ಬೆಂಗಳೂರು; ಸಾವಿರಾರು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಗಂಭೀರ ಆರೋಪಕ್ಕೆ ಒಳಗಾಗಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಪ್ರಕರಣದ ಪ್ರಮುಖ ಆರೋಪಿ ಮೊಹಮದ್ ಮನ್ಸೂರ್ ಖಾನ್ ಪೆಂಟಾಡ್ ಕಮಾಡೀಟಿಸ್ ಪ್ರೈವೈಟ್ ಲಿಮಿಟೆಡ್ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಖರೀದಿಸಿರುವ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಪ್ರಕರಣವನ್ನು ಸಿಬಿಐ ತನಿಖೆ ಕೈಗೆತ್ತಿಕೊಂಡಿರುವ ಬೆನ್ನಲ್ಲೇ ಮನ್ಸೂರ್ ಖಾನ್ ಹೊಂದಿರುವ ಷೇರುಗಳ ವಿವರಗಳನ್ನು ರಾಜ್ಯ ಸರ್ಕಾರವೂ ಕಲೆ ಹಾಕಿದೆ. ವಿವಿಧ ಕಂಪನಿಗಳಲ್ಲಿ ಈತ ಹೊಂದಿರುವ ಷೇರುಗಳ ಮೌಲ್ಯ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರಾಟ ಮಾಡುವ ಸಾಧ್ಯತೆ ಇದೆ ಎಂಬ ಸುಳಿವು ಪಡೆದಿರುವ ಅಧಿಕಾರಿಗಳು ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಭೂ ಕಂದಾಯ ಕಾಯ್ದೆಯನ್ವಯ ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಕೋರಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಮುಂಬೈ ಮೂಲದ ಪೆಂಟಾಡ್ ಕಮಾಡಿಟಿಸ್ ಪ್ರೈವೈಟ್ ಲಿಮಿಟೆಡ್‌ನಲ್ಲಿ ಮೊಹಮದ್ ಮನ್ಸೂರ್ ಖಾನ್ 10 ರು. ಮುಖಬೆಲೆಯ 5 ಲಕ್ಷ ಷೇರುಗಳನ್ನು ಖರೀದಿಸಿದ್ದು, ಪ್ರಸ್ತುತ ಈ ಷೇರುಗಳು 16,55,000 (ರು. 3.31 ಮುಖಬೆಲೆ) ಮೌಲ್ಯಕ್ಕೆ ಇಳಿಕೆಯಾಗಿದೆ. ಈ ಕಂಪನಿಯಲ್ಲಿ ಹೊಂದಿರುವ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳದಿದ್ದಲ್ಲಿ ಆರೋಪಿಯು ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಇದೆ,’ ಎಂದು ಆಡಳಿತ ಇಲಾಖೆ ಅನುಮಾನ ವ್ಯಕ್ತಪಡಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಪೆಂಟಾಡ್ ಕಮಾಡಿಟಿಸ್ ಪ್ರೈವೈಟ್ ಲಿಮಿಟೆಡ್ ಸರ್ಕಾರಿ ಕಂಪನಿಯಲ್ಲ. ಇದೊಂದು ಖಾಸಗಿ ಸಂಸ್ಥೆಯಾಗಿದೆಯಲ್ಲದೆ ಇದರಲ್ಲಿ ಕರ್ನಾಟಕ ಸರ್ಕಾರದ ರಾಜ್ಯಪಾಲರ ಹೆಸರಿನಲ್ಲಿ ಯಾವುದೇ ಷೇರುಗಳಿಲ್ಲ. ಅಲ್ಲದೆ ಕರ್ನಾಟಕ ಸರ್ಕಾರವೂ ಯಾವುದೇ ಬಂಡವಾಳವನ್ನೂ ಹೂಡಿಕೆ ಮಾಡಿಲ್ಲ ಎಂದು ಗೊತ್ತಾಗಿದೆ.
‘ಪೆಂಟಾಡ್ ಕಮಾಡಿಟಿಸ್ ಪ್ರೈವೈಟ್ ಲಿಮಿಟೆಡ್‌ನಲ್ಲಿ ಐಎಂಎ ಪ್ರಕರಣದ ಪ್ರಮುಖ ಆರೋಪಿ ಮೊಹಮದ್ ಮನ್ಸೂರ್ ಖಾನ್ ಹೊಂದಿರುವ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಆಡಳಿತ ಇಲಾಖೆಯು ಸಂಬಂಧಪಟ್ಟ ನಿಯಮಗಳನ್ವಯ ಮತ್ತು ಭೂ ಕಂದಾಯ ಕಾಯ್ದೆನ್ವಯ ಪರಿಶೀಲಿಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳಬಹುದು,’ ಎಂದು ಆರ್ಥಿಕ ಇಲಾಖೆ ಅಭಿಪ್ರಾಯ ನೀಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಈ ಕಂಪನಿ 2017ರ ಮಾರ್ಚ್ 6ರಲ್ಲಿ ಆರಂಭವಾಗಿದೆ. ಇದರ ಷೇರು ಬಂಡವಾಳ 20,000,000 ರು., ಮತ್ತು 12,500,000 ರು. ದುಡಿಯುವ ಬಂಡವಾಳ ರೂಪದಲ್ಲಿದೆ. ಈ ಕಂಪನಿ ಹಣಕಾಸು, ವಿಮೆ ಮತ್ತು ಪಿಂಚಣಿಗೆ ಆರ್ಥಿಕ ನೆರವು ನೀಡುವ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಪನಿ ದಾಖಲೆಗಳಿಂದ ಗೊತ್ತಾಗಿದೆ.
ವಿಶೇಷವೆಂದರೆ ಈ ಕಂಪನಿಯಲ್ಲಿ ಮೊಹಮದ್ ಮನ್ಸೂರ್ ಖಾನ್ ಕೂಡ ಒಬ್ಬ ನಿರ್ದೇಶಕ. ಉಳಿದಂತೆ ವಿಜಯ್ ರಾಘವನ್ ಗೋಪಾಲನ್, ಅಭಿಸಂಕೇರ್ ಪೂವತುಮ್‌ಕಡವೀಲ್ ಸಿವಸಂಕರನ್, ನಿಖಿಲ್ ಕೊಕ್ಕುವಿಲ್ ಗೋಪಾಲಕೃಷ್ಣನ್ ಮತ್ತು ಅಹಮದ್ ರಫಿ ಕಲ್ಲತ್ರ ಇತರೆ ನಿರ್ದೇಶಕರಾಗಿದ್ದಾರೆ.
ಸಾವಿರಾರು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿಗಳ ತನಿಖೆಯನ್ನು ರಾಜ್ಯ ಸರ್ಕಾರ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಒಪ್ಪಿಸಿತ್ತು. ಇದೇ ಪ್ರಕರಣದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಇತ್ತೀಚೆಗಷ್ಟೇ ಸಿಬಿಐ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ವಂಚನೆ ಪ್ರಕರಣ ಗಂಭೀರ ಸ್ವರೂಪದ್ದಾಗಿದೆಯಲ್ಲದೆ ರಾಜ್ಯದೊಳಗಿನ ಹಾಗೂ ಹೊರಗಿನ ಕಂಪನಿಗಳು ಹಾಗೂ ವಿವಿಧ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ವಂಚನೆಗೆ ಸಂಬಂಧಿಸಿದಂತೆ ಕಮರ್ಷಿಯಲ್ ಪೊಲೀಸ್ ಠಾಣೆಯಲ್ಲಿ ಸಾವಿರಾರು ದೂರುಗಳು ದಾಖಲಾಗಿವೆ. ಅದೇ ರೀತಿ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯವೂ ತನಿಖೆ ಮುಂದುವರಿಯುತ್ತಿದೆ.
ಅಲ್ಲದೆ ಅನರ್ಹಗೊಂಡಿರುವ ಶಿವಾಜಿ ನಗರ ಶಾಸಕ ರೋಷನ್ ಬೇಗ್, ಚಾಮರಾಜ ಪೇಟೆಯ ಶಾಸಕ ಜಮೀರ್ ಅಹಮದ್, ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಆಪ್ತರಾದ ಪರಿಷತ್‌ನ ಕಾಂಗ್ರೆಸ್ ಸದಸ್ಯ, ಸಚಿವರಾಗಿದ್ದಾಗ ಜೈಲಿಗೆ ಹೋಗಿ ಬಂದ ಬಿಜೆಪಿ ನಾಯಕ, ಐ.ಟಿ, ಪೊಲೀಸ್, ಆರ್‌ಬಿಐ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳು ಐಎಂಎ ಮಾಲೀಕ ಮನ್ಸೂರ್ ಖಾನ್ ಅವರಿಂದ ‘ಅಕ್ರಮ ಲಾಭ’ ಪಡೆದಿರುವ ಆರೋಪಕ್ಕೆ ಗುರಿಯಾಗಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಶದಲ್ಲಿದ್ದ ಅವಧಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧ ಇರುವ ಕೆಲ ರಾಜಕಾರಣಿಗಳು ಮತ್ತು ಕೆಲ ಸ್ಥಳೀಯ ಮುಸ್ಲಿಂ ಉದ್ಯಮಿಗಳು ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರ ಹೆಸರು ಹೇಳಿದ್ದ ಎನ್ನಲಾಗಿತ್ತು. ಈ ಮಾಹಿತಿಯ ಜಾಡನ್ನು ಬೆನ್ನೆತ್ತಿದ್ದ ಅಧಿಕಾರಿಗಳು ಐಎಂಎ ಜ್ಯುವೆಲ್ಸ್ ಸಮೂಹ ಕಂಪನಿಗಳ ಅಕ್ರಮ ವ್ಯವಹಾರದ ಗೋಪ್ಯತೆ ಕಾಪಾಡಲು ಮೊಹಮ್ಮದ್ ಮನ್ಸೂರ್ ಖಾನ್ ₹ 200 ಕೋಟಿಗೂ ಹೆಚ್ಚು ಹಣವನ್ನು ಹಲವು ಪ್ರಭಾವಿಗಳಿಗೆ ನೀಡಿದ್ದ ಎಂಬ ಮಾಹಿತಿಯನ್ನು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿದ್ದವು.