ಲಾಕ್‌ಡೌನ್‌ ತೆರವುಗೊಂಡ ಬಳಿಕ ಹೆಚ್ಚಲಿದೆಯೇ ಕಲ್ಲಿದ್ದಲು, ತೈಲದ ಬೇಡಿಕೆ?

ಬೆಂಗಳೂರು; ಕೋವಿಡ್‌ 19ರ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ದೇಶದ ಇಂಧನ ವಲಯಕ್ಕೆ ಸಂಬಂಧಿಸಿದಂತೆ ಒಟ್ಟು ಬೇಡಿಕೆಗಳ ಪೈಕಿ ಶೇ.30ರಷ್ಟು ಕುಸಿತ ಕಂಡಿದೆ. ಲಾಕ್‌ಡೌನ್‌ ತೆರವುಗೊಂಡ ಬಳಿಕ ಆರ್ಥಿಕ ಚಟುವಟಿಕೆಗಳು ಪುನರುಜ್ಜೀವನಗೊಳ್ಳುತ್ತಿದ್ದಂತೆ ಕಲ್ಲಿದ್ದಲು ಮತ್ತು ತೈಲದ ಬೇಡಿಕೆ ಹೆಚ್ಚಾಗಲಿದೆ.

 

ಹೀಗಾಗಿ ನವೀಕರಿಸಬಹುದಾದ ಇಂಧನ ವಲಯಕ್ಕೆ ಹೆಚ್ಚಿನ ಸಹಾಯಧನ ನೀಡುವ ಯೋಜನೆಗಳು ರೂಪಿಸಬೇಕಿದೆ ಎಂಬ ವಾದಗಳಿಗೆ ಬಲ ಬಂದಂತಾಗಿದೆ. ಆರ್ಥಿಕತೆಯ ಪುನರುಜ್ಜೀವನ, ಇಂಧನ ವಲಯದಲ್ಲಿ ಹೂಡಿಕೆ ಮತ್ತು ವೆಚ್ಚಕ್ಕೆ ಸಂಬಂಧಿಸಿದಂತೆ ಐಐಎಸ್‌ಡಿಯ ಹಿರಿಯ ಇಂಧನ ತಜ್ಞರು ನಡೆಸಿರುವ ವಿಶ್ಲೇಷಣೆ ವರದಿಗಳು ಇದೀಗ ಮುನ್ನೆಲೆಗೆ ಬಂದಿವೆ.


‘ಕಲ್ಲಿದ್ದಲು ಮತ್ತು ತೈಲದ ಬೇಡಿಕೆ ಹೆಚ್ಚಾಗಲಿದೆಯಾದರೂ ಅದರ ಬೆಳವಣಿಗೆ ದರವೂ ಕಡಿಮೆ ಇರುತ್ತದೆ,’ ಎಂದು ಐಐಎಸ್‌ಡಿಯ ಹಿರಿಯ ಇಂಧನ ತಜ್ಞ ವಿಭೂತಿ ಗಾರ್ಗ್‌ ಹೇಳುತ್ತಾರೆ. ಅಗ್ಗದ ನವೀಕರಿಸಬಹುದಾದ ಶಕ್ತಿಯನ್ನು ಹೆಚ್ಚು ಉತ್ಪಾದಿಸುವ ಮೂಲಕ ಬೇಡಿಕೆಯು ಯಾವುದೇ ಹೆಚ್ಚಳವನ್ನು ಪೂರೈಸಬಹುದು ಎಂದು ವಿವರಿಸುವ ಅವರು ಕೋವಿಡ್‌-19ರ ನಂತರದ ಆರ್ಥಿಕತೆಯ ಪುನರುಜ್ಜೀವನ ಮತ್ತು ಇಂಧನ ವೆಚ್ಚವನ್ನು ಶುದ್ಧ ಶಕ್ತಿ ಪರವಾಗಿ ಮರು ಹೊಂದಿಸುವುದನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಬಹುದು ಎಂದೂ ಹೇಳುತ್ತಾರೆ.


ಇಂಧನ ಕ್ಷೇತ್ರಕ್ಕೆ ಭಾರತದ ಸಬ್ಸಿಡಿ ಬೆಂಬಲವನ್ನು ವಿಶ್ಲೇಷಿಸಿರುವ ಹೊಸ ವರದಿಯು ಇದೇ ರೀತಿಯ ಶಿಫಾರಸ್ಸುಗಳನ್ನು ಮಾಡಿದೆ. ಈ ವರದಿಯ ಲೇಖಕ ಮತ್ತು ಸಿಇಇಯುನ ಸಂಶೋಧಕ ಕಾರ್ತಿಕ್ ಗಣೇಶನ್‍ರ ಪ್ರಕಾರ ‘ಈ (ಕಲ್ಲಿದ್ದಲು, ತೈಲ ಮತ್ತು ಅನಿಲ) ಸಬ್ಸಿಡಿಗಳು ಹೂಡಿಕೆಗೆ ಅರ್ಹವೇ ಎಂದು ಮರು ಯೋಚಿಸಲು ಸರ್ಕಾರಕ್ಕೆ ಇದೊಂದು ಉತ್ತಮ ಅವಕಾಶ,’. ಇವರ ವರದಿಯ ಪ್ರಕಾರ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಗೆ ಸರ್ಕಾರದ ಸಹಾಯಧನದ ಮೊತ್ತ ಕಳೆದ 5 ವರ್ಷಗಳಲ್ಲಿ ಅಂದರೆ 2018-19 ರವರೆಗೆ ಮೂರು ಪಟ್ಟು ಹೆಚ್ಚಾಗಿದೆ, ಇದು 2014ರಲ್ಲಿ 3,224 ಕೋಟಿ ರು.ನಿಂದ 2018 ರಲ್ಲಿ 9,930 ಕೋಟಿ ರು.ಗೆ ಏರಿದೆ.


ಕಲ್ಲಿದ್ದಲು ಮತ್ತು ಅನಿಲಕ್ಕೆ 2018-19 ರಲ್ಲಿ ಸುಮಾರು 83,134 ಕೋಟಿ ರು. ಸಹಾಯಧನ ನೀಡಿತ್ತು. ಇದು ನವೀಕರಿಸಬಹುದಾದ ಶಕ್ತಿಗೆ ನೀಡಿದ ಸಹಾಯಧನಗಳಿಗಿಂತಲೂ 7 ಪಟ್ಟು ಹೆಚ್ಚಿದೆ ಎಂದು ಐಐಎಸ್ಡಿ-ಸಿಇಡಬ್ಲ್ಯುನ ಏಪ್ರಿಲ್ 18, 2020ರ ಜಂಟಿ ವರದಿ ತಿಳಿಸಿದೆ.


ಪ್ರಸ್ತುತ ಭಾರತದ ವಿದ್ಯುತ್‌, ಕಲ್ಲಿದ್ದಲ್ಲಿನಿಂದ ಶೇ. 56ರಷ್ಟು ಶೇ. 36ರಷ್ಟು ತೈಲದಿಂದ ಶೇ. 3ರಷ್ಟು ನವೀಕರಿಸಬಹುದಾದ ವಸ್ತುಗಳಿಂದ ಉತ್ಪಾದನೆ ಆಗುತ್ತಿದೆ. ವಿದ್ಯುತ್ ಉತ್ಪಾದನೆಯನ್ನು ಹಸಿರೀಕರಣಗೊಳಿಸುವ ಮೂಲಕ ಉತ್ತಮ ಪ್ರಗತಿಯನ್ನು ಸಾಧಿಸಿದೆ. ನವೀಕರಿಸಬಹುದಾದ ವಸ್ತುಗಳು ಈಗ ಭಾರತದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯ 1/5 ಭಾಗ ಹೊಂದಿದೆ. 2014ರಲ್ಲಿ ಇದರ ಪ್ರಮಾಣ ಶೇ.13ರಷ್ಟಿತ್ತು.


ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಈಗ ತೆಗೆದುಕೊಳ್ಳುವ ನಿರ್ಧಾರಗಳು ದೀರ್ಘಕಾಲದವರೆಗೆ ನಿರ್ಧರಿಸುತ್ತದೆ. ‘ಮುಂಬರುವ ವರ್ಷಗಳಲ್ಲಿ ವಿಶ್ವದಾದ್ಯಂತ ಇಂಧನ ಮೂಲಸೌಕರ್ಯಕ್ಕೆ ಹೂಡಿಕೆ ಮಾಡುವ ಹಣವು ಮುಂದಿನ ದಶಕದವರೆಗೆ ಶುದ್ಧ ಮತ್ತು ಹಸಿರು ಶಕ್ತಿಯ ಪಥವನ್ನು ರೂಪಿಸುತ್ತದೆ,’ ಎಂದು ಸೆಂಟರ್ ಫಾರ್ ಪಾಲಿಸಿ ರಿಸರ್ಚ್‍ನ ಹಿರಿಯ ಸಂಶೋಧಕ ಆದಿತ್ಯ ವಲಿಯಥನ್ ಪಿಳೈ ಅವರು 2020ರ ಏಪ್ರಿಲ್ 11ರ ಸುದ್ದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಮತ್ತು ಸ್ಥಳೀಯ ಸಮುದಾಯದ ನಡುವಿನ ಸಂಪರ್ಕದ ಮೊದಲ ಹಂತವಾಗಿರುವ ಸುಮಾರು 39,000ಕ್ಕೂ ಹೆಚ್ಚು ಆರೋಗ್ಯ ಉಪಕೇಂದ್ರಗಳು ವಿದ್ಯುದ್ದೀಕರಣಗೊಂಡಿರಲಿಲ್ಲ. ಮೊದಲ ಹಂತದಲ್ಲೇ ಈ ಎಲ್ಲಾ ಆರೋಗ್ಯ ಉಪ ಕೇಂದ್ರಗಳನ್ನು ಸೌರ ಶಕ್ತಿಯಿಂದ ಸಶಕ್ತಿಕರಣಗೊಳಿಸಬಹುದಿತ್ತು.


ಗ್ರಾಮೀಣ ಭಾರತದಲ್ಲಿ 230 ದಶಲಕ್ಷ ಜನರಿಗೆ ನವೀಕರಿಸಬಹುದಾದ ಇಂಧನ ವಲಯ ಸೇವೆ ಸಲ್ಲಿಸುತ್ತಿದೆ. ನವೀಕರಿಸಬಹುದಾದ ಇಂಧನ ಕಂಪನಿಗಳು ಮತ್ತು ಉನ್ನತ ಸಲಹಾ ಸಮಿತಿಗಳು, ಆರೋಗ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ 20ಕ್ಕೂ ಹೆಚ್ಚು ತಜ್ಞರು ಇದೇ ಶಿಫಾರಸ್ಸನ್ನು ಮಾಡಿದ್ದಾರೆ. ಈ ಶಿಫಾರಸ್ಸನ್ನು ಅನುಷ್ಠಾನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರಂಭದಲ್ಲೇ ಸಾಕಷ್ಟು ಸಮಯವಿತ್ತು.
ಪಳೆಯುಳಿಕೆ ಇಂಧನವನ್ನು ಶುದ್ಧ ಶಕ್ತಿಯನ್ನಾಗಿಸಲು ಇವುಗಳಿಗೆ ನೀಡುತ್ತಿರುವ ಸಹಾಯಧನವನ್ನು ನವೀಕರಿಸಬಹುದಾದ ಇಂಧನ ವಲಯಕ್ಕೂ ವರ್ಗಾಯಿಸಬೇಕು ಎನ್ನುತ್ತಾರೆ ಇಂಧನ ತಜ್ಞರು.


ಗಂಗಾಧರ ವೈ ವಿ


ಸಂಶೋಧನಾ ವಿದ್ಯಾರ್ಥಿ, ತುಮಕೂರು ವಿ.ವಿ.

the fil favicon

SUPPORT THE FILE

Latest News

Related Posts