ಕೋವಿಡ್‌ ಪರಿಹಾರ ಲೆಕ್ಕಾಚಾರ; ಇಳಿಯದ ಸಣ್ಣ ಉದ್ಯಮಗಳ ಭಾರ

ಬೆಂಗಳೂರು; ಲಾಕ್‌ಡೌನ್‌ನಿಂದಾಗಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಣ್ಣ ಉದ್ಯಮಗಳಿಗೆ ಘೋಷಿಸಿರುವ ಖಾತರಿರಹಿತ ಸಾಲದ ಬಗ್ಗೆ ಹಲವು ವಿಶ್ಲೇಷಣೆಗಳು ಮುನ್ನೆಲೆಗೆ ಬಂದಿವೆ.


3 ಲಕ್ಷ ಕೋಟಿ ರು.ಮೊತ್ತದ ಖಾತರಿ ರಹಿತ ಸಾಲ ಘೋಷಿಸಿರುವ ಸರ್ಕಾರ, ಇದಕ್ಕೆ ಸಮಾನಾಂತರವಾಗಿ ಸಹಾಯಧನ ನೀಡದಿರುವುದಕ್ಕೆ ಸಣ್ಣ ಉದ್ಯಮಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸಣ್ಣ ಉದ್ಯಮಗಳು ತಳಮಟ್ಟದಲ್ಲಿರುವ ವಸ್ತು ಸ್ಥಿತಿಯನ್ನು ಗ್ರಹಿಸದಿರುವುದು ಮತ್ತು ಸಣ್ಣ ಉದ್ಯಮಗಳನ್ನು ವಲಯವಾರು ವರ್ಗೀಕರಿಸದೆಯೇ ಪರಿಹಾರ ಘೋಷಿಸಿದೆ ಎಂಬ ಅಭಿಪ್ರಾಯಗಳು ಸಣ್ಣ ಉದ್ಯಮಗಳ ವಲಯದಲ್ಲಿ ವ್ಯಕ್ತವಾಗಿವೆ.


ಸಹಾಯಧನ ವಿಚಾರವನ್ನೇ ಪ್ರಸ್ತಾಪ ಮಾಡದ ನಿರ್ಮಲಾ ಸೀತಾರಾಮನ್‌ ಅವರು ಕೇವಲ ಖಾತರಿರಹಿತ ಸಾಲಕ್ಕೆ ಹೆಚ್ಚಿನ ಒತ್ತು ನೀಡಿರುವುದು ಮುಂದಿನ 3 ತಿಂಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಶ್ರೇಣಿಯ ಉದ್ಯಮಗಳು ಮತ್ತೊಂದು ರೀತಿಯ ಆರ್ಥಿಕ ಬಿಕ್ಕಟ್ಟುಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ.


ಸರ್ಕಾರದ ಖಾತರಿ ಮೇರೆಗೆ ಸಾಲ ಪಡೆದುಕೊಳ್ಳುವ ಸಣ್ಣ ಉದ್ಯಮಗಳು ಪುನಃ ಸಾಲದ ಸುಳಿಯಲ್ಲಿ ಸಿಲುಕಲಿದೆಯೇ ಹೊರತು, ಈ ಬಿಕ್ಕಟ್ಟಿನಿಂದ ಹೊರಬರಲು ಹರಸಾಹಸ ಪಡಬೇಕಾದೀತು ಎಂದು ಸಣ್ಣ ಉದ್ಯಮಿಗಳು ವಿಶ್ಲೇಷಿಸಿದ್ದಾರೆ. ಹಾಗೆಯೆ ಈಗ ಘೋಷಿತವಾಗಿರುವ ಖಾತರಿರಹಿತ ಸಾಲ, ನೌಕರರಿಗೆ ಬಾಕಿ ಉಳಿಸಿಕೊಂಡಿರುವ ಸಣ್ಣ ಉದ್ಯಮಗಳ ವೇತನ ಭಾರವನ್ನು ಇಳಿಸುವುದಕ್ಕಷ್ಟೇ ಸೀಮಿತವಾಗಲಿದೆ. ಸಣ್ಣ ಉದ್ಯಮಗಳ ಮುಂದಿನ ಚಟುವಟಿಕೆಗಳನ್ನು ಎಂದಿನಂತೆ ಮುನ್ನಡೆಸಲಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.


ಸಣ್ಣ ಉದ್ಯಮಗಳಿಗೆ ಈಗ ನೀಡಿರುವ ಪರಿಹಾರ ದೊಡ್ಡ ಮೊತ್ತದ್ದು ಎಂದು ಹೇಳಲಾಗುತ್ತಿದೆಯಾದರೂ ಅದು ಪೂರ್ಣ ಸತ್ಯವಲ್ಲ. ಘೋಷಿಸಿರುವ ಆರ್ಥಿಕ ನೆರವು ಉತ್ತಮ ಬೆಳವಣಿಗೆಯಾಗಿದೆಯಾದರೂ ಸಣ್ಣ ಉದ್ಯಮಗಳು ಇರಿಸಿದ್ದ ಬೇಡಿಕೆ ಬಗ್ಗೆ ತುಟಿಯೇ ಬಿಚ್ಚಿಲ್ಲ.


ಸಣ್ಣ ಉದ್ಯಮಗಳು ವಾರ್ಷಿಕ ಶೇ. 6 ರ ಬಡ್ಡಿ ದರದಲ್ಲಿ ಸಾಲಕ್ಕೆ ಬೇಡಿಕೆ ಇರಿಸಿದ್ದವು. ಈಗ ಘೋಷಿತವಾಗಿರುವ ಖಾತರಿ ರಹಿತ ಸಾಲಕ್ಕೆ ಬ್ಯಾಂಕ್‌ಗಳೇನಾದರೂ ಶೇ.12 ರಿಂದ 15 ರಷ್ಟು ಬಡ್ಡಿ ವಿಧಿಸಿದರೆ ಸಣ್ಣ ಉದ್ಯಮಗಳು ಪುನಃ ಸಾಲದ ಕೂಪಕ್ಕೆ ಸಿಲುಕಲಿದೆ. ಖಾತರಿ ರಹಿತ ನೀಡುವ ಸಾಲಕ್ಕೆ ಶೇಕಡವಾರು ಎಷ್ಟು ಪ್ರಮಾಣದಲ್ಲಿ ಬಡ್ಡಿ ವಿಧಿಸಬೇಕು ಎಂಬ ಬಗ್ಗೆ ಸರ್ಕಾರ ಸೊಲ್ಲೆತ್ತಿಲ್ಲ. ಒಂದು ವೇಳೆ ಬ್ಯಾಂಕ್‌ಗಳೇನಾದರೂ ಶೇ.12ರಿಂದ 15ರಷ್ಟು ಬಡ್ಡಿ ಕೇಳಿದರೆ ಸರ್ಕಾರದ ನಿಲುವೇನು?


ಬ್ಯಾಂಕ್‌ಗಳು ವಿಧಿಸುವ ಬಡ್ಡಿ ಹಣವನ್ನು ಸಣ್ಣ ಉದ್ಯಮಗಳು ಪಾವತಿಸಬಹುದು ಎಂದಿಟ್ಟುಕೊಂಡರೂ ಯಾವುದೇ ಸಹಾಯಧನ ಘೋಷಣೆ ಆಗದ ಕಾರಣ ಬ್ಯಾಂಕ್‌ಗಳಿಗೆ ಬಡ್ಡಿ ಪಾವತಿಸುವುದರಲ್ಲಿಯೇ ಸಣ್ಣ ಉದ್ಯಮಗಳು ಹೈರಾಣಾಗುತ್ತವೆ. ಇದು ನೇರವಾಗಿ ಸಣ್ಣ ಉದ್ಯಮಗಳಲ್ಲಿ ದುಡಿಯುತ್ತಿರುವ ನೌಕರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನಲಾಗಿದೆ.


‘ಲಾಕ್‌ಡೌನ್‌ ನಂತರ ಎಲ್ಲಾ ಬಗೆಯ ಮಾರುಕಟ್ಟೆಯೂ ಕುಸಿತಕ್ಕೆ ಒಳಗಾಗಿದೆ. ಲಾಕ್‌ಡೌನ್‌ ಆದ ನಂತರದ 2 ತಿಂಗಳವರೆಗೂ ಸಣ್ಣ ಉದ್ಯಮಗಳಲ್ಲಿ ದುಡಿಯುತ್ತಿರುವ ನೌಕರರಿಗೆ ವೇತನ ದೊರೆತಿಲ್ಲ. ಸರ್ಕಾರ ಘೋಷಿಸಿರುವ ಪ್ರಕಾರ ಖಾತರಿ ರಹಿತ ಸಾಲ ಪಡೆಯುವ ಸಣ್ಣ ಉದ್ಯಮ, ತನ್ನ ನೌಕರರಿಗೆ ಬಾಕಿ ಉಳಿಸಿಕೊಂಡಿರುವ 2 ತಿಂಗಳ ವೇತನ ನೀಡಲಷ್ಟೇ ಬಳಸಿಕೊಳ್ಳಲಿದೆ. ಬಾಕಿ ಉಳಿಸಿಕೊಂಡಿರುವ ವೇತನ ನೀಡಲಷ್ಟೇ ಖಾತರಿರಹಿತ ಸಾಲದ ಮೊತ್ತ ಬಳಕೆಯಾಗಿದ್ದೇ ನಿಜವಾದಲ್ಲಿ ಉದ್ಯಮದ ಮುಂದಿನ ಚಟುವಟಿಕೆ ಹೇಗೆ ನಡೆಯಲಿದೆ,’ ಎಂದು ಪ್ರಶ್ನಿಸುತ್ತಾರೆ ಆರ್ಥಿಕ ತಜ್ಞ ಕರಣ್‌ಕುಮಾರ್‌


ಒಂದು ವೇಳೆ ಸಣ್ಣ ಉದ್ಯಮಗಳು ಉತ್ಪನ್ನದಾಯಕ ಚಟುವಟಿಕೆಗಳನ್ನು ಪುನರಾರಂಭಿಸಿದರೂ ಉತ್ಪನ್ನವನ್ನು ಖರೀದಿಸುವ ಶಕ್ತಿ ಗ್ರಾಹಕನಿಗಿಲ್ಲದಿರುವಾಗ ಸಣ್ಣ ಉದ್ಯಮಗಳು ಆದಾಯವನ್ನು ಹೇಗೆ ತಾನೇ ಗಳಿಸಲಿವೆ? ‘ಎಂಎಸ್‌ಎಂಇ ವ್ಯಾಪ್ತಿಗೊಳಪಡುವ 13 ಕೋಟಿ ನೌಕರರ ಪೈಕಿ ಸುಮಾರು 8 ಕೋಟಿ ನೌಕರರಿಗೆ ಕಳೆದ 2 ತಿಂಗಳಲ್ಲಿ ಯಾವುದೇ ವೇತನ ದೊರೆತಿಲ್ಲ. ಹೀಗಾಗಿ ಉದ್ಯಮಗಳು ಬಾಕಿ ಉಳಿಸಿಕೊಂಡಿರುವ 2 ತಿಂಗಳ ವೇತನವನ್ನು ಸರ್ಕಾರವೇ ಭರಿಸಬೇಕು. ಇದಕ್ಕೆ ಅಂದಾಜು 3 ಲಕ್ಷ ಕೋಟಿ ರು.ಸಹಾಯಧನವನ್ನು ಆಯಾ ಉದ್ಯಮಗಳಿಗೆ ಬಿಡುಗಡೆ ಮಾಡಬೇಕು.’ ಎನ್ನುತ್ತಾರೆ ಆರ್ಥಿಕ ತಜ್ಞ ಕರಣ್‌ಕುಮಾರ್‌


ಚೀನಾ, ಜಪಾನ್‌, ಕೆನಡಾ, ಯೂರೋಪ್‌ ಮತ್ತು ಅಮೇರಿಕಾದಲ್ಲಿ ಖಾಸಗಿ ನೌಕರರಿಗೆ ಶೇ. 80ರಷ್ಟು ವೇತನವನ್ನು ಅಲ್ಲಿನ ಸರ್ಕಾರಗಳೇ ಭರಿಸಿವೆ. ಹೀಗಾಗಿ ಅಲ್ಲಿನ ಉದ್ಯಮಗಳು ಬಹುಬೇಗನೇ ಚೇತರಿಸಿಕೊಳ್ಳಲಿವೆ. ಉದ್ಯಮಗಳ ಮೇಲಿದ್ದ ಭಾರವನ್ನು ಅಲ್ಲಿನ ಸರ್ಕಾರಗಳು ಇಳಿಸಿವೆ. ಇದರಿಂದ ಮಾರುಕಟ್ಟೆಯಲ್ಲಿ ಗ್ರಾಹಕನಿಗೆ  ಉತ್ಪನ್ನ ಖರೀದಿಸುವ ಶಕ್ತಿ ನೀಡಿದೆ.


ಆದರಿಲ್ಲಿ ಕಂಪನಿಗಳಿಗೆ ಖಾತರಿರಹಿತ ಸಾಲವನ್ನು ನೀಡಿದೆಯೇ ಹೊರತು ಸಹಾಯಧನ ನೀಡಿಲ್ಲ. ಹೀಗಾಗಿ ಉದ್ಯಮಗಳು ಪುನಃ ಸಾಲದ ಸುಳಿಯಲ್ಲಿ ಸಿಲುಕಿ ಮತ್ತಷ್ಟು ತೊಂದರೆಗೊಳಗಾಗಲಿವೆ. ಇದು ವಿಪರೀತ ಮಟ್ಟಕ್ಕೆ ಹೋದಲ್ಲಿ ಶೇ.80ರಷ್ಟು ಎಂಎಸ್‌ಎಂಇ ಉದ್ಯಮಗಳು ಶಾಶ್ವತವಾಗಿ ಸ್ಥಗಿತಗೊಳ್ಳಲಿವೆ ಎಂದು ಹೇಳಲಾಗಿದೆ.


ಬಿಡಿ ಭಾಗಗಳ ಉಪಕರಣಗಳನ್ನು ಉತ್ಪಾದಿಸುವ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ದೊಡ್ಡ ಗಾತ್ರದ ಕಂಪನಿಗಳು ತಮ್ಮ ಬೇಡಿಕೆಯನ್ನು ನಿಲ್ಲಿಸಿವೆ. ಹೀಗಾಗಿ ಬಿಡಿಭಾಗಗಳ ಉಪಕರಣಗಳ ತಯಾರಿಕೆ ಚಟುವಟಿಕೆಗಳು ಪುನರಾರಂಭಗೊಳ್ಳುವ ಸೂಚನೆಗಳೂ ಇಲ್ಲ.ಹೀಗಾಗಿ ಖಾತರಿರಹಿತ ಸಾಲ ಪಡೆದುಕೊಂಡರೂ ದೊಡ್ಡ ಗಾತ್ರದ ಕಂಪನಿಗಳು ಬೇಡಿಕೆ ನಿಲ್ಲಿಸಿರುವ ಕಾರಣ, ಮುಂದಿನ ದಿನಗಳಲ್ಲಿ ಖಾತರಿರಹಿತ ಸಾಲವೂ ಕೂಡ ಎನ್‌ಪಿಎ ಆದರೆ ಅಚ್ಚರಿಯೇನಿಲ್ಲ.

SUPPORT THE FILE

Latest News

Related Posts