ಕೋವಿಡ್‌ ಭ್ರಷ್ಟಾಚಾರ; ಪೆನ್‌ ಡ್ರೈವ್‌ನಲ್ಲಿ ದಾಖಲೆ ಒದಗಿಸಿದ ಶಾಸಕ ಮುರುಗೇಶ್‌ ನಿರಾಣಿ?

ಬೆಂಗಳೂರು; ಪಿಪಿಇ ಕಿಟ್‌, ಸ್ಯಾನಿಟೈಸರ್‌ ಸೇರಿದಂತೆ ಇನ್ನಿತರೆ ಸಲಕರಣೆ ಖರೀದಿಯಲ್ಲಿ ಅವ್ಯವಹಾರಗಳು ನಡೆದಿದೆ ಎಂದು ಬಿಜೆಪಿ ಶಾಸಕರ ವಲಯದಿಂದಲೂ ಬಲವಾದ ಆರೋಪಗಳು ಕೇಳಿ ಬಂದಿವೆ. ಅಲ್ಲದೆ, ಅಕ್ರಮ ನಡೆದಿರುವ ಬಗ್ಗೆ ಶಾಸಕ ಮುರುಗೇಶ್‌ ನಿರಾಣಿ ಅವರ ಬಳಿಯೂ ಸಾಕಷ್ಟು ಸಾಕ್ಷ್ಯಾಧಾರಗಳೂ ಇವೆ! ಸಮಗ್ರ ದಾಖಲಾತಿಗಳನ್ನು ಪೆನ್‌ ಡ್ರೈವ್‌ನಲ್ಲಿರಿಸಿ ಸಮಿತಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. 


ಇದೇ ವಿಚಾರ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಮತ್ತು ಸ್ಪೀಕರ್‌ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಬೆನ್ನಲ್ಲೇ ಬಿಜೆಪಿ ಶಾಸಕರ ಬಳಿಯೂ ಸಾಕ್ಷ್ಯಾಧಾರಗಳಿರುವ ವಿಚಾರ, ಅಕ್ರಮಗಳು ನಡೆದಿವೆ ಎಂಬುದನ್ನು ಪುಷ್ಠೀಕರಿಸುತ್ತಿವೆ.


2020ರ ಮೇ 28ರಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಮುರುಗೇಶ್‌ ನಿರಾಣಿ ಅವರು ಸಹ ಸ್ಯಾನಿಟೈಸರ್‌ ಸೇರಿದಂತೆ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಮಿತಿಗೆ ತಿಳಿಸಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಸದಸ್ಯ ಶಾಸಕರೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.


ಶಾಸಕರೊಬ್ಬರು ನೀಡಿರುವ ಮಾಹಿತಿ ಪ್ರಕಾರ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಆಗಿರುವ ಅಕ್ರಮಗಳ ಕುರಿತು ಅಧಿಕಾರಿಯೊಬ್ಬರು ಪೆನ್‌ ಡ್ರೈವ್‌ನಲ್ಲಿ ಸುಮಾರು 125 ಪುಟಗಳ ದಾಖಲೆಗಳೊಂದಿಗೆ ನಿರಾಣಿ ಅವರನ್ನು ಭೇಟಿ ಮಾಡಿದ್ದರು ಎಂಬ ಸಂಗತಿಯನ್ನೂ ಖುದ್ದು ನಿರಾಣಿ ಅವರೇ ಸಭೆಯ ಗಮನಕ್ಕೆ ತಂದಿದ್ದಾರೆ ಎಂದೂ ಹೇಳಿದರು.


‘ಬಿಜಾಪುರದಿಂದ ಬರುವಾಗ ನನ್ನೊಂದಿಗೆ ಒಬ್ಬರು ಅಧಿಕಾರಿ ಬಂದಿದ್ದರು. ಸುಮಾರು 125 ಪುಟಗಳ ದಾಖಲೆಗಳ ಪೆನ್‌ ಡ್ರೈವ್‌ ತಂದಿದ್ದರು. ಅದನ್ನು ತಮಗೆ ಕಳಿಸಿಕೊಡುತ್ತೇನೆ. ಅದರಲ್ಲಿ ಖರೀದಿ ಮಾಡಿರುವ ಪಿಪಿಇ ಕಿಟ್‌ ಬಗ್ಗೆ ಲೋಕಲ್‌ ಸ್ಯಾನಿಟೈಸರ್‌ ಬಗ್ಗೆ, 70-80 ರು. ಬೆಲೆ ಬಾಳುವ ಬಕೆಟ್‌ಗಳಿಗೆ 500 ರು. ದರ ಬಿಲ್‌ ಹಾಕಿರುವುದು, 30 ರು. ಬೆಲೆ ಬಾಳುವ ಉಪಕರಣಗಳಿಗೆ 3,000 ರು. ದರದ ಬಿಲ್‌ ಹಾಕಿರುವುದು ಸೇರಿದಂತೆ ಸಾಕ್ಷ್ಯಾಧಾರಗಳ ಸಮೇತ ತಂದಿದ್ದಾರೆ,’ ಎಂದು ಸಭೆಯ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದರು.


ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮುರುಗೇಶ್‌ ನಿರಾಣಿ ಅವರನ್ನು ಸಂಪರ್ಕಿಸಲು ‘ದಿ ಫೈಲ್‌’ ಪ್ರಯತ್ನಿಸಿತಾದರೂ ಸಂಪರ್ಕಕ್ಕೆ ಲಭ್ಯರಾಗಲಿಲ್ಲ. ಆದರೆ ‘ದಿ ಫೈಲ್‌’ ಪ್ರತಿನಿಧಿ ಮಾಡಿದ ಕರೆಯನ್ನು ಸ್ವೀಕರಿಸಿದ್ದ ಅವರ ಆಪ್ತ ಸಹಾಯಕರು ನಿರಾಣಿ ಸಾಹೇಬರು ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಉತ್ತರಿಸಿದರು.


ಚರ್ಚೆ ವೇಳೆಯಲ್ಲಿ ಸದಸ್ಯ ಟಿ ಎ ಶರವಣ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಿಗೆ ಬೆಂಬಲ ವ್ಯಕ್ತಪಡಿಸಿದರಲ್ಲದೆ, ಮಾಸ್ಕ್‌ಗಳು ದೊರೆಯುತ್ತಿಲ್ಲ. ಪರೀಕ್ಷೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗಾಲಗಳನ್ನೂ ತೆರೆದಿಲ್ಲ. ಪಿಪಿಇ ಕಿಟ್‌ಗಳನ್ನು ಒದಗಿಸಿಲ್ಲ. ಹಾಸನದಲ್ಲಿ ಪರೀಕ್ಷಾ ಲ್ಯಾಬ್‌ಗಳನ್ನು ತೆರೆಯದೇ ಇರುವುದು ನನ್ನ ಗಮನಕ್ಕೆ ಬಂದಿದೆ. ಇದರಿಂದ ರಾಜ್ಯದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.


ಟಿ ಎ ಶರವಣ ಅವರ ಮಾತಿಗೆ ಪೂರಕವಾಗಿ ಈಶ್ವರ ಬಿ ಖಂಡ್ರೆ ಅವರು ದನಿಗೂಡಿಸಿದ್ದರಲ್ಲದೆ ಕೊರೊನಾ ಹರಡುತ್ತಿರುವ ಪರಿಸ್ಥಿತಿಯಲ್ಲಿಯೂ ಸಾರ್ವಜನಿಕರ ಹಣ, ತೆರಿಗೆ ಪಾವತಿದಾರರ ಹಣ ಲೂಟಿ ಹೊಡೆದು ಅವ್ಯವಹಾರ ಮಾಡುತ್ತಿದ್ದಾರೆ. ಪಿಪಿಇ ಕಿಟ್‌, ಮಾಸ್ಕ್‌, ಸ್ಯಾನಿಟೈಸರ್‌, ಗ್ಲೋವ್ಸ್‌ ಇನ್ನಿತರೆ ಅವಶ್ಯಕ ಪರಿಕರಗಳನ್ನು ಒದಗಿಸಬೇಕು. ಎಸ್‌ಡಿಆರ್‌ಎಫ್‌ಗೆ ಕೊಡುವ ಹಣದಲ್ಲಿ ಜಿಲ್ಲಾಧಿಕಾರಿಗಳೇನು ಖರ್ಚು ಮಾಡುತ್ತಿದ್ದಾರೆಯೋ ಅದರ ಬಗ್ಗೆ ಪರಿಶೀಲನಾ ಸಭೆಯಲ್ಲಿ ಕೇಳಿದರೆ ಸಮಂಜಸವಾದ ಉತ್ತರ ನೀಡುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದಿರುವುದು ಗೊತ್ತಾಗಿದೆ.


‘ಸುಮಾರು 5.50 ಕೋಟಿ ರು. ಹಣ ಬಿಡುಗಡೆಯಾಗಿದ್ದು ಯಾವುದಕ್ಕೆ ಖರ್ಚು ಮಾಡಿದ್ದಾರೆನ್ನುವ ಮಾಹಿತಿ ಇಲ್ಲ. ಲ್ಯಾಬ್‌ಗಳು ಪ್ರಾರಂಭವಾಗಿಲ್ಲ. ಪಿಪಿಇ ಕಿಟ್‌, ಇನ್ನಿತರ ಸುರಕ್ಷತಾ ಸಾಮಗ್ರಿಗಳ ಬಗ್ಗೆ ಲೆಕ್ಕಪತ್ರಗಳಿಲ್ಲ,’ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು ಎಂದು ತಿಳಿದು ಬಂದಿದೆ.


ಇದೇ ಸಭೆಯಲ್ಲಿ ವಲಸಿಗ ಕಾರ್ಮಿಕರಿಗೆ ವಿತರಿಸಿರುವ ಕಿಟ್‌ಗಳ ಬಗ್ಗೆಯೂ ಪ್ರಸ್ತಾಪವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್‌ಗಳಲ್ಲಿ 7 ಲಕ್ಷ ಆಹಾರ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರಾದರೂ ಈ 7 ಲಕ್ಷ ಕಿಟ್‌ಗಳನ್ನು ಯಾವ ಕಡೆ ವಿತರಣೆ ಮಾಡಿದ್ದಾರೆ, ಯಾವ ವಿಧಾನಸಭೆ ಕ್ಷೇತ್ರಕ್ಕೆ ಎಷ್ಟೆಷ್ಟು ಕಿಟ್‌ಗಳನ್ನು ನೀಡಿದ್ದಾರೆ. ಒಂದು ವಿಧಾನಸಭೆ ಕ್ಷೇತ್ರಕ್ಕೆ 3,000 ಕಿಟ್‌ಗಳನ್ನು ನೀಡಿದರೆ ಮತ್ತೊಂದು ವಿಧಾನಸಭೆ ಕ್ಷೇತ್ರಕ್ಕೆ 30,000 ಕಿಟ್‌ಗಳನ್ನು ನೀಡಿದ್ದಾರೆ. ಯಾರ ಕೈಗೆ ನೀಡಿದ್ದಾರೆ, ಇವುಗಳನ್ನು ಯಾರು ವಿತರಣೆ ಮಾಡಿದರು ಎಂದು ಸಭೆಯಲ್ಲಿ ಈಶ್ವರ ಬಿ ಖಂಡ್ರೆ ಅವರು ಪ್ರಶ್ನಿಸಿದರು ಎಂದು ಗೊತ್ತಾಗಿದೆ.


‘ಇದೊಂದು ನೂರಾರು ಕೋಟಿ ರು.ಗಳ ಹಗರಣ. ಸರ್ಕಾರದ ಅಧಿಕಾರಿಗಳೇ ಗಂಭೀರವಾದ ದಾಖಲೆಗಳನ್ನು ಪಿಎಸಿ ಸಮಿತಿಯ ಸದಸ್ಯರ ಗಮನಕ್ಕೆ ತಂದಿರುವುದು ಮತ್ತು ಆ ಶಾಸಕರು ಅದನ್ನು ಅಧಿಕೃತವಾಗಿ ಸಭೆಯಲ್ಲಿ ಹೇಳಿರುವುದು ನಾವು ಈವರೆಗೆ ಮಾಡಿರುವ ಆರೋಪಗಳಿಗೆ ಪುಷ್ಠಿ ನೀಡಿದೆ. ಈ ನೂರಾರು ಕೋಟಿ ರು. ಅಕ್ರಮಗಳನ್ನು ಮುಚ್ಚಿ ಹಾಕಲು ವ್ಯವಸ್ಥಿತವಾದ ಪಿತೂರಿ ನಡೆದಿದೆ. ಅಲ್ಲದೆ ಸಾಂವಿಧಾನಿಕ ಸಂಸ್ಥೆಗಳನ್ನು ನಿರ್ಲಜ್ಜವಾಗಿ ಬಳಸಿಕೊಳ್ಳಲಾಗುತ್ತಿದೆ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

SUPPORT THE FILE

Latest News

Related Posts