ಬಳಸಿ ಬಿಸಾಡಿದ್ದ ವೆಂಟಿಲೇಟರ್‌ ಖರೀದಿ!; ಭ್ರಷ್ಟತೆಯ ಮತ್ತೊಂದು ಮುಖ ಅನಾವರಣ

ಬೆಂಗಳೂರು; ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಸರಬರಾಜಾಗಿರುವ ಬಹುತೇಕ ವೆಂಟಿಲೇಟರ್‌ಗಳ ಮೇಲೆ ಐಎಸ್‌ಒ ಗುಣಮಟ್ಟ ಸೂಚಿಸುವ ಪ್ರಮಾಣ ಪತ್ರ ಮತ್ತು ಸೂಕ್ತ ಪುರಾವೆಗಳೇ ಇಲ್ಲ. ಹಾಗೆಯೇ ಆಸ್ಪತ್ರೆಗಳಲ್ಲಿ ಹಲವು ವರ್ಷಗಳ ಕಾಲ ಬಳಸಿರುವ, ಮುರಿದಿರುವ ಮತ್ತು ಬಳಕೆಗೆ ಯೋಗ್ಯವಲ್ಲದ ವೆಂಟಿಲೇಟರ್‌ಗಳನ್ನು ದಾಸ್ತಾನಿಗೆ ಪಡೆದಿರುವ ಪ್ರಕರಣ ಇದೀಗ ಬಹಿರಂಗವಾಗಿದೆ.


ರಾಜ್ಯಕ್ಕೆ ಪೂರೈಕೆ ಆಗಿರುವ ವೆಂಟಿಲೇಟರ್‌ಗಳ ಮೇಲೆ ಐಎಸ್‌ಒ, ಸಿಇ, ಎಫ್‌ಡಿಎ, ಉಪಕರಣ ಉತ್ಪಾದನೆ, ಮಾದರಿ ವಿವರಗಳು ಮತ್ತು ಇದಕ್ಕೆ ಸಂಬಂಧಿಸಿದಂತೆ ಯಾವ ಪುರಾವೆಗಳೂ ಇಲ್ಲ ಎಂಬುದನ್ನು ‘ದಿ ಫೈಲ್‌’ ಲಭ್ಯವಿರುವ ದಾಖಲೆಗಳ ಮೂಲಕ ಅಕ್ರಮದ ಇನ್ನೊಂದು ಮುಖವನ್ನು ಅನಾವರಣಗೊಳಿಸಿದೆ. ತ್ವರಿತಗತಿಯಲ್ಲಿ ನಡೆದಿದ್ದ ವೆಂಟಿಲೇಟರ್‌ ಖರೀದಿಯಲ್ಲಿನ ಅಕ್ರಮಗಳು ಇದೀಗ ಆ ಎಲ್ಲಾ ಪ್ರಕ್ರಿಯೆಗಳನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದೆ.


ಪ್ರಕರಣ ವಿವರ
ದೆಹಲಿ ಮೂಲದ ಆರ್‌ ಕೆ ಮೆಡಿಕಲ್‌ ಸೊಲ್ಯೂಷನ್ಸ್‌ ಕಂಪನಿ ರಾಜ್ಯಕ್ಕೆ ಡ್ರ್ಯಾಗರ್‌ ಹೆಸರಿನ ಒಟ್ಟು 15 ವೆಂಟಿಲೇಟರ್‌ಗಳನ್ನು 2020ರ ಏಪ್ರಿಲ್‌ 14ರಂದು ಪೂರೈಸಿದೆ. ಇದರ ಅಂದಾಜು ಮೊತ್ತ 3.88 ಕೋಟಿ ರು ಎಂದು ತಿಳಿದು ಬಂದಿದೆ.
ಈ ಕಂಪನಿ ಸರಬರಾಜು ಮಾಡಿರುವ ವೆಂಟಿಲೇಟರ್‌ಗಳ ಮೇಲೆ ಐಎಸ್‌ಒ, ಸಿಎ ಮತ್ತು ಎಫ್‌ಡಿಎ, ಮಾಡಲ್‌, ಉತ್ಪಾದನೆ ವಿವರ ಮತ್ತು ಉತ್ಪಾದನೆ ವರ್ಷಕ್ಕೆ ಸಂಬಂಧಿಸಿದಂತೆ ಯಾವ ಪುರಾವೆಗಳೂ ಇಲ್ಲ. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಹೆಚ್ಚುವರಿ ನಿರ್ದೇಶಕರಾದ ಮಂಜುಶ್ರೀ ಅವರು ದೆಹಲಿ ಮೂಲದ ಸರಬರಾಜುದಾರ ಆರ್‌ ಕೆ ಮೆಡಿಕಲ್‌ ಸೊಲ್ಯೂಷನ್‌ ಕಂಪನಿಗೆ 2020ರ ಏಪ್ರಿಲ್‌ 28ರಂದು ನೋಟೀಸ್‌ ಜಾರಿಗೊಳಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.


ಕ್ರಮ ಸಂಖ್ಯೆ ಎಆರ್‌ಎನ್‌ಕೆ-0251, ಇವಿಐಟಿಎ-4, 04.22 ಮಾಡಲ್‌ ವೆಂಟಿಲೇಟರ್‌ 2007ರ ಜನವರಿ 1ರಂದು ಉತ್ಪಾದನೆಯಾಗಿದೆ. ಈ ಉಪಕರಣ 46583 ಗಂಟೆಗಳ ಕಾಲ ಬಳಕೆಯಾಗಿದೆ. ಖರೀದಿ ಆದೇಶ ಪ್ರಕಾರ ಈ ಉಪಕರಣದ ಮೇಲೆ ತಾಂತ್ರಿಕತೆಗೆ ಸಂಬಂಧಿಸಿದಂತೆ ನಿರ್ದಿಷ್ಟ ವಿವರಗಳಿಲ್ಲ. ಅಲ್ಲದೆ ಈ ಉಪಕರಣವನ್ನು ಹೇಗೆ ಬಳಕೆ ಮಾಡಬೇಕು ಎಂಬ ಬಗ್ಗೆ ಮೂಲ ಉತ್ಪಾದಕ ಕಂಪನಿ ತನ್ನ ಪ್ರತಿನಿಧಿಯನ್ನು ನಿಯೋಜಿಸಿಲ್ಲ ಎಂದು ಹೆಚ್ಚುವರಿ ನಿರ್ದೇಶಕರ ಪತ್ರದಿಂದ ತಿಳಿದು ಬಂದಿದೆ.

ಅಲ್ಲದೆ ಈ ಕಂಪನಿ ಸರಬರಾಜು ಮಾಡಿರುವ ಹಲವು ವೆಂಟಿಲೇಟರ್‌ಗಳು 13 ವರ್ಷಗಳ ಹಿಂದೆಯೇ ಉತ್ಪಾದನೆಗೊಂಡಿದ್ದವು. ಅಲ್ಲದೆ ಹಲವು ವೆಂಟಿಲೇಟರ್‌ಗಳು ಆಸ್ಪತ್ರೆಗಳಲ್ಲಿ ಬಹುಕಾಲ ಬಳಕೆ ಆಗಿದ್ದವು. ಆದರೆ ಅಧಿಕಾರಿಗಳು ಇದಾವುದನ್ನೂ ಪರಿಶೀಲಿಸದೆಯೇ ದಾಸ್ತಾನಿಗೆ ಪಡೆದಿದ್ದಾರೆ. ಇದಲ್ಲದೆ ಹಲವು ಸರಬರಾಜುದಾರರು ಪೂರೈಸಿರುವ ವೆಂಟಿಲೇಟರ್‌ಗಳ ಮೇಲೆ ಗುಣಮಟ್ಟ ಪ್ರಮಾಣಾಂಕನ ಸಂಸ್ಥೆಯ ಪ್ರಮಾಣಪತ್ರಗಳೇ ಇಲ್ಲ ಎಂದು ತಿಳಿದು ಬಂದಿದೆ.
ಸರಬರಾಜುದಾರು ಪೂರೈಸಿದ್ದ ವೆಂಟಿಲೇಟರ್‌ಗಳನ್ನು ಪರಿಶೀಲನೆ ಮಾಡದೆಯೇ ಸ್ವೀಕರಿಸಿ ದಾಸ್ತಾನಿಗೆ ಪಡೆದಿರುವುದರ ಹಿಂದೆ ಭಾರೀ ಅಕ್ರಮ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಧಿಕಾರಿಗಳ ಕರ್ತವ್ಯಲೋಪದಿಂದಾಗಿ ಸರ್ಕಾರಕ್ಕೆ ಕೋಟ್ಯಂತರ ರು.ನಷ್ಟ ಸಂಭವಿಸಿದೆ.
ಕೋಟ್ಯಂತರ ರು. ಮೌಲ್ಯದ ವೆಂಟಿಲೇಟರ್‌ಗಳನ್ನು ದಾಸ್ತಾನಿಗೆ ಪಡೆಯುವ ಮುನ್ನ ಅದರ ಗುಣಮಟ್ಟ, ತಯಾರಿಕೆ ವರ್ಷ ಮತ್ತು ತಾಂತ್ರಿಕ ಇನ್ನಿತರೆ ಗುಣಮಟ್ಟ ಅಂಶಗಳನ್ನು ಪರಿಶೀಲನೆ ಕುರಿತು ಹೊಣೆಗಾರಿಕೆ ನಿಭಾಯಿಸಬೇಕಿದ್ದ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆಯ ತಾಂತ್ರಿಕ ಮತ್ತು ವೈದ್ಯಕೀಯ ಅಧಿಕಾರಿಗಳ ಬಹುದೊಡ್ಡ ಲೋಪವೂ ಈ ಪ್ರಕರಣದಲ್ಲಿ ಬಹಿರಂಗವಾಗಿದೆ.
ಯಾವುದೇ ಒಂದು ವೈದ್ಯಕೀಯ ಉಪಕರಣಕ್ಕೆ ಕನಿಷ್ಠ 7 ವರ್ಷ ಬಾಳಿಕೆ ಇದೆ. 7 ವರ್ಷದ ನಂತರ ಉಪಕರಣ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಆದರೆ ಲಾಭಕೋರ ಸರಬರಾಜುದಾರರು ಬಳಕೆಗೆ ಯೋಗ್ಯವಲ್ಲದ ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಖಾಸಗಿ ಆಸ್ಪತ್ರೆಗಳು ಬಳಸಿ ಬಿಸಾಡಿದ್ದವು ಎನ್ನಲಾಗಿರುವ ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಿರುವ ಸರಬರಾಜುದಾರರಿಗೆ ನೋಟೀಸ್‌ ಕೊಟ್ಟು ಕೈ ತೊಳೆದುಕೊಂಡಿರುವ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ, ಸರಬರಾಜುದಾರನಿಗೆ ಮುಂಗಡವಾಗಿ ಕೋಟ್ಯಂತರ ರು.ಗಳನ್ನು ಪಾವತಿ ಮಾಡಿದೆ ಎಂದು ಗೊತ್ತಾಗಿದೆ.
ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಟದ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಭ್ರಷ್ಟ ರಾಜಕಾರಣಿಗಳು ಮಾಡುತ್ತಿರುವ ಅವ್ಯವಹಾರ, ಅಕ್ರಮಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಅಕ್ರಮಗಳಿಗೆ ಕುಮ್ಮಕ್ಕು ಕೊಟ್ಟಂತಾಗಿದೆ.
‘ಈಗಾಗಲೇ ಬೆಳಕಿಗೆ ಬಂದಿರುವ ಪ್ರಕರಣಗಳಲ್ಲಿ ಭಾಗಿ ಆಗಿದ್ದಾರೆ ಎಂದು ಆರೋಪಿಸಲಾಗಿರುವ ಅಧಿಕಾರಿಗಳನ್ನು ತತ್‌ಕ್ಷಣವೇ ಅಮಾನತುಗೊಳಿಸಿ, ತಾಂತ್ರಿಕ ನೈಪುಣ್ಯತೆ, ವೈದ್ಯಕೀಯ ಪರಿಜ್ಞಾನ ಇರುವ ಪ್ರಾಮಾಣಿಕ ಅಧಿಕಾರಿ, ವೈದ್ಯರ ಸೇವೆ ಪಡೆಯಲು ಮುಂದಾಗಬೇಕು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.
ತೀವ್ರ ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಗಳನ್ನು ವೆಂಟಿಲೇಟರ್‌ಗಳಲ್ಲಿಡಲಾಗುತ್ತದೆ. ದೇಹಕ್ಕೆ ನಿರ್ದಿಷ್ಟವಾಗಿ ಆಮ್ಲಜನಕವನ್ನು ಈ ಉಪಕರಣ ಪೂರೈಸುತ್ತದೆ.
‘ವೆಂಟಿಲೇಟರ್‌ಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ 10-15 ವರ್ಷದ ತನಕ ಬಳಸಬಹುದು. ಕಾಲಕಾಲಕ್ಕೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿರಬೇಕು. ಕೋವಿಡ್‌ 19ನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ನವೀನ ಮಾದರಿಯ ವೆಂಟಿಲೇಟರ್‌ಗಳನ್ನು ಖರೀದಿಸಬೇಕು,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅರಿವಳಿಕೆ ವೈದ್ಯರೊಬ್ಬರು.

the fil favicon

SUPPORT THE FILE

Latest News

Related Posts