ಬೆಂಗಳೂರು; ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಗಳೂ ಕೋವಿಡ್-19ನ್ನು ನಿಯಂತ್ರಿಸಲು ದುಪ್ಪಟ್ಟು ದರದಲ್ಲಿ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿರುವುದು ಇದೀಗ ಬಹಿರಂಗವಾಗಿದೆ.
ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಕೋಟ್ಯಂತರ ರುಪಾಯಿಗಳ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಲೆಕ್ಕ ಕೊಡಿ ಅಭಿಯಾನ ನಡೆಸಿರುವ ಸಂದರ್ಭದಲ್ಲೇ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯು (ವಿಮ್ಸ್) ದುಬಾರಿ ದರದಲ್ಲಿ ಪಿಪಿಇ ಕಿಟ್‌ಗಳನ್ನು ಖರೀದಿಸಲು ಹೊರಡಿಸಿರುವ ಆದೇಶ ಇದೀಗ ಹೊರಬಿದ್ದಿದೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಬೆಂಗಳೂರಿನ ಇನ್ನೋವಾ ಸರ್ಜಿಕಲ್ ಇಂಕ್ ಹೆಸರಿನ ಸರಬರಾಜುದಾರರು 2020ರ ಜೂನ್ 28ರಂದು ನೀಡಿದ್ದ ದರಪಟ್ಟಿಯನ್ನು ಅನುಮೋದಿಸಿರುವ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯು, ಪಿಪಿಇ ಕಿಟ್‌ವೊಂದಕ್ಕೆ 1,200 ರು. ದರದಂತೆ ಒಟ್ಟು 6,300 ಪಿಪಿಇ ಕಿಟ್( CoverAll)ಗಳನ್ನು 75.60 ಲಕ್ಷ ರು.ದರದಲ್ಲಿ ಖರೀದಿಸಲು ಆದೇಶ ಹೊರಡಿಸಿದೆ. ಇದರಿಂದ ವಿಮ್ಸ್‌ಗೆ ಕೇವಲ ಪಿಪಿಇ ಕಿಟ್‌ನ ಕವರ್‌ಆಲ್‌ವೊಂದರಿಂದಲೇ 53 ಲಕ್ಷ ರು. ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಲಾಕ್‌ಡೌನ್ ಸಂದರ್ಭವನ್ನು ಬಳಸಿಕೊಂಡಿದ್ದ ಕರ್ನಾಟಕ ಸ್ಟೇಟ್ ಡ್ರಗ್ ಅಂಡ್ ಲಾಜಿಸ್ಟಿಕ್ ಸಂಸ್ಥೆ, ದುಬಾರಿ ದರದಲ್ಲಿ ಪಿಪಿಇ ಕಿಟ್‌ಗಳನ್ನು ಖರೀದಿಸಿತ್ತು. ಆದರೀಗ 2ನೇ ಹಂತದ ಲಾಕ್‌ಡೌನ್ ತೆರವುಗೊಂಡ ನಂತರವೂ ವಿಮ್ಸ್ ಸಂಸ್ಥೆ ಕೇವಲ ಕವರ್ ಆಲ್‌ವೊಂದಕ್ಕೆ 1,200 ರು. ದರದಲ್ಲಿ ಖರೀದಿಸಿದೆ. ಈ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆಗಳಿವೆ.
ಪಿಪಿಇ ಕಿಟ್‌ವೊಂದರಲ್ಲಿ ಒಟ್ಟು 10 ಐಟಂಗಳಿರುತ್ತವೆ. ಕವರ್ ಆಲ್, ಶೋ ಕವರ್, ಮೂರು ಪದರಿನ ಸರ್ಜಿಕಲ್ ಮಾಸ್ಕ್, ಎನ್-95 ಮಾಸ್ಕ್, ನೈಟ್ರೈಲ್ ಹ್ಯಾಂಡ್ ಗ್ಲೋವ್ಸ್, ಗಾಗಲ್ಸ್, ಫೇಸ್ ಶೀಲ್ಡ್, ಹೆಡ್ ಕವರ್, ಏಪ್ರಾನ್ ಮತ್ತು ಬಿಸಾಡಬಹುದಾದ ಬ್ಯಾಗ್ ಒಳಗೊಂಡಿರುತ್ತದೆ. ಇಷ್ಟೂ ಐಟಂಗಳನ್ನೊಳಗೊಂಡ ಒಂದು ಪಿಪಿಇ ಕಿಟ್‌ಗೆ ಮಾರುಕಟ್ಟೆಯಲ್ಲಿ ಗರಿಷ್ಠ 550-00 ರು. ಇದ್ದರೂ ಕೇವಲ ಕಿಟ್‌ನ ಕವರ್‌ಆಲ್‌ಗೆ 1,200 ರು ನೀಡಿ ಖರೀದಿಸಲು ಆದೇಶ ನೀಡಿರುವುದು ಸಂಸ್ಥೆಯ ಬೊಕ್ಕಸಕ್ಕೆ ನಷ್ಟವಾಗಿರುವುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಹೆಚ್ಚುವರಿ ದರದಲ್ಲಿ ಖರೀದಿಸಿದ್ದೇಕೆ?
550.00 ರು. ದರದಲ್ಲಿ ಖರೀದಿಸಿದ್ದರೆ ಒಟ್ಟು 6,300 ಕಿಟ್‌ನ ಕವರ್‌ಆಲ್‌ಗೆ 34.65 ಲಕ್ಷ ರು.ಗಳಾಗುತ್ತಿತ್ತು. ಆದರೆ ಕಿಟ್‌ವೊಂದಕ್ಕೆ 1,200 ರು. ದರದಲ್ಲಿ ಖರೀದಿಸುವ ಮೂಲಕ 41 ಲಕ್ಷ ರು. ಗಳನ್ನು ಇದೊಂದರಿಂದಲೇ ವಿಮ್ಸ್ ಬೊಕ್ಕಸಕ್ಕೆ ನಷ್ಟವುಂಟಾಗಿರುವುದು ತಿಳಿದು ಬಂದಿದೆ. ಅದೇ ರೀತಿ ಪಿಪಿಇ ಕಿಟ್‌ನ ಕವರ್‌ಆಲ್‌ಗೆ ಮಾರುಕಟ್ಟೆಯಲ್ಲಿರುವ ಕನಿಷ್ಠ 350 ರು. ದರದಂತೆ ಖರೀದಿಸಿದ್ದರೆ 22.05 ಲಕ್ಷ ರು. ಗಳಾಗುತ್ತಿತ್ತು. ವಿಮ್ಸ್ ಖರೀದಿಸಿರುವ 1,200 ರು. ದರದ ಪ್ರಕಾರ ಹೆಚ್ಚುವರಿಯಾಗಿ 53.00 ಲಕ್ಷ ರು ಪಾವತಿಸಿದಂತಾಗಿದೆ.
ಕರ್ನಾಟಕ ಸ್ಟೇಟ್ ಡ್ರಗ್ ಅಂಡ್ ಲಾಜಿಸ್ಟಿಕ್ ಸಂಸ್ಥೆಯು 2020ರ ಮಾರ್ಚ್ 14ರಿಂದ ಏಪ್ರಿಲ್‌ವರೆಗೆ ಖರೀದಿಸಿದ್ದ ಪಿಪಿಇ ಕಿಟ್‌ಗಳಿಗೆ ಸಂಬಂಧಿಸಿದಂತೆ ಇಲಾಖೆಯ ಆಯುಕ್ತರಿಗೆ ನೀಡಿದ್ದ ವರದಿಯಲ್ಲಿ ಪಿಪಿಇ ಕಿಟ್‌ಗಳಿಗೆ 330.40 ರು., 725.00 ರು., 800.00 ರು., 1,078.48 ರು., 656.25 ರು.ದರದಲ್ಲಿ ಖರೀದಿಸಲಾಗಿದೆ ಎಂದು ವಿವರಿಸಿದ್ದನ್ನು ಸ್ಮರಿಸಬಹುದು.
ಅದೇ ರೀತಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ನೀಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ಪಿಪಿಇ ಕಿಟ್‌ಗಳನ್ನು ದುಪ್ಪಟ್ಟು ದರದಲ್ಲಿ ಖರೀದಿಸಿದ್ದನ್ನು ಒಪ್ಪಿಕೊಂಡಿದ್ದರು.
ಇನ್ನು ಪಿಪಿಇ ಕಿಟ್‌ಗಳ ಖರೀದಿಯಲ್ಲಿ ಯಾವುದೇ ರೀತಿಯಲ್ಲೂ ಅಕ್ರಮ ನಡೆದಿಲ್ಲ. ಬೇಕಿದ್ದರೆ ದಾಖಲೆಗಳನ್ನು ವಿಧಾನಸೌಧಕ್ಕೆ ಬಂದು ಪರಿಶೀಲಿಸಲಿ ಎಂದು ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು ಸಿದ್ದರಾಮಯ್ಯ ಅವರಿಗೆ ಸವಾಲು ಎಸೆದಿದ್ದರು.
ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಾತ್ರವಲ್ಲ, ಸರ್ಕಾರದ ಇನ್ನಿತರೆ ವೈದ್ಯಕೀಯ ವಿಜ್ಞಾನ ಸಂಸ್ಥೆಗಳೂ ಸಹ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅಕ್ರಮ ಎಸಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ.