ಬೆಂಗಳೂರು; ಸಾಫ್ಟ್ವೇರ್ ಕಂಪನಿ ಮತ್ತು ಕೃಷಿ ಉತ್ಪನ್ನಗಳ ತಯಾರಿಕೆ ಕಂಪನಿಯಿಂದ ಪಿಪಿಇ ಕಿಟ್ ಖರೀದಿಸಿದ್ದ ಪ್ರಕರಣಗಳ ಕುರಿತು ತನಿಖೆ ನಡೆಸಬೇಕು ಎಂದು ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ಸಲ್ಲಿಸಿದ್ದ ದೂರಿನನ್ವಯ ವರದಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆ ಸೂಚಿಸಿದೆ.
ದೂರಿನ ವಿಚಾರಣೆ ನಡೆಸುತ್ತಿರುವ ವಿಚಾರಣಾಧಿಕಾರಿ 2020ರ ಆಗಸ್ಟ್ 24ಕ್ಕೆ ಪ್ರಕರಣವನ್ನು ಮುಂದೂಡಿದ್ದಾರೆ. ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಸ್ವರೂಪದ ಅಕ್ರಮ ಪ್ರಕರಣಗಳ ಕುರಿತು ಸರಣಿ ದೂರು ಸಲ್ಲಿಸುತ್ತಿರುವ ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು 2020ರ ಆಗಸ್ಟ್ 8ರಂದು ಹೆಚ್ಚುವರಿ ದಾಖಲೆಗಳನ್ನು ಲೋಕಾಯುಕ್ತಕ್ಕೆ ಒದಗಿಸಿರುವುದು ತಿಳಿದು ಬಂದಿದೆ.
ಇದಕ್ಕೂ ಮೊದಲು ಜುಲೈ 8ರಂದು ದೂರಿನಲ್ಲಿ ಸಲ್ಲಿಸಿದ್ದ ದಾಖಲೆಗಳನ್ನು ವಿಚಾರಣಾಧಿಕಾರಿಗಳು ಪ್ರಾಥಮಿಕ ಪರಿಶೀಲನೆಯನ್ನು ಪೂರ್ಣಗೊಳಿಸಿರುವುದು ಗೊತ್ತಾಗಿದೆ.
ಪಿಪಿಇ ಕಿಟ್ ಖರೀದಿಗೆ ಸಂಬಂಧಿಸಿದಂತೆ ತಜ್ಞರ ಅಭಿಪ್ರಾಯ ಪಡೆದಿಲ್ಲ ಮತ್ತು ಉನ್ನತ ಮಟ್ಟದ ಸಭೆ ನಡೆಸಿಲ್ಲ. ಕಿಟ್ಗಳನ್ನು ತಯಾರಿಸುವ ಸಾಮರ್ಥ್ಯ ಇರುವ ಬಗ್ಗೆ ಮತ್ತು ತಯಾರಿಕೆ ಕಂಪನಿಗೆ ನೀಡಿರುವ ತಯಾರಿಕೆ ಪರವಾನಿಗೆಯನ್ನು ಪರಿಶೀಲಿಸದೇ ಅಧಿಕಾರಿಗಳು ಕಳಪೆ ಕಿಟ್ಗಳನ್ನು ಖರೀದಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ದೂರಿನಲ್ಲಿಯೂ ಕೆಎಸ್ಡಿಡಬ್ಲ್ಯೂಎಸ್ನ ಮುಖ್ಯ ಪರಿವೀಕ್ಷಕ ಡಾ ಮಹೇಶ್ಕುಮಾರ್, ಆಹಾರ ಸುರಕ್ಷತೆ ನಿರ್ದೇಶನಾಲಯದ ಡಾ ಲತಾ ಪರಿಮಳ, ಡಾ ಪ್ರಿಯಲತಾ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.ಸಾಫ್ಟ್ವೇರ್ ಕಂಪನಿಯಿಂದ ಕಿಟ್ ಖರೀದಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್-19ರ ತುರ್ತು ಸಂದರ್ಭದಲ್ಲಿ ಮೂಲತಃ ಸಾಫ್ಟ್ವೇರ್ ಕಂಪನಿಯಾಗಿರುವ ಎಟೆಕ್ ಟ್ರಾನ್ ಮತ್ತು ಕೃಷಿ ಉತ್ಪನ್ನಗಳ ತಯಾರಿಕೆ ಕಂಪನಿಯ ರುದ್ರಾಂಶ್ ವಿಗ್ ಆಗ್ರೋ ಇಂಡಿಯಾದಿಂದ 2020ರ ಮಾರ್ಚ್ 20ರಂದು ಒಟ್ಟು 50,000 ಪಿಪಿಇ ಕಿಟ್ಗಳನ್ನು ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ವೇರ್ಹೌಸಿಂಗ್ ಸೊಸೈಟಿಯು ಖರೀದಿಸಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಅದೇ ರೀತಿ ಎಚ್ಎಲ್ಎಲ್ ಲೈಫ್ಕೇರ್, ಇಂಡಸ್ ಬಯೋ ಸೈನ್ಸ್, ಡಿಎಚ್ಬಿ ಗ್ಲೋಬಲ್ ಚೀನಾ, ಬಿಗ್ ಫಾರ್ಮಾಸ್ಯುಟಿಕಲ್ಸ್ನಿಂದ 133.76 ಕೋಟಿ ರು.ಮೊತ್ತದಲ್ಲಿ ಪಿಪಿಇ ಕಿಟ್ಗಳನ್ನು ಖರೀದಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಿಟ್ ಸರಬರಾಜಿಗೆ 21.00 ಕೋಟಿ ವೆಚ್ಚ
ಈ ಪೈಕಿ ಚೀನಾದ ಡಿಎಚ್ಬಿ ಗ್ಲೋಬಲ್ ಮತ್ತು ಬಿಗ್ ಫಾರ್ಮಾಸ್ಯುಟಿಕಲ್ಸ್ ಹೊರತುಪಡಿಸಿದರೆ ಉಳಿದ 5 ಕಂಪನಿಗಳು ವೈದ್ಯಕೀಯ ಪರಿಕರಗಳನ್ನು ತಯಾರಿಸುವ ಕಂಪನಿಗಳಲ್ಲ. ಡಿಎಚ್ಬಿ ಗ್ಲೋಬಲ್ ಮತ್ತು ಬಿಗ್ ಫಾರ್ಮಾಸ್ಯುಟಿಕಲ್ಸ್ ಹೊರತುಪಡಿಸಿ ಉಳಿದ ಕಂಪನಿಗಳು ಸರಬರಾಜು ಮಾಡಿರುವ ಪಿಪಿಇ ಕಿಟ್ಗಳು 60-90 ಜಿಎಸ್ಎಮ್ ಗುಣಮಟ್ಟ ಹೊಂದಿಲ್ಲ. ಚೀನಾ ಮೂಲದಿಂದ ಖರೀದಿಸಿದ ಪಿಪಿಇ ಕಿಟ್ಗಳ ಸರಬರಾಜು ಸಂಬಂಧ 21.00 ಕೋಟಿ ರು.ಗಳನ್ನು ಸಾರಿಗೆ ವೆಚ್ಚಕ್ಕಾಗಿ ನೀಡಿದೆ ಎಂದು ವಿವರಿಸಿದ್ದಾರೆ.
ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಪ್ರೈವೈಟ್ ಲಿಮಿಟೆಡ್ನಿಂದ ಖರೀದಿಸಿದ್ದ ಪಿಪಿಇ ಕಿಟ್ಗಳು ಉತ್ತಮ ಗುಣಮಟ್ಟದಿಂದ ಕೂಡಿರಲಿಲ್ಲ ಎಂದು ಕೆಡಿಎಲ್ಡಬ್ಲ್ಯೂಎಸ್ನ ಹೆಚ್ಚುವರಿ ನಿರ್ದೇಶಕರೇ ಆಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದರು. ಅಸಲಿಗೆ ಪಿಪಿಇ ಕಿಟ್ ತಯಾರಿಸುವ ತಯಾರಿಕೆಯ ಪರವಾನಿಗೆಯೇ ಈ ಕಂಪನಿಗೆ ಇರಲಿಲ್ಲ ಎಂದು ದಾಖಲೆ ಸಮೇತ ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಸಾಫ್ಟ್ವೇರ್ ಕಂಪನಿ ಮತ್ತು ಕೃಷಿ ಉತ್ಪನ್ನಗಳ ತಯಾರಿಕೆ ಕಂಪನಿಯಿಂದ ಪಿಪಿಇ ಕಿಟ್ಗಳನ್ನು ಖರೀದಿಸಿದ್ದನ್ನು ‘ದಿ ಫೈಲ್’ ಏಪ್ರಿಲ್ 27, 2020ರಂದು ಹೊರಗೆಡವಿದ್ದನ್ನು ಸ್ಮರಿಸಬಹುದು.