ಬೆಂಗಳೂರು; ಕೊರೊನಾ ವೈರಸ್‌ನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ರಾಜ್ಯ ಸರ್ಕಾರ ಇದೀಗ ಕೋಟ್ಯಂತರ ರು. ಬೆಲೆಬಾಳುವ ಸರ್ಕಾರಿ ಜಮೀನು ಮತ್ತು ಒತ್ತುವರಿಯಿಂದ ತೆರವುಗೊಂಡು ಹರಾಜಿಗೆ ಮುಕ್ತವಾಗಿರುವ ಸರ್ಕಾರಿ ಜಮೀನುಗಳನ್ನು ಹರಾಜು ಹಾಕಲು ಮುಂದಾಗಿದೆ.
ಸರ್ಕಾರಿ ಜಮೀನು ಈಗಾಗಲೇ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಹಂಚಿಕೆಯಾಗಿದ್ದರೂ ತಕ್ಷಣವೇ ರದ್ದುಗೊಳಿಸಿ ಹರಾಜು ಹಾಕಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ.
ಭೂ ಮಾಫಿಯಾ ಮತ್ತು ಇದರ ಪ್ರಭಾವ ಹೊಂದಿರುವ ಚುನಾಯಿತ ಪ್ರತಿನಿಧಿಗಳ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಹರಾಜು ಮಾಡಲು ಲಭ್ಯವಿರುವ ಸೂಕ್ತ ಸರ್ಕಾರಿ ಜಮೀನುಗಳನ್ನು ಗುರುತಿಸಿ ತ್ವರಿತಗತಿಯಲ್ಲಿ ಹರಾಜು ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ರಾಜ್ಯದ ಎಲ್ಲಾ ತಹಶೀಲ್ದಾರ್‌ಗಳಿಗೆ ಆಯಾ ಜಿಲ್ಲಾಧಿಕಾರಿಗಳ ಮೂಲಕ ಸೂಚನೆ ಹೊರಡಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಬಡಾವಣೆಗಳಲ್ಲಿ ಖಾಲಿ ಇರುವ ನಾಗರಿಕ ಮತ್ತು ಮೂಲೆ ನಿವೇಶನಗಳನ್ನು ಹರಾಜು ಹಾಕಲು ಮುಂದಾಗಿದ್ದ ಬೆನ್ನಲ್ಲೇ, ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಇರುವ ಸರ್ಕಾರಿ ಜಮೀನುಗಳನ್ನು ಹರಾಜು ಹಾಕಲು ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಸರ್ಕಾರಿ ಜಮೀನುಗಳನ್ನು ಹರಾಜಿಗೆ ಮುಂದಾಗಿರುವುದು ಭೂಮಾಫಿಯಾದೊಂದಿಗೆ ಕೈಜೋಡಿಸಿದಂತಾಗಿದೆಯಲ್ಲದೆ, ಸರ್ಕಾರವೇ ನೇರವಾಗಿ ರಿಯಲ್ ಎಸ್ಟೇಟ್ ದಂಧೆಗಿಳಿದಂತಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಸರ್ಕಾರದ ಸೂಚನೆಯಂತೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ತಹಶೀಲ್ದಾರ್ ಜಿಗಣಿ ಮತ್ತು ಕಸಬಾ ಹೋಬಳಿಯಲ್ಲಿರುವ ಒಟ್ಟು 33.26 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಗುರುತಿಸಿದ್ದಾರೆ. ಅಲ್ಲದೆ, ಅಳತೆ ಕಾರ್ಯ ನಡೆಸುವ ಸಲುವಾಗಿ ತಾಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ 2020ರ ಏಪ್ರಿಲ್ 29ರಂದು ಪತ್ರವನ್ನು ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಆನೇಕಲ್ ತಹಶೀಲ್ದಾರ್ ಅವರು ಗುರುತಿಸಿರುವ ಒಟ್ಟು 33.26 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನು ಅಂದಾಜು 200 ಕೋಟಿ ರು.ಮೌಲ್ಯ ಹೊಂದಿದೆ ಎಂದು ತಿಳಿದು ಬಂದಿದೆ. ಜಿಗಣಿ ಹೋಬಳಿಯ ಹುಲ್ಲಹಳ್ಳಿ ಸರ್ವೇ ನಂಬರ್ 111ರಲ್ಲಿ 2.16 ವಿಸ್ತೀರ್ಣದ ಗೋಮಾಳ, ಸರ್ವೆ ನಂಬರ್ 186ರಲ್ಲಿನ 1.17 ಎಕರೆ ವಿಸ್ತೀರ್ಣದ ಗೋಮಾಳವನ್ನು ಅಳತೆ ಮಾಡಿದ ನಂತರ ಪ್ರಸ್ತಾವನೆ ಕಳಿಸಲು ತಹಶೀಲ್ದಾರ್ ಸೂಚಿಸಿದ್ದಾರೆ.
ಅದೇ ರೀತಿ ಹುಲಿಮಂಗಲ ಗ್ರಾಮದ ಸರ್ವೆ ನಂಬರ್ 350ರಲ್ಲಿರುವ 22.00 ಎಕರೆ ವಿಸ್ತೀರ್ಣದ ಸರ್ಕಾರಿ ಖರಾಬು ಕೂಡ ಒಳಗೊಂಡಿದೆ. ವಿಶೇಷವೆಂದರೆ ಈ ಸರ್ವೆ ನಂಬರ್‌ನಲ್ಲಿರುವ ಸರ್ಕಾರಿ ಜಮೀನು ಬಿಎಂಆರ್‌ಸಿಎಲ್ ಯೋಜನೆಗೆ ನೀಡಲಾಗಿತ್ತು. ಆದರೀಗ ಸರ್ಕಾರದ ಸೂಚನೆಯಂತೆ ಈ ಜಮೀನಿನ ಹಂಚಿಕೆಯನ್ನು ರದ್ದುಗೊಳಿಸಿ ಹರಾಜು ಹಾಕುವ ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ.
ಹಾಗೆಯೇ ಎಸ್ ಬಂಗಿಪುರ ಸರ್ವೇ ನಂಬರ್ 231 ಮತ್ತು 238ರಲ್ಲಿರುವ 3.50 ಎಕರೆ ವಿಸ್ತೀರ್ಣದ ಗೋಮಾಳವನ್ನು ಅಳತೆ ಮಾಡಿ ಹರಾಜು ಪ್ರಸ್ತಾವನೆಯಲ್ಲಿ ಸೇರಿಸಲು ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ತಹಶೀಲ್ದಾರ್ ಅವರು ಸೂಚಿಸಿದ್ದಾರೆ.
ಕಸಬಾ ಹೋಬಳಿಯ ಮಡಿವಾಳದ ಸರ್ವೆ ನಂಬರ್ 8 ಮತ್ತು 9ರಲ್ಲಿ ಕ್ರಮವಾಗಿ 0.22 ಮತ್ತು 0.30 ಗುಂಟೆ,ಬೆಸ್ತಮಾನಹಳ್ಳಿ ಸರ್ವೆ ನಂಬರ್ 19ರಲ್ಲಿ 2.11 ಎಕರೆ ವಿಸ್ತೀರ್ಣದ ಗೋಮಾಳ ಜಮೀನು, ಇನ್ನೂ ಸರ್ವೆ ಇಲಾಖೆಯಿಂದ ಅಳತೆಯಾಗಬೇಕಿದೆ ಎಂಬ ಮಾಹಿತಿಯನ್ನು ತಹಶೀಲ್ದಾರ್ ಒದಗಿಸಿದ್ದಾರೆ. ಹೀಗಾಗಿ ಸರ್ವೆ ಆದ ನಂತರ ಹರಾಜು ಹಾಕುವ ಕುರಿತು ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಅದೇ ರೀತಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒತ್ತುವರಿಯಿಂದ ಈಗಾಗಲೇ ತೆರವುಗೊಳಿಸಿರುವ ಸರ್ಕಾರಿ ಜಮೀನುಗಳನ್ನು ಹರಾಜು ಹಾಕಲು ಜಾರಿ ದಳದ ವಿಶೇಷ ಜಿಲ್ಲಾಧಿಕಾರಿ 2020ರ ಏಪ್ರಿಲ್ 13ರಂದೇ ಬೆಂಗಳೂರು ಉತ್ತರ ಮತ್ತು ದಕ್ಷಿಣ ವಿಭಾಗದ ಉಪ ವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
‘ಸರ್ಕಾರಿ ಜಮೀನು ಸರ್ಕಾರದ ಸುಬರ್ದಿನಲ್ಲಿದ್ದು ಯಾವುದೇ ನ್ಯಾಯಾಲಯದಲ್ಲಿ ದಾವೆ ದಾಖಲಾಗದೇ ಇರುವುದನ್ನು ಭೂ ಸುಧಾರಣೆ ಕಾಯ್ದೆ 79(ಎ) ಮತ್ತು (ಬಿ), ನಮೂನೆ 50,53,57ರ ಅರ್ಜಿಗಳ ಬಗ್ಗೆ ಎನ್‌ಜಿಟಿ ಆದೇಶದಂತೆ ಕಾಪು ವಲಯ(ಬಫರ್ ಝೋನ್) ಹೊರತುಪಡಿಸಿ ಮತ್ತು 136(3) ಪ್ರಕರಣ ದಾಖಲಾಗದೇ ಇರುವಂತಹ ಮತ್ತು ಋಣಭಾರ ಮುಕ್ತವಾಗಿರುವ ಜಮೀನುಗಳನ್ನು ಖಚಿತಪಡಿಸಿಕೊಂಡು ಪ್ರಸ್ತಾವನೆ ಸಲ್ಲಿಸಬೇಕು,’ ಎಂದು ಜಾರಿದಳದ ವಿಶೇಷ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿಗಳಿಗೆ ಪತ್ರದಲ್ಲಿ ಸೂಚಿಸಿದ್ದಾರೆ.
‘ಸರ್ಕಾರದ ಆಸ್ತಿ ಹರಾಜು ಮಾಡುವ ನಿರ್ಧಾರದ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾ ಪ್ರಭಾವ ಸಾಕಷ್ಟಿದೆ. ಭೂಮಾಫಿಯಾದ ಒತ್ತಡಕ್ಕೆ ಮಣಿದು ಕೋಟ್ಯಂತರ ರುಪಾಯಿ ಬೆಲೆ ಬಾಳುವ ಸರ್ಕಾರಿ ಆಸ್ತಿಯನ್ನು ಮಾರಾಟ ಮಾಡಲು ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಸದಾ ಹಾತೊರೆಯುತ್ತಿರುತ್ತಾರೆ. ಕೊರೊನಾ ಸೋಂಕಿನ ಕಾರಣಕ್ಕಾಗಿ ಸರ್ಕಾರಕ್ಕೆ ಆದಾಯ ಇಲ್ಲವೆನ್ನುವುದು ಒಂದು ದೊಡ್ಡ ನೆಪವಾಗಿದೆ. ಶಾಲೆ, ಕಾಲೇಜು, ಆಸ್ಪತ್ರೆ, ಮೈದಾನವನ್ನು ಸಮುದಾಯಕ್ಕೆ ಅನುಕೂಲವಾಗುವ ಯೋಜನೆಗಳಿಗೆ ಬಳಸಬೇಕಾದ ಭೂಮಿಯನ್ನು ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಹರಾಜು ಹಾಕುವುದು ಜನರನ್ನೇ ಹರಾಜು ಹಾಕಿದಂತೆ,’ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ಟೀಕಿಸಿದ್ದಾರೆ.
ಸಾರ್ವಜನಿಕ ಜಮೀನುಗಳನ್ನು ಸಂರಕ್ಷಿಸಬೇಕಿದ್ದ ನಿಗಮವೇ ಈಗ ಹರಾಜು ಮಾಡಲು ಹೊರಟಿದೆ. ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ವಿರೋಧಿಸಬೇಕಿದ್ದ ನಿಗಮ, ಹರಾಜು ನಡೆಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಸರ್ಕಾರದಲ್ಲಿ ಹಣವಿಲ್ಲವೆಂದ ಮಾತ್ರಕ್ಕೆ ಸರ್ಕಾರಿ ಜಮೀನುಗಳನ್ನು ಮಾರಾಟ ಮಾಡುವುದು ಅಕ್ಷಮ್ಯ ಅಪರಾಧ. ಅಲ್ಲದೆ, ಭೂ ಸುಧಾರಣೆ ಅಧಿನಿಯಮಗಳಿಗೆ ಇದು ವಿರುದ್ಧವಾಗಿದೆ. ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಸರ್ಕಾರಿ ಜಮೀನುಗಳನ್ನು ಮಾರಾಟ ಮಾಡಿದರೆ ಭವಿಷ್ಯದ ದಿನಗಳಲ್ಲಿ ವಸತಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಿಗೆ ಜಮೀನುಗಳೇ ಸಿಗುವುದಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾಧವಪ್ರಸಾದ್ ರೆಡ್ಡಿ