ಅನುದಾನದಲ್ಲಿ ಶೇ. 2 ರಷ್ಟು ಮಾತ್ರ ವೆಚ್ಚ; 18 ಇಲಾಖೆಗಳಲ್ಲಿ ಬಿಡಿಗಾಸು ಖರ್ಚಾಗಿಲ್ಲ

ಬೆಂಗಳೂರು; ಕೊರೊನಾ ವೈರಾಣು ಅಬ್ಬರಕ್ಕೆ ರಾಜ್ಯವೇ ತತ್ತರಿಸಿ ಹೋಗಿದೆ. ಸಂಪನ್ಮೂಲ ಸಂಗ್ರಹ ಸ್ಥಗಿತದಿಂದಾಗಿ ಬಹುತೇಕ ಯೋಜನೆಗಳನ್ನು ಕೈ ಬಿಡಲಾಗಿದೆ. ಲಾಕ್‌ಡೌನ್‌ ಮತ್ತಿತರ ಕ್ರಮಗಳು ಅನುದಾನದ ಬಳಕೆ ಮೇಲೂ ಪರಿಣಾಮ ಬೀರಿವೆ. ಆಯವ್ಯಯದಲ್ಲಿ ಘೋಷಣೆಯಾಗಿದ್ದ ಒಟ್ಟು ಮೊತ್ತಕ್ಕೆ ಎದುರಾಗಿ 2020ರ ಏಪ್ರಿಲ್‌ ಅಂತ್ಯಕ್ಕೆ ಕೇವಲ ಶೇ. 2 ರಷ್ಟು ಮಾತ್ರ ವೆಚ್ಚವಾಗಿದೆ.


ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರ ಅಧ್ಯಕ್ಷತೆಯಲ್ಲಿ 2020ರ ಮೇ 22ರಂದು ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆ ನಡವಳಿಯಿಂದ ಶೇ.2ರಷ್ಟು ಮಾತ್ರ ವೆಚ್ಚ ಮಾಡಿರುವ ಸಂಗತಿ ದಾಖಲೆಯಿಂದ ತಿಳಿದು ಬಂದಿದೆ. ನಗರಾಭಿವೃದ್ದಿ ಇಲಾಖೆ ಸೇರಿದಂತೆ ಒಟ್ಟು 18 ಇಲಾಖೆಗಳು ಬಿಡಿಗಾಸನ್ನೂ ಖರ್ಚು ಮಾಡಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡ ಉಪ ಯೋಜನೆಯಡಿಯಲ್ಲಿ ಒಟ್ಟು 3,160.56 ಕೋಟಿ ರು. ಖರ್ಚಾಗದೇ ಉಳಿದಿರುವುದು ಗೊತ್ತಾಗಿದೆ.


ಬಜೆಟ್‌ನಲ್ಲಿ ಕಲ್ಪಿಸಿದ್ದ ಒಟ್ಟು 2,37,893 ಕೋಟಿ ರು ಅನುದಾನದ ಪೈಕಿ ಏಪ್ರಿಲ್‌ ಅಂತ್ಯಕ್ಕೆ 4,486 ಕೋಟಿ ರು. ವೆಚ್ಚವಾಗಿದೆ. 2018-19ರಲ್ಲಿ 2,29,924 ಕೋಟಿ ರು. ಪೈಕಿ 2,11,920 ಕೋಟಿ ರು. ವೆಚ್ಚವಾಗಿದ್ದರೆ (ಶೇ.92.2) 2019-20ನೇ ಸಾಲಿನಲ್ಲಿ 2,34,150.54 ಕೋಟಿ ರು. ಪೈಕಿ 2,16,473 ಕೋಟಿ ರು. (ಶೇ.92.4) ವೆಚ್ಚವಾಗಿರುವುದು ದಾಖಲೆಯಿಂದ ತಿಳಿದು ಬಂದಿದೆ. 

2019-20ನೇ ಸಾಲಿನ ಮಹಿಳಾ ಉದ್ದೇಶಿತ ಆಯವ್ಯಯದ ಬಿ ವರ್ಗೀಕರಣ ಯೋಜನೆಗಳಲ್ಲಿ ಮಾರ್ಚ್‌ 2020ರ ಅಂತ್ಯಕ್ಕೆ 41,150 ಕೋಟಿ ರು.ಗಳ ಪೈಕಿ ಮಹಿಳೆಯರಿಗಾಗಿ 16,256 ಕೋಟಿ ರು. ಮೀಸಲಿರಿಸಲಾಗಿತ್ತು. ಈ ಹಣದಲ್ಲಿ ಫೆಬ್ರುವರಿಯಲ್ಲಿ 11,625 ಕೋಟಿ ರು. ಖರ್ಚು ಮಾಡಿದ್ದರೆ ಮಾರ್ಚ್ 2020ರ ಅಂತ್ಯಕ್ಕೆ ಒಟ್ಟು 987.16 ಕೋಟಿ ರು. ವೆಚ್ಚ ಮಾಡಲಾಗಿದೆ.


ನಗರಾಭಿವೃದ್ದಿ, ಗ್ರಾಮೀಣಾಭಿವೃದ್ಧಿ, ಯುವಸಬಲೀಕರಣ, ಲೋಕೋಪಯೋಗಿ, ಕಂದಾಯ, ಆಹಾರ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಪ್ರಾಥಮಿಕ ಶಿಕ್ಷಣ, ಅರಣ್ಯ, ಸಹಕಾರ, ಉನ್ನತ ಶಿಕ್ಷಣ, ಒಳಾಡಳಿತ, ವಾಣಿಜ್ಯ ಕೈಗಾರಿಕೆ, ರೇಷ್ಮೆ, ಕಾನೂನು, ಮುಜುರಾಯಿ, ವೈದ್ಯಕೀಯ ಶಿಕ್ಷಣ, ಕೃಷಿ, ಕನ್ನಡ ಸಂಸ್ಕೃತಿ ಇಲಾಖೆಗಳು ಮಾರ್ಚ್‌ ಅಂತ್ಯಕ್ಕೆ ಬಿಡಿಗಾಸನ್ನೂ ಖರ್ಚು ಮಾಡದಿರುವುದು ಗೊತ್ತಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾರ್ಚ್‌ ಅಂತ್ಯಕ್ಕೆ 513.88 ಕೋಟಿ ರು. ಖರ್ಚು ಮಾಡುವ ಮೂಲಕ ಮೊದಲ ಸ್ಥಾನಲ್ಲಿದೆ. ಆರೋಗ್ಯ ಇಲಾಖೆ 185.10 ಕೋಟಿ ರು. ಖರ್ಚು ಮಾಡಿದ್ದರೆ ಪಶು ಸಂಗೋಪನೆ ಇಲಾಖೆ 118.13 ಕೋಟಿ ರು., ತೋಟಗಾರಿಕೆ 55.46 ಕೋಟಿ ರು., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 43.62 ಕೋಟಿ ರು., ಖರ್ಚು ಮಾಡಿರುವುದು ತಿಳಿದು ಬಂದಿದೆ.


ಅದೇ ರೀತಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಪರಿಷ್ಕೃತ ಅಂದಾಜು 19,620 ಕೋಟಿ ರು. ಪೈಕಿ 17,666.46 ಕೋಟಿ ರು. ಖರ್ಚಾಗಿದ್ದು, ಇನ್ನೂ 1,953.54 ಕೋಟಿ ರು., ಬಾಕಿ ಉಳಿದಿದೆ. ಹಾಗೆಯೇ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ 7,952 ಕೋಟಿ ರು. ಪೈಕಿ 6,744.98 ಕೋಟಿ ರು. ವೆಚ್ಚವಾಗಿದ್ದು, ಇನ್ನೂ 1,207.02 ಕೋಟಿ ರು. ಬಾಕಿ ಉಳಿದಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts