79 ಎ, ಬಿ ಉಲ್ಲಂಘನೆ; 5,000 ಎಕರೆ ಕೃಷಿ ಜಮೀನು ಗೃಹ ನಿರ್ಮಾಣ ಸಹಕಾರ ಸಂಘಗಳ ಪಾಲು?

ಬೆಂಗಳೂರು; ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅಧ್ಯಕ್ಷರಾಗಿದ್ದ ಕರ್ನಾಟಕ ರಾಜ್ಯ ವಸತಿ ಮಹಾಮಂಡಲ ಸೇರಿದಂತೆ ವಿವಿಧ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಗಳು ಕರ್ನಾಟಕ ಭೂ ಸುಧಾರಣೆ ಕಾಯ್ದೆ 79 ಎ ಮತ್ತು 79 ಬಿ ಕಲಂನ್ನು ಉಲ್ಲಂಘಿಸಿ ಅಂದಾಜು 10 ಸಾವಿರ ಕೋಟಿ ರು. ಬೆಲೆ ಬಾಳುವ 5,027 ಎಕರೆ ವಿಸ್ತೀರ್ಣದ ಕೃಷಿ ಭೂಮಿಯನ್ನು ಮಧ್ಯವರ್ತಿಗಳ ಮೂಲಕ ಖರೀದಿಸಿರುವುದು ಬಹಿರಂಗವಾಗಿದೆ.


ಭೂ ಸುಧಾರಣಾ ಕಾಯ್ದೆಯ ಸೆಕ್ಷನ್‍ 79 ಎ ಮತ್ತು ಬಿ ತೆಗೆದುಹಾಕಿರುವ ಬಿಜೆಪಿ ಸರ್ಕಾರ, ಕೃಷಿ ಜಮೀನನ್ನು ಉಳ್ಳವರ ಪಾಲಾಗಿಸುತ್ತಿದೆ ಎಂದು ಪ್ರತಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿರುವ ಬೆನ್ನಲ್ಲೇ ಗೃಹ ನಿರ್ಮಾಣ ಸಹಕಾರ ಸಂಘಗಳು 79 ಎ ಮತ್ತು ಬಿ ಕಲಂನ್ನು ಉಲ್ಲಂಘಿಸಿ ಕೃಷಿ ಜಮೀನು ಖರೀದಿ ಮಾಡಿರುವ ಪ್ರಕರಣಗಳು ಮುನ್ನೆಲೆಗೆ ಬಂದಿದೆ. ಕಾಯ್ದೆ ಉಲ್ಲಂಘಿಸಿ ಹಲವು ವರ್ಷಗಳ ಹಿಂದೆಯೇ ಕೃಷಿ ಜಮೀನು ಖರೀದಿಸಿದ್ದರೂ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲ.


ಪ್ರತಿಷ್ಠಿತ ಗೃಹ ನಿರ್ಮಾಣ ಸಹಕಾರ ಸಂಘಗಳು ಬೆಂಗಳೂರು ನಗರದ ಯಲಹಂಕ, ಹೆಜ್ಜಾಲ, ಸರ್ಜಾಪುರ ರಸ್ತೆ, ಆನೇಕಲ್‌, ಜಾಲಿಗೆ, ಅರದೇಶನಹಳ್ಳಿ, ಚಿಕ್ಕಜಾಲ, ಕೊಡಿಗೆಹಳ್ಳಿ, ಹೆಸರಘಟ್ಟ, ತಿಂಡ್ಲು ಸೇರಿದಂತೆ ವಿವಿಧೆಡೆ 79 ಎ ಮತ್ತು ಬಿ ಕಲಂ ಉಲ್ಲಂಘಿಸಿ ಕೃಷಿ ಜಮೀನು ಖರೀದಿಸಿರುವುದು ಸಂಘಗಳ ಲೆಕ್ಕ ಪರಿಶೋಧನೆ ವರದಿಗಳಿಂದ ತಿಳಿದು ಬಂದಿದೆ.


ಮಧ್ಯವರ್ತಿ, ಅಭಿವೃದ್ಧಿದಾರರ ಜತೆಗೆ ಗೃಹ ನಿರ್ಮಾಣ ಸಹಕಾರ ಸಂಘಗಳ ಮಧ್ಯೆ ಆಗಿರುವ ಎಂಒಯು ಪ್ರಕಾರ ಎಕರೆಗೆ 1.50 ಕೋಟಿ ರು.ನಿಂದ 2 ಕೋಟಿ ರು.ವರೆಗೆ ಜಮೀನು ಖರೀದಿಸಲಾಗಿದೆ. ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಖರೀದಿಸಿರುವ ಈ ಜಮೀನುಗಳ ಅಂದಾಜು ಮೌಲ್ಯ 10,000 ಕೋಟಿ ರು. ಎಂದು ಹೇಳಲಾಗಿದೆ.


ಟೆಲಿಕಾಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ 916.02 ಎಕರೆ, ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ 318.02 ಎಕರೆ, ಕರ್ನಾಟಕ ಟೆಲಿಕಾಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ 1,603 ಎಕರೆ, ಕರ್ನಾಟಕ ವಸತಿ ಮಹಾಮಂಡಲ 285.08 ಎಕರೆ, ಬೆಮೆಲ್‌ ನೌಕರರ ಸಂಘ 465.47 ಎಕರೆ, ಬಿಎಚ್‌ಇಎಲ್‌ 460.76 ಎಕರೆ, ಮಿನಿಸ್ಟ್ರಿ ಆಫ್‌ ಕಮ್ಯುನಿಕೇಷನ್ಸ್‌ 667.44 ಎಕರೆ, ನ್ಯಾಯಾಂಗ ಇಲಾಖೆ ನೌಕರರ ಸಂಘ 315.26 ಎಕರೆ ಸೇರಿದಂತೆ ಒಟ್ಟು 5,027 ಎಕರೆ ಕೃಷಿ ಜಮೀನನ್ನು ಖರೀದಿಸಿರುವುದು ಲೆಕ್ಕ ಪರಿಶೋಧನೆ ವರದಿಯಿಂದ ಗೊತ್ತಾಗಿದೆ.


ಮಧ್ಯವರ್ತಿಗಳ ಮೂಲಕ ಜಮೀನು ಖರೀದಿಸಿರುವ ಗೃಹ ನಿರ್ಮಾಣ ಸಹಕಾರ ಸಂಘಗಳು ನೋಂದಣಿ ಮುದ್ರಾಂಕ ಶುಲ್ಕದಲ್ಲಿಯೂ ಸರ್ಕಾರಕ್ಕೆ ವಂಚನೆ ಮಾಡಿವೆ ಎಂದು ಹೇಳಲಾಗಿದೆ. ಕಲಂ 79-ಎ ಮತ್ತು 79-ಬಿ ಉಲ್ಲಂಘಿಸಿ ಕೃಷಿ ಜಮೀನು ಖರೀದಿಸಿರುವ ಆರೋಪದ ಮೇಲೆ ಈವರೆಗೆ ರಾಜ್ಯದಾದ್ಯಂತ 17,574 ಪ್ರಕರಣಗಳು ದಾಖಲಾಗಿವೆ.


ಈ ಪೈಕಿ 12,490 ಪ್ರಕರಣಗಳು ವಿಲೇವಾರಿ ಆಗಿವೆ. 5,490 ಪ್ರಕರಣಗಳಲ್ಲಿ ಭೂ ಸುಧಾರಣಾ ಕಾಯ್ದೆಯ ಉಲ್ಲಂಘನೆ ಆಗಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ 9.316 ಪ್ರಕರಣಗಳು ದಾಖಲಾಗಿದ್ದು, 6,769 ಪ್ರಕರಣಗಳ ವಿಲೇವಾರಿ ಆಗಿದೆ. 319 ಪ್ರಕರಣಗಳಲ್ಲಿ ಉಲ್ಲಂಘನೆ ಆಗಿರುವುದು ಖಚಿತಪಟ್ಟಿದೆ ಎಂದು ತಿಳಿದು ಬಂದಿದೆ. ಆದರೆ ಈ ಕಲಂನ್ನು ಉಲ್ಲಂಘಿಸಿರುವ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಗಳ ವಿರುದ್ಧ ಹಿಂದಿನ ಯಾವ ಸರ್ಕಾರಗಳೂ ಕ್ರಮ ಕೈಗೊಂಡಿಲ್ಲ.


ಬಹುತೇಕ ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ರಾಜಕೀಯದ ನಂಟು ಹೊಂದಿವೆ. ಎಸ್‌ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಹಕಾರ ಸಚಿವರಾಗಿದ್ದ ಡಿ ಕೆ ಶಿವಕುಮಾರ್‌, ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಲಕ್ಷ್ಮಣ ಸವದಿ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಚ್‌ ಎಸ್‌ ಮಹದೇವಪ್ರಸಾದ್‌ ಹಾಗೂ ಜೆಡಿಎಸ್‌,ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರದಲ್ಲಿ ಬಂಡೆಪ್ಪ ಕಾಶೆಂಪೂರ ಅವರು ಸಹಕಾರ ಸಚಿವರಾಗಿದ್ದ ಅವಧಿಯಲ್ಲಿಯೂ ಒಂದೇ ಒಂದು ಗೃಹ ನಿರ್ಮಾಣ ಸಹಕಾರ ಸಂಘದ ವಿರುದ್ಧ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ.


ಅದರಲ್ಲೂ ಡಿ ಕೆ ಶಿವಕುಮಾರ್‌ ಅವರು ಸಹಕಾರ ಸಚಿವರಾಗಿದ್ದ ಅವಧಿಯಲ್ಲೇ ಬಹುತೇಕ ಗೃಹ ನಿರ್ಮಾಣ ಸಹಕಾರ ಸಂಘಗಳ ಹೆಸರಿನಲ್ಲಿದ್ದ ಜಮೀನುಗಳು ಬೃಹತ್‌ ಕಟ್ಟಡ ನಿರ್ಮಾಣ ಕಂಪನಿಗಳು, ರಿಯಲ್‌ ಎಸ್ಟೇಟ್‌ ಕುಳಗಳು, ಡೆವಲಪರ್ಸ್‌ಗಳ ಪಾಲಾಗಿವೆ.

the fil favicon

SUPPORT THE FILE

Latest News

Related Posts