ಬೆಂಗಳೂರು; ಕೋವಿಡ್-19ರ ನಿರ್ವಹಣೆಗಾಗಿ ಮಾಸ್ಕ್ ಖರೀದಿ ಸಂಬಂಧ ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಮಾಸ್ಕ್‌ಗಳನ್ನು ಕರ್ನಾಟಕ ಸರ್ಕಾರ ಖರೀದಿಸಿರುವುದು ಇದೀಗ ಬಹಿರಂಗವಾಗಿದೆ. ಮಾಸ್ಕ್ ತಯಾರಿಕೆ ಕಂಪನಿಗಳಲ್ಲದ ಸಾಫ್ಟ್‌ವೇರ್ ಕಂಪನಿಗಳಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಮೂರು ಪದರುಳ್ಳ ಮತ್ತು ಎನ್-95 ಮಾಸ್ಕ್‌ಗಳನ್ನು ಖರೀದಿಸಿರುವುದು ತಿಳಿದು ಬಂದಿದೆ.
ಅಲ್ಲದೆ, ಮಾಸ್ಕ್ ಖರೀದಿಯಲ್ಲಿ ಯಾವುದೇ ಅಕ್ರಮಗಳಾಗಿಲ್ಲ ಎಂದು ಸಚಿವ ಶ್ರೀರಾಮುಲು, ಡಾ ಕೆ ಸುಧಾಕರ್ ಮತ್ತು ಅಶ್ವಥ್‌ನಾರಾಯಣ್ ಅವರು ಅಂಕಿಅಂಶ ಮತ್ತು ಕಂಪನಿಗಳ ಪಟ್ಟಿ ಬಿಡುಗಡೆಗೊಳಿಸಿದ್ದಾರಾದರೂ ಇನ್ನೂ ಅನೇಕ ಕಂಪನಿಗಳ ಹೆಸರುಗಳನ್ನು ಬಹಿರಂಗಗೊಳಿಸದೇ ಮುಚ್ಚಿಟ್ಟಿರುವುದು ಕೂಡ ಬೆಳಕಿಗೆ ಬಂದಿದೆ.
ನಿಗದಿಗಿಂತ ಹೆಚ್ಚಿನ ದರ
ಎರಡು ಮತ್ತು ಮೂರು ಪದರುಳ್ಳ ಮಾಸ್ಕ್‌ಗಳ ಖರೀದಿಗೆ ಸಂಬಂಧಿಸಿದಂತೆ 2020ರ ಮಾರ್ಚ್ 21ರಂದು ದರ ನಿಗದಿ ಮಾಡಿತ್ತು. ಇದರ ಪ್ರಕಾರ 2 ಪದರುಳ್ಳ ಸರ್ಜಿಕಲ್ ಮಾಸ್ಕ್‌ವೊಂದಕ್ಕೆ 8 ರು., ಮೂರು ಪದರುಳ್ಳ ಮಾಸ್ಕ್‌ವೊಂದಕ್ಕೆ ರೀಟೈಲ್‌ನಲ್ಲಿ ಗರಿಷ್ಠ 10.00 ರು. ಮೀರಬಾರದು ಎಂದು ಸೂಚಿಸಿತ್ತು. ಈ ಮಾರ್ಗಸೂಚಿ ಹೊರಬಿದ್ದ ನಂತರವೂ ರಾಜ್ಯ ಬಿಜೆಪಿ ಸರ್ಕಾರವು ಮಾಸ್ಕ್‌ವೊಂದಕ್ಕೆ 12.00, 16.00 ರು ಮತ್ತು 20 ರು.ದರದಲ್ಲಿ ಲಕ್ಷಾಂತರ ಸಂಖ್ಯೆಯ ಮಾಸ್ಕ್‌ಗಳನ್ನು ಖರೀದಿಸಿದೆ ಎಂದು ಗೊತ್ತಾಗಿದೆ.
ಸಾಫ್ಟ್‌ವೇರ್ ಕಂಪನಿಯಿಂದ ಮಾಸ್ಕ್ ಖರೀದಿ
ಸಾಫ್ಟ್‌ವೇರ್ ಕಂಪನಿಗಳಿಂದ ಪಿಪಿಇ ಕಿಟ್ ಖರೀದಿಸಿದ್ದ ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್‌ಹೌಸಿಂಗ್ ಸೊಸೈಟಿಯು ಅದೇ ಕಂಪನಿಗಳಿಂದಲೇ ಮೂರು ಪದರುಳ್ಳ ಮತ್ತು ಎನ್-95 ಮಾಸ್ಕ್‌ಗಳನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಖರೀದಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಬೆಂಗಳೂರಿನ ಎಚ್‌ಬಿಆರ್ ಬಡಾವಣೆಯಲ್ಲಿರುವ ಹರ್ಷಿಕಾ ಟೆಕ್ನಾಲಾಜೀಸ್ ಪ್ರೈವೈಟ್ ಕಂಪನಿಯಿಂದ ಮೂರು ಪದರುಳ್ಳ ಮಾಸ್ಕ್‌ನ್ನು ಯೂನಿಟ್‌ಗೆ 12.99 ರು. ದರದಲ್ಲಿ ಒಟ್ಟು 64.95 ಲಕ್ಷ ರು.ಗೆ 5,00,000 ಮಾಸ್ಕ್‌ಗಳ ಖರೀದಿಗೆ 2020ರ ಮಾರ್ಚ್ 30ರಂದು ಆದೇಶ ಹೊರಡಿಸಿರುವುದು ಗೊತ್ತಾಗಿದೆ.
ಆದರೆ ಇದರ ಮಾಹಿತಿಯನ್ನು ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ವೇರ್‌ಹೌಸಿಂಗ್ ಸೊಸೈಟಿ ಮತ್ತು ಸಚಿವ ಶ್ರೀರಾಮುಲು, ಡಾ ಕೆ ಸುಧಾಕರ್, ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ಬಹಿರಂಗಪಡಿಸದೇ ಮುಚ್ಚಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾಸ್ಕ್ ಖರೀದಿಗೆ ಸಂಬಂಧಿಸಿದಂತೆ ಸರ್ಕಾರ ಬಿಡುಗಡೆ ಮಾಡಿದ್ದ ಕಂಪನಿಗಳ ಪಟ್ಟಿಯಲ್ಲಿ ಹರ್ಷಿಕಾ ಟೆಕ್ನಾಲಾಜೀಸ್‌ನ ಹೆಸರು ಇಲ್ಲದಿರುವುದು ಲಭ್ಯ ಇರುವ ದಾಖಲೆಯಿಂದ ತಿಳಿದು ಬಂದಿದೆ.
ಅದೇ ರೀತಿ ವೆಬ್‌ಸೈಟ್ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಎ ಟೆಕ್ ಟ್ರಾನ್ ಕಂಪನಿಯಿಂದಲೂ ಎನ್-95 ಮಾಸ್ಕ್ ಖರೀದಿಸಿದೆ. 140 ರು. ದರದಲ್ಲಿ 1,00,000.00 ಎನ್-95 ಮಾಸ್ಕ್‌ಗಳನ್ನು 1.56 ಕೋಟಿ ರು.ದರದಲ್ಲಿ ಖರೀದಿಸಲು 2020ರ ಮಾರ್ಚ್20ರಂದು ಆದೇಶ ನೀಡಿದೆ. ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್‌ಹೌಸಿಂಗ್ ಸೊಸೈಟಿಯು ಈ ಕಂಪನಿಗೆ ಈಗಾಗಲೇ ಮತ್ತೊಂದು 30,57,600 ರು.ಗಳನ್ನು ಪಾವತಿಸಿದೆ. ಮತ್ತೊಂದು ಸಂಗತಿ ಏನಂದರೆ ಇದೇ ಎ ಟೆಕ್ ಟ್ರಾನ್ ಕಂಪನಿಯಿಂದ 2.00 ಕೋಟಿ ರು.ದರದಲ್ಲಿ ಒಟ್ಟು 25,000 ಪಿಪಿಇ ಕಿಟ್‌ಗಳನ್ನೂ ಈ ಸೊಸೈಟಿಯು ಖರೀದಿಸಿದೆ.
ಬಹಿರಂಗವಾಗದ ಮಾರ್ಚ್ 14ರ ಖರೀದಿ ಆದೇಶ
ಇನ್ನು, ಮೆಡಿ ಅರ್ಥ್ ಲೈಫ್‌ಕೇರ್ ಪ್ರೈವೈಟ್ ಲಿಮಿಟೆಡ್‌ನಿಂದ 147 ರು. ದರದಲ್ಲಿ (ಜಿಎಸ್‌ಟಿ ಸೇರಿ) ಒಟ್ಟು 2,00,000 ಪ್ರಮಾಣದಲ್ಲಿ ಎನ್-95 ಮಾಸ್ಕ್ ಗಳನ್ನು 2.94 ಕೋಟಿ ರು. ದರದಲ್ಲಿ ಖರೀದಿಸಲು 2020ರ ಮಾರ್ಚ್ 14ರಂದು ಆದೇಶ ಹೊರಡಿಸಿದೆ. ಆದರೆ ಸರ್ಕಾರ ಬಿಡುಗಡೆ ಮಾಡಿರುವ ಖರೀದಿ ಆದೇಶಗಳ ಪಟ್ಟಿಯಲ್ಲಿಯೂ ಮೆಡಿ ಅರ್ಥ್ ಲೈಫ್‌ಕೇರ್ ಹೆಸರು ಇದೆಯಾದರೂ 2020ರ ಮಾರ್ಚ್ 14ರಂದು ಹೊರಡಿಸಿರುವ ಖರೀದಿ ಆದೇಶದ ಬಗ್ಗೆ ಯಾವ ಪ್ರಸ್ತಾಪವನ್ನೂ ಮಾಡಿಲ್ಲದಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಆದರೆ ಮಾರ್ಚ್ 9ರಂದು ಹೊರಡಿಸಿದ್ದ ಖರೀದಿ ಆದೇಶದ ಬಗ್ಗೆ ಮಾತ್ರ ಪ್ರಸ್ತಾಪಿಸಿದೆ. 2.20 ಕೋಟಿ ರು. ಗೆ 1.50 ಲಕ್ಷ ಮಾಸ್ಕ್‌ಗಳ ಖರೀದಿಗೆ ಮಾರ್ಚ್ 9ರಂದು ಆದೇಶ ಹೊರಡಿಸಿದ್ದ ಸೊಸೈಟಿಯು ಈಗಾಗಲೇ ಪೂರ್ಣ ಹಣವನ್ನೂ ಈ ಕಂಪನಿಗೆ ಪಾವತಿಸಿರುವುದು ಗೊತ್ತಾಗಿದೆ.
ಅಸ್ಕೋ ಏಜೆನ್ಸಿಸ್‌ನಿಂದ ಬಿಸಾಡಬಹುದಾದ ಮೂರು ಪದರುಳ್ಳ ಮಾಸ್ಕ್‌ಗಳನ್ನು 18.74 (ಜಿಎಸ್‌ಟಿ ಸೇರಿ) ದರದಂತೆ 3,00,000 ಸಂಖ್ಯೆಯ ಮಾಸ್ಕ್‌ಗಳಿಗೆ 56.22 ಲಕ್ಷ ರು.ಮೊತ್ತಕ್ಕೆ ಖರೀದಿ ಆದೇಶ ಹೊರಡಿಸಿದೆ. ಮಾಸ್ಕ್ ಖರೀದಿಸಿರುವ ಕಂಪನಿಗಳಿಗೆ ಸಂಬಂಧಿಸಿದಂತೆ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಆಸ್ಕೋ ಏಜೆನ್ಸೀಸ್ ಹೆಸರು ಇಲ್ಲದಿರುವುದು ಅಚ್ಚರಿ ಮೂಡಿಸಿದೆ.
ಗುಣಮಟ್ಟದ ಪಿಪಿಇ ಕಿಟ್ ಪೂರೈಕೆ ಮಾಡಿಲ್ಲ ಎಂಬ ಕಾರಣಕ್ಕೆ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ಗೆ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ್ದ ಕೆಎಸ್‌ಡಿಡಬ್ಲ್ಯೂಎಸ್, ಎನ್-95 ಮಾಸ್ಕ್‌ಗಳನ್ನೂ ಖರೀದಿಸಿದೆ. ಮಾಸ್ಕ್‌ವೊಂದಕ್ಕೆ 147 ರು. ದರದಂತೆ ಒಟ್ಟು 1,50,000 ಮಾಸ್ಕ್‌ಗಳಿಗೆ 2.10 ಕೋಟಿ ರು. ಮೊತ್ತದಲ್ಲಿ ಖರೀದಿಸಲು ಮಾರ್ಚ್ 9ರಂದು ಆದೇಶ ಹೊರಡಿಸಿದೆ.
ಮಾಸ್ಕ್‌ಗಳಿಗೆ ಮಾರುಕಟ್ಟೆಯಲ್ಲಿ ಗರಿಷ್ಠ 87 ರು.(ಎಂಆರ್‌ಪಿ)ದರವಿದೆ. ಈ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಯಾವ ಕಂಪನಿಯೂ ಮಾಸ್ಕ್‌ಗಳನ್ನು ಮಾರಾಟ ಮಾಡಲು ಅವಕಾಶಗಳಿಲ್ಲ. ಆದರೂ ಈ ಕಂಪನಿ,ಕೆಎಸ್‌ಡಿಎಲ್‌ಡಬ್ಲ್ಯೂಎಸ್‌ಗೆ 147 ರು. ದರದಲ್ಲಿ ಮಾರಾಟ ಮಾಡಿದೆ.
ಎನ್-95 ಮಾಸ್ಕ್‌ಗಳನ್ನು ಕೋವಿಡ್-19ರ ಸಂದರ್ಭದಲ್ಲೇ ಖರೀದಿಸಿರುವ ಇಲಾಖೆ ಯೂನಿಟ್‌ವೊಂದಕ್ಕೆ 126 ರು.ಗಳಿಂದ 156 ರು.ಗಳವರೆಗೆ ಪಾವತಿಸಿದೆ. ಸ್ಥಳೀಯ ಸರಬರಾಜುದಾರರು ಎನ್ 95 ಮಾಸ್ಕ್‌ಗಳನ್ನು ಪೊರೈಕೆ ಮಾಡದ ಕಾರಣ ಆಮದು ಮಾಡಿಕೊಳ್ಳಲಾಗಿದೆ.
2020ರ ಮಾರ್ಚ್ 21ರಂದು ತಲಾ 126 ರು. ದರದಲ್ಲಿ ಒಟ್ಟು 5 ಲಕ್ಷ ಮಾಸ್ಕ್‌ಗಳಿಗೆ 6.30 ಕೋಟಿ ರು. ಪಾವತಿಸಿದೆ. ಆದರೆ ಯಾವ ಕಂಪನಿಯಿಂದ ಆಮದು ಮಾಡಿಕೊಂಡಿದೆ ಎಂಬ ವಿವರವನ್ನು ಒದಗಿಸಿರಲಿಲ್ಲ.
2020ರ ಮಾರ್ಚ್ 26ರಂದು 1,80,000 ಮಾಸ್ಕ್‌ಗಳನ್ನು ಸರಬರಾಜು ಮಾಡಿರುವ ಎಚ್‌ಎಲ್‌ಎಲ್ ಲೈಫ್ ಕೇರ್ ಪ್ರೈ ಲಿ.,ಗೆ ಎಷ್ಟು ಮೊತ್ತ ಪಾವತಿಸಿದೆ ಎಂಬ ಮಾಹಿತಿಯನ್ನು ಒದಗಿಸಿರಲಿಲ್ಲ. ಮಾರ್ಚ್ 30ರಂದು ಔಷಧ ನಿಯಂತ್ರಕರ ನೆರವಿನೊಂದಿಗೆ ಎನ್ 95 ಮಾಸ್ಕ್‌ವೊಂದಕ್ಕೆ ತಲಾ 97.89 ರು. ದರದಲ್ಲಿ 83,040 ಮಾಸ್ಕ್‌ಗಳಿಗೆ 81,28,786 ರು ಪಾವತಿಸಿದೆ. 2020ರ ಏಪ್ರಿಲ್ 21ರಂದು ತಲಾ ಮಾಸ್ಕ್‌ವೊಂದಕ್ಕೆ 147 ರು.ದರದಲ್ಲಿ ಒಟ್ಟು 8,100 ಮಾಸ್ಕ್‌ಗಳಿಗೆ 11,90,700 ರು. ಪಾವತಿಸಿರುವುದು ಗೊತ್ತಾಗಿದೆ.