ರಾಮನಗರ, ಕಲ್ಬುರ್ಗಿಗೆ ಕಳಪೆ ಸ್ಯಾನಿಟೈಸರ್‌ ಪೂರೈಕೆ; ಔಷಧ ನಿಯಂತ್ರಣ ಪ್ರಾಧಿಕಾರ ವರದಿ

ಬೆಂಗಳೂರು; ದರ ಗುತ್ತಿಗೆ ಒಪ್ಪಂದವನ್ನು ಉಲ್ಲಂಘಿಸಿ ಸರ್ಕಾರದ ಬೊಕ್ಕಸಕ್ಕೆ 11 ಕೋಟಿ ರು. ನಷ್ಟಕ್ಕೆ ಕಾರಣವಾಗಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌, ಕಲಬುರಗಿ ಮತ್ತು ರಾಮನಗರ ಜಿಲ್ಲೆಗೆ ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ ಗುಣಮಟ್ಟದಿಂದ ಕೂಡಿಲ್ಲ ಎಂದು ಔಷಧ ನಿಯಂತ್ರಣ ಪ್ರಾಧಿಕಾರ ವರದಿ ನೀಡಿದೆ.


ಸ್ಯಾನಿಟೈಸರ್‌ ಖರೀದಿಯಲ್ಲಿನ ಅಕ್ರಮ ಪ್ರಕರಣಗಳನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ವಿಚಾರಣೆಗೆ ಕೈಗೆತ್ತಿಕೊಂಡಿರುವ ಬೆನ್ನಲ್ಲೇ ಹೊರಬಿದ್ದಿರುವ ಈ ಮಾಹಿತಿ, ಅಕ್ರಮ ಪ್ರಕರಣಗಳನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದಂತಾಗಿದೆ. ಈ ಕಂಪನಿ ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ ಗುಣಮಟ್ಟದಿಂದ ಕೂಡಿಲ್ಲ ಎಂದು ಔಷಧ ನಿಯಂತ್ರಣ ಪ್ರಾಧಿಕಾರದ ಸಹಾಯಕ ನಿಯಂತ್ರಕರು 2020ರ ಜೂನ್‌ 16ರಂದು ವರದಿ ನೀಡಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.


ಆದರೆ ಕರ್ನಾಟಕ ರಾಜ್ಯ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್‌ ಸಂಸ್ಥೆ ಅಧಿಕಾರಿಗಳು ಈ ಕಂಪನಿಯನ್ನು ಇದುವರೆವಿಗೂ ಕಪ್ಪು ಪಟ್ಟಿಗೆ ಸೇರಿಸಿಲ್ಲ ಎಂದು ತಿಳಿದು ಬಂದಿದೆ. ಪಕ್ಷಪಾತದಿಂದ ನಡೆದುಕೊಂಡಿರುವ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆಯಲ್ಲದೆ ಕಂಪನಿಗೆ ಪರೋಕ್ಷವಾಗಿ ನೆರವು ನೀಡುತ್ತಿದ್ದಾರೆ ಎಂಬ ಬಲವಾದ ಆರೋಪವೂ ಕೇಳಿ ಬಂದಿದೆ.


ಈ ಕಂಪನಿ ಈಗಾಗಲೇ 47,000 ಬಾಟಲ್‌ಗಳನ್ನು ಸರಬರಾಜು ಮಾಡಿದೆ. ಕಲಬುರಗಿ ಮತ್ತು ರಾಮನಗರ ಜಿಲ್ಲೆಗೆ ಈ ಕಂಪನಿ ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ನ್ನು ಪರೀಕ್ಷೆಗೆ ಒಳಪಡಿಸಿದ್ದ ರಾಜ್ಯ ಔಷಧ ನಿಯಂತ್ರಣ ಪ್ರಾಧಿಕಾರ, ಕಂಪನಿ ಸರಬರಾಜು ಮಾಡಿದ್ದ 2 ಬ್ಯಾಚ್‌ಗಳಲ್ಲಿದ್ದ ಸ್ಯಾನಿಟೈಸರ್‌ ನಿಗದಿಪಡಿಸಿದ್ದ ಗುಣಮಟ್ಟದಿಂದ ಕೂಡಿಲ್ಲ ಎಂಬುದನ್ನು ಪರೀಕ್ಷೆ ಮೂಲಕ ದೃಢಪಡಿಸಿದೆ.

ಹಾಗೆಯೇ ನಿರ್ದಿಷ್ಟ ಅನುಪಾತದ ಪ್ರಕಾರ ರಾಸಾಯನಿಕವೂ ಅದರಲ್ಲಿ ಇರಲಿಲ್ಲ ಎಂಬ ಮಾಹಿತಿ ಔಷಧ ನಿಯಂತ್ರಣ ಪ್ರಾಧಿಕಾರದ ಸಹಾಯಕ ನಿಯಂತ್ರಕರು ನೀಡಿರುವ ವರದಿಯಿಂದ ಗೊತ್ತಾಗಿದೆ.


ಸ್ಯಾನಿಟೈಸರ್‌ನಲ್ಲಿ 2 ಪ್ರೊಫಾನಲ್‌ 45 ಗ್ರಾಂ ಇರಬೇಕು. ಅದಕ್ಕಿಂತ ಹೆಚ್ಚಿರಬಾರದು. ‘ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌ ಸರಬರಾಜು ಮಾಡಿರುವ ಸ್ಯಾನಿಟೈಸರ್‌ನಲ್ಲಿ 56.20 ಗ್ರಾಂ 2 ಪ್ರೊಫನಾಲ್‌ ಇದೆ. ಅಲ್ಲದೆ 1 ಪ್ರೊಫನಾಲ್‌ 30 ಗ್ರಾಂ ಇರಬೇಕು. ಆದರೆ 39.71 ಗ್ರಾಂ ಇದೆ. ಮೆಕ್ಟ್ರೋನಿಯಂ, ಈಥೈಲ್‌ ಸಲ್ಫೈಡ್‌ ಪ್ರಮಾಣ 20 ಗ್ರಾಂ ಇರಬೇಕು. ಆದರೆ ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌ ಸರಬರಾಜು ಮಾಡಿರುವ ಸ್ಯಾನಿಟೈಸರ್‌ನಲ್ಲಿ 0.194 ಇದೆ,’ ಎಂದು ಪ್ರಯೋಗಾಲಯ ವಿಶ್ಲೇಷಕರಾದ ಎನ್‌ ಎಂ ವೀಣಾ ಅವರು ಹೊರಗೆಡವಿದ್ದಾರೆ. ನಿಗದಿಪಡಿಸಿದ ಫಾರ್ಮುಲಾ ಪ್ರಕಾರ ಇಲ್ಲದ ಈ ಸ್ಯಾನಿಟೈಸರ್‌ನ್ನು ಬಳಸಿದರೆ ಚರ್ಮಕ್ಕೆ ಹಾನಿಯುಂಟು ಮಾಡಲಿದೆ ಎಂದು ತಜ್ಞರು ಹೇಳುತ್ತಾರೆ.


ಪ್ರಯೋಗಾಲಯದ ವರದಿ, ಕರ್ನಾಟಕ ಸ್ಟೇಟ್‌ ಡ್ರಗ್‌ ಅಂಡ್‌ ಲಾಜಿಸ್ಟಿಕ್ಸ್‌ ಕೈ ಸೇರಿದ್ದರೂ ಸಚಿವ ಶ್ರೀರಾಮುಲು ಅವರು ವಹಿಸಿರುವ ಮೌನ ಸಂಶಯಗಳಿಗೆ ಕಾರಣವಾಗಿದೆ. ‘ಕಲಬುರಗಿ ಮತ್ತು ರಾಮನಗರ ಜಿಲ್ಲೆ ಮಾತ್ರವಲ್ಲ ರಾಜ್ಯದ ಇತರೆ ಜಿಲ್ಲೆಗಳಿಗೂ ಈ ಕಂಪನಿ ಸ್ಯಾನಿಟೈಸರ್‌ನ್ನು ಸರಬರಾಜು ಮಾಡಿದೆ. ಔಷಧ ನಿಯಂತ್ರಣ ಪ್ರಾಧಿಕಾರ, ಉಳಿದ ಜಿಲ್ಲೆಗಳಿಗೂ ಸರಬರಾಜಾಗಿರುವ ಸ್ಯಾನಿಟೈಸರ್‌ನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದರೆ ಇನ್ನಷ್ಟು ಪ್ರಕರಣಗಳು ವರದಿಯಾಗಬಹುದು,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.

ಟೆಂಡರ್‌ ಷರತ್ತು ಪ್ರಕಾರ 2 ಬ್ಯಾಚ್‌ಗಳು ಗುಣಮಟ್ಟದಿಂದ ಕೂಡಿಲ್ಲ ಎಂಬ ವರದಿ ನೀಡಿದ್ದರೆ ತಕ್ಷಣವೇ ಆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಔಷಧ ನಿಯಂತ್ರಣ ಪ್ರಾಧಿಕಾರ ವರದಿ ನೀಡಿ ನಾಲ್ಕೈದು ದಿನಗಳಾದರೂ ಕರ್ನಾಟಕ ರಾಜ್ಯ ಡ್ರಗ್‌ ಅಂಡ್‌ ಲಾಜಿಸ್ಟಿಕ್‌ ಸಂಸ್ಥೆ ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲ.


ಅಧಿಕಾರಿಗಳ ಪಕ್ಷಪಾತ


ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್ ಮಾತ್ರವಲ್ಲ ಧಾರವಾಡದ ಅಲಿಗೇನ್‌ ಡ್ರಗ್ಸ್‌ ಪ್ರೈ ಲಿ., ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ ಕೂಡ ಗುಣಮಟ್ಟದಿಂದ ಕೂಡಿರಲಿಲ್ಲ ಎಂಬ ವರದಿ ಆಧರಿಸಿ ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಆದರೆ ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌ ಕಂಪನಿಯನ್ನು ಈವರೆವಿಗೂ ಕಪ್ಪು ಪಟ್ಟಿಗೆ ಸೇರಿಸದ ಅಧಿಕಾರಿಗಳ ಪಕ್ಷಪಾತವು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.


‘ಈ ಕಂಪನಿಗೆ ನೋಟೀಸ್‌ ಕೊಡದೇ ಇರುವುದಕ್ಕೆ ಮತ್ತು ಕಪ್ಪು ಪಟ್ಟಿಗೆ ಸೇರಿಸದೇ ಇರುವುದಕ್ಕೆ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರವೇ ಕಾರಣ. ಇಲ್ಲದಿದ್ದರೆ ಅದು ಇಷ್ಟೊತ್ತಿಗಾಗಲೇ ಕಪ್ಪು ಪಟ್ಟಿಗೆ ಸೇರಿರುತ್ತಿತ್ತು. ಈ ಕಂಪನಿ ರಾಜ್ಯದ ಇತರೆ ಜಿಲ್ಲೆಗಳಿಗೆ ಸರಬರಾಜು ಮಾಡಿರುವ ಸ್ಯಾನಿಟೈಸರ್‌ನ್ನು ತಪಾಸಣೆಗೊಳಪಡಿಸಬೇಕು ಮತ್ತು ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತ ಸಂಸ್ಥೆ ಬದುಕಿದ್ದರೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.


ಸ್ಯಾನಿಟೈಸರ್‌ ಸರಬರಾಜಿಗೆ ಸಂಬಂಧಿಸಿದಂತೆ 2019ರ ಅಕ್ಟೋಬರ್‌ 19ರಂದು ಕರೆಯಲಾಗಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌, ಘಟಕವೊಂದಕ್ಕೆ 97.44 ರು. ನಮೂದಿಸಿ ಎಲ್‌ 1 ಆಗಿತ್ತು. ಅದರಂತೆ 45 ಲಕ್ಷ ರು. ಮೊತ್ತದಲ್ಲಿ 47,000 ಬಾಟಲ್‌ (ತಲಾ ಬಾಟಲ್‌ 500 ಎಂ ಎಲ್‌)ಗಳನ್ನು ಸರಬರಾಜು ಮಾಡಲು 2020ರ ಫೆಬ್ರುವರಿಯಲ್ಲಿ ದರ ಗುತ್ತಿಗೆ ಪ್ರಕಾರ ಖರೀದಿ ಆದೇಶ ಪಡೆದಿತ್ತು.


ಈ ಕಂಪನಿ ಆರಂಭದಲ್ಲಿ ನಮೂದಿಸಿದ್ದ ದರಕ್ಕೂ ಮತ್ತು ನಂತರ ನೀಡಿದ್ದ ಖರೀದಿ ಆದೇಶದ ಮೊತ್ತದಲ್ಲಿ ಒಟ್ಟು 152.56 ರು. ವ್ಯತ್ಯಾಸವಿತ್ತು. ಇದರಿಂದಾಗಿ ಸರ್ಕಾರಕ್ಕೆ ಒಟ್ಟು 11,89,85,600 ರು.ಗಳು ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಸ್ಯಾನಿಟೈಸರ್‌ ಖರೀದಿಯಲ್ಲಿನ ಅಕ್ರಮದ ಬಗ್ಗೆ ‘ದಿ ಫೈಲ್‌’ ವರದಿ ಮಾಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts