ಕರ್ನಾಟಕದ ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿ ಅಕ್ರಮ; ಆರ್‌ಬಿಐ ಗೌಪ್ಯ ವರದಿ ಬಹಿರಂಗ

ಬೆಂಗಳೂರು; ರಾಜ್ಯದ ಮಲ್ಲಿಕಾರ್ಜುನ ಪಟ್ಟಣ ಸಹಕಾರ ಬ್ಯಾಂಕ್‌ ಸೇರಿದಂತೆ ಹಲವು ಪಟ್ಟಣ ಸಹಕಾರ ಬ್ಯಾಂಕ್‌ಗಳು ಸಾಲ, ಮುಂಗಡ, ಹೂಡಿಕೆ, ನಗದು ನಿರ್ವಹಣೆ, ಅನುಮಾನಸ್ಪದ ವಹಿವಾಟು ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಗಂಭೀರ ಆರೋಪಕ್ಕೆ ಗುರಿಯಾಗಿವೆ.


ಈ ಕುರಿತು ಭಾರತೀಯ ರಿಸರ್ವ್‌ಬ್ಯಾಂಕ್‌ 2020ರ ಮಾರ್ಚ್‌ನ ವಿವಿಧ ದಿನಾಂಕಗಳಲ್ಲಿ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಅವರಿಗೆ ಸಲ್ಲಿಸಿರುವ ‘ಗೌಪ್ಯ’ ವರದಿ, ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿನ ಹಲವು ನಿಯಮಬಾಹಿರ ಚಟುವಟಿಕೆ ಮತ್ತು ದೊಡ್ಡ ಮೊತ್ತದ ವಂಚನೆ ಪ್ರಕರಣಗಳನ್ನು ಹೊರಗೆಡವಿದೆ. ಈ ಎಲ್ಲಾ ಗೌಪ್ಯ ವರದಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಹಲವು ಪಟ್ಟಣ ಸಹಕಾರ ಬ್ಯಾಂಕ್‌ಗಳ ಆಡಳಿತ ಮಂಡಳಿಯ ವಿಪರೀತ ಹಸ್ತಕ್ಷೇಪ ಮತ್ತು ಆರ್ಥಿಕ ಅಶಿಸ್ತಿನ ಕಾರಣಗಳಿಂದಾಗಿ ಎನ್‌ಪಿಎ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ ಎಂದು ಆರ್‌ಬಿಐ ಗೌಪ್ಯ ವರದಿಯಲ್ಲಿ ವಿವರಿಸಿದೆ. 2019ರ ಮಾರ್ಚ್‌ ಅಂತ್ಯದ ಹಣಕಾಸಿನ ವರ್ಷಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಸಿರುವ ಆರ್‌ಬಿಐ, ವರದಿ ಆಧರಿಸಿ ಸೂಕ್ತ ಕ್ರಮ ಜರುಗಿಸಿ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವುದು ವರದಿಯಿಂದ ಗೊತ್ತಾಗಿದೆ.


ರಾಯಚೂರು ಮಸ್ಕಿಯ ಮಲ್ಲಿಕಾರ್ಜುನ ಪಟ್ಟಣ ಸಹಕಾರ ಬ್ಯಾಂಕ್‌, ಬನಹಟ್ಟಿಯ ಕಾಡಸಿದ್ದೇಶ್ವರ, ಬಸವನಬಾಗೇವಾಡಿಯ ಬಸವೇಶ್ವರ ಸಹಕಾರ ಬ್ಯಾಂಕ್‌, ಹಡಗಲಿ ಅರ್ಬನ್‌ಕೋ ಆಪರೇಟೀವ್‌ ಬ್ಯಾಂಕ್‌, ಮಡಿಕೇರಿಯ ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‌, ತಾಳಿಕೋಟೆಯ ತಾಳಿಕೋಟೆ ಸಹಕಾರಿ ಬ್ಯಾಂಕ್‌, ಕಲಬುರಗಿಯ ಛತ್ರಪತಿ ಶಿವಾಜಿ ಮಹಾರಾಜ ಸಹಕಾರಿ ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಕುರಿತು ತಪಾಸಣೆ ನಡೆಸಿರುವ ಆರ್‌ಬಿಐ ಅಧಿಕಾರಿಗಳು, ಅಲ್ಲಿನ ಹಲವು ಲೋಪಗಳನ್ನು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.


ಬಂಡವಾಳ ಮತ್ತು ಮೂಲ ಬಂಡವಾಳ ಮೊತ್ತದಲ್ಲಿ ಭಾರೀ ವ್ಯತ್ಯಾಸಗಳನ್ನು ಹೊರಗೆಡವಿರುವ ಆರ್‌ಬಿಐ ತಪಾಸಣೆ ತಂಡ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಲ್ಲಿ ನಾನ್‌ ಎಸ್‌ಎಲ್‌ಆರ್‌ನಲ್ಲಿ ಹೂಡಿಕೆ ಮಾಡಿರುವ ಮೊತ್ತ ಶೇಕಡವಾರು ಹೆಚ್ಚಿದೆ ಎಂದು ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.


ಅದೇ ರೀತಿ ಪಟ್ಟಣ ಸಹಕಾರ ಬ್ಯಾಂಕ್‌ಗಳು ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿಲ್ಲವಲ್ಲದೆ ಬಹುತೇಕ ಬ್ಯಾಂಕ್‌ಗಳ ಕಾರ್ಯನಿರ್ವಹಣೆ ವೆಚ್ಚವನ್ನು ಆಡಳಿತ ಮಂಡಳಿಗಳು ಪ್ರತಿ ವರ್ಷವೂ ಹೆಚ್ಚಿಸಿದೆ. ಬ್ಯಾಂಕ್‌ಗಳ ಆರ್ಥಿಕ ಚಟುವಟಿಕೆಗಳ ಕುರಿತು ನಡೆದಿರುವ ಸಮವರ್ತಿತ ಲೆಕ್ಕಪರಿಶೋಧನೆಯೂ ಕ್ರಮ ಬದ್ಧವಾಗಿಲ್ಲ ಎಂಬ ಅಂಶ ಆರ್‌ಬಿಐನ ಗೌಪ್ಯ ವರದಿಯಿಂದ ತಿಳಿದು ಬಂದಿದೆ.


ಇನ್ನು, ಹಲವು ಬ್ಯಾಂಕ್‌ಗಳು ಹೂಡಿರುವ ಮೊತ್ತದಿಂದ ಬಿಡಿಗಾಸು ಲಾಭಾಂಶ ಗಳಿಸಿಲ್ಲ. ಹೀಗಾಗಿ ಹೂಡಿಕೆ ಮೊತ್ತ ಅನುತ್ಪಾದಕವಾಗಿದೆ. ಆಡಳಿತ ಮಂಡಳಿಯ ಅನುಮತಿ ಇಲ್ಲದೇ ಸಾಲ ನೀಡಿರುವ ಪಟ್ಟಣ ಸಹಕಾರ ಬ್ಯಾಂಕ್‌ಗಳು, ಆಸ್ತಿ ಹೊಣೆಗಾರಿಕೆ ಸಮಿತಿಗಳನ್ನೇ ರಚಿಸಿಲ್ಲ.


ಎನ್‌ಪಿಎ ಪ್ರಮಾಣವನ್ನು ಕಡಿಮೆಗೊಳಿಸಬೇಕು ಎಂದು ಆರ್‌ಬಿಐ ನೀಡಿದ್ದ ಕಟ್ಟುನಿಟ್ಟಿನ ಸೂಚನೆಯನ್ನು ಪಟ್ಟಣ ಸಹಕಾರ ಬ್ಯಾಂಕ್‌ಗಳು ಪಾಲಿಸಿಲ್ಲ. ಹಳೆ ಗ್ರಾಹಕರ ಖಾತೆಯನ್ನು ಸರಿಯಾಗಿ ನಿರ್ವಹಿಸದಿರುವುದು, ಅನುಮಾನಸ್ಪದ ವಹಿವಾಟು ನಡೆಸಿರುವುದು, ಠೇವಣಿಗೆ ವಿರುದ್ಧವಾಗಿ ಮುಂಗಡ ನೀಡಿರುವುದು, ಬಡ್ಡಿ ರಹಿತ ವೆಚ್ಚದಲ್ಲಿನ ಏರಿಕೆ, ಹೊಸ ಖಾತೆಗಳನ್ನು ಮರು ಪರೀಕ್ಷಿಸದಿರುವುದು ಸೇರಿದಂತೆ ಹಲವು ಅಕ್ರಮಗಳು ನಡೆದಿರುವುದು ಆರ್‌ಬಿಐ ತಪಾಸಣೆಯಿಂದ ಗೊತ್ತಾಗಿದೆ.


ಬ್ಯಾಂಕ್‌ಗಳ ಆರ್ಥಿಕ ಚಟುವಟಿಕೆಗಳ ಕುರಿತು ನಡೆಸಿರುವ ಶಾಸನಬದ್ಧ ಲೆಕ್ಕ ಪರಿಶೋಧನೆಗೂ ಆರ್‌ಬಿಐ ತಪಾಸಣೆ ವರದಿ ಮಧ್ಯೆ ಭಾರೀ ವ್ಯತ್ಯಾಸಗಳು ಕಂಡು ಬಂದಿವೆ. ಎನ್‌ಪಿಎಗೆ ಸಂಬಂಧಿಸಿದಂತೆ ನಡೆದಿರುವ ಶಾಸನಬದ್ಧ ಲೆಕ್ಕ ಪರಿಶೋಧನೆಯನ್ನು ಬದಿಗೆ ಸರಿಸಿರುವ ಆರ್‌ಬಿಐ ತಪಾಸಣೆ ತಂಡ, ಹೆಚ್ಚಿನ ಮೊತ್ತ ಎನ್‌ಪಿಎ ಆಗಿರುವುದನ್ನು ಪತ್ತೆ ಹಚ್ಚಿದೆ. ಅದೇ ರೀತಿ ನಷ್ಟಕ್ಕೆ ಸಂಬಂಧಿಸಿದಂತೆ ಶಾಸನಬದ್ಧ ಲೆಕ್ಕ ಪರಿಶೋಧನೆ ನೀಡಿರುವ ವರದಿಯ ನೈಜತೆಯನ್ನು ಒರೆಗೆ ಹಚ್ಚಿದೆಯಲ್ಲದೆ ನಷ್ಟದ ಮೊತ್ತದಲ್ಲಿ ಹೆಚ್ಚಳವಾಗಿರುವುದನ್ನು ಬೆಳಕಿಗೆ ತಂದಿರುವುದು ವರದಿಯಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts