ಬೆಂಗಳೂರು; ರಾಜ್ಯ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಜಾರಿಗೊಂಡಿರುವ ಆರೋಗ್ಯಭಾಗ್ಯ ಯೋಜನೆಗೆ ಭವಿಷ್ಯದಲ್ಲಿ ಯಾವುದೇ ಹೆಚ್ಚಿನ ಅನುದಾನ ಒದಗಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ!
ಕೋವಿಡ್-19ರ ಬಿಕ್ಕಟ್ಟಿನಲ್ಲಿ ಪೊಲೀಸ್ ಸಿಬ್ಬಂದಿಯ ಶ್ರಮವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊಗಳಿದ ಕೆಲವೇ ಗಂಟೆಗಳಲ್ಲಿ ಈ ಮಾಹಿತಿಯೂ ಹೊರಬಿದ್ದಿದೆ. ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಸರ್ಕಾರ ತಳೆದಿರುವ ಈ ನಿರ್ಧಾರ ಪೊಲೀಸ್ ಸಿಬ್ಬಂದಿ, ಅಧಿಕಾರಿ ವರ್ಗವನ್ನು ಆತಂಕಕ್ಕೆ ದೂಡಿದಂತಾಗಿದೆ.
ಆರೋಗ್ಯಭಾಗ್ಯ ಯೋಜನೆಯಡಿಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಚಿಕಿತ್ಸೆ ನೀಡಿರುವ ಖಾಸಗಿ ಅಸ್ಪತ್ರೆಗಳಿಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಪಾವತಿಸಲು ಹಲವು ಷರತ್ತುಗಳನ್ನೂ ವಿಧಿಸಿದೆ. ಈ ಪೈಕಿ ಆರೋಗ್ಯಭಾಗ್ಯ ಯೋಜನೆಗೆ ಭವಿಷ್ಯದಲ್ಲಿ ಯಾವುದೇ ಹೆಚ್ಚಿನ ಅನುದಾನ ಒದಗಿಸಲಾಗುವುದಿಲ್ಲ ಎಂಬ ಷರತ್ತೂ ಇದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಕುರಿತು ಇನ್ನೆರಡು ದಿನದಲ್ಲಿ ಸರ್ಕಾರಿ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಈ ಯೋಜನೆಯಡಿಯಲ್ಲಿ ಆಸ್ಪತ್ರೆಗಳಿಗೆ ಹಣ ಬಿಡುಗಡೆ ಆಗಿಲ್ಲ ಎಂದು ‘ದಿ ಫೈಲ್’ 2020ರ ಏಪ್ರಿಲ್ 24ರಂದು ವರದಿ ಪ್ರಕಟಿಸಿತ್ತು.
ಪೊಲೀಸ್ ಮಹಾನಿರ್ದೇಶಕರು ಆರೋಗ್ಯಭಾಗ್ಯ ಯೋಜನೆಗಾಗಿ 85,74,49,289 ರು.ಗಳ ಹೆಚ್ಚುವರಿ ಅನುದಾನಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಆಧರಿಸಿ ವೈದ್ಯಕೀಯ ವೆಚ್ಚದ ಮರು ಪಾವತಿ ಅಡಿಯಲ್ಲಿ 30.00 ಕೋಟಿ ರು. ಬಿಡುಗಡೆ ಮಾಡಲು ಮುಂದಾಗಿದೆ.
‘ಹಿಂದಿನ ದಿನಾಂಕಗಳ ಹಾಗೂ ಆದ್ಯತೆಯ ವೈದ್ಯಕೀಯ ಬಿಲ್‌ಗಳನ್ನು ಮೊದಲು ಮರು ಪಾವತಿಸುವುದು, ಒಂದು ವೇಳೆ ಭವಿಷ್ಯದಲ್ಲಿ ಹೆಚ್ಚಿನ ಅನುದಾನ ಒದಗಿಸಿದಲ್ಲಿ ಅದು ಕೇವಲ ಮರು ಹೊಂದಾಣಿಕೆ ಮಾಡುವ ಷರತ್ತಿಗೊಳಪಟ್ಟು ಒದಗಿಸಲಾಗುವುದು. ಈ ಅನುದಾನವನ್ನು ಹೊರತುಪಡಿಸಿ ಭವಿಷ್ಯದಲ್ಲಿ ಯಾವುದೇ ಹೆಚ್ಚಿನ ಅನುದಾನ ಒದಗಿಸಲಾಗುವುದಿಲ್ಲ,’ ಎಂಬ ಷರತ್ತುಗಳನ್ನು ವಿಧಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಸರ್ಕಾರವು ಆರೋಗ್ಯ ಭಾಗ್ಯ ಯೋಜನೆಗಾಗಿ ಪ್ರತ್ಯೇಕ ಅನುದಾನ ನೀಡಲು ಆರಂಭಿಸಿದ ನಂತರ 2015-16ನೇ ಸಾಲಿನಿಂದ 2018-19ರವರೆಗೆ ಆಸ್ಪತ್ರೆಗಳಿಗೆ ಒಟ್ಟು 211,98,49,667 ರು.ಗಳನ್ನು ಈಗಾಗಲೇ ಪಾವತಿಸಿದೆ. ಈ ಮೂರು ವರ್ಷಗಳಲ್ಲಿ 168,27,00,378 ರು.ಗಳನ್ನು ಮರು ಪಾವತಿಸಲು ಸರ್ಕಾರ ಅನುದಾನ ನೀಡಿದೆ. ಅಲ್ಲದೆ ಕರ್ನಾಟಕ ಪೊಲೀಸ್ ಹೆಲ್ತ್ ವೆಲ್‌ಫೇರ್ ಟ್ರಸ್ಟ್‌ನಿಂದಲೂ 43,71,49,289 ರು.ಪಾವತಿಯಾಗಿರುವುದು ದಾಖಲೆಯಿಂದ ಗೊತ್ತಾಗಿದೆ.
ಇದಲ್ಲದೆ ಮಾರ್ಚ್ 2020ರವರೆಗಿನ ಬಿಲ್‌ಗಳ ಪಾವತಿಗೆ ಅಂದಾಜು 42.03 ಕೋಟಿ ರು. ಅಗತ್ಯವಿದೆ. ಇದಕ್ಕೆ ಸಂಬಂಧಿಸಿದಂತೆ ಷರತ್ತುಗಳನ್ನು ವಿಧಿಸಿ 30.00 ಕೋಟಿ ರು.ಗಳನ್ನು(ಆಯವ್ಯಯ ಲೆಕ್ಕ ಶೀರ್ಷಿಕೆ 2055-00-113-0-06-021) ಬಿಡುಗಡೆ ಮಾಡಲು ಸದ್ಯದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ.
ಖಾಸಗಿ ಆಸ್ಪತ್ರೆಗಳಿಗೆ 2015-16ರಲ್ಲಿ 51,87,64,324 ರು., 2016-17ರಲ್ಲಿ 45,47,81,639 ರು., 2017-18ರಲ್ಲಿ 50,07,88,789 ರು., 2018-19ರಲ್ಲಿ 64,55,14,915 ಕೋಟಿ ರು. ಸೇರಿದಂತೆ ಒಟ್ಟು 211.98 ಕೋಟಿ ರು. ಪಾವತಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.
‘ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸೆ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ವೆಚ್ಚವೂ ಹೆಚ್ಚುತ್ತಾ ಬಂದಿರುತ್ತದೆ. ಇತ್ತೀಚೆಗೆ ಕ್ಯಾನ್ಸರ್, ಲಿವರ್ ಸಂಬಂಧಿತ ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕಾಗಿ ಚಿಕಿತ್ಸೆ ಪಡೆಯುವರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಲಿವರ್ ಟ್ರಾನ್ಸ್‌ಪ್ಲಾಂಟೇಷನ್, ಬಿ ಎಂ ಟಿ ಪ್ರಕರಣಗಳೂ ಬರಲಾರಂಭಿಸಿವೆ. ಇದರಿಂದಾಗಿ ವೈದ್ಯಕೀಯ ಚಿಕಿತ್ಸಾ ವೆಚ್ಚದಲ್ಲಿಯೂ ಹೆಚ್ಚಳವಾಗಿದೆ,’ ಎಂದು ಪೊಲೀಸ್ ಮಹಾನಿರ್ದೇಶಕರು 2020ರ ಫೆ.15 ಮತ್ತು ಮಾರ್ಚ್ 11ರಂದು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.
‘ಸರ್ಕಾರಿ ನೌಕರರಿಗೆ ವೈದ್ಯಕೀಯ ಚಿಕಿತ್ಸೆಗೆಂದು ಸರ್ಕಾರ ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಹಣ ಕೊಡುವಂತಹ ಯೋಜನೆ ಅಥವಾ ನಿಯಮವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಅದೇ ಹಣದಲ್ಲಿ ಸುಸಜ್ಜಿತ ಮತ್ತು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿರುವ ಆಸ್ಪತ್ರೆಗಳನ್ನು ತೆರೆಯಲು ಮತ್ತು ಹಾಲಿ ಇರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಬಳಸಬೇಕು. ಸರ್ಕಾರಿ ನೌಕರರಿಗೆ ಆ ಆಸ್ಪತ್ರೆಗಳಲ್ಲಿ ವಿಶೇಷ ಕೊಠಡಿಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ನೀಡಬೇಕು ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.
ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ಸಿಬ್ಬಂದಿಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಆರೋಗ್ಯ ಭಾಗ್ಯ ಯೋಜನೆಗೆ 20,000 ನಿವೃತ್ತ ಪೊಲೀಸರನ್ನು ಸೇರ್ಪಡೆಗೊಳಿಸಲಾಗಿತ್ತು. ಪೊಲೀಸ್ ಇಲಾಖೆಯಲ್ಲಿ ಜಾರಿಯಲ್ಲಿರುವ ‘ಆರೋಗ್ಯ ಭಾಗ್ಯ’ ಯೋಜನೆಯನ್ನು ಎಲ್ಲ ಇಲಾಖೆಯ ನೌಕರರಿಗೂ ವಿಸ್ತರಿಸುವ ಮಹತ್ವದ ನಿರ್ಧಾರವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಕೆಲ ತಿಂಗಳ ಹಿಂದೆ ಪ್ರಕಟಿಸಿದ್ದರು.