ಬೆಂಗಳೂರು; ಬೆಂಗಳೂರಿನ ಇಸ್ಲಾಮಿಕ್ ಮಿಷನ್ ಆಫ್ ಇಂಡಿಯಾ ಸೇರಿದಂತೆ ಮುಸ್ಲಿಂ ಸಮುದಾಯದ ಹಲವು ಶಿಕ್ಷಣ ಸಂಸ್ಥೆಗಳ ಮೇಲೆ ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ವಿಧಾನಪರಿಷತ್ ಸದಸ್ಯರು ಮುಗಿ ಬೀಳಲಾರಂಭಿಸಿದ್ದಾರೆ.
ಬೆಂಗಳೂರು ನಗರ ಮತ್ತಿತರ ಭಾಗಗಳಲ್ಲಿ ಭೂಮಿ ಖರೀದಿಸಿ ತಾಂತ್ರಿಕ ಸೇರಿದಂತೆ ಉನ್ನತ ಶಿಕ್ಷಣ ನೀಡುತ್ತಿರುವ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಖರೀದಿಸಿರುವ ಭೂಮಿ ಈಗಾಗಲೇ ಒತ್ತುವರಿ ಆರೋಪದಿಂದ ಮುಕ್ತವಾಗಿದ್ದರೂ ಧಾರ್ಮಿಕ ಕಾರಣಕ್ಕೆ ಮರು ತನಿಖೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ಮೇಲೆ ಒತ್ತಡ ಹೇರಲಾಗುತ್ತಿದೆ.
ಮುಸ್ಲಿಂ ಶಿಕ್ಷಣ ಸಂಸ್ಥೆಗಳ ವಶದಲ್ಲಿರುವ ಭೂಮಿಗೆ ಸಂಬಂಧಿಸಿದಂತೆ ಸ್ಥಳ ಮತ್ತು ದಾಖಲೆಗಳ ಪರಿಶೀಲನೆ ನಡೆಸಿದ್ದ ತನಿಖಾ ತಂಡಗಳು ಆ ಎಲ್ಲಾ ಆರೋಪಗಳನ್ನು ನಿರಾಕರಿಸಿವೆ. ಅಷ್ಟೇ ಅಲ್ಲ, ಭೂಮಿ ಒತ್ತುವರಿ ಮಾಡಿರುವ ಬಗ್ಗೆ ಯಾವ ಮಾಹಿತಿಯೂ ಇಲ್ಲ ಎಂದು ಸರ್ಕಾರಕ್ಕೆ ಹಲವು ವರ್ಷಗಳ ಹಿಂದೆಯೇ ವರದಿ ಸಲ್ಲಿಸಿವೆ.
ಬೆಂಗಳೂರಿನ ಇಸ್ಲಾಮಿಯಾ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಭೂ ಒತ್ತುವರಿ ಆರೋಪದಿಂದ 16 ವರ್ಷದ ಹಿಂದೆಯೇ ಮುಕ್ತವಾಗಿದ್ದರೂ ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅದೇ ಪ್ರಕರಣವನ್ನು ಮತ್ತೊಮ್ಮೆ ಕೆದಕಿರುವುದು, ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಮೇಲೆ ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ವಿಧಾನಪರಿಷತ್ ಸದಸ್ಯರು ಮುಗಿಬಿದ್ದಿದ್ದಾರೆ ಎಂಬುದಕ್ಕೆ ನಿದರ್ಶನ ಒದಗಿಸಿದಂತಾಗಿದೆ.
ವಿಧಾನಪರಿಷತ್‌ನಲ್ಲಿ 2020ರ ಮಾರ್ಚ್ 2ರಂದು ನಡೆದ ಅಧಿವೇಶನದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ತಾಂತ್ರಿಕ ಶಿಕ್ಷಣ ಇಲಾಖೆ ಒದಗಿಸಿರುವ ಮಾಹಿತಿ ಆಧರಿಸಿ ಉತ್ತರಿಸಿರುವ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ಇಸ್ಲಾಮಿಕ್ ಮಿಷನ್ ಆಫ್ ಇಂಡಿಯಾ ಯಾವುದೇ ಭೂಮಿ ಒತ್ತುವರಿ ಮಾಡಿಲ್ಲ ಎಂದು ಹೇಳಿದ್ದಾರಾದರೂ ಈ ಪ್ರಕರಣಕ್ಕೆ ಮರು ಜೀವ ಕೊಡುವ ಸುಳಿವನ್ನೂ ಅದೇ ಉತ್ತರದಲ್ಲಿ ನೀಡಿದ್ದಾರೆ.
ಈಗಾಗಲೇ ಮುಕ್ತಾಯಗೊಂಡಿರುವ ಈ ಪ್ರಕರಣವನ್ನು ‘ಈ ಸಂಸ್ಥೆಯು ಒತ್ತುವರಿ ಮಾಡಿರುವ ಜಾಗದಲ್ಲಿ ಕಾಲೇಜನ್ನು ಆರಂಭಿಸಿರುವ ಬಗ್ಗೆ ನಿಯಮಾನುಸಾರ ಸೂಕ್ತ ದಾಖಲೆಗಳೊಂದಿಗೆ ದೂರು ಸ್ವೀಕೃತವಾದಲ್ಲಿ ಸರ್ಕಾರವು ಅನುಮತಿ ಹಿಂಪಡೆಯಲು ಕ್ರಮ ವಹಿಸಲಾಗುವುದು,’ ಎಂದು ಡಾ ಸಿ ಅಶ್ವಥ್‌ನಾರಾಯಣ್ ಅವರು ನೀಡಿರುವ ಉತ್ತರ, ಮತ್ತೊಮ್ಮೆ ದೂರು ನೀಡಲು ಪ್ರೇರೇಪಿಸುವಂತಿದೆ.
ಪ್ರಕರಣದ ವಿವರ
ಬೆಂಗಳೂರಿನ ಇಸ್ಲಾಮಿಕ್ ಮಿಷನ್ ಆಫ್ ಇಂಡಿಯಾ 2004-05ರಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿ ಹುಳಿಮಾವು ಗ್ರಾಮದ ಸರ್ವೆ ನಂಬರ್ 63ರಲ್ಲಿನ 5 ಎಕರೆ ವಿಸ್ತೀರ್ಣದ ಜಾಗದಲ್ಲಿ ಆರಂಭಿಸಲು ಉದ್ದೇಶಿಸಿದ್ದ ಇಂಜಿನಿಯರಿಂಗ್ ಕಾಲೇಜಿಗೆ ಸಂಯೋಜನೆ ನೀಡುವ ಸಲುವಾಗಿ ಸ್ಥಳ ಪರಿಶೀಲನೆ ನಡೆಸಿದ್ದ ಪ್ರೊ. ಕೆ ಬಸವರಾಜು ನೇತೃತ್ವದ ತನಿಖಾ ತಂಡ, ಈ ಸಂಸ್ಥೆ ಯಾವುದೇ ಭೂ ಒತ್ತುವರಿ ಮಾಡಿರುವ ಮಾಹಿತಿ ಇರುವುದಿಲ್ಲ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಇದಲ್ಲದೆ ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವೂ ಸ್ಥಳ ಮತ್ತು ದಾಖಲೆಗಳ ಪರಿಶೀಲನೆ ನಡೆಸಿತ್ತಲ್ಲದೆ, ಅದರಲ್ಲಿಯೂ ಭೂಮಿ ಒತ್ತುವರಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು ಎಂಬುದು ಅಶ್ವಥ್‌ನಾರಾಯಣ್ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.
ಭೂ ಒತ್ತುವರಿ ಕುರಿತು ತನಿಖಾ ತಂಡ ಸ್ಪಷ್ಟವಾಗಿ 16 ವರ್ಷಗಳ ಹಿಂದೆಯೇ ವರದಿ ಸಲ್ಲಿಸಿದ್ದರೂ ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ‘ಸುಳ್ಳು ದಾಖಲೆ ಹಾಗೂ ತಪ್ಪು ಮಾಹಿತಿ ನೀಡಿ ಪ್ರಾರಂಭಿಸಲಾದ ಕಾಲೇಜಿನ ಅನುಮತಿ ಹಿಂಪಡೆಯಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ,’ ಎಂದು ಪ್ರಶ್ನಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.