 1ರ ಹೊತ್ತಿಗೆ 15,242ಕ್ಕೆ ತಲುಪಿತ್ತು. ಅದೇ ರೀತಿ ಜುಲೈ 20ರಂದು ಪ್ರಕರಣಗಳ ಸಂಖ್ಯೆ 67,420 ರಷ್ಟಿದ್ದರೆ ಆಗಸ್ಟ್‌ 5ರ ಹೊತ್ತಿಗೆ 145,830 ಕ್ಕೇರಿದೆ. ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿಯೇ ರಾಜ್ಯ ಸರ್ಕಾರ ಜುಲೈ 14ರಿಂದ ಜುಲೈ 22ರವರೆಗೆ ಲಾಕ್‌ಡೌನ್‌ ಘೋಷಿಸಿತ್ತು ಎಂದು ವಿವಿಧ ಅಧ್ಯಯನ ಸಂಸ್ಥೆಗಳ ಸಮೀಕ್ಷೆಯಿಂದ ತಿಳಿದು ಬಂದಿದೆ.

ಜುಲೈ 1 ಮತ್ತು ಜುಲೈ 21ರ ನಡುವೆ ರಾಜ್ಯದಲ್ಲಿ ಸೋಂಕು ಖಚಿತಪಟ್ಟ ಒಟ್ಟು 55,826 ಪ್ರಕರಣಗಳಲ್ಲಿ 32,186 (ಶೇ.57.6) ಪ್ರಕರಣಗಳು ಅಪರಿಚಿತ ಮೂಲಕ್ಕೆ ಸೇರಿದವು. ಇದರಲ್ಲಿಯೇ 11,931(ಶೇ.21.4) ಮತ್ತು 2,366 (ಶೇ.4.2) ರಷ್ಟು ಪ್ರಕರಣಗಳು ಕ್ರಮವಾಗಿ ಐಎಲ್‌ಐ ಮತ್ತು ತೀವ್ರ ಉಸಿರಾಟ ಸಮಸ್ಯೆಗೆ ಸಂಬಂಧಿಸಿದವು ಎಂದು ದತ್ತಾಂಶದಿಂದ ತಿಳಿದು ಬಂದಿದೆ.

ಅಜ್ಞಾತ ಮೂಲಗಳಿಂದ ಸೋಂಕು ಹರಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇ 1ರಲ್ಲಿ ಶೇ. 38.9ರಷ್ಟಿದ್ದ ಪ್ರಕರಣಗಳು ಜುಲೈ 21ರ ವೇಳೆಗೆ ಶೇ.92.8 ಕ್ಕೇರಿವೆ. ಈ ಅವಧಿಯಲ್ಲಿ ಖಚಿತಪಟ್ಟ ಪ್ರಕರಣಗಳ ಸಂಖ್ಯೆ 125 ಪಟ್ಟು ಹೆಚ್ಚಾಗಿದೆ. ಇದು 563 ರಿಂದ 71,068 ಸಂಖ್ಯೆಗೇರಿರುವುದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸುತ್ತಿರುವ ದತ್ತಾಂಶಗಳಿಂದ ಗೊತ್ತಾಗಿದೆ.

ಅದೇ ರೀತಿ ಸೋಂಕಿನ ಸಂಪರ್ಕವೂ ಪತ್ತೆಯಾಗುತ್ತಿಲ್ಲ. ಇದು ಸರ್ಕಾರಕ್ಕೆ ತಲೆನೋವಾಗಿ ಪರಿಣಿಮಿಸಿದೆ. ಪರೀಕ್ಷಾ ಕೇಂದ್ರಗಳು 72 ಗಂಟೆಗಳ ಒಳಗೆ ಕೋವಿಡ್‌-19 ಪರೀಕ್ಷಾ ಫಲಿತಾಂಶಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಜಿಲ್ಲೆಗಳಿಗೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ಪರಿಕ್ಷಾ ಸಾಮರ್ಥ್ಯವನ್ನು ವಿಸ್ತರಿಸಿದೆಯಾದರೂ ಪರೀಕ್ಷಿಸದ ಮಾದರಿಗಳು ರಾಶಿಗಟ್ಟಲೇ ಇವೆ ಎಂದು ತಿಳಿದು ಬಂದಿದೆ.

ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಸಂಪರ್ಕ ಪತ್ತೆ ಹಚ್ಚುವ ಪ್ರಯತ್ನಗಳಿಗೆ ನೆರವಾಗಲು ಕರ್ನಾಟಕ ಸರ್ಕಾರ 1, 246 ಉದ್ಯೋಗಿಗಳನ್ನು ನಿಯೋಜಿಸಿದೆ. ಬೆಂಗಳೂರು ಮಹಾನಗರ ಪಾಲಿಕೆಯು “ಪ್ರಾಥಮಿಕ ಸಂಪರ್ಕ” ಅಥವಾ ಕುಟುಂಬ ಸದಸ್ಯರನ್ನು ಮಾತ್ರ ತಕ್ಷಣದ ಪತ್ತೆ ಹಚ್ಚಬಹುದು ಎಂದು ಹೇಳಿದೆ. ಈ ಹಿಂದಿನ ಶಿಷ್ಟಾಚಾರದಂತೆ ಸೋಂಕಿತ ವ್ಯಕ್ತಿಯೊಂದಿಗೆ ಅಥವಾ ಅವರೊಂದಿಗೆ ಪ್ರಯಾಣಿಸಿದ ಎಲ್ಲಾ ಸಂಪರ್ಕಗಳನ್ನೂ ಪತ್ತೆ ಹಚ್ಚಲಾಗುತ್ತಿದೆ.

‘ಸಂಪರ್ಕ’ ಪತ್ತೆ ಹಚ್ಚುವಿಕೆ ಯಾವಾಗಲೂ ಉಪಯುಕ್ತ. ಆದರೆ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳ ಮತ್ತು ಸಂಪರ್ಕ ಪತ್ತೆ ಹಚ್ಚುವಲ್ಲಿ ತರಬೇತಿ ಪಡೆದ ಜನರ ಕೊರತೆ ಇರುವ ಕಾರಣ ವ್ಯಾಪಕವಾಗಿ ಸಾಧಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ದೊಡ್ಡ ಮತ್ತು ಪ್ರಕರಣಗಳು ಹೆಚ್ಚುತ್ತಿರುವ ರಾಜ್ಯಗಳಲ್ಲಿ ಇದು ಇನ್ನೂ ಕಷ್ಟಕರ,’ ಎನ್ನುತ್ತಾರೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ತಜ್ಞರೊಬ್ಬರು.

ಸೋಂಕಿತ ವ್ಯಕ್ತಿಗಳ ಸಂಪರ್ಕ ಪತ್ತೆಹಚ್ಚುವಿಕೆಯ ಜೊತೆಗೆ ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಾದ್ಯಂತ 15 ದಶಲಕ್ಷ ಮನೆಗಳನ್ನು ಒಳಗೊಂಡಂತೆ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಮನೆಯ ಸಮೀಕ್ಷೆಯನ್ನು ನಡೆಸಿತ್ತು.

ವಯಸ್ಸಾದವರು, ಗರ್ಭಿಣಿಯರು ಮತ್ತು ಆರೋಗ್ಯದ ಸ್ಥಿತಿಗತಿಗಳನ್ನು ಹೊಂದಿರುವ ಜನರು ವಿಶೇಷವಾಗಿ ವೈರಸ್‌ಗೆ ಗುರಿಯಾಗುವ ಜನರನ್ನು ಸಮೀಕ್ಷೆಯು ಗುರುತಿಸಿತ್ತು. ಈ ಜನರೊಂದಿಗೆ ಈಗ ನಿಯಮಿತವಾಗಿ ಕರೆ ಮಾಡಿ ಆಪ್ತಮಿತ್ರ ದೂರ ಸಂಪರ್ಕ ಸಹಾಯವಾಣಿ ಮೂಲಕ ಸಲಹೆ ನೀಡಲಾಗುತ್ತಿದೆ. ಅಲ್ಲದೆ ಅವರ ವಿವರಗಳನ್ನು ಸ್ಥಳೀಯ ಆರೋಗ್ಯ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.

ಆಗಸ್ಟ್‌ 11ರ ಅಂತ್ಯಕ್ಕೆ ರಾಜ್ಯದಲ್ಲಿ ಕೋವಿಡ್‌-19 ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 1,88,611ಕ್ಕೆ ತಲುಪಿದೆ. 3,32,997 ಜನರನ್ನು ನಿಗಾವಣೆಯಲ್ಲಿರಿಸಲಾಗಿದೆ. ಈವರೆವಿಗೆ 3,81,492 ಆಂಟಿಜೆನ್‌ ಪರೀಕ್ಷೆ ನಡೆಸಿದ್ದರೆ 1391499 ಆರ್‌ಟಿ ಪಿಸಿಆರ್‌ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಬೆಂಗಳೂರು ನಗರವೊಂದರಲ್ಲೇ ಈವರೆವಿಗೆ 77,038 ಸೋಂಕಿತರಿದ್ಧಾರೆ. ಇನ್ನೂ 33,070 ಸಕ್ರೀಯ ಪ್ರಕರಣಗಳಿವೆ. ಇಡೀ ರಾಜ್ಯದಲ್ಲಿ 79,606 ಸಕ್ರೀಯ ಪ್ರಕರಣಗಳಿರುವುದು ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶ ಹೇಳಿಕೆಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts