ಅಕ್ರಮ ದಾಖಲಾತಿ; ಕೃಷಿ ವಿವಿ ವಿಶ್ರಾಂತ ಕುಲಪತಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ

ಬೆಂಗಳೂರು; ಕೃಷಿ ಕೋಟಾದಡಿ ಅಕ್ರಮವಾಗಿ ಬಿಎಸ್‌ಸಿ ಪ್ರವೇಶ ಗಿಟ್ಟಿಸಿಕೊಂಡಿದ್ದ ರಾಯೂಚೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಬಿ.ವಿ.ಪಾಟೀಲ್ ಅವರ ಪುತ್ರ ವಿನಯ್‌ ಪಾಟೀಲ್‌ ಅವರ ಪದವಿಗಳನ್ನು ರದ್ದುಪಡಿಸಲು ಸರ್ಕಾರ ಕೃಷಿ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದೆ.


ಈ ಕುರಿತು 2020ರ ಮೇ 22ರಂದು ಸೂಚಿಸಿರುವ ಕೃಷಿ ಇಲಾಖೆ, ಕೃಷಿ ಕೋಟಾದಡಿ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪಡೆದಿರುವ ಬಿ ಎಸ್‌ ಸಿ ಪದವಿಯ ಮೂಲ ಪ್ರಮಾಣ ಪತ್ರ ಮತ್ತು ಪಿ ಎಚ್‌ ಡಿ ಪ್ರಮಾಣಪತ್ರಗಳನ್ನು ಹಿಂತಿರುಗಿಸಬೇಕು ಎಂದು ಸೂಚಿಸಿದೆ.

ಇದಷ್ಟೇ ಅಲ್ಲದೆ ‘ಕೃಷಿ ಕೋಟಾದಡಿಯಲ್ಲಿ ಅಕ್ರಮವಾಗಿ ಪ್ರವೇಶ ಪಡೆದು ಓರ್ವ ಕೃಷಿ ವಿದ್ಯಾರ್ಥಿಯು ಪ್ರವೇಶ ಪಡೆಯಲು ವಂಚಿತರಾಗಿರುವುದರಿಂದ ವಿಶ್ವವಿದ್ಯಾಲಯದಿಂದ ಬಿ ಎಸ್‌ ಸಿ ಪದವಿ ಪಡೆಯಲು ತಗುಲುವ ಸಂಪೂರ್ಣ ಅಂದಾಜು ವೆಚ್ಚ 10.00 ಲಕ್ಷ ರು.ಗಳನ್ನು ವಿಶ್ವವಿದ್ಯಾಲಯಕ್ಕೆ ಭರಿಸಬೇಕು,’ ಎಂದು ವಿಶ್ವವಿದ್ಯಾಲಯದ ಕುಲಸಚಿವರೂ ಆದೇಶಿಸಿದ್ದಾರೆ.

ಬಿ ಎಸ್‌ ಸಿ ಪದವಿ ಮತ್ತು ಪಿಎಚ್‌ಡಿ ಪದವಿ ಪ್ರಮಾಣ ಪತ್ರಗಳೆರಡನ್ನೂ ರದ್ದುಗೊಳಿಸಲು ಸೂಚಿಸಿರುವ ಸರ್ಕಾರ, ಕೃಷಿ ಆದಾಯ ಪ್ರಮಾಣ ಪತ್ರವನ್ನು ತಿದ್ದಿರುವ ಕ್ರಿಮಿನಲ್‌ ಅಪರಾಧಕ್ಕಾಗಿ ವಿಶ್ರಾಂತ ಕುಲಪತಿ ಡಾ ಬಿ ವಿ ಪಾಟೀಲ್‌ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಕೃಷಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಚ್‌ ಎನ್‌ ಲಕ್ಷ್ಮಣಗೌಡ ಸೂಚಿಸಿದ್ದಾರೆ.

ವಿಶ್ರಾಂತ ಉಪ ಕುಲಪತಿ ಬಿ.ವಿ.ಪಾಟೀಲ್ ಅವರ ಪುತ್ರ ವಿನಯ್ ಪಾಟೀಲ್‌ ಅವರು ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಕೃಷಿ ಪದವಿ ಹಾಗೂ ಪಿಎಚ್‍ಡಿ ಪಡೆದಿದ್ದಾರೆ ಎಂದು ಆರೋಪಿಸಿದ್ದ ಹೋರಾಟಗಾರರಿಗೆ ಇದೀಗ ಜಯ ದೊರೆತಿದೆ. ಈ ಹಿಂದೆ ವಿಶ್ವವಿದ್ಯಾಲಯದ ವಿಚಾರಣಾ ಸಮಿತಿ ಹೋರಾಟಗಾರರ ಆರೋಪವನ್ನು ಎತ್ತಿ ಹಿಡಿದಿತ್ತು. ಅಲ್ಲದೆ ಪ್ರಕರಣ ಹೈಕೋರ್ಟ್ ನಲ್ಲಿದ್ದರೂ ವಿನಯ್ ಪಾಟೀಲ್ ಅವರಿಗೆ ಪಿಎಚ್‍ಡಿ ಪ್ರಮಾಣ ಪತ್ರ ನೀಡಲಾಗಿತ್ತು.


ಬಿ.ವಿ.ಪಾಟೀಲ್ ಅವರು ತಮ್ಮ ಆದಾಯ ಪ್ರಮಾಣ ಪತ್ರದಲ್ಲಿದ್ದ 2 ಲಕ್ಷ ರೂ.ವನ್ನು 6.20 ಲಕ್ಷ ರೂ. ಎಂದು ತಿದ್ದುಪಡಿ ಮಾಡಿ ರೈತರ ಕೋಟಾದ ಅಡಿ ಪುತ್ರನಿಗೆ ಪ್ರವೇಶ ದೊರಕಿಸಿಕೊಟ್ಟಿದ್ದರು.

Your generous support will help us remain independent and work without fear.

Latest News

Related Posts