ಬೆಂಗಳೂರು; ಮುಖ್ಯಮಂತ್ರಿ ಕಚೇರಿಯೂ ಸೇರಿದಂತೆ ರಾಜ್ಯ ಸರ್ಕಾರದ 30ಕ್ಕೂ ಹೆಚ್ಚು ಇಲಾಖೆಗಳು ಇ-ಆಫೀಸ್ ತಂತ್ರಾಂಶವನ್ನು ಅಳವಡಿಸಿಕೊಂಡಿದ್ದರೆ, ಸಾಂವಿಧಾನಿಕ ಹುದ್ದೆಯಾದ ರಾಜ್ಯಪಾಲರ ಕಚೇರಿ ಈವರೆವಿಗೂ ಇ-ಆಫೀಸ್, ಎಲ್‍ಎಂಎಸ್ ಮತ್ತು ಎಫ್‍ಎಂಎಸ್ ವ್ಯವಸ್ಥೆಯನ್ನೇ ಅಳವಡಿಸಿಕೊಳ್ಳದಿರುವುದು ಬಹಿರಂಗವಾಗಿದೆ.
ಇ-ಆಫೀಸ್ ತಂತ್ರಾಂಶವನ್ನು ಅಳವಡಿಸದ ಕಾರಣ ಈ ಸಚಿವಾಲಯದ ಕಾರ್ಯಭಾರ, ವ್ಯಾಪ್ತಿಯನ್ನು ಸ್ಪಷ್ಟವಾಗಿ ಮೌಲ್ಯಮಾಪನ ಮಾಡಲು ರಾಜ್ಯ ಸರ್ಕಾರಕ್ಕೆ ಈವರೆವಿಗೂ ಸಾಧ್ಯವಾಗಿಲ್ಲ ಎಂಬ ಸಂಗತಿಯೂ ಹೊರಬಿದ್ದಿದೆ.
ಸರ್ಕಾರದ ಬಹುತೇಕ ಇಲಾಖೆಗಳು ಈಗಾಗಲೇ ಇ-ಆಫೀಸ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನಿಗದಿತ ಕಾಲಾವಧಿಯೊಳಗೆ ಕಡತ ವಿಲೇವಾರಿ ಮಾಡುತ್ತಿವೆ. ಆದರೆ ರಾಜ್ಯಪಾಲರ ಸಚಿವಾಲಯವು ಇ-ಆಫೀಸ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದ ಕಾರಣಕ್ಕೆ ಸಕಾಲದಲ್ಲಿ ಕಡತ ವಿಲೇವಾರಿ ಆಗದೇ ಬಾಕಿ ಉಳಿದಿರುವುದು ದಾಖಲೆಯಿಂದ ಗೊತ್ತಾಗಿದೆ.
ರಾಜ್ಯಪಾಲರ ಸಚಿವಾಲಯವು ರಾಜ್ಯ ಸರ್ಕಾರದ ಸಚಿವಾಲಯ ಕಾರ್ಯ ಸ್ವರೂಪಕ್ಕಿಂತ ಭಿನ್ನವಾಗಿದೆ. ಆಡಳಿತ, ಮನೆವಾರ್ತೆ, ಲೆಕ್ಕಪತ್ರ ಮತ್ತು ವಿಶ್ವವಿದ್ಯಾಲಯ ವಿಭಾಗ ಹೊಂದಿರುವ ರಾಜ್ಯಪಾಲರ ಸಚಿವಾಲಯ ಈವರೆವಿಗೂ ಇ-ಆಫೀಸ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೆ ರಾಜ್ಯಪಾಲರ ಸಚಿವಾಲಯದ ಆಡಳಿತ ಶಾಖೆಯಲ್ಲಿ ಸರ್ಕಾರದಿಂದ ಸ್ವೀಕೃತವಾಗುವ ವಿಧೇಯಕಗಳು, ಸುಗ್ರೀವಾಜ್ಞೆ ಸಂಬಂಧದ ಕಡತಗಳು, ಉಚ್ಛ ನ್ಯಾಯಾಲಯದ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಧೀಶರ ನೇಮಕಾತಿ, ವಿಧಾನಪರಿಷತ್ತಿನ ಸದಸ್ಯರ ನೇಮಕಾತಿ, ಲೋಕಸೇವಾ ಆಯೋಗದ ಮತ್ತು ಮಾಹಿತಿ ಹಕ್ಕು ಆಯೋಗದ ಸದಸ್ಯರ ನೇಮಕಾತಿ ಪ್ರಸ್ತಾವನೆಗಳು, ಹಾಗೂ ಇನ್ನಿತರೆ ಇಲಾಖೆಗಳಿಂದ ಸ್ವೀಕೃತವಾಗುವ ರಾಜ್ಯಪಾಲರ ಅನುಮೋದನೆ ಅವಶ್ಯವಿರುವ ಪ್ರಸ್ತಾವನೆಗಳನ್ನು ಪರಿಶೀಲಿಸಲಾಗುತ್ತದೆ. ಇದಲ್ಲದೆ ಇದೇ ಸಚಿವಾಲಯದ ಇನ್ನಿತರೆ ಸಾಮಾನ್ಯ ಆಡಳಿತ ಹಾಗೂ ಸಿಬ್ಬಂದಿ ಸೇವಾ ವಿಷಯಗಳನ್ನು ನಿರ್ವಹಿಸಲಾಗುತ್ತಿದೆ.
ಅದೇ ರೀತಿ ರಾಜ್ಯಪಾಲರ ಸಚಿವಾಲಯದ ಮನೆವಾರ್ತೆ ಶಾಖೆಯಲ್ಲಿ ರಾಜ್ಯಪಾಲರ ಗೃಹ ಕೃತ್ಯ, ಅತಿಥಿಗಳ ಆದರಾತಿಥ್ಯ, ರಾಜಭವನದ ಅತಿಥಿಗಳ ಕೊಠಡಿ, ಕಚೇರಿ ಹಾಗೂ ಪೀಠೋಪಕರಣಗಳ ನಿರ್ವಹಣೆ, ಉಗ್ರಾಣ, ಪಶುಪಾಲನೆ, ತೋಟಗಾರಿಕೆ, 60ಕ್ಕೂ ಹೆಚ್ಚು ಮೀರಿದ ರಾಜಭವನದ ವಸತಿ ಗೃಹಗಳ ಹಂಚಿಕೆ, ಇದಕ್ಕೆ ಸಂಬಂಧಿಸಿದ ವಿಷಯಗಳು, ರಾಜಭವನದ ವಾಹನಗಳ ನಿರ್ವಹಣೆ ಮತ್ತು ಗ್ರೂಪ್ ಡಿ ನೌಕರರ ಸೇವಾ ವಿಷಯಗಳು ನಿರ್ವಹಿಸುತ್ತಿದೆ.
ವಿಶ್ವವಿದ್ಯಾಲಯದ ಶಾಖೆಯಲ್ಲಿ ಉಪ ಕುಲಪತಿ, ಕುಲಸಚಿವ ಸೇರಿ ಇನ್ನಿತರೆ ನೇಮಕಾತಿ ಹಾಗೂ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುತ್ತಿದೆ. ಅದೇ ರೀತಿ ಲೆಕ್ಕಪತ್ರ ಶಾಖೆಯ ಕಾರ್ಯವು ಹೆಚ್ಚಿದೆ. ಇ-ಆಫೀಸ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದ ಕಾರಣ ರಾಜ್ಯಪಾಲರ ಸಚಿವಾಲಯದ ಈ ಎಲ್ಲಾ ಶಾಖೆಗಳಲ್ಲಿ ಕಡತಗಳು ಸಕಾಲದಲ್ಲಿ ವಿಲೇವಾರಿ ಆಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ತೀರ್ಮಾನಗಳನ್ನು ಕೈಗೊಳ್ಳುವುದರಲ್ಲಿಯೂ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸಿವೆ ಎಂದು ಮೂಲಗಳು ತಿಳಿಸಿವೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಚೇರಿಗೆ ಸಲ್ಲಿಕೆಯಾಗುವ ಎಲ್ಲಾ ಕಡತಗಳೂ ಮತ್ತು ಪತ್ರಗಳನ್ನು ಇ-ಆಫೀಸ್ ತಂತ್ರಾಂಶದ ಮೂಲಕವೇ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚಿಸಿದ್ದನ್ನು ಸ್ಮರಿಸಬಹುದು.
ಅಲ್ಲದೆ ಎಲ್ಲಾ ಸಚಿವರು ಕೂಡ ತಮ್ಮ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶವನ್ನು ಅಳವಡಿಸಿಕೊಂಡು ಇದರ ಮೂಲಕವೇ ಕಡತ ಮತ್ತು ಪತ್ರಗಳನ್ನು ನಿರ್ವಹಿಸಬೇಕು ಎಂದು ಆದೇಶಿಸಿದ್ದಾರೆ. ಸಚಿವಾಲಯದ ಎಲ್ಲಾ ಕಚೇರಿಗಳಲ್ಲಿ 2019ರ ಮೇ 1ರಿಂದಲೇ ಇ-ಆಫೀಸ್ ತಂತ್ರಾಂಶ ಅಳವಡಿಸುವ ಸಂಬಂಧ ಆದೇಶ ಹೊರಬಿದ್ದಿತ್ತು.
ರಾಜ್ಯಾದ್ಯಂತ ಇರುವ ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿಗಳು, ಜಿಲ್ಲಾ ಪೊಲೀಸ್ ಕಚೇರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಈಗಾಗಲೇ ಇ-ಆಫೀಸ್ ತಂತ್ರಾಶ ಜಾರಿಯಲ್ಲಿದೆ.