ಕೋವಿಡ್‌ ಭ್ರಷ್ಟಾಚಾರ; ನಿರಾಣಿ ಪೆನ್‌ಡ್ರೈವ್‌ನಲ್ಲಿನ 125 ಪುಟಗಳ ದಾಖಲೆಗಳೇನಾದವು?

ಬೆಂಗಳೂರು; ಕೊರೊನಾ ಕಿಟ್‌ ಮತ್ತು ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ನಡೆದೇ ಇಲ್ಲವೆಂದು ಸಚಿವ ಶ್ರೀರಾಮುಲು ಮತ್ತು ಕೆ ಸುಧಾಕರ್‌ ಅವರು ಬಲವಾಗಿ ಪ್ರತಿಪಾದಿಸುತ್ತಿರುವ ಬೆನ್ನಲ್ಲೇ ಆಡಳಿತ ಪಕ್ಷದ ಶಾಸಕ ಮುರುಗೇಶ್‌ ನಿರಾಣಿ ಅವರ ಬಳಿಯೂ ಕೋವಿಡ್‌ ಭ್ರಷ್ಟಾಚಾರದ ಬಗ್ಗೆ ಸಾಕ್ಷ್ಯಾಧಾರಗಳಿವೆ ಎಂಬ ಮಾಹಿತಿಯನ್ನು ದಾಖಲೆ ಸಮೇತ ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.


ಸಾರ್ವಜನಿಕ ಲೆಕ್ಕಪತ್ರ ಸಮಿತಿ 2020ರ ಮೇ 28 ರಂದು ನಡೆದ ಸಭೆಯಲ್ಲಿ ಕೋವಿಡ್‌ ಭ್ರಷ್ಟಾಚಾರದ ಬಗ್ಗೆ ಪೆನ್‌ ಡ್ರೈವ್‌ನಲ್ಲಿ 125 ಪುಟಗಳ ದಾಖಲೆಗಳಿವೆ ಎಂದು ಸಮಿತಿ ಸದಸ್ಯ ಮುರುಗೇಶ್‌ ನಿರಾಣಿ ಅವರು ಹೊರಗೆಡವಿದ್ದ ಮಾಹಿತಿ ನಡವಳಿಗಳಲ್ಲಿ ಅಧಿಕೃತವಾಗಿ ದಾಖಲಾಗಿದೆ. ನಡವಳಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.


ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣಗಳು ರಾಜಕೀಯಕರಣಗೊಂಡಿರುವ ಬೆನ್ನಲ್ಲೇ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ನಡವಳಿ ಮುನ್ನೆಲೆಗೆ ಬಂದಿವೆ. ಮೇ 28ರಂದು ನಡೆದ ಸಭೆಯಲ್ಲಿ ಕೋವಿಡ್‌ ಭ್ರಷ್ಟಾಚಾರದ ಬಗ್ಗೆ ಬಾಯ್ಬಿಟ್ಟಿದ್ದ ಮುರುಗೇಶ್‌ ನಿರಾಣಿ ಅವರು ಆ ನಂತರ ಸಭೆಗೆ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ. ಅಕ್ರಮಗಳ ಬಗ್ಗೆ ದಾಖಲೆಗಳಿವೆ ಎಂದು ಹೇಳಿ ಆ ನಂತರ ದಾಖಲೆಗಳನ್ನು ಸಮಿತಿಗೆ ನೀಡದೇ ದಿವ್ಯ ಮೌನಕ್ಕೆ ಜಾರಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.


ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಪೈಸೆ ಪೈಸೆ ಲೆಕ್ಕವಿದೆ. ನಮ್ಮಲ್ಲೂ ದಾಖಲೆಗಳಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸವಾಲು ಎಸೆದಿರುವ ಸಚಿವ ಶ್ರೀರಾಮುಲು ಮತ್ತು ಕೆ ಸುಧಾಕರ್‌ ಅವರು ತಮ್ಮದೇ ಪಕ್ಷದ ಶಾಸಕ ಮುರುಗೇಶ್‌ ನಿರಾಣಿ ಅವರು ಪೆನ್‌ಡ್ರೈವ್‌ನಲ್ಲಿರಿಸಿರುವ ದಾಖಲೆಗಳನ್ನೇಕೆ ಪಡೆದುಕೊಳ್ಳುತ್ತಿಲ್ಲ, ಪ್ರಕರಣಗಳನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆಯೆ ಎಂಬ ಅನುಮಾನಗಳು ವ್ಯಕ್ತವಾಗಿವೆ.


ಸಭೆಯಲ್ಲಿ ನಿರಾಣಿ ಹೇಳಿದ್ದೇನು?


‘ಬಿಜಾಪುರದಿಂದ ಬರುವಾಗ ನನ್ನೊಂದಿಗೆ ಒಬ್ಬರು ಅಧಿಕಾರಿ ಬಂದಿದ್ದರು. ಸುಮಾರು 125 ಪುಟಗಳ ದಾಖಲೆಗಳ ಪೆನ್‌ ಡ್ರೈವ್‌ ತಂದಿದ್ದರು. ಅದನ್ನು ತಮಗೆ ಕಳಿಸಿಕೊಡುತ್ತೇನೆ. ಅದರಲ್ಲಿ ಖರೀದಿ ಮಾಡಿರುವ ಪಿಪಿಇ ಕಿಟ್‌ ಬಗ್ಗೆ ಲೋಕಲ್‌ ಸ್ಯಾನಿಟೈಸರ್‌ ಬಗ್ಗೆ, 70-80 ರು. ಬೆಲೆ ಬಾಳುವ ಬಕೆಟ್‌ಗಳಿಗೆ 500 ರು. ದರ ಬಿಲ್‌ ಹಾಕಿರುವುದು, 30 ರು. ಬೆಲೆ ಬಾಳುವ ಉಪಕರಣಗಳಿಗೆ 3,000 ರು. ದರದ ಬಿಲ್‌ ಹಾಕಿದ್ದಾರೆ,’ ಎಂದು ಸಾಕ್ಷ್ಯಾಧಾರಗಳ ಸಮೇತ ತಂದಿದ್ದಾರೆ,’ ಎಂದು ಸಭೆ ಗಮನಕ್ಕೆ ತಂದಿರುವುದು ನಡವಳಿಯಿಂದ ಗೊತ್ತಾಗಿದೆ.

ಮೇ 28ರ ನಂತರವೂ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹಲವು ಸಭೆಗಳನ್ನು ನಡೆಸಿದೆ. ಆದರೆ ಈ ಯಾವ ಸಭೆಗಳಲ್ಲೂ ನಿರಾಣಿ ಭಾಗವಹಿಸಿಲ್ಲ ಎಂದು ತಿಳಿದು ಬಂದಿದೆ. 125 ಪುಟಗಳ ದಾಖಲೆಗಳನ್ನೊಳಗೊಂಡಿರುವ ಪೆನ್‌ ಡ್ರೈವ್‌ನ್ನು ಸಮಿತಿ ಮುಂದೆ ಮಂಡಿಸದೇ ಇರುವ ನಿರಾಣಿ ಅವರ ನಡೆ ಸಂಶಯಗಳಿಗೆ ಕಾರಣವಾಗಿದೆ.


ಕೊರೊನಾ ಕಿಟ್‌, ಇತರ ಪರಿಕರ ಖರೀದಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಪೈಸೆ ಪೈಸೆ ಲೆಕ್ಕ ಇದೆ. ಸಿದ್ದರಾಮಯ್ಯ ಕೇಳಿದರೆ ಈ ಲೆಕ್ಕ ಕೊಡಲು ಸಿದ್ಧ. ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದರು. ಇದಕ್ಕೆ ಉತ್ತರಿಸಿದ್ದ ಸಿದ್ದರಾಮಯ್ಯ ಅವರು ‘ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರು ಕೊರೊನಾ ವೈರಸ್‌ ಸೋಂಕು‌ ನಿಯಂತ್ರಣ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ. ದಾಖಲೆಗಳಿವೆ ಎಂದು ಹೇಳಿದರಷ್ಟೆ ಸಾಲದು. ದಾಖಲೆಗಳನ್ನು ಬಿಡುಗಡೆ ಮಾಡಬೇಕು,’ ಎಂದು ಟ್ವಿಟರ್‌ನಲ್ಲಿ ಆಗ್ರಹಿಸಿದ್ದರು.


ಮುಂದುವರಿದು, ಮಾಹಿತಿ ಇದ್ದರೆ ಮುಚ್ಚಿಡುತ್ತಿರುವುದು ಯಾಕೆ? ಈ ಬಗ್ಗೆ ಮಾಹಿತಿ ಕೇಳಿದ ನನ್ನ ಪ್ರಶ್ನೆಗಳಿಗೆ ಉತ್ತರಿಸುವಂತೆ ಮುಖ್ಯಮಂತ್ರಿ ಅವರಿಗೆ ಹೇಳಿ ಎಂದು ಸವಾಲು ಎಸೆದಿದ್ದ ಸಿದ್ದರಾಮಯ್ಯ ಅವರು ದಾಖಲೆಗಳಿದ್ದರೆ ಬಿಡುಗಡೆ ಮಾಡಿ ಎಂದೂ ಜುಲೈ 4ರಂದು ಆಗ್ರಹಿಸಿದ್ದರು.


‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ರಾಜಕೀಯದಲ್ಲಿ ಅನುಭವ ಇರುವವರು. ಆಧಾರ ಇಲ್ಲದೇ ಈ ರೀತಿ ಆರೋಪ ಮಾಡಬಾರದು. ಕುಣಿಯಲು ಬಾರದವ ನೆಲ ಡೊಂಕು ಎಂಬಂತಿದೆ ಇದು. ಅವರಿಗೆ ಶಕ್ತಿ ಇದ್ದರೆ ತನಿಖೆ ನಡೆಸಲು. ನಾವು ಯಾವುದೇ ತನಿಖೆ ಎದುರಿಸಲು ಸಿದ್ಧ. ಶ್ವೇತಪತ್ರ ಹೊರಡಿಸಲೂ ತಯಾರು’ ಎಂದು ಶ್ರೀರಾಮುಲು ಪ್ರತಿಕ್ರಿಯಿಸಿದ್ದರು.


‘ದಿ ಫೈಲ್‌’ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ‘ಕರ್ನಾಟಕ ರಾಷ್ಟ್ರಸಮಿತಿ ನೀಡಿದ್ದ ದೂರಿನ ಮೇರೆಗೆ ಪಿಎಸಿ ಕೈಗೊಂಡಿದ್ದ ಪರಿಶೀಲನೆ ಸಭೆಗೆ ತಡೆಯಾಜ್ಞೆ ನೀಡಿ ಸ್ಪೀಕರ್‌ ಮಾತ್ರವೇ ತಡೆ ಒಡ್ಡಿಲ್ಲ. ಮುರುಗೇಶ್‌ ನಿರಾಣಿ ಸೇರಿದಂತೆ ಪಿಎಸಿ ಸಮಿತಿಯಲ್ಲಿರುವ ಬಿಜೆಪಿಯ ಸದಸ್ಯರೂ ಸಹ ತಮ್ಮ ವೈಯಕ್ತಿಕ ಲಾಭಕ್ಕೋಸ್ಕರ ತನಿಖೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಯಾವುದೋ ಲಾಭವಾದರೆ ಉದಾಹರಣೆಗೆ ಸಕ್ಕರೆ ಕಾರ್ಖಾನೆ ಅವರಿಗೆ ಮಾರಾಟವಾದರೆ ಸಾಕು ಅವರಿಗೆ ಯಾವುದೇ ಸತ್ಯ ಹೊರಬರುವುದು ಬೇಕಾಗಿಲ್ಲ. 125 ಪುಟಗಳ ದಾಖಲೆ ಇದೆ ಎಂದು ಹೇಳಿದ್ದ ನಿರಾಣಿ ಅವರಿಗೆ ವ್ಯವಹಾರ ಕುದುರಿದ ಕಾರಣಕ್ಕೆ ಸುಮ್ಮನಾಗಿದ್ದಾರೆ, ಎಂದು ಆರೋಪಿಸಿದ್ದಾರೆ.

the fil favicon

SUPPORT THE FILE

Latest News

Related Posts