3,322 ಕೋಟಿ. ಖರ್ಚು ಮಾಡಿದ ಆರೋಗ್ಯ ಇಲಾಖೆ ಬಳಿ ವೆಚ್ಚದ ವಿವರಗಳೇ ಇಲ್ಲ

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ 3 ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರದ 41 ಇಲಾಖೆಗಳ ಪೈಕಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅತಿ ಹೆಚ್ಚು ಖರ್ಚು ಮಾಡಿದೆ. 2020-21ರ ನಿಗದಿತ ಅನುದಾನ (ಆಯವ್ಯಯ ಅಂದಾಜು) ಮತ್ತು ಇದೇ ಸಾಲಿನ ಪರಿಷ್ಕೃತ ಅಂದಾಜಿನ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಒಟ್ಟು 3,322.07 ಕೋಟಿ ರು. ಖರ್ಚು ಮಾಡುವ ಮೂಲಕ ಉಳಿದ 40 ಇಲಾಖೆಗಳನ್ನು ಸರಿಗಟ್ಟಿದೆ.


ಕೋವಿಡ್‌ -19ರ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜವಾಬ್ದಾರಿ ಅತಿ ಹೆಚ್ಚಿನದಾಗಿದ್ದರೂ ಔಷಧ ಸಾಮಗ್ರಿ ಮತ್ತು ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳು ಸದ್ದು ಮಾಡುತ್ತಿರುವ ಬೆನ್ನಲ್ಲೇ 3,322 ಕೋಟಿ ರು. ಖರ್ಚಾಗಿರುವ ಮಾಹಿತಿ ಮುನ್ನೆಲೆಗೆ ಬಂದಿದೆ. ವಿಶೇಷವೆಂದರೆ ಬಿಡುಗಡೆ ಆಗಿದ್ದ ಮೊತ್ತಕ್ಕೆ ಎದುರಾಗಿ ಹೆಚ್ಚಿನ ಮೊತ್ತ ವೆಚ್ಚವಾಗಿದೆ.


2020-21ನೇ ಸಾಲಿನ ಇಲಾಖಾವಾರು ಪ್ರಗತಿ ಕುರಿತು ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಮೇ 2020ರವರೆಗಿನ ಪ್ರಗತಿಗೆ ಸಂಬಂಧಿಸಿದಂತೆ ನಡೆದಿದ್ದ ಸಭೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನ್ನ ಖರ್ಚಿನ ವಿವರಗಳನ್ನು ಒದಗಿಸಿದೆ. ಅನುದಾನ ಬಳಕೆಗೆ ಸಂಬಂಧಿಸಿದಂತೆ ಇಲಾಖೆಗಳು ಮಾಡಿರುವ ವೆಚ್ಚದ ಅಂಕಿ ಅಂಶಗಳು ‘ದಿ ಫೈಲ್’ಗೆ ಲಭ್ಯವಾಗಿದೆ.


ಪ್ರಸಕ್ತ ಆರ್ಥಿಕ ವರ್ಷಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆಯವ್ಯಯದಲ್ಲಿ ಒಟ್ಟು 10,032.08 ಕೋಟಿ ರು. ಅನುದಾನ ನಿಗದಿಗೊಳಿಸಿದ್ದು, ಪರಿಷ್ಕೃತ ಅಂದಾಜಿನ ಪ್ರಕಾರ 9,689.40 ಕೋಟಿ ರು.ಗಳಾಗಿತ್ತು. ಇದರಲ್ಲಿ 1,527.08 ಕೋಟಿ ರು. ಬಿಡುಗಡೆ ಆಗಿದೆ ಎಂಬ ಮಾಹಿತಿ ದಾಖಲೆಯಿಂದ ತಿಳಿದು ಬಂದಿದೆ.


ಏಪ್ರಿಲ್‌ ತಿಂಗಳಲ್ಲಿ 1,554.00 ಕೋಟಿ ರು. ಮತ್ತು ಮೇ ತಿಂಗಳಲ್ಲಿ 1,768.07 ಕೋಟಿ ರು. ಸೇರಿದಂತೆ ಒಟ್ಟು 3,322.07 ಕೋಟಿ ರು ಖರ್ಚಾಗಿದೆ. ಒಟ್ಟು ಬಿಡುಗಡೆಯಲ್ಲಿ ಶೇ.217.54ರಷ್ಟು ವೆಚ್ಚವಾಗಿದೆ. ಯಾವ ಯಾವ ಬಾಬ್ತುಗಳಿಗೆ ಖರ್ಚಾಗಿದೆ ಎಂಬ ವಿವರಗಳನ್ನು ಇಲಾಖಾ ಮುಖ್ಯಸ್ಥರು ಸಭೆಯ ಮುಂದಿರಿಸಿಲ್ಲ ಎಂದು ತಿಳಿದು ಬಂದಿದೆ.

ಲಾಕ್‌ಡೌನ್‌ ಜಾರಿಯಾದ ನಂತರ ಬೀದಿಗೆ ಬಿದ್ದಿದ್ದ ವಲಸೆ ಕಾರ್ಮಿಕರಿಗೆ ನೆರವು ನೀಡುವ ಭಾಗವಾಗಿ ಊಹೆಗೂ ಮೀರಿ ವೆಚ್ಚ ಮಾಡಿದೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿರುವ ಕಾರ್ಮಿಕ ಇಲಾಖೆ 42.09 ಕೋಟಿ ರು. ಖರ್ಚು ಮಾಡಿದೆ. 2020-21ರ ಆಯವ್ಯಯದಲ್ಲಿ ನಿಗದಿಗೊಳಿಸಿದ್ದ 611.64 ಕೋಟಿ ರು. ಪೈಕಿ 66.40 ಕೋಟಿ ರು. ಬಿಡುಗಡೆ ಆಗಿತ್ತು. ಏಪ್ರಿಲ್‌ನಲ್ಲಿ 25.28 ಕೋಟಿ ರು. ಮೇ ತಿಂಗಳಲ್ಲಿ 16.81 ಕೋಟಿ ಸೇರಿದಂತೆ ಒಟ್ಟು 42.09 ಕೋಟಿ ರು. ಖರ್ಚಾಗಿರುವುದು ದಾಖಲೆಯಿಂದ ಗೊತ್ತಾಗಿದೆ.


ಇಲಾಖೆಗಳ ವೆಚ್ಚದ ವಿವರ


ಇನ್ನು, ಒಳಾಡಳಿತ ಇಲಾಖೆ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ 1,262.34 ಕೋಟಿ ರು. ವೆಚ್ಚ ಮಾಡಿದೆ. ಪ್ರಾಥಮಿಕ ಶಿಕ್ಷಣ 2,719.02 , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 54.78 ರು.,ಸಮಾಜ ಕಲ್ಯಾಣ ಇಲಾಖೆ 38.18 , ಆರ್ಥಿಕ ಇಲಾಖೆ 1,106.49 , ಲೋಕೋಪಯೋಗಿ 85.58, ಪಶು ಸಂಗೋಪನೆ 167.22, ತೋಟಗಾರಿಕೆ 103.13, ಸಹಕಾರ 34.13, ಯೋಜನಾ 9.19, ಕೌಶಲ್ಯಾಭಿವೃದ್ಧಿ 73.03, ಅರಣ್ಯ 114.98, ಕೃಷಿ 147.42, ಉನ್ನತ ಶಿಕ್ಷಣ 821.92, ಸಣ್ಣ ನೀರಾವರಿ 723.20, ಜಲ ಸಂಪನ್ಮೂಲ 253.03, ಇಂಧನ 253.03, ಸಾರಿಗೆ 507.81, ಪ್ರವಾಸೋದ್ಯಮ 2.48, ಆಹಾರ 384.91, ನಗರಾಭಿವೃದ್ಧಿ 476.46, ಸಿಬ್ಬಂದಿ ಆಡಳಿತ ಸುಧಾರಣೆ 136.04, ಕಾನೂನು 192.72, ಕಂದಾಯ 975.00, ವಿಧಾನಸಭೆ ಸಚಿವಾಲಯ 36.86, ಮಹಿಳಾ ಮತ್ತು ಮಕ್ಕಳ ಕಲ್ಯಾಣ 11.93, ಕನ್ನಡ ಸಂಸ್ಕೃತಿ 11.73, ವಾಣಿಜ್ಯ ಕೈಗಾರಿಕೆ 42.32, ಅಲ್ಪಸಂಖ್ಯಾತರ ಕಲ್ಯಾಣ 8.60, ವಸತಿ 49.63, ಯುವ ಸಬಲೀಕರಣ 3.38, ಮಾಹಿತಿ ತಂತ್ರಜ್ಞಾನ 0.12, ಮೂಲಭೂತ ಸೌಕರ್ಯ 0.09, ಗ್ರಾಮೀಣಾಭಿವೃದ್ಧಿ 121.70 ಕೋಟಿ ರು. ಸೇರಿದಂತೆ ಒಟ್ಟು 41 ಇಲಾಖೆಗಳು 14,071.52 ಕೋಟಿ ರು. ಗಳನ್ನು ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ವೆಚ್ಚ ಮಾಡಿದೆ.


ವಿಶೇಷ ಅಭಿವೃದ್ಧಿಗೆ ಒಟ್ಟು 3,060.90 ಕೋಟಿ ರು.ಗಳನ್ನು 2020-21ರ ಆಯವ್ಯಯದಲ್ಲಿ ನಿಗದಿಗೊಳಿಸಿತ್ತಲ್ಲದೆ ಕಡೆಯಲ್ಲಿ 2,307.88 ಕೋಟಿ ರು.ಗೆ ಪರಿಷ್ಕೃತಗೊಂಡಿತ್ತು. ವಿಶೇಷ ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿರುವ ಕೌಶಲ್ಯಾಭಿವೃದ್ಧಿ ಸೇರಿದಂತೆ ಒಟ್ಟು 17 ಇಲಾಖೆಗಳಿಗೆ ಏಪ್ರಿಲ್‌ ಮತ್ತು ಮೇ ತಿಂಗಳ ಅಂತ್ಯದವರೆಗೆ ಒಂದೇ ಒಂದು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಈ ಇಲಾಖೆಗಳು ತಮ್ಮ ವೆಚ್ಚವನ್ನು ಶೂನ್ಯ ಎಂದು ತೋರಿಸಿರುವುದು ದಾಖಲೆಯಿಂದ ಗೊತ್ತಾಗಿದೆ.


ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಒಟ್ಟು 18,609.51 ಕೋಟಿ ರು.ಗಳನ್ನು 2020-21ರ ಆಯವ್ಯಯದಲ್ಲಿ ನಿಗದಿಗೊಳಿಸಿತ್ತಾದರೂ 17,490.3 ಕೋಟಿ ರು.ಗೆ ಪರಿಷ್ಕೃತಗೊಂಡಿತ್ತು. ಬಿಡುಗಡೆಯಾಗಿದ್ದ 89.23 ಕೋಟಿ ರು.ಪೈಕಿ ಒಟ್ಟು 66.67 ಕೋಟಿ ರು. ಖರ್ಚು ಮಾಡಿದೆ. ಕೃಷಿ ಇಲಾಖೆ 19.05 ಕೋಟಿ, ತೋಟಗಾರಿಕೆ 0.01, ಸಾರಿಗೆ 1.03, ಆರೋಗ್ಯ ಇಲಾಖೆ 56.86 ಕೋಟಿ ರು. ಹೊರತುಪಡಿಸಿದರೆ ಬೇರಾವ ಇಲಾಖೆಗಳು ವೆಚ್ಚ ಮಾಡಿಲ್ಲ.


ಗಿರಿಜನ ಉಪ ಯೋಜನೆಯಡಿ ಒಟ್ಟು 7,948.94 ಕೋಟಿ ರು.ಗಳನ್ನು ಆಯವ್ಯಯದಲ್ಲಿ ನಿಗದಿಗೊಳಿಸಿದ್ದರೆ, ಆ ನಂತರ 7,424.01 ಕೋಟಿ ರು.ಗೆ ಪರಿಷ್ಕೃತಗೊಂಡಿತ್ತು. ಇದರಲ್ಲಿ ಬಿಡುಗಡೆಯಾಗಿದ್ದ 33.71 ಕೋಟಿ ರು. ಪೈಕಿ ಏಪ್ರಿಲ್‌, ಮೇ ತಿಂಗಳ ಅಂತ್ಯಕ್ಕೆ 28.16 ಕೋಟಿ ರು. ಖರ್ಚು ಮಾಡಿದೆ. ಇದರಲ್ಲಿ ಆರೋಗ್ಯ ಇಲಾಖೆ 22.62 ಕೋಟಿ ರು. ವೆಚ್ಚ ಮಾಡಿರುವುದು ದಾಖಲೆಯಿಂದ ಗೊತ್ತಾಗಿದೆ.

SUPPORT THE FILE

Latest News

Related Posts