ಬೆಂಗಳೂರು; ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದ ಆಟೋ ಚಾಲಕರಿಗೆ ಪರಿಹಾರ ಮೊತ್ತ ಘೋಷಣೆ ಮಾಡಿ 2 ತಿಂಗಳು ಕಳೆದಿದ್ದರೂ ಬಹುತೇಕ ಆಟೋ ಚಾಲಕರಿಗೆ ಪರಿಹಾರದ ಹಣ ದೊರೆತಿಲ್ಲ.
ಆಟೋ ಚಾಲಕರಿಗೆ ತಲಾ ತಲಾ 5,000 ರು.ನಂತೆ ಧನ ಸಹಾಯ ನೀಡುವ ಉದ್ದೇಶಕ್ಕೆ 387.50 ಕೋಟಿ ರು.ಅನುದಾನ ಒದಗಿಸಲು ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಈ ಪೈಕಿ 2020ರ ಜೂನ್ 25ರ ಅಂತ್ಯಕ್ಕೆ ಕೇವಲ 60.00 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ. ಇದರಲ್ಲಿ ಎಷ್ಟು ಮಂದಿ ಆಟೋ ಚಾಲಕರಿಗೆ ಪರಿಹಾರ ಧನ ದೊರೆತಿದೆ ಎಂಬ ಬಗ್ಗೆ ಸಾರಿಗೆ ಇಲಾಖೆ ಮಾಹಿತಿ ಒದಗಿಸಿಲ್ಲ.
ಲಾಕ್‌ಡೌನ್ ಪರಿಣಾಮದಿಂದ ಸಂಕಷ್ಟ ಅನುಭವಿಸುತ್ತಿರುವ ಆಟೋ ಚಾಲಕರಿಗೆ ಮತ್ತು ಕೆಎಸ್‌ಆರ್‌ಟಿಸಿ ಸೇರಿದಂತೆ 4 ಸಾರಿಗೆ ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿಗೆ ಎಷ್ಟು ಪ್ರಮಾಣದಲ್ಲಿ ಪರಿಹಾರ ಧನ ವಿತರಿಸಲಾಗಿದೆ ಎಂದು ಆರ್ಥಿಕ ಇಲಾಖೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅಪೂರ್ಣ ಮಾಹಿತಿ ಒದಗಿಸಿದೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಆಟೋ ಚಾಲಕರಿಗೆ ಮತ್ತು ಸಾರಿಗೆ ಸಂಸ್ಥೆಯ ಅಧಿಕಾರಿ, ಸಿಬ್ಬಂದಿಯ ಪರಿಹಾರ ಧನಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರಿಗೆ ಆರ್ಥಿಕ ಇಲಾಖೆ ಮಾಹಿತಿ ಒದಗಿಸಿದೆಯಾದರೂ ಖರ್ಚು ಮಾಡಿರುವ ಬಗ್ಗೆ ಸಾರಿಗೆ ಮತ್ತು ಒಳಾಡಳಿತ ಇಲಾಖೆ ಈವರೆವಿಗೂ ಒಂದೇ ಒಂದು ಮಾಹಿತಿಯನ್ನು ನೀಡಿಲ್ಲ ಎಂದು ಗೊತ್ತಾಗಿದೆ.
ಪರಿಹಾರ ಪಡೆಯಲು ಸರ್ಕಾರದ ಸೇವಾ ಸಿಂಧು ಆ್ಯಪ್ ಮೂಲಕ ಆಟೋ ಹಾಗೂ ಕ್ಯಾಬ್ ಚಾಲಕರು ಅರ್ಜಿ ಸಲ್ಲಿಸಿದ್ದಾರಾದರೂ ವಾಸ್ತವದಲ್ಲಿ ಸೇವಾ ಸಿಂಧು ಆ್ಯಪ್ ನಲ್ಲಿನ ಅರ್ಜಿಗಳ ಪರಿಶೀಲನೆಗೆ ಅನುಕೂಲವಾಗುವಂತಹ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿಲ್ಲ ಎನ್ನಲಾಗಿದೆ. ಹೀಗಾಗಿ ಆಟೋ ಚಾಲಕರಿಗೆ ಪರಿಹಾರ ಧನ ವಿತರಣೆಯಲ್ಲಿ ವಿಳಂಬವಾಗಿದೆ ಎಂದು ತಿಳಿದು ಬಂದಿದೆ.
ನೇರ ನಗದು ಮೂಲಕ ನೆರವು ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು ಸೇವಾ ಸಿಂಧು ಪೋರ್ಟಲ್ ಮತ್ತು ಸಾರಿಗೆ ಮತ್ತು ಹಣಕಾಸು ಇಲಾಖೆಗಳ ನಡುವೆ ದತ್ತಾಂಶವೂ ಪರಿಣಾಮಕಾರಿಯಾಗಿ ಸಂಯೋಜಿತಗೊಂಡಿಲ್ಲ.ತಾಂತ್ರಿಕ ಅಡಚಣೆಗಳನ್ನು ಮುಂದಿಟ್ಟುಕೊಂಡು ಸಾರಿಗೆ ಇಲಾಖೆ ಪರಿಹಾರ ಧನ ವಿತರಣೆಯಲ್ಲಿ ಮಾಡಿರುವ ವಿಳಂಬಕ್ಕೆ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆಟೋ ಮತ್ತು ಕ್ಯಾಬ್ ಚಾಲಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಲೂ ಒದ್ದಾಡುತ್ತಿದ್ದಾರೆ. ಲಭ್ಯವಿರುವ ಮಾಹಿತಿಯಂತೆ 1.30 ಲಕ್ಷ ಅರ್ಜಿಗಳಷ್ಟೇ ಇಲಾಖೆಗೆ ಸ್ವೀಕೃತವಾಗಿದೆ. ಆದರೆ ರಾಜ್ಯದಲ್ಲಿ ಅಂದಾಜು 7.75 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರಿದ್ದಾರೆ.
ಚಾಸಿ ನಂಬರ್ ಮತ್ತು ಇತರೆ ವಿವರಗಳನ್ನು ಆನ್‌ಲೈನ್ ಮೂಲಕ ಒದಗಿಸಿದರೂ ತಂತ್ರಾಂಶ ಸ್ವೀಕರಿಸುತ್ತಿಲ್ಲ.ಹಲವು ಸಂದರ್ಭಗಳಲ್ಲಿ, ತಾಂತ್ರಿಕ ತೊಂದರೆಗಳಿಂದಾಗಿ ಚಾಲಕರ ಚಾಲನಾ ಪರವಾನಗಿ ಮತ್ತು ಆಧಾರ್ ಸಂಖ್ಯೆಯೂ ಸ್ವೀಕೃತಗೊಳ್ಳುತ್ತಿಲ್ಲ ಎನ್ನಲಾಗಿದೆ.
ಬಹುತೇಕ ಆಟೋ ಅಥವಾ ಟ್ಯಾಕ್ಸಿಗಳು ಚಾಲಕರ ಹೆಸರಿನಲ್ಲಿಲ್ಲ. ವಾಹನಕ್ಕೆ ಸಂಬಂಧಿಸಿದ ಬಹುತೇಕ ದಾಖಲೆಗಳು ಮಾಲೀಕರ ಬಳಿ ಇರುತ್ತವೆ. ಆದರೆ ಅರ್ಜಿಯಲ್ಲಿ ಸಮಸ್ತ ದಾಖಲೆಗಳನ್ನು ಲಗತ್ತಿಸಬೇಕು. ಡ್ರೈವಿಂಗ್ ಲೈಸೆನ್ಸ್ ಹಾಗೂ ಆಧಾರ್ ಕಾರ್ಡ್‌ನಲ್ಲಿ ಹೆಸರು ತಪ್ಪಾಗಿ ಉಲ್ಲೇಖವಾದರೂ ಅರ್ಜಿ ಸ್ವೀಕೃತವಾಗುವುದಿಲ್ಲ ಎಂದು ಬಹುತೇಕ ಆಟೋ ಚಾಲಕರು ಆರೋಪಿಸುತ್ತಾರೆ.
ಕೆಎಸ್‌ಆರ್‌ಟಿಸಿ, ಈಶಾನ್ಯ, ವಾಯುವ್ಯ ಸಾರಿಗೆ ಸಂಸ್ಥೆ ಮತ್ತು ಬಿಎಂಟಿಸಿಯ ಅಧಿಕಾರಿ, ಸಿಬ್ಬಂದಿಗೆ 2020ರ ಏಪ್ರಿಲ್ ಮತ್ತು ಮೇ ತಿಂಗಳ ವೇತನ ಭರಿಸಲು ತಿಂಗಳಿಗೆ 325.00 ಕೋಟಿ ರು. ನಂತೆ ಒಟ್ಟು 650.00 ಕೋಟಿ ರು. ಬಿಡುಗಡೆ ಮಾಡಿರುವುದು ಆರ್ಥಿಕ ಇಲಾಖೆಯ ಪತ್ರದಿಂದ ತಿಳಿದು ಬಂದಿದೆ.