131 ಕೋಟಿ ರು.ಅನುದಾನ ದುರ್ಬಳಕೆ; ಸಿಎಜಿ ವರದಿಗೆ ಮಾಹಿತಿ ಒದಗಿಸದ ಕನ್ನಡ ಸಂಸ್ಕೃತಿ ಇಲಾಖೆ

ಬೆಂಗಳೂರು; ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ 2018ರ ಮಾರ್ಚ್‌ ಅಂತ್ಯಕ್ಕೆ ಸಿಎಜಿ ನೀಡಿರುವ ವರದಿ ಮೇಲೆ ಮಾಹಿತಿ ನೀಡಬೇಕಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ವಿಳಂಬ ಧೋರಣೆ ಅನುಸರಿಸುತ್ತಿರುವುದು ಬಹಿರಂಗವಾಗಿದೆ.


ಕನ್ನಡ ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದ ಕಂಡಿಕೆಗಳಿಗೆ ಇಲಾಖೆ ಟಿಪ್ಪಣಿ ನೀಡಬೇಕು ಎಂದು ಆರ್ಥಿಕ ಇಲಾಖೆ 2019ರ ಅಕ್ಟೋಬರ್‌ 25ರಿಂದ ಹಲವು ಪತ್ರಗಳನ್ನು ಬರೆದರೂ ಇಲಾಖೆ ನಿರ್ದೇಶಕರು ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಇಲಾಖೆಯ ಈ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿರುವ ಶಿಕ್ಷಣ, ಕನ್ನಡ, ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ 2020ರ ಮೇ 22ರಂದು ಖಾರವಾಗಿ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. ಸದ್ಯ ಸಿ ಟಿ ರವಿ ಅವರು ಈ ಖಾತೆಯನ್ನು ನಿಭಾಯಿಸುತ್ತಿದ್ದಾರೆ.


‘ಆರ್ಥಿಕ ಇಲಾಖೆಯಿಂದ ಜರೂರಾಗಿ ಇಲಾಖಾ ಟಿಪ್ಪಣಿಯನ್ನು ಸಲ್ಲಿಸುವಂತೆ ಸೂಚಿಸಿರುತ್ತಾರೆ. ಆದ್ದರಿಂದ ಕನ್ನಡ ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದಂತೆ ಕಂಡಿಕೆಗಳಿಗೆ ಇಲಾಖೆ ಟಿಪ್ಪಣಿಯನ್ನು ಸಿದ್ಧಪಡಿಸಿ ಆಡಳಿತಾತ್ಮಕ ಷರಾ ನಮೂದಿಸಬೇಕು,’ ಎಂದು ಪತ್ರದಲ್ಲಿ ಸೂಚಿಸಿದ್ದಾರೆ.

ಅನಗತ್ಯ ಪೂರಕ ಅಂದಾಜುಗಳು, ದೋಷಪೂರಿತ ಪುನರ್‌ ವಿನಿಯೋಗ ಆದೇಶಗಳು, ಅವಕಾಶಗಳು ಬಳಕೆಯಾಗದೆ ಉಳಿದು ಅದರ ಯಾವುದೇ ಭಾಗವನ್ನು ಆಧ್ಯರ್ಪಣೆ ಮಾಡದಿರುವ ವಿವಿಧ ಅನುದಾನಗಳು, ಸರ್ಕಾರದಿಂದ ಗಣನೀಯವಾಗಿ ಆರ್ಥಿಕ ಬೆಂಬಲ ಪಡೆದ ಸಂಸ್ಥೆಗಳಿಂದ ಮಾಹಿತಿ ಬಾರದಿರುವುದು, ಬೇಡಿಕೆಗಳಡಿ ಹೆಚ್ಚುವರಿ ಪಾವತಿಗಳ ವಸೂಲಿಗಾಗಿ ಅವಕಾಶ ಕಲ್ಪಿಸಿರುವ ವಿಷಯಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಇಲಾಖೆ ಒದಗಿಸಬೇಕಿದೆ.


ರಾಜ್ಯ ಸರ್ಕಾರವು ಸಾಂಸ್ಕೃತಿಕ ಭವನ ಕಟ್ಟಲು ನೀಡಿದ್ದ ಅನುದಾನದಲ್ಲಿ ಮದುವೆ ಛತ್ರ, ವಸತಿಗೃಹ, ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಿದ್ದನ್ನು ಸಿಎಜಿ ಹೊರಗೆಡವಿತ್ತು. ಸರ್ಕಾರದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿಎಜಿ, 53 ಪ್ರಕರಣಗಳಲ್ಲಿ ಯೋಗ, ಶಿಕ್ಷಣ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ₹ 13.33 ಕೋಟಿ ಅನುದಾನ ನೀಡಿದ್ದು ಮತ್ತು ಜಮೀನು ಸ್ವಾಧೀನ ಪತ್ರ, ಕಟ್ಟಡ ನಕ್ಷೆಯಂತಹ ದಾಖಲೆಗಳನ್ನು ಸಲ್ಲಿಸದೇ ಇದ್ದರೂ 28 ಪ್ರಕರಣಗಳಲ್ಲಿ ₹ 9.97 ಕೋಟಿ ಅನುದಾನ ನೀಡಿದ್ದನ್ನು ಬಹಿರಂಗಗೊಳಿಸಿತ್ತು.


2013ರಿಂದ 2018ರ ಅವಧಿಯಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಸಲು 3,738 ಸಂಸ್ಥೆಗಳಿಗೆ ಸರ್ಕಾರ ನೀಡಿದ್ದ ₹ 65.54 ಕೋಟಿ ರು. ಪೈಕಿ 10 ಜಿಲ್ಲೆಗಳಲ್ಲಿನ 1,982 ಸಂಸ್ಥೆಗಳಿಗೆ ₹39.94 ಕೋಟಿ ಅನುದಾನ ನೀಡಿದ್ದನ್ನು ಸಿಎಜಿ ಬಲವಾಗಿ ಆಕ್ಷೇಪಿಸಿತ್ತು.
ಸಾಂಸ್ಕೃತಿಕ ಹಾಗೂ ಕಲೆಗೆ ಸಂಬಂಧಿಸಿದ ಚಟುವಟಿಕೆಗೆ ಮಾತ್ರ ಹಣ ಬಳಸದೇ 54 ಪ್ರಕರಣಗಳಲ್ಲಿ ಶಿಕ್ಷಣ ಸಂಸ್ಥೆಗಳು, ಮಾಧ್ಯಮ, ಸಾಮಾಜಿಕ ಭದ್ರತಾ ಪಿಂಚಣಿಯ ವಿವರಣೆ, ಗ್ರಾಮೀಣಾಭಿವೃದ್ಧಿ ಕೆಲಸ ಮಾಡುವ ಸಂಸ್ಥೆಗಳಿಗೆ ಅನುದಾನ ನೀಡಿ ದುರ್ಬಳಕೆ ಆಗಿದ್ದನ್ನು ಸಿಎಜಿ ಹೊರಗೆಡವಿತ್ತು.


32 ಸಾಂಸ್ಕೃತಿಕ ಭವನಗಳಿಗೆ ₹3.49 ಕೋಟಿ ರು., ಸಾಂಸ್ಕೃತಿಕ ಭವನದ ಬದಲು ₹60.33 ಲಕ್ಷದಲ್ಲಿ ಎಂಟು ವಸತಿಗೃಹ, ₹ 60 ಲಕ್ಷದಲ್ಲಿ ಮೂರು ಮದುವೆ ಛತ್ರ ನಿರ್ಮಾಣ, ₹ 74 ಲಕ್ಷದಲ್ಲಿ 4 ಒಳಾಂಗಣ ಕ್ರೀಡಾಂಗಣ, ವಾಣಿಜ್ಯ ಉದ್ದೇಶದ ಕಟ್ಟಡ, ₹ 1.55 ಕೋಟಿ ವೆಚ್ಚದಲ್ಲಿ ಉಗ್ರಾಣ ಕೊಠಡಿ, ಕಚೇರಿ ಕೊಠಡಿ, 48 ಸಾಂಸ್ಕೃತಿಕ ಭವನಗಳನ್ನು ಧಾರ್ಮಿಕ ಸಂಸ್ಥೆಗಳ ಆವರಣದಲ್ಲಿ ನಿರ್ಮಿಸಲಾಗಿತ್ತು. ಅದೇ ರೀತಿ 2.34 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 8 ಸಾಂಸ್ಕೃತಿಕ ಭವನಗಳು ಪಾಳು ಬಿದ್ದಿವೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿತ್ತು.


ಪುಸ್ತಕ ಪ್ರಾಧಿಕಾರ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮುದ್ರಿಸಿದ ಪುಸ್ತಕಗಳನ್ನು ಬಾಡಿಗೆ ಮನೆಯೊಂದರಲ್ಲಿ ರಾಶಿ ಹಾಕಿದ್ದು, ಅವು ಓದುಗರನ್ನು ತಲುಪಿಯೇ ಇರಲಿಲ್ಲ ಎಂದು ಹೇಳಿದ್ದ ಸಿಎಜಿ, ಮಂಡ್ಯ ಜಿಲ್ಲೆಯಲ್ಲಿ ಬಾಡಿಗೆ ಮನೆ ಪಡೆದು ₹12.91 ಲಕ್ಷ ಮೌಲ್ಯದ 5,108 ಋಗ್ವೇದ ಪುಸ್ತಕಗಳು, ₹5.76 ಲಕ್ಷ ಮೌಲ್ಯದ ಕುಮಾರವ್ಯಾಸ ಭಾರತದ 320 ಪ್ರತಿಗಳು ಹಾಗೂ ₹7.50 ಲಕ್ಷ ಮೌಲ್ಯದ ಇತರ ಪುಸ್ತಕಗಳನ್ನ ಮಾರಾಟ ಮಾಡದೇ ರಾಶಿ ಇಡಲಾಗಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಿತ್ತು.


ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉತ್ತೇಜಿಸುವುದಕ್ಕಾಗಿ ಸಾಂಸ್ಕೃತಿಕ ಭವನ ನಿರ್ಮಿಸುವ ಯೋಜನೆಯನ್ನು ಸರ್ಕಾರ ರೂಪಿಸಿತ್ತು. 2011ರಿಂದ 2018ರ ಅವಧಿಯಲ್ಲಿ 1094 ಸಂಸ್ಥೆಗಳಿಗೆ ₹ 131 ಕೋಟಿ ಅನುದಾನ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts