ಬಡ್ಡಿ ಸಹಾಯಧನ ಬಿಡುಗಡೆಗೊಳಿಸದ ಕೇಂದ್ರ; ತುಟಿ ಬಿಚ್ಚದ ಯಡಿಯೂರಪ್ಪ

ಬೆಂಗಳೂರು; ನಲ್ಮ್‌ ಯೋಜನೆ ಅನ್ವಯ ಮಹಿಳಾ ಮತ್ತು ಪುರುಷ ಸ್ವ ಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಹಂಚಿಕೆ ಮಾಡಬೇಕಿದ್ದ ಸಹಾಯ ಧನದ ಪೈಕಿ ಕೇಂದ್ರ ಸರ್ಕಾರ ತನ್ನ ಪಾಲನ್ನು ಬಿಡುಗಡೆಗೊಳಿಸದೇ ತಾರತಮ್ಯ ಧೋರಣೆ ಮುಂದುವರೆಸಿದೆ.


ಕೇಂದ್ರದ ಈ ಧೋರಣೆಯನ್ನು ಪ್ರಶ್ನಿಸಬೇಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ತುಟಿ ಬಿಚ್ಚಿಲ್ಲ. ಕೋವಿಡ್‌ ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟುಗಳಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಹೊತ್ತಿನಲ್ಲೇ ಬಡ್ಡಿ ಸಹಾಯಧನದ ಹೊರೆ ಬಿದ್ದಿದೆ.


ಕೇಂದ್ರ ಪುರಸ್ಕೃತ ಯೋಜನೆಯಲ್ಲಿಯೂ ತನ್ನ ಪಾಲಿನ ಆರ್ಥಿಕ ನೆರವನ್ನು ನೀಡದ ಕೇಂದ್ರದ ಈ ಧೋರಣೆಯಿಂದಾಗಿ ಬಡ್ಡಿ ಸಹಾಯ ಧನದ ಸಂಪೂರ್ಣ ಮೊತ್ತವನ್ನೂ ರಾಜ್ಯ ಸರ್ಕಾರವೇ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ರಾಜ್ಯ ಸರ್ಕಾರದ ಮೇಲೆ ಸಂಪೂರ್ಣ ಬಡ್ಡಿ ಸಹಾಯಧನದ ಹೊರೆ ಬೀಳಲಿದೆ. ಹೀಗಾಗಿ ರಾಜ್ಯ ಸರ್ಕಾರದ ಕದ ತಟ್ಟಿರುವ ಡಿಸಿಸಿ ಬ್ಯಾಂಕ್‌ಗಳು, ಬಡ್ಡಿ ಸಹಾಯಧನಕ್ಕಾಗಿ ಕೈಯೊಡ್ಡಿ ನಿಂತಿವೆ.


2020-21ನೇ ಸಾಲಿಗೆ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರ ಮತ್ತು ಮತ್ತು ಪುರುಷ ಸ್ವ ಸಹಾಯ ಗುಂಪುಗಳಿಗೆ ಶೇ. 4ರ ಬಡ್ಡಿ ದರದಲ್ಲಿ ಸಹಾಯ ಧನ ಮತ್ತು ಸಾಲ ಸೌಲಭ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಗುರಿ ನಿಗದಿಪಡಿಸಿಲ್ಲ, ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ ಎಂಬುದು ದಾಖಲೆಯಿಂದ ತಿಳಿದು ಬಂದಿದೆ.


ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು, ಡಿಸಿಸಿ ಬ್ಯಾಂಕ್‌ಗಳು, ಎನ್‌ಆರ್‌ಎಲ್‌ಎಂ ಮತ್ತು ಎನ್‌ಯುಎಲ್ಎಂ ಯೋಜನೆ ಅಳವಡಿಸಿಕೊಂಡು ಸಾಲ ಸೌಲಭ್ಯ ಮತ್ತು ಸಹಾಯ ಧನ ನೀಡುವ ಸಂಬಂಧ ಕೇಂದ್ರದಿಂದ ಅನುದಾನ ಬಿಡುಗಡೆ ಆಗಿಲ್ಲ ಎಂದು ಸಹಕಾರ ಸಂಘಗಳ ನಿಬಂಧಕ ಆರ್‌ ಪ್ರಸನ್ನಕುಮಾರ್‌ ಅವರು 2020ರ ಜೂನ್‌ 20ರಂದು ಸಹಕಾರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಕೇಂದ್ರ ಪುರಸ್ಕೃತ ಎನ್‌ಆರ್‌ಎಲ್‌ಎಂ ಮತ್ತು ಎನ್‌ಯುಎಲ್ಎಂ ಯೋಜನೆಗಳನ್ನು ಅಳವಡಿಸಿಕೊಳ್ಳುವುದರಿಂದ ಕೇಂದ್ರ ಸರ್ಕಾರ ನೀಡುವ ಬಡ್ಡಿ ಸಹಾಯ ಧನದಲ್ಲಿ ಕೇಂದ್ರ ಸರ್ಕಾರ ಶೇ.60 ಮತ್ತು ರಾಜ್ಯ ಸರ್ಕಾರ ಶೇ.40ರಷ್ಟು ನೀಡಬೇಕು. ಕೇಂದ್ರ ಸರ್ಕಾರ ಬಡ್ಡಿ ಸಹಾಯ ಧನವನ್ನು ಡಿಸಿಸಿ ಬಂಡವಾಳ ವೆಚ್ಚವನ್ನು ಆಧರಿಸಿ ನೀಡದೇ ಗರಿಷ್ಠ ಶೇ.12.5ರಷ್ಟನ್ನು ಆಕರಣೆ ಮಾಡಬೇಕು ಎಂದು ತಿಳಿಸಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಗುರಿ ನಿಗದಿಪಡಿಸದೇ ಇರುವುದರಿಂದ ಅನುದಾನ ಬಿಡುಗಡೆ ಮಾಡಿಲ್ಲ,’ ಎಂದು ಸಹಕಾರ ಸಂಘಗಳ ನಿಬಂಧಕರು ಪತ್ರದಲ್ಲಿ ವಿವರಿಸಿದ್ದಾರೆ.


ಡಿಸಿಸಿ ಬ್ಯಾಂಕ್‌ಗಳು ಪ್ರತಿ ವರ್ಷ ಅಂದಾಜು 1,200 ಕೋಟಿ ರು. ಹೊರಬಾಕಿ ಹೊಂದುತ್ತಿವೆ. ಕೇಂದ್ರ ಸರ್ಕಾರದ ಯೋಜನೆ ಅಳವಡಿಸಿಕೊಂಡರೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯ ಪಾಲು ಶೇ.1.74 ಮತ್ತು ರಾಜ್ಯ ಸರ್ಕಾರದ ಉಳಿದ ಪಾಲು ಶೆ.7.42 ಒಟ್ಟು ಶೇ.9.16 ಬಡ್ಡಿ ಸಹಾಯ ಧನ ನೀಡಬೇಕು.


ಕೇಂದ್ರ ಸರ್ಕಾರದ ಷರತ್ತಿನಂತೆ ಗರಿಷ್ಠ ಶೇ.12ರ ಬಡ್ಡಿ ದರದಲ್ಲಿ ಸಾಲ ವಿತರಿಸುವ ಬದಲು ಶೇ.10 ರ ಬಡ್ಡಿ ದರದಲ್ಲಿ ಸಾಲ ವಿತರಿಸಲು ಡಿಸಿಸಿ ಬ್ಯಾಂಕ್‌ಗಳು ಒಪ್ಪಿಕೊಂಡಲ್ಲಿ ಸರ್ಕಾರಕ್ಕೆ ವಾರ್ಷಿಕ ಅಂದಾಜು 10.08 ಕೋಟಿ ರು( ಶೇ.0.84) ಹೆಚ್ಚಿನ ಹೊರೆಯಾಗುತ್ತದೆ ಎಂಬ ಮಾಹಿತಿ ಸಹಕಾರ ಸಂಘಗಳ ನಿಬಂಧಕರ ಪತ್ರದಿಂದ ತಿಳಿದು ಬಂದಿದೆ.


ಈ ವರ್ಷದಲ್ಲಿ 86.50 ಕೋಟಿ ಬಡ್ಡಿ ಸಹಾಯ ಧನ ನೀಡಿದೆಯಾದರೂ ಶೇ.11.65ರಷ್ಟು ಹೆಚ್ಚಿನ ಹೊರೆಯನ್ನು ರಾಜ್ಯ ಸರ್ಕಾರ ಭರಿಸಬೇಕಾಗಿದೆ. ಡಿಸಿಸಿ ಬ್ಯಾಂಕ್‌ಗಳೇನಾದರೂ ಶೇ.9.16ರ ಬಡ್ಡಿ ಸಹಾಯ ಧನ ನಿಗದಿಪಡಿಸಲು ಒಪ್ಪಿಕೊಂಡಲ್ಲಿ ಮಾತ್ರ ರಾಜ್ಯ ಸರ್ಕಾರಕ್ಕೆ ಯಾವುದೇ ಹೆಚ್ಚಿನ ಹೊರೆ ಬೀಳುವುದಿಲ್ಲ.


ಅದೇ ರೀತಿ ರಾಜ್ಯ ರೂರಲ್‌ ಲೈವ್ಲಿಹುಡ್‌ ಮಿಷನ್‌ ಕೇಂದ್ರ ಸರ್ಕಾರದ ಯೋಜನೆಯನ್ನು ಅಳವಡಿಸಿಕೊಂಡು ಸಹಕಾರ ಸಂಸ್ಥೆಗಳು ಪ್ರತಿ ವರ್ಷ 1,500 ಕೋಟಿ ರು.ವರೆಗೆ ಸಾಲ ವಿತರಿಸಲು ಗುರಿ ನಿಗದಿಪಡಿಸಿಕೊಂಡಲ್ಲಿ ಮತ್ತು ಒಂದು ವರ್ಷದೊಳಗೆ ಕೇಂದ್ರ ಸರ್ಕಾರದ ಬಡ್ಡಿ ಸಹಾಯಧನ ಪಾಲನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದಲ್ಲಿ ಮಾತ್ರ ಕೇಂದ್ರದ ಯೋಜನೆಯನ್ನು ಆಳವಡಿಸಿಕೊಳ್ಳಬಹುದು ಎಂಬ ಮಾಹಿತಿ ಪತ್ರದಿಂದ ಗೊತ್ತಾಗಿದೆ.

SUPPORT THE FILE

Latest News

Related Posts