ತಬ್ಲಿಗಿ ಜಮಾತ್‌ ಸಂಘಟನೆ ವಿರುದ್ಧ ಸಿಬಿಐ ತನಿಖೆ

ಬೆಂಗಳೂರು; ಕೊರೊನಾ ವೈರಸ್‌ ಹರಡುವಿಕೆಗೆ ಕಾರಣರು ಎಂಬ ಅರೋಪಕ್ಕೀಡಾಗಿರುವ ತಬ್ಲಿಗಿ ಜಮಾತ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂಬ ಆರೋಪದಡಿ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ.


ಧಾರ್ಮಿಕ ಸಂಘಟನೆಯಾಗಿರುವ ತಬ್ಲಿಗಿ ಜಮಾತ್‌ಗೆ ಅಂತರಾಷ್ಟ್ರೀಯ ಸಂಪರ್ಕಗಳು ಇದೆ ಎಂದು ಶಂಕೆ ವ್ಯಕ್ತಪಡಿಸಿರುವ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.


ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘನೆ ಆಗಿದೆಯೇ ಇಲ್ಲವೇ ಎಂಬ ಬಗ್ಗೆಯಷ್ಟೇ ಪ್ರಾಥಮಿಕ ತನಿಖೆ ನಡೆಸಲಿದೆ. ಆ ನಂತರ ಈ ಸಂಘಟನೆ ವಿದೇಶಿ ಮೂಲಗಳಿಂದ ಪಡೆದಿರುವ ದೇಣಿಗೆ ಕುರಿತೂ ತನಿಖೆ ನಡೆಸಲಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.


ಇದೇ ಸಂಘಟನೆಯ ಕಾರ್ಯಚಟುವಟಿಕೆ ಕುರಿತು ತನಿಖೆ ನಡೆಸಿದ್ದ ದೆಹಲಿ ಪೊಲೀಸ್‌ ಅಪರಾಧ ವಿಭಾಗ ಸಿದ್ಧಪಡಿಸಿರುವ ದೋಷಾರೋಪಣೆ ಪಟ್ಟಿಯನ್ನು ಸಿಬಿಐ ಕಲೆ ಹಾಕಿದೆ. ಕಳೆದ 3 ದಿನಗಳ ಹಿಂದೆಯಷ್ಟೇ ಸಲ್ಲಿಕೆಯಾಗಿರುವ 40,000 ಪುಟಗಳನ್ನೊಂದಿರುವ ದೋಷಾರೋಪಣೆ ಪಟ್ಟಿಯನ್ನು ಪಡೆದು ತನಿಖೆ ಆರಂಭಿಸಿದೆ. ಇದರಲ್ಲಿ ಜಮಾತ್‌ಗೆ ವಿದೇಶದಲ್ಲಿರುವ 900 ಮಂದಿ ಸದಸ್ಯರ ವಿರುದ್ಧವೂ ದೋಷಾರೋಪಗಳಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.


‘ತಬ್ಲಿಗಿ ಜಮಾತ್‌ ಸಂಘಟನೆಯ ಕೆಲವರ ವಿರುದ್ಧ ಸಿಬಿಐ ಈಗಾಗಲೇ ಪ್ರಕರಣವನ್ನು ದಾಖಲಿಸಿದೆ. ಸಂಘಟಕರು ಮತ್ತು ಟ್ರಸ್ಟಿಗಳು ನಡೆಸಿರುವ ನಗದು ವಹಿವಾಟಿನ ಮೇಲೆ ಸಂಶಯಗಳಿವೆ. ವಿದೇಶದಿಂದ ಸಂಗ್ರಹಿಸಿರುವ ದೇಣಿಗೆ ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿಕೊಂಡಿರುವ ಸಾಧ್ಯತೆ ಇದೆ,’ ಎಂದು ಸಿಬಿಐ ಅಧಿಕಾರಿಯೊಬ್ಬರು ರಾಷ್ಟ್ರೀಯ ಮಾಧ್ಯಮದೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ಸಿಬಿಐ ಕಾರ್ಯಾಚರಣೆಯ ನಿಯಮಗಳ ಪ್ರಕಾರ ಮೊದಲ ಹಂತದಲ್ಲಿ ಪ್ರಾಥಮಿಕ ತನಿಖೆ ನಡೆಯಲಿದೆ. ನಿಯಮಬಾಹಿರ ಚಟುವಟಿಕೆಗಳು ನಡೆದಿದೆಯೇ ಇಲ್ಲವೇ ಎಂಬ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ಆ ನಂತರ ಎಫ್‌ಐಆರ್‌ ದಾಖಲಿಸಬೇಕೆ ಎಂದು ನಿರ್ಧರಿಸಲಿದೆ.


ಹಣದ ವಹಿವಾಟು ಮತ್ತು ವ್ಯಕ್ತಿಗತವಾಗಿ ಅಂತರಾಷ್ಟ್ರೀಯ ಸಂರ್ಪಕಗಳನ್ನು ಹೊಂದಿರುವ ಕುರಿತೂ ತನಿಖೆ ನಡೆಸಲಿದೆಯಲ್ಲದೆ ಈ ಸಂಘಟನೆಗೆ ಭಾರತ ಮತ್ತು ವಿದೇಶಗಳಿಂದ ಹಣಕಾಸಿನ ನೆರವು ನೀಡುತ್ತಿರುವ ವ್ಯಕ್ತಿಗಳು ಮತ್ತು ಈ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಇತರ ಅಂಗ ಸಂಸ್ಥೆಗಳನ್ನೂ ತನಿಖೆಗೊಳಪಡಿಸಲಿದೆ ಎಂದು ಹೇಳಲಾಗಿದೆ.


ಸಂಘಟನೆ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ತಬ್ಲಿಗಿ ಸಂಘಟನೆಯ ಪದಾಧಿಕಾರಿಗಳಿಗೆ ಸಮನ್ಸ್‌ ಜಾರಿಗೊಳಿಸಲು ತಯಾರಿ ನಡೆಸಿದೆ. ದೆಹಲಿ ಮತ್ತು ಇತರೆ ನಗರಗಳಲ್ಲಿರುವ ಸಂಘಟನೆಯ ಪದಾಧಿಕಾರಿಗಳನ್ನೂ ವಿಚಾರಣೆ ಕರೆಸಲಿರುವ ಸಿಬಿಐ, ವಿದೇಶದ ತನಿಖಾ ಸಂಸ್ಥೆಗಳ ನೆರವನ್ನೂ ಪಡೆಯಲಿದೆ ಎಂದು ಸಿಬಿಐನ ಮತ್ತೊಬ್ಬ ಅಧಿಕಾರಿಯೊಬ್ಬರು ರಾಷ್ಟ್ರೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.


ಕೋವಿಡ್‌ ಸಂದರ್ಭದಲ್ಲಿ ದೆಹಲಿಯಲ್ಲಿ ಸಭೆ ನಡೆಸಿದ್ದ ಅರೋಪದ ಮೇರೆಗೆ ಸಂಘಟನೆಯ ಮುಖ್ಯಸ್ಥರ ವಿರುದ್ಧ ದೆಹಲಿ ಪೊಲೀಸ್‌ನ ಅಪರಾಧ ವಿಭಾಗ ಈಗಾಗಲೇ ಪ್ರಕರಣವನ್ನು ದಾಖಲಿಸಿದೆ. ವಿದೇಶಿಯರು ಒಳಗೊಂಡಂತೆ ಸುಮಾರು 2,300ಕ್ಕೂ ಹೆಚ್ಚು ಮಂದಿಗೆ ದೆಹಲಿಯಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಏಪ್ರಿಲ್‌ 7ರ ಅಂತ್ಯಕ್ಕೆ ಹರಡಿದ್ದ ಕೋವಿಡ್‌ -19ಕ್ಕೆ ತಬ್ಲಿಗಿಗಳ ಕೊಡುಗೆ ಶೇ.35ರಷ್ಟಿದೆ. ಅಲ್ಲದೆ 1,800 ಸಂಖ್ಯೆಯ ವಿದೇಶಿ ತಬ್ಲಿಗಿ ಕಾರ್ಯಕರ್ತರು ವೀಸಾ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇರೆಗೆ ಗೃಹ ಸಚಿವಾಲಯವೂ ಕಪ್ಪು ಪಟ್ಟಿಗೆ ಸೇರಿಸಿದೆ.


ಜಾರಿ ನಿರ್ದೇಶನಾಲಯವೂ ಈಗಾಗಲೇ ಮನಿ ಲ್ಯಾಂಡರಿಂಗ್‌ ಕಾಯ್ದೆ ಅನ್ವಯ ತನಿಖೆ ನಡೆಸುತ್ತಿದೆ. ಹವಾಲಾ ಜಾಲದ ಮೂಲಕ ಹಣದ ವಹಿವಾಟು ನಡೆಸಿದೆ ಎಂಬ ಆರೋಪದ ಕುರಿತು ಜಾರಿ ನಿರ್ದೇಶನಾಲಯವೂ ತನಿಖೆ ಮುಂದುವರೆಸಿದೆ.

SUPPORT THE FILE

Latest News

Related Posts